ಆಧಾರ್ ಕಾರ್ಡ್ : ಸಾರ್ವಜನಿಕರ ಪರದಾಟ

ತುಮಕೂರು

        ಆಧಾರ್ ಕಾರ್ಡ್ ತಿದ್ದುಪಡಿ, ಅಪ್‍ಡೇಟ್ ಮೊದಲಾದವು ತುಮಕೂರು ನಗರಾದ್ಯಂತ ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದಕ್ಕಾಗಿ ಸಾರ್ವಜನಿಕರು ಹಗಲು-ರಾತ್ರಿ ಪರದಾಡುವಂತಾಗಿದೆ.

       ಇತ್ತೀಚೆಗೆ ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ ಲಿಂಕ್ ಮಾಡಲಾಗುತ್ತಿರುವುದರಿಂದ, ಸಾರ್ವಜನಿಕರು ಆಧಾರ್ ಕಾರ್ಡ್‍ನ ಪ್ರತಿಯನ್ನು ಹಾಜರುಪಡಿಸುವುದು ಅನಿವಾರ್ಯವಾಗಿದೆ. ಶಾಲಾ ಮಕ್ಕಳ ದಾಖಲಾತಿ, ವಿದ್ಯಾರ್ಥಿ ವೇತನ ಇತ್ಯಾದಿಗೆ ಆಧಾರ್ ಕಾರ್ಡ್ ಲಿಂಕ್ ಅಗತ್ಯವಿರುವುದರಿಂದ ಮಕ್ಕಳ ಪೋಷಕರು ಇದೀಗ ಆಧಾರ್‍ಕಾರ್ಡ್ ಅಪ್‍ಡೇಟ್‍ಗೆ ಕಚೇರಿಯಿಂದ ಕಚೇರಿಗೆ ಅಲೆದಾಡುವಂತಾಗುತ್ತಿದೆ.

        ನಗರದಲ್ಲಿರುವ `ತುಮಕೂರು ಒನ್’ ಕೇಂದ್ರಗಳಲ್ಲಿ, ತುಮಕೂರು ತಾಲ್ಲೂಕು ಕಚೇರಿಯ `ಪಡಸಾಲೆ’ಯಲ್ಲಿ ಹಾಗೂ ಮಿನಿವಿಧಾನಸೌಧದ ಮೊದಲ ಮಹಡಿಯ `ಸ್ಪಂದನ ಕೇಂದ್ರ’ದಲ್ಲಿ ಆಧಾರ್ ಕಾರ್ಡ್ ಸಂಬಂಧಿತ ಕೆಲಸಕಾರ್ಯಗಳು ಆಗುತ್ತಿವೆ.

         ದರೊಂದಿಗೆ ಖಾಸಗಿ ವ್ಯಕ್ತಿಗಳು `ಸೇವಾ ಸಿಂಧು’ ಹೆಸರಿನ ಫ್ರಾಂಚೈಸಿ ಆರಂಭಿಸಿದ್ದು, ಅಲ್ಲಿ ಆಧಾರ್ ಕಾರ್ಡ್‍ನ ಕೆಲವು ಕೆಲಸಗಳು ಆಗುತ್ತಿದ್ದವು. ನಗರದಲ್ಲಿ ಇಂತಹ 18 ಫ್ರಾಂಚೈಸಿಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ ಇತ್ತೀಚೆಗೆ ಈ ಫ್ರಾಂಚೈಸಿಗಳಲ್ಲಿ ಆಧಾರ್ ಕಾರ್ಡ್‍ಗೆ ಸೇರಿದ ಸೇವೆಯನ್ನು ಹಿಂದಕ್ಕೆ ಪಡೆದಿರುವುದರಿಂದ ಈಗೇನಿದ್ದರೂ, `ತುಮಕೂರು ಒನ್’ ಹಾಗೂ `ಪಡಸಾಲೆ’ ಮತ್ತು `ಸ್ಪಂದನ ಕೇಂದ್ರ’ದಲ್ಲಿ ಮಾತ್ರ ಅವಕಾಶವಿದೆ.

