ನಗರದ ಸಮಸ್ಯೆಗಳಿಗೆ ಧ್ವನಿಯಾಗದ ನಾಗರೀಕ ಬಳಗ

ತುಮಕೂರು

ವಿಶೇಷ ವರದಿ: -ಮಣ್ಣೆ ರಾಜು

      ದಿನವಿಡೀ ತುಮಕೂರು ನಗರದ ಧೂಳು ಕುಡಿದು ಉಸಿರುಕಟ್ಟುವ ಜನರಿಗೆ ಬೆಳಗಿನ ವಾಯುವಿಹಾರ ಉಲ್ಲಾಸಕಾರಿ. ಹೀಗಾಗಿ, ಶುದ್ಧ ಗಾಳಿ ಹುಡುಕಿ ಉದ್ಯಾನವನ, ಗಿಡಮರ ಇರುವ ಕಡೆ ಬೆಳಗ್ಗೆ ವಾಯುವಿಹಾರಕ್ಕೆ ಹೋಗುವ ಅಭ್ಯಾಸವನ್ನು ಹಲವರು ರೂಢಿಸಿಕೊಂಡಿದ್ದಾರೆ. ಯೂನಿವರ್ಸಿಟಿ ಕ್ಯಾಂಪಸ್, ಅಮಾನಿಕೆರೆ ಉದ್ಯಾನವನ, ಎಸ್‍ಐಟಿ, ಎಸ್‍ಎಸ್‍ಐಟಿ ಕ್ಯಾಂಪಸ್, ರಿಂಗ್ ರಸ್ತೆ ಮುಂತಾದ ಕಡೆ ನಿತ್ಯ ವಾಕ್ ಹೋಗುವವರ ತಂಡಗಳೇ ಇವೆ. ಮಹಿಳೆಯರು, ಪುರುಷರು ತಮ್ಮದೇ ತಂಡಗಳಲ್ಲಿ ಮುಂಜಾನೆ ವಿಹಾರಕ್ಕೆ ತೆರಳಿ ಗಾಳಿ ಸೇವಿಸಿ, ಹತ್ತಾರು ವಿಷಯಗಳ ವಿನಿಮಯ ಮಾಡಿಕೊಂಡು ರಿಲ್ಯಾಕ್ಸ್ ಆಗಿ ಮನೆಗೆ ಬಂದು ತಮ್ಮ ವೃತ್ತಿ, ವ್ಯವಹಾರಗಳಲ್ಲಿ ತೊಡಗಿಕೊಳ್ಳುವುದು ದಿನದ ರೂಢಿಯಾಗಿದೆ.

      ಹೊಸ ಗೆಳೆಯರ ಪರಿಚಯವಾಗಿ ಪರಸ್ಪರ ಬಾಂಧವ್ಯ ಬೆಳೆಯಲು ಇಂತಹ ವಾಯುವಿಹಾರ ಸಹಕಾರಿ. ವಾಕಿಂಗ್, ವ್ಯಾಯಾಮ ಮುಗಿಸಿ ಕೆಲವು ಗುಂಪಿನ ಗೆಳೆಯರು ಕಾಫಿ ಹೀರುವ ವೇಳೆ ಸಹಜವಾಗಿ ನಗರದ ಸಮಸ್ಯೆಗಳು ಹೆಚ್ಚು ಚರ್ಚೆಗೆ ಬರುತ್ತವೆ. ಅವ್ಯವಸ್ಥೆ ವಿರುದ್ಧ ಆಡಳಿತ ವ್ಯವಸ್ಥೆಯನ್ನೂ ತರಾಟೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸುತ್ತಾರೆ.

      ನಗರದಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಲೋಪ, ದೋಷಗಳನ್ನು ಪ್ರಸ್ತಾಪ ಮಾಡಿ, ಅದನ್ನು ಹೀಗೆ ಮಾಡಬಹುದಾಗಿತ್ತು, ಹಾಗೆ ಮಾಡಿದ್ದರೆ ಸರಿಯಾಗುತ್ತಿತ್ತು ಎಂದೆಲ್ಲಾ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ, ಆ ಸಲಹೆ, ಅಭಿಪ್ರಾಯಗಳು ಕಾಫಿ ಟೇಬಲ್ಲಿಗೆ ಸೀಮಿತವಾಗಿಬಿಡುತ್ತವೆ. ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಸಂಬಂಧಿಸಿದ ಜನ ಪ್ರತಿನಿಧಿಗಾಗಲಿ, ಇಲಾಖೆ ಅಧಿಕಾರಿಗಾಗಲಿ ಕನಿಷ್ಟ ಒಂದು ಫೋನ್ ಮಾಡಿ ಅಭಿಪ್ರಾಯ ಹೇಳುವ ಪ್ರಯತ್ನ ಮಾಡುವುದಿಲ್ಲ ಎನ್ನುತ್ತಾರೆ ಅಮಾನಿಕೆರೆ ಉದ್ಯಾನವನದ ವಾಯುವಿಹಾರಿ ನಗರ ಪಾಲಿಕೆ ಮಾಜಿ ಸದಸ್ಯ ಪ್ರೆಸ್ ರಾಜಣ್ಣ.

      ತುಮಕೂರಿನ ಧೂಳಿನಿಂದ ನಮ್ಮ ಮನೆಯವರಿಗೆ ಡಸ್ಟ್ ಅಲರ್ಜಿಯಾಗಿದೆ, ಶ್ವಾಸಕೋಶದ ಸಮಸ್ಯೆಯಾಗಿದೆ ಮುಂತಾಗಿ ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತಾರಾದರೂ ಯಾರೊಬ್ಬರೂ ಸಂಬಂಧಿಸಿ ಕಾರ್ಪೊರೇಟರ್‍ಗೂ ಫೋನ್ ಮಾಡಿ ಹೇಳುವುದಿಲ್ಲ, ಸ್ಮಾರ್ಟ್ ಸಿಟಿ ಅಧಿಕಾರಿಗಳ ಗಮನಕ್ಕೂ ತರುವ ಪ್ರಯತ್ನ ಮಾಡುವುದಿಲ್ಲ, ಈ ಬಗ್ಗೆ ಕೇಳಿದರೆ, ಅಧಿಕಾರಿಗಳು ನಮ್ಮ ಮಾತುಗಳನ್ನು ಕೇಳುತ್ತಾರೆಯೆ ಎಂದು ಅಸಹಾಯ ಕತೆ ವ್ಯಕ್ತಪಡಿಸುತ್ತಾರೆ. ನಾಗರೀಕರು ಪ್ರಶ್ನೆ ಮಾಡುವುದನ್ನು ಕಲಿಯದಿದ್ದರೆ ಸಮಸ್ಯೆಯನ್ನು ಕೇಳುವವರಾರು ಎಂದು ಪ್ರೆಸ್ ರಾಜಣ್ಣ ಕೇಳುತ್ತಾರೆ.

      ನಗರದಲ್ಲಿ ವಾಯುವಿಹಾರಿಗಳ ಹಲವಾರು ಗುಂಪಗಳು ಇವೆ. ಇಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಉದ್ಯಮಿಗಳು, ಡಾಕ್ಟರ್, ಇಂಜಿನಿಯರ್‍ಗಳು, ವಕೀಲರು, ಉಪನ್ಯಾಸಕರು, ಶಿಕ್ಷಕರು, ಸಂಘಸಂಸ್ಥೆಗಳ ಪ್ರತಿನಿಧಿಗಳು, ಸಾಹಿತಿ, ಕಲಾವಿದರೂ ಸೇರಿದಂತೆ ಎಲ್ಲಾ ವರ್ಗದವರೂ ವಿವಿಧ ತಂಡಗಳಾಗಿ ನಿತ್ಯಾ ಗಾಳಿ ಸೇವನೆಗೆ ಬರುತ್ತಾರೆ. ಇಲ್ಲಿ ಹೆಚ್ಚಿನವರು ಸಾಮಾಜಿಕ ಕಳಕಳಿ ಹೊಂದಿರುವವರು, ಸಾಮಾಜಿಕ ಜಾಗೃತಿ ಇರುವವರೇ ಆಗಿದ್ದಾರೆ.

