ತುಮಕೂರು
ಕೇಂದ್ರ ಸರ್ಕಾರದ ಕೃಷಿ ಇಲಾಖೆ ಜನವರಿ 2 ರಂದು ಆಯೋಜಿಸಿರುವ ರಾಷ್ಟ್ರ ಮಟ್ಟದ ಕೃಷಿ ಸಮಾವೇಶಕ್ಕೆ ತುಮಕೂರು ನಗರ ಸರ್ವಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಾಲ್ಕನೆ ಹಂತದ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆಯ ಕಂತುಗಳನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವ ಕಾರ್ಯಕ್ಕೆ ಚಾಲನೆ ನೀಡುವರು.
ಈ ಸಂದರ್ಭದಲ್ಲಿ ಕರ್ನಾಟಕ ಸೇರಿ ಆರು ರಾಜ್ಯಗಳಿಗೆ ಪ್ರಧಾನಿಯವರು ಕೃಷಿ ಕರ್ಮಣ್ಯ ಪ್ರಶಸ್ತಿಯನ್ನು ಪ್ರದಾನ ಮಾಡುವರು. ದ್ವಿದಳ ಧಾನ್ಯದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯಕ್ಕೆ ಎರಡನೇ ಬಾರಿ ಈ ಕೃಷಿ ಕರ್ಮಣ್ಯ ಪ್ರಶಸ್ತಿ ದೊರೆಯುತ್ತಿದೆ. ಕರ್ನಾಟಕದ ಜೊತೆಗೆ, ಮಹಾರಾಷ್ಟ್ರ, ಗುಜರಾತ್, ರಾಜಸ್ತಾನ್, ಮಧ್ಯಪ್ರದೇಶ ಹಾಗೂ ಬಿಹಾರ ರಾಜ್ಯಗಳಿಗೂ ಈ ವೇಳೆ ಕೃಷಿ ಕರ್ಮಣ್ಯ ಪ್ರಶಸ್ತಿ ವಿತರಿಸಲಾಗುತ್ತದೆ. ಈ ಪ್ರಶಸ್ತಿಯು ತಲಾ ಒಂದು ಕೋಟಿ ರೂ. ಹಾಗೂ ಪಾರಿತೋಷಕ ಒಳಗೊಂಡಿರುತ್ತದೆ.
ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆಗೆ ನೊಂದಣಿಯಾದ ದೇಶದ 40 ಕೋಟಿ ರೈತರಲ್ಲಿ ಲಾಟರಿ ಮೂಲಕ 40 ಜನ ಅದೃಷ್ಟವಂತ ರೈತರನ್ನು ಆಯ್ಕೆ ಮಾಡಿದ್ದು, ಅವರಿಗೆ ಸಮಾರಂಭದಲ್ಲಿ ಕೃಷಿ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಕೃಷಿ ಸಮ್ಮಾನ್ ಪ್ರಶಸ್ತಿಗೆ ಜಿಲ್ಲೆಯ ಇಬ್ಬರು ರೈತರು ಅದೃಷ್ಟಶಾಲಿಗಳ ಪಟ್ಟಿಯಲ್ಲಿ ಸೇರಿದ್ದಾರೆ. ತುರುವೇಕೆರೆ ತಾಲ್ಲೂಕು ವೆಂಕಟಾಪುರದ ಮಹಲಿಂಗಣ್ಣ ಹಾಗೂ ಮಧುಗಿರಿ ತಾಲ್ಲುಕು ಗೌಡಪ್ಪನ ಪಾಳ್ಯದ ಜಿ. ರಂಗಪ್ಪ ಅವರು ಈ ಸಮಾರಂಭದಲ್ಲಿ ಕೃಷಿ ಸಮ್ಮಾನ್ ಪ್ರಶಸ್ತಿ ಸ್ವೀಕಾರ ಮಾಡಲಿದ್ದಾರೆ.
ಕೇಂದ್ರ ಸರ್ಕಾರದ ಈ ಕಾರ್ಯಕ್ರಮ ನಿಗಧಿಯಾಗಿ, ಸಿದ್ಧತೆಗೆ ಸಿಕ್ಕ ಕಡಿಮೆ ಅವಧಿಯಲ್ಲೇ ಸಂಪೂರ್ಣ ಸಿದ್ಧ ಮಾಡಲಾಗುತ್ತದೆ. ಪ್ರಧಾನಿಯವರ ಕಾರ್ಯಕ್ರಮ ಮುಗಿಯುವವರೆಗೂ ಯಾವ ಅಧಿಕಾರಿಯೂ ರಜೆ ಪಡೆಯಕೂಡದು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ಸೂಚನೆ ನೀಡಿದ್ದಾರೆ. ಕಾರ್ಯಕ್ರಮದ ಯಶಸ್ಸಿಗಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಒಳಗೊಂಡ ಶಿಷ್ಟಾಚಾರ ಸಮಿತಿ, ವೇದಿಕೆ, ಸಮಿತಿ, ಮೂಲಭೂತ ಸಮಿತಿ ಸೇರಿ ವಿವಿಧ ಸಮಿತಿಗಳನ್ನು ರಚಿಸಿ ಎಲ್ಲಾ ಸಿದ್ಧತೆ ಮಾಡಲಾಗಿದೆ. ಪ್ರಧಾನ ಮಂತ್ರಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಮಧ್ಯಾಹ್ನ 2.15ಕ್ಕೆ ತುಮಕೂರಿಗೆ ಆಗಮಿಸುವ ಪ್ರಧಾನಿ ಮೋದಿ, ಸಿದ್ಧಗಂಗಾಮಠಕ್ಕೆ ತೆರಳಿ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸುವರು. ನಂತರ, ಸಿದ್ಧಲಿಂಗಸ್ವಾಮೀಜಿಗಳ ಆಶೀರ್ವಾದ ಪಡೆದು, ಶ್ರೀಮಠದ ಮಕ್ಕಳ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವರು. ಸುಮಾರು 40 ನಿಮಿಷ ಮಠದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಂತರ, ಸರ್ಕಾರಿ ಕಾಲೇಜು ಮೈದಾನದಲ್ಲಿ ನಡೆಯುವ ರೈತ ಸಮಾವೇಶಕ್ಕೆ ಆಗಮಿಸುವರು.