        ಹೀಗಾಗಿ ಇಲ್ಲೆಲ್ಲ ಸಾರ್ವಜನಿಕರು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾದು ನಿಲ್ಲುವಂತಾಗುತ್ತಿದೆ.ತುಮಕೂರು ಮಹಾನಗರ ಪಾಲಿಕೆ ಕಚೇರಿ ಆವರಣ, ಸೋಮೇಶ್ವರಪುರಂ ಮುಖ್ಯರಸ್ತೆಯ 14 ನೇ ಕ್ರಾಸ್, ಕ್ಯಾತಸಂದ್ರ, ಶಿರಾಗೇಟ್ ಮತ್ತು ಚಿಕ್ಕಪೇಟೆಯ ದಿವಾನ್ ಪೂರ್ಣಯ್ಯ ಛತ್ರದಲ್ಲಿ `ತುಮಕೂರು ಒನ್’ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಇವೆಲ್ಲ ಕೇಂದ್ರಗಳಲ್ಲೂ ಆಧಾರ್ ಕಾರ್ಡ್‍ನ ಎಲ್ಲ ಕೆಲಸಗಳೂ ಆಗುತ್ತಿಲ್ಲವೆಂಬುದೇ ಈಗ ಸಮಸ್ಯೆ ಬಿಗಡಾಯಿಸಲು ಕಾರಣವಾಗಿದೆ. ಸೋಮೇಶ್ವರ ಕೇಂದ್ರದಲ್ಲಿ ಆಧಾರ್ ಕಾರ್ಡ್‍ನ ಯಾವುದೇ ಸೇವೆ ಇಲ್ಲವೆನ್ನಲಾಗಿದೆ. ಇನ್ನು ಪಾಲಿಕೆ ಆವರಣದ ಕೇಂದ್ರದಲ್ಲಿ ಮಕ್ಕಳಿಗೆ ಸಂಬಂಧಿಸಿದ ಆಧಾರ್ ಕಾರ್ಡ್‍ನ ಕೆಲಸಗಳನ್ನು ಮಾಡುತ್ತಿಲ್ಲ. ಹೀಗಾಗಿ ಸಾರ್ವಜನಿಕರು ಉಳಿದ ಕೇಂದ್ರಗಳನ್ನು ಅಥವಾ `ಪಡಸಾಲೆ’ ಅಥವಾ `ಸ್ಪಂದನ ಕೇಂದ್ರ’ ವನ್ನು ಎಡತಾಕುವಂತಾಗುತ್ತಿದೆ.

ಫೆ.13 ರವರೆಗೂ ಟೋಕನ್!

         ತುಮಕೂರು ನಗರದ ಚಿಕ್ಕಪೇಟೆಯ ದಿವಾನ್ ಪೂರ್ಣಯ್ಯ ಛತ್ರದಲ್ಲಂತೂ ಮಕ್ಕಳ ಪೋಷಕರು ಅಕ್ಷರಶಃ ಹಗಲು-ರಾತ್ರಿ ಬಿಸಿಲು-ಚಳಿ ಎನ್ನದೆ ಸರತಿಯಲ್ಲಿ ನಿಂತು ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ಅಪ್‍ಡೇಟ್ ಮಾಡಿಸಿಕೊಳ್ಳುತ್ತಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ. ಇಂತಹುದೇ ಪರಿಸ್ಥಿತಿ `ಪಡಸಾಲೆ’ ಮತ್ತು `ಸ್ಪಂದನ ಕೇಂದ್ರ’ದಲ್ಲೂ ತಲೆಯೆತ್ತಿದೆ. ತುಮಕೂರು ತಾಲ್ಲೂಕು ಕಚೇರಿಯ `ಪಡಸಾಲೆ’ಯಲ್ಲಂತೂ ಆಧಾರ್ ಕಾರ್ಡ್ ಕೆಲಸಗಳಿಗೆ ಬರುವ ಸಾರ್ವಜನಿಕರಿಗೆ ಫೆಬ್ರವರಿ 13 ರ ವರೆಗೂ ಟೋಕನ್ ನೀಡಲಾಗಿದೆಯೆಂದರೆ, ಸನ್ನಿವೇಶ ಎಷ್ಟೊಂದು ಕಷ್ಟಕರವಾಗಿದೆಯೆಂಬುದನ್ನು ಊಹಿಸಿಕೊಳ್ಳಬಹುದು.

ಬ್ರೋಕರ್‍ಗಳ ಹಾವಳಿ

          ಈ ಮಧ್ಯೆ ಪರಿಸ್ಥಿತಿಯ ದುರ್ಲಾಭ ಪಡೆಯಲು ಈ ಎಲ್ಲ ಕೇಂದ್ರಗಳಲ್ಲಿ ಬ್ರೋಕರ್‍ಗಳ ಹಾವಳಿ ತಲೆಯೆತ್ತಿದೆ. ತಮ್ಮ ಸ್ವಂತ ಕೆಲಸ ಕಾರ್ಯಗಳನ್ನು ಬಿಟ್ಟು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಸಾಮಾನ್ಯ ಜನರಿಂದ ಹಣ ವಸೂಲಿ ಮಾಡಿ, ಅವರಿಗೆ ಬೇಗ ಕೆಲಸ ಮಾಡಿಕೊಂಡುವಂತಹ ಬ್ರೋಕರ್‍ಗಳು ದೊಡ್ಡ ದಂಧೆಯನ್ನೇ ಆರಂಭಿಸಿದ್ದಾರೆ ಎಂಬ ವ್ಯಾಪಕ ಆರೋಪ ಕೇಳಿಬರುತ್ತಿದೆ. “ಬ್ರೋಕರ್‍ಗೆ 100 ರೂ. ಕೊಟ್ಟರೆ ಸಾಕು, ಅವನು ನೇರವಾಗಿ ಕೇಂದ್ರದೊಳಗೆ ಹೋಗಿ ಆಧಾರ್ ಕೆಲಸ ಮಾಡಿಸಿಕೊಂಡು ಬಂದುಬಿಡುತ್ತಾನೆ” ಎಂದು ನೊಂದ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap