ಚಳ್ಳಕೆರೆ
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣಾ ವೀಕ್ಷಕರಾದ ವಿ.ವಿ.ಚಂದ್ರಶೇಖರನ್ ಬುಧವಾರ ಮಧ್ಯಾಹ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಚುನಾವಣಾ ಸಿದ್ದತೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸಹಾಯಕ ಚುನಾವಣಾಧಿಕಾರಿಗಳೂ ಸೇರಿದಂತೆ ವಿವಿಧ ಅಧಿಕಾರಿಗಳ ಸಭೆ ನಡೆಸಿದ ವೀಕ್ಷಕ ವಿ.ವಿ.ಚಂದ್ರಶೇಖರನ್, ಚುನಾವಣೆಯ ಸಿದ್ದತೆಗಳು ಎಸ್‍ಎಸ್‍ಟಿ ಮತ್ತು ಎಫ್‍ಎಸ್‍ಟಿ ತಂಡದ ಕಾರ್ಯಚರಣೆ, ವಿವಿಧ ಚೆಕ್‍ಪೋಸ್ಟ್‍ಗಳ ಕಾರ್ಯನಿರ್ವಹಣೆ, ಮತಗಟ್ಟೆ ಕೇಂದ್ರಗಳಿಗೆ ಭೇಟಿ ಮತ್ತು ತಾಲ್ಲೂಕು ಸ್ಪೀಫ್ ಸಮಿತಿ ವತಿಯಿಂದ ನಡೆದ ಮತದಾನ ಜಾಗೃತಿ ಅಭಿಯಾನದ ಬಗ್ಗೆ ನಿಯೋಜನೆಗೊಂಡ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿಯನ್ನು ಪಡೆದರು.
ನಗರದ ಚಿತ್ರದುರ್ಗ ರಸ್ತೆಯ ಬೆಸ್ಕಾಂ ಕಚೇರಿ ಇರುವ ತಪಾಸಣಾ ಕೇಂದ್ರ, ಗಾಂಧಿನಗರದಲ್ಲಿರುವ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಅಧಿಕಾರಿಗಳು ಚುನಾವಣಾ ನಿಯಮಗಳ ಅಡಿಯಲ್ಲಿ ಕೈಗೊಂಡ ಅನೇಕ ಕಾರ್ಯಗಳನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತಪಾಸಣಾ ಕೇಂದ್ರದ ಅಧಿಕಾರಿಗಳಿಗೆ ನಿರ್ದೇಶಕ ನೀಡಿದ ಅವರು, ಪ್ರತಿಯೊಂದು ವಾಹನಗಳ ತಪಾಸಣೆ ನಡೆಸಬೇಕು, ತಪಾಸಣಾ ಕೇಂದ್ರದ ಬಳಿ ಸಿಸಿ ಕ್ಯಾಮರ ನಿರ್ವಹಣೆ, ಓಡಾಡುವ ಎಲ್ಲಾ ವಾಹನಗಳ ನೊಂದಾಣೆ ಸಂಖ್ಯೆ, ದಾಖಲೆ ಲಾತಿಗಳನ್ನು ಪರಿಶೀಲನೆ ನಡೆಸುವಂತೆ ಸೂಚಿಸಿದರು.
ಸಹಾಯಕ ಚುನಾವಣಾಧಿಕಾರಿ ಎಸ್.ರಾಜಶೇಖರನ್ ಈ ಬಗ್ಗೆ ಮಾತನಾಡಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚುನಾವಣಾ ಕಾರ್ಯಗಳನ್ನು ಪರಿಶೀಲನೆ ನಡೆಸಿದ ವೀಕ್ಷಕರು ಯಾವುದೇ ರೀತಿಯ ಲೋಪದೋಷಗಳಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಇದೇ ರೀತಿ ಇನ್ನೂ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಿ, ಚುನಾವಣಾ ಕಾರ್ಯವನ್ನು ಯಶಸ್ಸಿಗೊಳಿಸಲು ತಿಳಿಸಿದ್ಧಾರೆಂದರು. ತಹಶೀಲ್ದಾರ್ ತುಷಾರ್ ಬಿ.ಹೊಸೂರ್, ಸ್ಪೀಫ್ ಸಮಿತಿ ಅಧ್ಯಕ್ಷ ರವಿ, ಸ್ಪೀಫ್ ಸಮಿತಿ ನಿರ್ದೇಶಕ ಪರಮೇಶ್ವರಪ್ಪ, ಬಿಇಒ ಸಿ.ಎಸ್.ವೆಂಕಟೇಶಪ್ಪ, ಉಪ ತಹಶೀಲ್ದಾರ್ ನಾಗರಾಜು ಮುಂತಾದವರು ಉಪಸ್ಥಿತರಿದ್ದರು.