ದಾವಣಗೆರೆ
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಚುನಾವಣಾ ಪ್ರಧಾನ ವೀಕ್ಷಕ ಆನಂದ್ ಶರ್ಮಾ ಹಾಗೂ ಪೊಲೀಸ್ ವೀಕ್ಷಕ ರಾಮಸಿಂಗ್ ಅವರುಗಳು ಚುನಾವಣಾ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳೊಂದಿಗೆ ಚರ್ಚಿಸಿದ ವೀಕ್ಷಕರು ಮುಕ್ತ, ನ್ಯಾಯ ಸಮ್ಮತ ಹಾಗೂ ಸೌಹಾರ್ದ ನೆಲೆಯಲ್ಲಿ ಚುನಾವಣೆಗಳು ನಡೆಯಲು ಆಗಬೇಕಾಗಿರುವ ಕಾರ್ಯಗಳ ಬಗ್ಗೆ ಚರ್ಚಿಸಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ಜಿ.ಎನ್.ಶಿವಮೂರ್ತಿ, ಎಸ್‍ಎಸ್‍ಟಿ, ಎಫ್‍ಎಸ್‍ಟಿ, ವಿಎಸ್‍ಟಿ, ಅಕೌಂಟಿಂಗ್ ಟೀಂ, ಮೀಡಿಯಾ ಮಾನಿಟರಿಂಗ್ ಟೀಂ ಗಳ ಕಾರ್ಯಗಳ ಹಾಗೂ ಪ್ರಗತಿಯ ಬಗ್ಗೆ ವಿವರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಮಾತನಾಡಿ, ಚುನಾವಣಾ ಹಿನ್ನಲೆಯಲ್ಲಿ ಕೈಗೊಂಡಿರುವ ಭದ್ರತಾ ವ್ಯವಸ್ಥೆ, ಸಿಬ್ಬಂದಿ ವಿವರ, ಚೆಕ್ ಪೋಸ್ಟ್‍ಗಳ ಮಾಹಿತಿ ಹಾಗೂ ದುರ್ಬಲ ಮತಗಟ್ಟೆಗಳ ವ್ಯಾಪ್ತ್ತಿಯಲ್ಲಿ ಕೈಗೊಂಡಿರುವ ಅಗತ್ಯ ವ್ಯವಸ್ಥೆಗಳ ಬಗ್ಗೆ ತಿಳಿಸಿದರು.
ನಂತರ ಸಿ-ವಿಜಿಲ್ ಕಾರ್ಯ, ದಾಖಲಾಗಿರುವ ದೂರುಗಳು ಹಾಗೂ ಇತ್ಯರ್ಥಗೊಂಡಿರುವ ದೂರುಗಳ ಬಗ್ಗೆ ಮಾಹಿತಿ ನೀಡಿದರು. ಸಿಂಗಲ್ ವಿಂಡೋನಲ್ಲಿ ಬರುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವ ಬಗ್ಗೆ ಮಾಹಿತಿ ಪಡೆದುಕೊಂಡರು. ಜಿ.ಪಂ ಸಿಇಓ ಹೆಚ್. ಬಸವರಾಜೇಂದ್ರ ಮಾತನಾಡಿ, ಮತದಾನ ಜಾಗೃತಿಯ ಬಗ್ಗೆ ಜಿಲ್ಲೆಯ ನಗರ ಹಾಗೂ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ನಡೆಸಲಾಗುತ್ತಿರುವ ವಿವಿಧ ಜಾಗೃತಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಸಹಾಯಕ ಚುನಾವಣಾಧಿಕಾರಿಗಳು, ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳು ಹಾಗೂ ಚುನಾವಣಾ ಶಾಖೆಯ ಸಿಬ್ಬಂದಿಗಳು ಹಾಜರಿದ್ದರು.