ದಾವಣಗೆರೆ
ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆಗಳಿರುವಂತಹ ಸಮುದಾಯಗಳಲ್ಲಿ ಮುಸ್ಲಿಂ ಸಮುದಾಯ ಸಹ ಒಂದಾಗಿದೆ. ಆದರೆ, ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಮುಸ್ಲಿಂ ಸಮುದಾಯವನ್ನು ಕಡೆಗಣಿಸಿರುವು ತೀರಾ ಆಘಾತಕಾರಿ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ವಕೀಲ ಅನೀಸ್ ಪಾಷಾ ಆರೋಪಿಸಿದ್ದಾರೆ.
ಇಡೀ ರಾಜ್ಯದಲ್ಲಿ ಮೈತ್ರಿಯ ಜಾತ್ಯಾತೀತ ಪಕ್ಷಗಳು ಕೇವಲ ಒಬ್ಬನೇ ಒಬ್ಬ ಮುಸಲ್ಮಾನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರುವುದು ಆಶ್ಚರ್ಯಕರ ವಿಷಯವಾಗಿದೆ. ಮುಸಲ್ಮಾನರಿಂದ ಕೇವಲ ಓಟು ಗಿಟ್ಟಿಸಿಕೊಳ್ಳುವುದೇ ರಾಜಕಾರಣವೇ? ಜಾತ್ಯಾತೀತ ಪಕ್ಷಗಳು ಅಲ್ಪಸಂಖ್ಯಾತರ ಹಿತ ಚಿಂತಕ ಪಕ್ಷಗಳು, ಮುಸಲ್ಮಾನರ ಸಬಲೀಕರಣಕ್ಕೆ ಮತ್ತು ಅವರ ರಕ್ಷಕ ಎಂದು ಎನಿಸಿಕೊಂಡಂತಹ ಪಕ್ಷಗಳು ತಮ್ಮ ಅಧಿಕಾರದಲ್ಲಿ ಇರುವಂತಹ ಸಂದರ್ಭದಲ್ಲಿ ಅಥವಾ ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗ ಮುಸ್ಲಿಂ ಸಮುದಾಯದ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯಗಳು ನಡೆದಂತಹ ಸಂದರ್ಭದಲ್ಲಿ ದಿಟ್ಟತನದಿಂದ ಕೋಮುವಾದಿ ಚಟುವಟಿಕೆಗಳನ್ನು ಮಟ್ಟಹಾಕಿದಿದ್ದರೆ, ಕಾನೂನಾತ್ಮಕವಾಗಿ ಹಿಡಿತದಲಿಟ್ಟು ಮೊಳಕೆಯಲ್ಲಿಯೇ ಹೊಸಕಿಹಾಕಿದಿದ್ದರೆ, ಕೋಮುವಾದಿ ಪಕ್ಷಗಳು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲವೇನೋ.