       ಕಾರ್ಪೊರೇಟರ್‍ರಿಂದ ಸಚಿವರವರೆಗೆ, ಹಿರಿಯ ಅಧಿಕಾರಿಗಳ ತನಕ ಧ್ವನಿ ಮಾಡಬಹುದಾದ ಪ್ರಭಾವ ಹೊಂದಿದವರೂ ಇದ್ದಾರೆ. ಆದರೆ, ನಾಗರೀಕ ಸಮಸ್ಯೆಗಳ ಬಗ್ಗೆ ಕೇವಲ ಚರ್ಚೆ ನಡೆಸಿ ಸುಮ್ಮನಾಗುತ್ತಾರೆ, ಸಂಬಂಧಿಸಿದವರಿಗೆ ವಿಚಾರ ತಿಳಿಸುವ. ಈ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗುವ ವರದಿಗಳಿಗೂ ಪ್ರತಿಕ್ರಿಯೆ ನೀಡುವಲ್ಲೂ ಕಾಳಜಿವಹಿಸುತ್ತಿಲ್ಲ.

        ಕಾಮಗಾರಿಗಳ ಅವ್ಯವಸ್ಥೆ ಬಗ್ಗೆ ನಾನು ಸಾಕಷ್ಟು ಬಾರಿ ಶಾಸಕರ ಗಮನಕ್ಕೆ ತಂದಿದ್ದೇನೆ, ನಮ್ಮಲ್ಲಿ ಕಾಮಗಾರಿಗಳು ವ್ಯವಸ್ಥಿತವಾಗಿ ಆಗುತ್ತಿಲ್ಲ, ಎಲ್ಲಾ ರಸ್ತೆಗಳಲ್ಲೂ ಕೆಲಸ ಆರಂಭಿಸಿದ್ದಾರೆ ಯಾವುದನ್ನೂ ಮುಗಿಸುತ್ತಿಲ್ಲ ಎನ್ನುವಂತಾಗಿದೆ, ಒಂದು ರಸ್ತೆಯಲ್ಲಿ ಕೆಲಸ ಆರಂಭಿಸಿ, ಅದು ಪೂರ್ಣಗೊಂಡ ನಂತರ ಮತ್ತೊಂದು ರಸ್ತೆಯಲ್ಲಿ ಆರಂಭಿಸಿದರೆ ಸಾರ್ವಜನಿಕರಿಗೆ ಅಷ್ಟಾಗಿ ಸಮಸ್ಯೆಯಾಗುವುದಿಲ್ಲ ಎಂದು ಉದ್ಯಮಿ, ವಿಘ್ನೇಶ್ವರ ಕಂಫರ್ಟ್ ಮಾಲೀಕ ಚಂದ್ರಮೌಳಿ ಹೇಳುತ್ತಾರೆ.

