ಚಿತ್ರದುರ್ಗ :
ಮಾರಕ ರೋಗಗಳನ್ನು ಹರಡುವ ಸೊಳ್ಳೆಗಳನ್ನು ನಿಯಂತ್ರಣಗೊಳಿಸಲು ಸಾರ್ವಜನಿಕರು ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಕೈ ಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಫಾಲಾಕ್ಷ ಅವರು ಹೇಳಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೀಟಜನ್ಯ ರೋಗಗಳ ನಿಯಂತ್ರಣಾ ವಿಭಾಗದಿಂದ ಏರ್ಪಡಿಸಿದ ಡೆಂಗ್ಯೂ ಜಾಗೃತಿ ಜಾಥ ಮತ್ತು ಸ್ಥಬ್ದ ಚಿತ್ರ ಪ್ತದರ್ಶನಕ್ಕೆ ನಗರದ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆ ಆವರಣದಲ್ಲಿ ಡಾ.ಸಿ.ಎಲ್. ಪಾಲಾಕ್ಷ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸೊಳ್ಳೆ ಎಂಬ ಕೀಟ ಚಿಕ್ಕದು, ಆದರೆ ಅದು ಕೊಡುವ ಕಾಟ ಮಾತ್ರ ದೊಡ್ಡದು. ಸೊಳ್ಳೆಗಳು ನಮ್ಮನ್ನಾಳುವ ಮುನ್ನ ಸಾರ್ವಜನಿಕರು ಜಾಗೃತರಾಗಬೇಕು. ಮನೆ ಮನೆಗಳಲ್ಲಿ ಸೊಳ್ಳೆಗಳ ಲಾರ್ವಾ ಸಾಂದ್ರತೆ ಹೆಚ್ಚಾಗುತ್ತಿದೆ. ಇವುಗಳ ಸಂತತಿಯನ್ನು ನಾಶ ಮಾಡಲು ಸರ್ಕಾರದ ಜೊತೆಗೆ ಸಮುದಾಯ ಕೈಜೋಡಿಸಬೇಕು. ಲಾರ್ವಾ ಬೆಳೆಯುವ ಮೂಲ ಪರಿಕರಗಳಾದ ಟೈರು, ತೆಂಗಿನ ಚಿಪ್ಪು ಒಡೆದ ಮಡಿಕೆಚೂರು, ಹಂಚನ್ನು ಇದೇ ಸಂದರ್ಭದಲ್ಲಿ ಪ್ರದರ್ಶಿಸಿದ ಅವರು, ಈ ಫನತ್ಯಾಜ್ಯ ವಸ್ತುಗಳನ್ನು ಸರಿಯಾದ ಜಾಗದಲ್ಲಿ ವಿಲೇವಾರಿ ಮಾಡಿ, ಪರಿಸರ ನೈರ್ಮಲ್ಯ ಕಾಪಾಡಿ ಎಂದು ಮನವಿ ಮಾಡಿದರು.
ಜಿಲ್ಲಾ ಕೀಟಜನ್ಯ ರೋಗಗಳ ನಿಯಂತ್ರಣಾಧಿಕಾರಿ ಡಾ.ಬಿ.ಜಯಮ್ಮ ಮಾತನಾಡಿ, ಈ ವರ್ಷ ಜಿಲ್ಲೆಯಲ್ಲಿ 74, ಡೆಂಗ್ಯೂ ಪ್ರಕರಣಗಳು, 43 ಚಿಕುನ್‍ಗುನ್ಯಾ ಪ್ರಕರಣಗಳು ವರದಿಯಾಗಿದೆ. ರೋಗಿಗಳು ಚೇತರಿಸಿಕೊಂಡು ಗುಣಮುಖರಾಗಿದ್ದಾರೆ. ಹೆಚ್ಚು ಪ್ರಕರಣಗಳು ಚಿತ್ರದುರ್ಗ ತಾಲ್ಲೂಕಿನಲ್ಲಿ ಅದರಲ್ಲೂ ನಗರ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬಂದಿವೆ.
ಸಾರ್ವಜನಿಕರು ತಮ್ಮ ಮನೆಯ ನೀರಿನ ಸಂಗ್ರಹ ಪರಿಕರಗಳನ್ನು ವಾರಕ್ಕೊಮ್ಮೆಯಾದರೂ ಸ್ವಚ್ಛ ಮಾಡಿಕೊಳ್ಳಿ. ನೀರಿನಲ್ಲಿರುವ ಹುಳಗಳು ಸೊಳ್ಳೆಯಮರಿಗಳು, ಮನೆ ಮನೆಗಳಲ್ಲಿ ಲಾರ್ವಾ ಸಾಂದ್ರತೆ ಕಡಿಮೆಯಾದರೆ ಸೊಳ್ಳೆಗಳ ಉತ್ಪತ್ತಿ ಕಡಿಮೆಯಾಗುತ್ತದೆ. ಮಲಗುವಾಗ ಸೊಳ್ಳೆಪರದೆ ಉಪಯೋಗಿಸಿ. ಜ್ವರ ಬಂದ ಕೂಡಲೇ ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬೇಡಿ, ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯಿರಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ಯೋಜನಾಧಿಕಾರಿ ಡಾ.ಸಿ.ಓ.ಸುಧ, ತಾಲ್ಲೂಕು ಆರೋಗ್ಯಾಧಿಕಾರಿ, ಡಾ.ಗಿರೀಶ್.ಬಿ.ವಿ., ಕೀಟಶಾಸ್ತ್ರಜ್ಞರಾದ ನಂದಿನಿಕಡಿ, ಸಿದ್ದಪ್ಪಸ್ವಾಮಿ, ಎನ್.ಎಸ್.ಮಂಜುನಾಥ, ಖಾಸಿಂಸಾಬ್, ಮೂಗಪ್ಪ, ಹನುಮಂತಪ್ಪ, ಅಬುಸ್ವಾಲೇಹ ಸೇರಿದಂತೆ ಹಿರಿಯ ಕಿರಿಯ ಆರೋಗ್ಯ ಸಹಾಯಕರು ಶಾಲಾ ಶಿಕ್ಷಕರು ಭಾಗವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಸ್ಥಬ್ದಚಿತ್ರ ಮತ್ತು ಜಾಥ ನಗರ ಪ್ರದಕ್ಷಿಣೆ ಮಾಡುತ್ತಾ ಸಂಪಿಗೆ ಸಿದ್ದೇಶ್ವರ ಶಾಲೆಯಿಂದ ಪ್ರಾರಂಭಿಸಿ, ಬುರುಜನಹಟ್ಟಿ, ಸಿಹಿನೀರು ಹೊಂಡದರಸ್ತೆ, ಕುಂಬಾರಬೀದಿ ಮುಖಾಂತರ ಹೊಳಲ್ಕೆರೆ ರಸ್ತೆ ಸಂಪಿಗೆ ಸಿದ್ದೇಶ್ವರ ಶಾಲೆಗೆ ಪುನ: ಮರಳಿತು. ಶಾಲಾ ವಿದ್ಯಾರ್ಥಿಗಳು ಸೊಳ್ಳೆಗಳ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ, ಕೀಟ ಚಿಕ್ಕದು ಕಾಟದೊಡ್ಡದು ಎಂದು ಘೋಷಣೆ ಕೂಗಿ ಜಾಗೃತಿ ಮೂಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