ಹಾಗೂ ಜಾತ್ಯಾತೀತ ಪಕ್ಷಗಳು ಇಂತಹ ದುಸ್ಥಿತಿಗೆ ಬರುತ್ತಿರಲಿಲ್ಲವೇನೋ, ಕೋಮುವಾದವು ಹೆಮ್ಮರವಾಗಿ ಬೆಳೆದು ಜಾತ್ಯಾತೀತ ಪಕ್ಷದ ಕೆಲವು ನಾಯಕರುಗಳ ಹೃದಯದಲ್ಲೂ ಕೂಡ ಬೇರುಗಳನ್ನು ಆಳಕ್ಕೆ ಇಳಿಬಿಟ್ಟಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
2019ರ ಚುನಾವಣೆ ವಿಶೇಷವಾಗಿ ಅದರಲ್ಲೂ ಮುಸಲ್ಮಾನ ಅಭ್ಯರ್ಥಿಗಳಿಗೆ ಅತೀ ಹೆಚ್ಚಿನ ಸುರಕ್ಷಿತ ಚುನಾವಣೆಯಾಗಿತ್ತು. ಇಂತಹ ಸಂದರ್ಭದಲ್ಲಿಯೂ ಕೂಡ ಮುಸಲ್ಮಾನ ನಾಯಕರನ್ನು ಚುನಾವಣಾ ಕಣಕ್ಕೆ ಇಳಿಸದೇ ಚುನಾವಣೆಯಲ್ಲಿ ಗೆಲ್ಲಿಸುವ ಪ್ರಯತ್ನವನ್ನು ಮಾಡದಿರುವುದು ಅಸಮರ್ಥನೀಯ ಜಾತ್ಯಾತೀತ ಪಕ್ಷವಾದ ಕಾಂಗ್ರೆಸ್ ಪಕ್ಷವೇ ತನ್ನ ಅಧಿಕಾರದ ಅವಧಿಯ 2006ನೇ ಇಸ್ವಿಯಲ್ಲಿ ಜಸ್ಟೀಸ್ ರಾಜೇಂದ್ರ ಸಾಚಾರ್ ರವರ ನೇತೃತ್ವದಲ್ಲಿ ಸಂಶೋಧನೆ ಮಾಡಿ ತಯಾರಿಸಿದ ವರದಿಯಂತೆ ಮುಸಲ್ಮಾನರ ರಾಜಕೀಯ ಸಬಲೀಕರಣ ಅವಶ್ಯಕವಾಗಿದ್ದು, ಶೇ 15% ರಷ್ಟು ರಾಜಕೀಯ ಮೀಸಲಾತಿಯನ್ನು ನೀಡಬೇಕೆಂದು ಶಿಫಾರಸ್ಸು ಕೂಡ ಮಾಡಿರುತ್ತದೆ. ಅದರಂತೆ ಕೊನೇ ಪಕ್ಷ 4 ಜನ ಮುಸ್ಲಿಂ ಅಭ್ಯರ್ಥಿಗಳನ್ನಾದರೂ ಕಣಕ್ಕೆ ಇಳಿಸಬಹುದಾಗಿತ್ತು. ಆದರೆ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೂ ಕಾಲ ಹರಣವನ್ನು ಮಾಡಿ ಮುಸಲ್ಮಾನ ಅಭ್ಯರ್ಥಿಗಳಿಗೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ ಎಂದು ಆರೋಪಿಸಿದ್ದಾರೆ.
ಮುಂಚುಣಿಯಲ್ಲಿರುವ ಮುಸಲ್ಮಾನ ನಾಯಕರುಗಳು ಒಗ್ಗಟ್ಟಾಗಿ ತಮ್ಮ ಸ್ವಾರ್ಥವನ್ನು ಬಿಟ್ಟು ಜಾತ್ಯಾತೀತ ಪಕ್ಷಗಳ ಮೇಲೆ ಸಂಪೂರ್ಣ ಒತ್ತಡವನ್ನು ಹಾಕಿದಿದ್ದರೆ ಬದಲಾವಣೆಗಳಾಗುತ್ತಿದ್ದವೇನೋ? ಮುಸಲ್ಮಾನ ನಾಯಕರುಗಳು ಇನ್ನೂ ಇತರೆ ಎಲ್ಲಾ ಜಾತಿ ಮತ್ತು ಜನಾಂಗದವರೊಂದಿಗೆ ಬೆರೆತು ಆಂತರಿಕ ಸಂಬಂಧಗಳನ್ನು ಬೆಳೆಸಿ ವಿಶ್ವಾಸವನ್ನು ಗಟ್ಟಿಗೊಳಿಸಿ ತಮ್ಮ ಗೆಲುವಿನ ಸಂಕಲ್ಪದ ಬಗ್ಗೆ ಪಕ್ಷದ ಧುರೀಣರ ಆತ್ಮವಿಶ್ವಾಸವನ್ನು ಮೂಡಿಸುವಲ್ಲಿ ವಿಫಲರಾಗಿದ್ದಾರೆಯೇ? ಏನೇ ಆಗಲಿ ಅಲ್ಪಸಂಖ್ಯಾತರ ಹಿತ ಚಿಂತಕ ಅನಿಸಿಕೊಂಡ ಪಕ್ಷಗಳು ಕೊನೆ ಪಕ್ಷ ಮಂಗಳೂರು, ಬೀದರ್, ಕಲಬುರ್ಗಿ, ಹಾವೇರಿ ಮತ್ತು ಧಾರವಾಡದಂತಹ ಮುಸ್ಲಿಂ ಪ್ರಾಭಲ್ಯವಿರುವಂತಹ ಮೂರು ಸ್ಥಳಗಳಲ್ಲಾದರೂ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸುವಂತಹ ಪ್ರಯತ್ನ ಮಾಡಬಹುದಾಗಿತ್ತು.