ಸಮಾರಂಭ ನಡೆಯುವ ಕಾಲೇಜು ಮೈದಾನವನ್ನು ಎಸ್‍ಪಿಜಿಯವರು ತಮ್ಮ ವಶಕ್ಕೆ ಪಡೆದು ಭದ್ರತಾ ಕ್ರಮ ಕೈಗೊಂಡಿದ್ದಾರೆ. ಈ ಕಾಲೇಜು ಮೈದಾನದ ಸುತ್ತಮುತ್ತಲಿನ ಪ್ರದೇಶ, ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಬಿಗಿ ಭದ್ರತೆ ವಹಿಸಲಾಗಿದೆ. ಇಲ್ಲಿನ ರಸ್ತೆಗಳನ್ನು ಯೋಗ್ಯಗೊಳಿಸಿ, ಸ್ವಚ್ಚಗೊಳಿಸಲಾಗಿದೆ.
ಸಮಾರಂಭಕ್ಕೆ ಒಂದು ಲಕ್ಷ ಜನರನ್ನು ನಿರೀಕ್ಷೆ ಮಾಡಲಾಗಿದೆ. ಸಭಾಂಗಣದಲ್ಲಿ 60 ಸಾವಿರ ಆಸನಗಳನ್ನು ವ್ಯವಸ್ಥೆ ಮಾಡÀಲಾಗಿದೆ. ಉಳಿದಂತೆ ಸಭಾಂಗಣದ ಹೊರಗೆ, ಸುತ್ತಲಿನ ರಸ್ತೆಗಳಲ್ಲಿ ಜನ ನಿಂತು ಕಾರ್ಯಕ್ರಮ ವೀಕ್ಷಿಸಲು ಎಲ್‍ಇಡಿ ಪರದೆಗಳನ್ನು ಅಳವಡಿಸಲಾಗಿದೆ.
ಸಿದ್ಧಗಂಗಾಮಠದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದವರೆಗೆ ಬಿ.ಹೆಚ್.ರಸ್ತೆಯ ಎರಡೂ ಬದಿ ಕಟ್ಟಿಗೆಗೆಳ ತಡೆಗೋಡೆ ನಿರ್ಮಿಸಲಾಗಿದ್ದು, ಈ ರಸ್ತೆಯುದ್ದಕ್ಕೂ ಪೊಲೀಸ್ ಕಾವಲು ಹಾಕಲಾಗಿದೆ. ಇಲ್ಲಿ ಪೊಲೀಸರು ಸಾರ್ವಜನಿಕರ ಪ್ರವೇಶ ಒತ್ತಡ ನಿಯಂತ್ರಿಸುತ್ತಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಬರುವ ಹಿನ್ನೆಲೆಯಲ್ಲಿ ಜನವರಿ 2 ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಕೆ.ಎಸ್.ಬಿ.ಸಿ.ಎಲ್ ಡಿಪೋ ಹೊರತು ಪಡಿಸಿ ಪಾಲಿಕೆ ವ್ಯಾಪ್ತಿಯ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಿ, ಮದ್ಯ ಮಾರಾಟ ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಆದೇಶಿಸಿದ್ದಾರೆ.
ಪ್ರಧಾನಿಗೆ ವಿವಿಧ ಬೇಡಿಕೆ
ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್‍ನಲ್ಲಿ ಎಚ್‍ಎಎಲ್‍ನ ಹೆಲಿಕಾಪ್ಟರ್ ಬಿಡಿ ಭಾಗಗಳ ಉತ್ಪಾದನಾ ಘಟಕ ಬಹುತೇಕ ಸಿದ್ಧವಾಗಿದ್ದು, ತುಮಕೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರು ಎಚ್‍ಎಎಲ್ ಘಟಕದ ಪ್ರಾರಂಭೋತ್ಸವದ ದಿನಾಂಕ ಘೋಷಿಸಬೇಕು ಎಂದು ಮಾಜಿ ಸಂಸದ ಎಸ್. ಪಿ. ಮುದ್ದಹನುಮೇಗೌಡರು ಮನವಿ ಮಾಡಿದ್ದಾರೆ.
