ನಗರ ನಕ್ಸಲರು ಆಧುನಿಕ ಪೂತನಿಯ ಪ್ರತಿರೂಪ

ದಾವಣಗೆರೆ:

      ನಕ್ಸಲರು ಆಧುನಿಕ ಕಾಲದ ತಾಟಕಿಯರಾದರೆ, ನಗರ ನಕ್ಸಲರು ಆಧುನಿಕ ಪೂತನಿಯರಾಗಿದ್ದಾರೆಂದು ಪ್ರಜ್ಞಾ ಪ್ರವಾಹದ ಕ್ಷೇತ್ರೀಯ ಸಂಯೋಜಕ ರಘುನಂದನ ಟೀಕಿಸಿದ್ದಾರೆ.

        ನಗರದ ಹೋಟೆಲ್ ಶಾಂತಿ ಪಾರ್ಕ್ ರಾಯಲ್ ಹಾಲ್‍ನಲ್ಲಿ ಭಾನುವಾರ ಸಂಜೆ ವರ್ತಮಾನ ಫೋರಂ ಫಾರ್ ಇಂಟಲೆಕ್ಚುಯಲ್ ಡಿಬೆಟ್ಸ್ ವತಿಯಿಂದ ನಡೆದ “ಅರ್ಬನ್ ಮಾವೋವಾದ: ಚಟುವಟಿಕೆಯ ಸ್ವರೂಪ” ಕುರಿತ ವಿಮರ್ಶೆ ಕಾರ್ಯಕ್ರಮದಲ್ಲಿ ವಿಷಯ ಮಂಡಿಸಿ ಮಾತನಾಡಿದ ಅವರು, ಹವಾನಿಯಂತ್ರಿತ ಕೊಠಡಿಗಳಲ್ಲಿ ಕೂತಿರುವ ನಗರ ನಕ್ಸಲರು, ಮಾನವ ಹಕ್ಕುಗಳ ಚಳವಳಿಯ ರೂಪದಲ್ಲಿ ಯುವಕರನ್ನು ಪ್ರಚೋದಿಸಿ, ಕಾಡಿಗೆ ಕಳುಹಿಸುತ್ತಿದ್ದಾರೆ. ಅಲ್ಲದೆ, ಕಾನೂನು ಬೆಂಬಲ, ನೈತಿಕ ಸಹಕಾರ ಸಹ ನೀಡುತ್ತಿದ್ದಾರೆಂದು ಆರೋಪಿಸಿದರು.

       ಕರ್ನಾಟಕವು ನಗರ ನಕ್ಸಲರ ಕೇಂದ್ರವಾಗುತ್ತಿದ್ದು, ಇಂಥಹವರನ್ನು ಗುರುತಿಸಿ ಮಟ್ಟ ಹಾಕಬೇಕಾದ ಜವಾಬ್ದಾರಿ ಸರ್ಕಾರ ಹಾಗೂ ಸಮಾಜದ ಮೇಲಿದೆ. ನಗರ ನಕ್ಸಲರು ಕಾಡಿನ ನಕ್ಸಲರಿಗಿಂತಲೂ ಅಪಾಯಕಾರಿಯಾಗಿದ್ದಾರೆ. ಕಾಡು ನಕ್ಸಲರು ಬಂದೂಕು ಹಿಡಿದು ಕೊನೆಗೊಂದು ದಿನ ಸಾಯುತ್ತಾರೆ. 10 ವರ್ಷದಲ್ಲಿ 20 ಸಾವಿರ ನಕ್ಸಲರು ಹೋರಾಟಕ್ಕೆ ಬಲಿಯಾಗಿದ್ದಾರೆ. ಪ್ರಸ್ತುತ ನಕ್ಸಲರ ಬಳಿ ದೇಶದ ಬಜೆಟ್‍ಗೆ ಸಮನಾದಷ್ಟು ಹಣವಿದ್ದು, ಇದನ್ನು ಬಳಸಿಕೊಂಡು ಅಮಾಯಕ ಯುವಕರಲ್ಲಿ ಇಲ್ಲಸಲ್ಲದ ವಿಚಾರಗಳನ್ನು ತುಂಬಿ, ಬಂದೂಕು ಹಿಡಿಯಲು ಪ್ರೇರಣೆ ಕೊಡುವಲ್ಲಿ ನಗರ ನಕ್ಸಲರು ತೊಡಗಿದ್ದಾರೆಂದು ಆಪಾದಿಸಿದರು.