       ನಗರದಲ್ಲಿ ಧೂಳು ಹೆಚ್ಚಾಗಿದೆ, ಮನೆ ತುಂಬಾ ಧೂಳು ತುಂಬುತ್ತದೆ. ನಿತ್ಯ ಇದೇ ಫಜೀತಿ. ವಾಹನಗಳ ಹಿಂದೆ ಟೂವೀಲರ್‍ನಲ್ಲಿ ಹೋಗುವಾಗ ಧೂಳಿಗೆ ಉಸಿರುಕಟ್ಟುತ್ತದೆ. ಬಡಾವಣೆ ರಸ್ತೆಗಳಲ್ಲಿ ಕೇಬಲ್, ನೀರಿನ ಪೈಪ್ ಅಂತ ಒಬ್ಬರಾದ ಮೇಲೆ ಒಬ್ಬರಂತೆ ರಸ್ತೆ ಅಗೆದು ಅಧ್ವಾನ ಮಾಡುತ್ತಾರೆ. ಇದು ಒಮ್ಮೆಗೇ ನಡೆಯುವಂತೆ ಸಂಬಂಧಿಸಿದವರು ಎಚ್ಚರವಹಿಸಬೇಕು. ಇಷ್ಟಾಗಿಯೂ ಎಲ್ಲಾ ಕೆಲಸ ಮುಗಿದು ತುಮಕೂರು ಸ್ಮಾರ್ಟ್ ಸಿಟಿಯಾಗುತ್ತದೆ ಎಂಬ ವಿಶ್ವಾಸದಲ್ಲಿ ಎಲ್ಲವನ್ನೂ ಸಹಿಸಿಕೊಳ್ಳಬೇಕಾಗಿದೆ ಎಂದು ಚಂದ್ರಮೌಳಿ ಅಭಿಪ್ರಾಯಪಡುತ್ತಾರೆ.

        ಕಾಮಗಾರಿಗಳಿಂದ ಇಂದು ಸಾರ್ವಜನಿಕರಿಗೆ ಈ ಮಟ್ಟದ ಸಮಸ್ಯೆಯಾಗುತ್ತಿರುವುದಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಮನ್ವಯ ಕೊರತೆ ಕಾರಣ. ಯಾವುದೇ ಕಾಮಗಾರಿ ಕೈಗೊಳ್ಳುವ ಮುನ್ನ ಆ ಸಂಬಂಧದ ಇಲಾಖೆ ಅಧಿಕಾರಿಗಳು ಸಮಸ್ವಯತೆಯಿಂದ ಚರ್ಚಿಸಿ ತೀರ್ಮಾನಿಸಿ ಕಾಮಗಾರಿ ಆರಂಭಿಸಬೇಕು ಎಂದು ಚಲನಚಿತ್ರ ನಟ, ತುಮಕೂರು ನಿವಾಸಿ ಹನುಮಂತಗೌಡ ಹೇಳಿದರು.

         ಕುಡಿಯುವ ನೀರು, ಗ್ಯಾಸ್, ಕೇಬಲ್‍ಗಳ ಮತ್ತಿತರ ಪೈಪ್‍ಲೈನ್ ಅಳವಡಿಸುವ ಸಂದರ್ಭದಲ್ಲಿ ಎಲ್ಲಾ ಇಲಾಖೆಗಳು ಏಕ ಕಾಲದಲ್ಲಿ ಕೆಲಸ ಆರಂಭ ಮಾಡಿದರೆ ಹಣ, ಸಮಯದ ಉಳಿತಾಯವಾಗುತ್ತದಲ್ಲದೆ ಸಾರ್ವಜನಿಕರಿಗೂ ಅಷ್ಟಾಗಿ ಅನಾನುಕೂಲವಾಗದು. ಇವತ್ತು ರಸ್ತೆ ಅಗೆದು ನೀರಿನ ಪೈಪ್ ಅಳವಡಿಸಿ ಅರೆಬರೆ ಮುಚ್ಚಿ ಹೋದರೆ, ಇನ್ನೊಂದು ದಿನ ಇನ್ನೊಂದು ಸಂಸ್ಥೆಯವರು ಬಂದು ಮತ್ತೆ ರಸ್ತೆ ಅಗೆಯುತ್ತಾರೆ.

