ತಿಪಟೂರು
ವಿಶೇಷ ವರದಿ :ರಂಗನಾಥ್ ಪಾರ್ಥಸಾರಥಿ
ನೀರಿಲ್ಲದೆ ಪರದಾಡುತ್ತಿರುವ ಜನರು ಒಂದು ಕಡೆ, ಈಚನೂರು ಕೆರೆಯಿಂದ ಕುಡಿಯುವ ನೀರೊದಗಿಸುವ ಪೈಪ್ಗೆ ಕನ್ನ ಒಂದು ಕಡೆ. ಇಷ್ಟಲ್ಲದೆ ನಗರದ ತುಂಬೆಲ್ಲಾ ಹಾಳಾಗಿರುವ ಪೈಪ್ಲೈನ್ಗಳಲ್ಲಿ ನೀರು ಎಗ್ಗಿಲ್ಲದೆ ಪೋಲಾಗುತ್ತಿದೆ.
ನಾಲೆಯಲ್ಲಿ ನೀರಿಲ್ಲದೆ, ಈಚನೂರು ಕೆರೆಯಲ್ಲಿ ನೀರಲ್ಲದೆ ಇರುವಾಗ 15 ದಿನಗಳಿಗೊಮ್ಮೆ ಹೇಮಾವತಿ ನೀರನ್ನು ಬಿಡುತ್ತಿದ್ದರು. ಆದರೆ ಈಗ ನಾಲೆಯಲ್ಲಿ ನೀರು ಹರಿಯುತ್ತಿರುವ ಈ ಸಂದರ್ಭದಲ್ಲೂ ನಗರಕ್ಕೆ ಸರಿಯಾಗಿ ನೀರನ್ನು ಪೂರೈಸದೆ ಕೈಚೆಲ್ಲಿಕೂತಿದ್ದು ನಗರಸಭೆಯ ಅಧಿಕಾರಿಗಳಿಗೆ ಜನರು ಹಿಡಿಶಾಪಹಾಕುತ್ತಿದ್ದಾರೆ.
ಪೈಪ್ಲೈನ್ಗೆ ಕನ್ನ :
ಈಚನೂರು ಕೆರೆಯಿಂದ ಲಕ್ಷಾಂತರ ರೂ. ಕೊಟ್ಟು ಹಾಕಿಸಿರುವ ಪೈಪ್ಲೈನ್ಗೆ ಗೊರಗೊಂಡನಹಳ್ಳಿಯ ಇಂಡಿಯನ್ ಪೆಟ್ರೋಲ್ ಬಂಕ್ ಪಕ್ಕ ದೊಡ್ಡದಾಗಿ ಪೈಪ್ಲೈನ್ಗೆ ಕನ್ನಹಾಕಿದ್ದಾರೋ ಇಲ್ಲ ಹೊಡೆದುಹೋಗಿದೆಯೋ ತಿಳಿಯುತ್ತಿಲ್ಲ. ಆದರೆ ಇಲ್ಲಿ ಸುಮಾರು ತಿಂಗಳಿನಿಂದಲೂ ನೀರು ಅವ್ಯಾಹತವಾಗಿ ಹರಿದು ದಿನಕ್ಕೆ ಸಾವಿರಾರು ಲೀಟರ್ಗಳಷ್ಟು ನೀರು ಚರಂಡಿ ಪಾಲಾಗುತ್ತಿದ್ದರೂ ನಗರಸಭೆಯ ಅಧಿಕಾರಿಗಳು ನಮ್ಮಪ್ಪನದೇನು ಹೋಗುತ್ತದೆಯೇ? ಹೋಗುವುದು ಸಾರ್ವಜನಿಕರ ಹಣವಲ್ಲವೇ ಎಂದು ಅಸಡ್ಡೆಯಿಂದ ಕುಳಿತಿರುವಂತೆ ಕಾಣುತ್ತಿದೆ.