        ನಕ್ಸಲ್ ಚಳುವಳಿ ನೆಲ ಕಚ್ಚುತ್ತಿರುವ ಈ ಸಂದರ್ಭದಲ್ಲಿ ಶರಣಾಗತರಾಗಿ ಕಾಡಿನಿಂದ ಬಂದಿರುವವರೂ ನಗರ ನಕ್ಸಲರ ಪಡೆ ಸೇರುತ್ತಿದ್ದಾರೆ. ಪ್ರಶಸ್ತಿ, ಪುರಸ್ಕಾರ ಪಡೆದು ಐಷಾರಾಮಿ ಜೀವನ ನಡೆಸುವ ಮಾವೋವಾದಿ ಕಮ್ಯುನಿಸ್ಟ್ ಪ್ರಭಾವದಿಂದ ಪ್ರಾರಂಭವಾದ ನಕ್ಸಲ್ ಚಳುವಳಿಯು ಈ ಹಿಂದೆ ದೇಶದ 106 ಜಿಲ್ಲೆಗಳಲ್ಲಿ ಸಕ್ರಿಯವಾಗಿತ್ತು. ಆದರೆ, ಸರ್ಕಾರದ ಕಠಿಣ ಕ್ರಮಗಳಿಂದ ನಕ್ಸಲರು 15 ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದಾರೆ ಎಂದರು.

         ಮಾಕ್ರ್ಸ್‍ವಾದ ಪ್ರೇರಿತ ಕಮ್ಯುನಿಸ್ಟ್ ಆಡಳಿತದ ರಷ್ಯಾದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೇ ಇರಲಿಲ್ಲ. ಲೆನಿನ್, ಸ್ಟಾಲಿನ್ ಆಡಳಿತದಲ್ಲಿ 5 ಕೋಟಿಯಷ್ಟು ಜನರ ಮಾರಣಹೋಮವಾಗಿದೆ. ಚೀನಾದಲ್ಲಿ ಮಾವೋ ಸಾಂಸ್ಕøತಿಕ ಕ್ರಾಂತಿ ಹೆಸರಿನಲ್ಲಿ ಕೋಟ್ಯಂತರ ಜನರನ್ನು ಬಲಿ ಪಡೆದಿದ್ದಾನೆ. ಇದರ ಪಳೆಯುಳಿಕೆ ಎಂಬಂತೆ 1925ರಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷವು ರಷ್ಯಾದಲ್ಲಿ ಪ್ರಾರಂಭವಾಯಿತು. ಇದೇ ಕಮ್ಯುನಿಸ್ಟರು 1962ರ ಯುದ್ಧದಲ್ಲಿ ಚೀನಾ ಸೇನೆಗಾಗಿ ಹಣ ಸಂಗ್ರಹಣೆ ಮಾಡಿದ್ದರು. ಅದೇ ಸಂತತಿಯೇ ಇಂದು ಪ್ರಜಾವಾದಿ, ಜನವಿಮೋಚನೆ ಸೇರಿದಂತೆ ಬೇರೆ ಬೇರೆ ಹೆಸರಿನಲ್ಲಿ ಕಾರ್ಯಾಚರಿಸುತ್ತಿದೆ ಎಂದರು.

          ಸಿದ್ಧಗಂಗಾ ಶಾಲೆಯ ವಿದ್ಯಾರ್ಥಿನಿ ಕರುಣಾ ಕನ್ನವರ ಪ್ರಾರ್ಥಿಸಿದರು. ವಿ.ಶಂಭುಲಿಂಗಪ್ಪ ಸ್ವಾಗತಿಸಿದರು. ಮೇಘರಾಜ್ ಕಾರ್ಯಕ್ರಮ ನಿರೂಪಿಸಿದರು. ನವೀನ ಗಡ್ಡದಹಳ್ಳಿ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link