      ತಾಂತ್ರಿಕವಾಗಿ ತಿಳವಳಿಕೆ ಇರುವ ಅಧಿಕಾರಿ ವರ್ಗಕ್ಕೆ ಇಂತಹ ಸಣ್ಣ ವಿಚಾರಗಳು ಏಕೆ ಅರ್ಥವಾಗುವುದಿಲ್ಲ? ಅಥವಾ, ಅರ್ಥವಾದರೂ ಬೇರೆ ಇಲಾಖೆ ಉಸಾಬರಿ ತಮಗೇಕೆ ಬೇಕು, ತಮ್ಮದನ್ನು ಮಾಡಿ ಮುಗಿಸಿ ಬಿಲ್ಲು ಮಾಡಿದರೆ ಸಾಕು ಎನ್ನುವ ತರಾತುರಿಯೆ? ಆಡಳಿತ ವರ್ಗದವರಿಗೆ ಸಾರ್ವಜನಿಕ ಕಾಳಜಿ ಇಲ್ಲದಿದ್ದರೆ ಇಂತಹ ಅವಾಂತರಗಳು ಮುಂದುವರೆಯುತ್ತಲೇ ಇರುತ್ತವೆ. ಪ್ರತಿಯೊಂದಕ್ಕೂ ಜನ ಹೇಳಿ ಅವರಿಗೆ ಎಚ್ಚರಿಸಲಾಗುತ್ತದೆಯೆ, ಅವರ ಜವಾಬ್ದಾರಿಯನ್ನು ಅವರು ನಿರ್ವಹಿಸಬೇಡವೆ ಎಂದು ಹನುಮಂತಗೌಡ ಹೇಳಿದರು.

      ತುಮಕೂರು ತುಂಬಾ ಮೋಡದಂತೆ ಧೂಳು ತುಂಬಿದೆ. ಮೂಗು ಮುಚ್ಚಿಕೊಂಡು ಬಾಳುವಂತಾಗಿದೆ. ಅಸ್ತಮ ರೋಗಿಗಳ ಪರಿಸ್ಥಿತಿ ಕೇಳುವಂತಿಲ್ಲ, ಅಂತಹವರು ಕಾಮಗಾರಿ ಮುಗಿಯುವವರೆಗೂ ತುಮಕೂರು ಬಿಟ್ಟು ಬೇರೆ ಊರಿಗೆ ಹೋಗಿ ನೆಲೆಸುವುದು ಉತ್ತಮ ಎಂದು ಎಸ್‍ಐಟಿ ಕ್ಯಾಂಪಸಿಗೆ ವಾಯುವಿಹಾರಕ್ಕೆ ಬರುವ ನಿವೃತ್ತ ಶಿಕ್ಷಕ ಚಿಕ್ಕತಿಮ್ಮಯ್ಯ ಹೇಳುತ್ತಾರೆ.

      ಧೂಳು ತಡೆಗಟ್ಟಿ ಎಂದು ಅಧಿಕಾರಿಗಳಿಗೆ ಹೇಳಿದರೆ, ಅವರು ನಮ್ಮ ಮಾತನ್ನು ಗಂಭೀರವಾಗಿ ಪರಿಗಣಿಸುವರೆ, ಶಾಸಕರು, ಸಂಸದರು ಇ ಬಗ್ಗೆ ಕಾಳಜಿವಹಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಬೇಕಷ್ಟೆ ಎನ್ನುತ್ತಾರೆ.ಸ್ಮಾರ್ಟ್ ಸಿಟಿ ಆಗಬೇಕೆಂದರೆ ಇಂತಹ ಸಮಸ್ಯೆಗಳನ್ನು ಅನುಭವಿಸುವುದು ಅನಿವಾರ್ಯ ಎಂದು ಅಮಾನಿಕೆರೆ ವಾಯುವಿಹಾರಿ, ಹೆಚ್‍ಎಂಟಿಯ ನಿವೃತ್ತ ನೌಕರ ನಟರಾಜ್ ಹೇಳಿದರು. ಕಾಮಗಾರಿಗಳ ಸರಿತಪ್ಪುಗಳ ಬಗ್ಗೆ ನಮಗೆ ತಾಂತ್ರಿಕವಾಗಿ ತಿಳಿಯುವುದಿಲ್ಲ. ಧೂಳು, ರಸ್ತೆ ಅಗೆದು ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದಷ್ಟೇ ಗೊತ್ತಾಗುತ್ತದೆ. ಕಾಮಗಾರಿಗಳ ಬಗ್ಗೆ ತಾಂತ್ರಿಕ ಪರಿಣಿತಿ ಇರುವವರು ಇಲಾಖೆ ಅಧಿಕಾರಿಗಳಿಗೆ ತಿಳಿಸಿ ತಪ್ಪುಗಳನ್ನು ಸರಿಪಡಿಸುವ ಕಳಕಳಿ ವಹಿಸಬೇಕು ಎಂದು ಸಲಹೆ ಮಾಡಿದರು.