ಶುದ್ಧ ನೀರು ಮನೆ ತಲುಪುವುದರೊಳಗೆ ಕಲುಷಿತ : ಇನ್ನು ಗಾಂಧಿನಗರದಲ್ಲಿರುವ ನೀರನ್ನು ಶುದ್ದೀಕರಿಸುವ ಘಟಕವಿದ್ದು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು ಇದಕ್ಕೆ ದಂಡಕ್ಕೆನ್ನುವಂತೆ ಲಕ್ಷಾಂತರ ರೂಗಳನ್ನು ಖರ್ಚುಮಾಡುತ್ತಿದ್ದಾರೆ. ಆದರೆ ಇಲ್ಲಿ ಶುದ್ದೀಕರಣಗೊಂಡ ಕುಡಿಯುವ ನೀರು ಪ್ರಜೆಗಳ ಮನೆತಲುಪುದರಲ್ಲಿ ಕುಲಗೆಟ್ಟು ಹೋಗಿ ಕುಡಿಯಲು ಸಾಧ್ಯವಿಲ್ಲದಂತಾಗುತ್ತಿದೆ.
ಇದಕ್ಕೆ ಮುಖ್ಯಕಾರಣವೆಂದರೆ ನಗರದಲ್ಲಿ ನಡೆಯುತ್ತಿರುವ ಅರ್ಧಂಬರ್ಧ ಕಾಮಗಾರಿಗಳು, ಇವರು ಯಾವುದೆ ಅಡೆತಡೆ ಇಲ್ಲದೆ ಹೇಗೆ ಬೇಕೋ ಹಾಗೆ ರಸ್ತೆಯನ್ನು ಅಗೆದು ಪೈಪ್ಲೈನ್ಗಳನ್ನು ಹಾಳುಮಾಡಿ ಹೇಗೋ ತೇಪೆಹಾಕಿ ತಮ್ಮ ಕೆಲಸವನ್ನು ಮುಗಿಸಿ ಮುಂದೆ ಮುಂದೆ ಹೋಗುತ್ತಾರೆ. ಅವರು ಮುಂದೆ ಹೋಗಿ ಗಂಟೆ ಕಳೆಯುವಲ್ಲಿ ನೀರು ಬಿಟ್ಟರೆ ನೀರೆಲ್ಲಾ ರಸ್ತೆಪಾಲಾಗುವುದಲ್ಲದೇ ಕಲುಷಿತ ನೀರಾಗಿ ಜನರಿಗೆ ಬಿಟ್ಟಿಯಾಗಿ ಕಾಯಿಲೆಗಳನ್ನು ಹರಡುವಲ್ಲಿ ನಗರಸಭೆಯ ಅಧಿಕಾರಿಗಳು ಗುತ್ತಿಗೆ ವಹಿಸಿಕೊಂಡಿರುವಂತೆ ಕಾಣುತ್ತಿದೆ.
ಕೆರೆಯಂತಾಗಿರುವ ಗಾಂಧಿನಗರದ ರಸ್ತೆ :
ನಗರಸಭೆಯು ಕಳೆದ ವರ್ಷದಲ್ಲಿ ಪೈಪ್ಲೈನ್ ರಿಪೇರಿಗೆಂದು ಗುಂಡಿತೆಗೆದು ಇದಕ್ಕೆ ಅರ್ಧಂಬರ್ಧ ರಿಪೇರಿಮಾಡಿ ಗುಂಡಿಯನ್ನು ಮುಚ್ಚಿತ್ತು. ಆದರೆ ಅಲ್ಲಿಂದ ಸುಮಾರು 15-20 ಅಡಿ ಅಂತರದಲ್ಲಿ ರಂಗಾಪುರ ರಸ್ತೆಯ ಹತ್ತಿರ ಇಂದು ದೊಡ್ಡ ಪ್ರಮಾಣದಲ್ಲಿ ಪೈಪ್ಹೊಡೆದು ನೀರು ಪ್ರವಾಹೋಪಾದಿಯಲ್ಲಿ ರಸ್ತೆಯಲ್ಲಿ ಹರಿಯುತ್ತಿದ್ದು, ಗಂಟೆಗಳು ಕಳೆದರು ನಗರಸಭೆಯ ಯಾವ ಅಧಿಕಾರಿಗಳು ನೀರನ್ನು ನಿಲ್ಲಿಸುವ ಗೋಜಿಗೆ ಹೋಗಲಿಲ್ಲ.
ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ನಮಗೆ ಇದು ಹೊಸದೇನಲ್ಲ, ಕಳೆದ 2 ವರ್ಷಗಳಿಂದಲೂ ಇಂತಹದ್ದೇ ರಸ್ತೆಯಲ್ಲಿ ಬಿದ್ದು ಎದ್ದು ಹೋಗುವುದು ಅಭ್ಯಾಸವಾಗಿಬಿಡ್ಡಿದೆ. ಆದರೆ ಈ ಬಾರಿಯ ಗಣೇಶನ ಹಬ್ಬಕ್ಕಾದರೂ ರಸ್ತೆಯನ್ನು ಸ್ವಲ್ಪಮಟ್ಟಿಗಾದರು ರಿಪೇರಿ ಮಾಡದಿದ್ದರೆ ಗಣೇಶನನ್ನು ಇಲ್ಲಿಯೇ ವಿಸರ್ಜನೆಮಾಡಬೇಕಾಗುತ್ತದೆಂದು ಸ್ಥಳೀಯ ನಿವಾಸಿ ಸಿದ್ದೇಶ್ ತಿಳಿಸಿದರು.
ವಿದ್ಯಾನಗರದ ನಗರಸಭಾ ಸದಸ್ಯನ ಎಚ್ಚರಿಕೆ : ವಿದ್ಯಾನಗರದಲ್ಲಿ ಓಡಾಡಲು ಸೂಕ್ತ ರಸ್ತೆಯಿಲ್ಲ. ನೀರಿನ ಸಮಸ್ಯೆ ಇದೆ ಎಂದು ಎಷ್ಟು ಬಾರಿ ನಗರಸಭೆಯ ಅಧಿಕಾರಿಗಳಿಗೆ ತಿಳಿಸಿದರು. ನಗರಸಭೆ ಅಧಿಕಾರಿಗಳು ಅಸಡ್ಡೆತೋರುತ್ತಿದ್ದಾರೆ. ಶೀಘ್ರವಾಗಿ ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ವಾರ್ಡ್ನ ಸದಸ್ಯರೆಲ್ಲರೂ ನಗರಸಭೆಯ ಮುಂದೆ ಧರಣಿ ನಡೆಸುವುದಾಗಿ ನಗರಸಭಾ ಸದಸ್ಯ ವಿ.ಯೋಗೀಶ್ ಎಚ್ಚರಿಸಿದ್ದಾರೆ.
ಇದು ಕೇವಲ ಗಾಂಧಿನಗರ, ವಿದ್ಯಾನಗರದ ಸಮಸ್ಯೆಯಲ್ಲ ಇದು ತಿಪಟೂರು ನಗರಸಭೆಯ ಆಡಳಿತಕ್ಕೆ ಹಿಡದ ಕೈಗನ್ನಡಿಯಾದೆ. ನಗರಸಭೆಗೆ ನೂತನವಾಗಿ ಆಗಮಿಸಿರುವ ಆಯುಕ್ತರು ನಗರಪ್ರದಕ್ಷಿಣೆ ಮಾಡಿ ಸಮಸ್ಯೆಗಳನ್ನು ತಿಳಿಯುವತ್ತ ಗಮನಹರಿಸದೆ ಇರುವುದು ಎಷ್ಟು ಸರಿ ಎಂಬುದು ಸಾರ್ವಜನಿಕರಿಗೆ ಕಾಡುತ್ತಿರುವ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