ಕೊಬ್ಬರಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು. ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ 20 ಸಾವಿರ ರೂ. ನಿಗದಿ ಮಾಡಬೇಕು. ಜಿಲ್ಲೆಯ ರೈಲ್ವೆ ಯೋಜನೆ, ಎನ್.ಎಚ್ 206 ರ ಕಾಮಗಾರಿಗಳು ಅನುದಾನ ಕೊರತೆಯಿಂದ ವಿಳಂಬವಾಗುತ್ತಿವೆ. ನಗರದ ಇಸ್ರೋ ಸಂಸ್ಥೆಯ ಕಾಮಗಾರಿಗಳನ್ನು ತ್ವರಿತಗೊಳಿಸಿ ಪೂರ್ಣಗೊಳಿಸಬೇಕು ಎಂದು ಮುದ್ದಹನುಮೇಗೌಡರು ಪ್ರಧಾನಿ ಮೋದಿಗೆ ಪತ್ರ ಬರೆದು ವಿನಂತಿಸಿದ್ದಾರೆ.
ಮೋದಿಯವರೆ ಉದ್ಘಾಟಿಸಿದ ವಸಂತನರಸಾಪುರದ ಫುಡ್‍ಪಾರ್ಕ್ ರೈತರಿಗೆ ಉಪಯೋಗ ಆಗುವುದರ ಬದಲು ಅದಾನಿ ಕಂಪನಿಗೆ ಅನುಕೂಲ ಮಾಡಿಕೊಡಲಾಗಿದೆ. ರೈತರ ಪರವಾದ ಡಾ.ಸ್ವಾಮಿನಾಥನ್ ವರದಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪ್ರಧಾನಿಯವರನ್ನು ಒತ್ತಾಯಿಸಿದ್ದಾರೆ. ಸಮಾರಂಭದಲ್ಲಿ ತಾವು ಕಪ್ಪು ಬಟ್ಟೆ ಧರಿಸಿ ಭಾಗವಹಿಸುವುದಾಗಿ ಹೇಳಿದ್ದಾರೆ.
ರಾಜ್ಯ ಸರ್ಕಾರಕ್ಕೂ ಪ್ರತಿಷ್ಠೆ
ಕೇಂದ್ರ ಸರ್ಕಾರದ ಕೃಷಿ ಇಲಾಖೆಯ ಕಾರ್ಯಕ್ರಮವಾದರೂ, ಪ್ರಧಾನಿ ಮೋದಿಯವರು ಭಾಗವಹಿಸುವ ಕಾರಣ ರಾಜ್ಯ ಸರ್ಕಾರಕ್ಕೆ ಹಾಗೂ ಬಿಜೆಪಿಗೆ ಇದೊಂದು ಪ್ರತಿಷ್ಠೆಯ ಕಾರ್ಯಕ್ರಮವಾಗಿದೆ. ಉಪ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದು, ಬಹುಮತದೊಂದಿಗೆ ಸರ್ಕಾರವನ್ನು ಸುಭದ್ರಪಡಿಸಿಕೊಂಡ ಸಂದರ್ಭದಲ್ಲಿ ಮೋದಿಯವರ ಈ ಕಾರ್ಯಕ್ರಮವನ್ನು ಪಕ್ಷದ ಶಕ್ತಿ ಪ್ರದರ್ಶನ ರೀತಿ ಯಶಸ್ವಿಗೊಳಿಸಲು ರಾಜ್ಯ ಸರ್ಕಾರ ಹಾಗೂ ಬಿಜೆಪಿ ನಾಯಕರು ಶ್ರಮಿಸುತ್ತಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರೆ ಖುದ್ದು ತುಮಕೂರಿಗೆ ಬಂದು ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದರು. ಜೊತೆಗೆ ಉಪ ಮುಖ್ಯಮಂತ್ರಿಗಳಾದ ಲಕ್ಷಣ ಸವದಿ, ಗೋವಿಂದ ಕಾರಜೋಳ, ಸಚಿವರಾದ ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ, ಜೆ.ಸಿ.ಮಾಧುಸ್ವಾಮಿ ಮತ್ತಿತರರು ಕಾರ್ಯಕ್ರಮ ಸಂಘಟನೆಗೆ ಶ್ರಮವಹಿದ್ದಾರೆ.ಸಮಾರಂಭದಲ್ಲಿ ಹೆಚ್ಚು ಜನರನ್ನು ಸಂಘಟಿಸಿ ರಾಜ್ಯದಲ್ಲಿ ಬಿಜೆಪಿಯ ಪ್ರಾಬಲ್ಯ ಪ್ರದರ್ಶಿಸಲು ನಾಯಕರು ಪ್ರಯತ್ನ ನಡೆಸಿದ್ದಾರೆ. ಇದಕ್ಕಾಗಿ ಹೊರ ಜಿಲ್ಲೆಗಳಿಂದ ಜನ ಬಂದು ಹೋಗಲು ಒಂದು ಸಾವಿರ ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ಕಾಯ್ದಿರಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