       ಕಾಮಗಾರಿ ಎಂದರೆ ರಸ್ತೆ ಅಗೆಯುವುದು, ಅರ್ಧಂಬರ್ಧ ಮುಚ್ಚುವುದೇ ಆಗಿದೆ, ಅಗೆದ ರಸ್ತೆಗಳಿಗೆ ಸಮರ್ಪಕವಾಗಿ ತೇಪೆ ಹಾಕುವುದಿಲ್ಲ, ಪಾಲಿಕೆ ಸದಸ್ಯರ ಗಮನಕ್ಕೂ ಹಲವಾರು ಬಾರಿ ತಂದಿದ್ದೇವೆ. ಇವತ್ತು ಇದ್ದ ರಸ್ತೆಯನ್ನು ನಾಳೆ ಇನ್ಯಾರೋ ಬಂದು ಅಗೆದು ಯಾವುದೋ ಕಾಮಗಾರಿ ಎಂದು ಹೇಳುತ್ತಾರೆ. ಸರಿಯಾಗಿ ಮುಚ್ಚದೆ ಹಾಗೇ ಬಿಟ್ಟು ಹೋಗುತ್ತಾರೆ. ಇಂತಹ ರಸ್ತೆಗಳಲ್ಲಿ ವಾಹನ ಸಂಚಾರ ಸಮಸ್ಯೆಯಾಗುತ್ತದೆ ಎಂದು ವಿಶ್ವವಿದ್ಯಾಲಯ ಕ್ಯಾಂಪಸ್ಸಿಗೆ ಗಾಳಿ ಸೇವನೆಗೆ ಬರುವ ಸಿ.ಕೆ.ವಿಶ್ವನಾಥ್ ಹೇಳುತ್ತಾರೆ.

     ನಗರದ ಸೌಲಭ್ಯ, ಸೌಂದರ್ಯ ಹೆಚ್ಚಿಸುವ ಉದ್ದೇಶದ ಸ್ಮಾರ್ಟ್ ಸಿಟಿಯ ಹಲವಾರು ಯೋಜನೆಗಳು ರೂಪುಗೊಂಡಿವೆ. ಕೆಲ ಕಾಮಗಾರಿಗಳು ಚಾಲ್ತಿಯಲ್ಲಿವೆ. ನಗರದ ಅಭಿವೃದ್ಧಿ, ಬೆಳವಣಿಗೆಗೆ ನಾಗರೀಕರು ಸಹಜವಾಗಿ ಕಾಳಜಿ ವಹಿಸಬೇಕು. ಅದು ಅವರ ಜವಾಬ್ದಾರಿ ಕೂಡಾ. ಏಕೆಂದರೆ, ಎಲ್ಲವೂ ಸಾರ್ವಜನಿಕರ ತೆರಿಗೆ ಹಣದಲ್ಲೇ ನಡೆಯುವ ಕಾರಣ ಎಲ್ಲರೂ ತಮ್ಮ ಕೆಲಸ ಎನ್ನುವ ಕಳಕಳಿಯಿಂದ ನಿಗಾವಹಿಸಬೇಕಾಗಿದೆ. ಸಾರ್ವಜನಿಕ ಕೆಲಸ ಕಾರ್ಯಗಳು ಸಾರ್ವಜನಿಕರ ಸಲಹೆ, ಸಹಕಾರ, ಸಹಭಾಗಿತ್ವದಲ್ಲಿ ಸಾಗಬೇಕಲ್ಲವೆ?

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link