2018ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಮುಸಲ್ಮಾನರು ಒಗ್ಗೂಡಿ ಅತ್ಯಂತ ಸೂಕ್ಷ್ಮತೆಯಿಂದ ಚಿಂತಿಸಿ ಯಾವುದೇ ಕಾರಣಕ್ಕೆ ಕೋಮುವಾದಿ ಪಕ್ಷ ನಮ್ಮ ರಾಜ್ಯದಲ್ಲಿ ಅಧಿಕಾರಕ್ಕೆ ಬರದಂತೆ ತಡೆಗಟ್ಟುವಲ್ಲಿ ಯಶಸ್ವಿಯಾಗಿರುತ್ತಾರೆ. ಒಂದು ವೇಳೆ ಮುಸಲ್ಮಾನರು ಸ್ವಲ್ಪ ಯಾಮಾರಿದ್ದರೂ ಮುಖ್ಯಮಂತ್ರಿಗಳು ಜಾತ್ಯಾತೀತ ಪಕ್ಷದಿಂದ ಅಧಿಕಾರಕ್ಕೆ ಬರುತ್ತಿರಲಿಲ್ಲ. ಹೀಗಿದ್ದಾಗಲೂ ಕೆಲವು ಮುಖಂಡರು ಮುಸಲ್ಮಾನ ಮತದಾರರ ಮೇಲೆ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ.
ಮುಸಲ್ಮಾನ ನಾಯಕರನ್ನು ಕೇವಲ ರಾಜ್ಯಸಭಾ ಮತ್ತು ವಿಧಾನಪರಿಷತ್‍ಗಳಲ್ಲಿ ಸದಸ್ಯರನ್ನಾಗಿ ಆರಿಸಿ ಕಳುಹಿಸುವ ಪ್ರಕ್ರಿಯೆಗೆ ಅಷ್ಟೇ ಸೀಮಿತ ಮಾಡಿ ಮುಂದೆ ಒಂದು ದಿನ ಜನನಾಯಕರಾಗಿ ಬೆಳೆಯಲು ಸಾಧ್ಯವಿಲ್ಲ ಹಾಗೂ ಕೊನೆಗೆ ಒಂದು ದಿನ ಮುಸಲ್ಮಾನರು ರಾಜಕಾರಣದಿಂದ ಸಂಪೂರ್ಣವಾಗಿ ದೂರ ಉಳಿಯಬೇಕಾದ ಪ್ರಸಂಗ ಎದುರಾಗಬಹುದು. ಈಗಲಾದರೂ ಎಲ್ಲಾ ನಾಯಕರುಗಳು ಎಚ್ಚೆತ್ತು ಕೊನೆ ಪಕ್ಷ ಸಾಚಾರ್ ವರದಿಯ ಶಿಫಾರಸ್ಸಿನಂತೆ ರಾಜಕೀಯ ಮೀಸಲಾತಿಗೆ ಪ್ರಯತ್ನ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.