ಸ್ವಚ್ಛತೆ ಇರುವ ಕಡೆ ನೆಮ್ಮದಿ ಇರುತ್ತದೆ : ಜೆ.ಸಿ ಮಾಧುಸ್ವಾಮಿ

ತುಮಕೂರು:

    ನಮ್ಮ ಸುತ್ತಮುತ್ತ ಸ್ವಚ್ಛತೆ ಇದ್ದಲ್ಲಿ ಸಾಂಕ್ರಾಮಿಕ ರೋಗಗಳು ಹರಡದೇ ಆರೋಗ್ಯ ಕಾಪಾಡಿಕೊಂಡು ನೆಮ್ಮದಿಯಾಗಿರಬಹುದು ಎಂದು ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ತಿಳಿಸಿದರು.

     ಜಿಲ್ಲಾ ಪಂಚಾಯತ್ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಜಿಲ್ಲಾ ಬಾಲಭವನದಲ್ಲಿಂದು ಹಮ್ಮಿಕೊಂಡಿದ್ದ “ಸ್ವಚ್ಛತೆಯೇ ಸಮೃದ್ಧಿ ಘನತ್ಯಾಜ್ಯ ನಿರ್ವಹಣೆ” ಬಗ್ಗೆ ಸಮಾಲೋಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಗಾಂಧೀಜಿಯವರ ಕನಸು ಸ್ವಚ್ಛಭಾರತ. ಇದಕ್ಕಾಗಿ ಅವರು ನಿರಂತರ ಶ್ರಮಿಸಿದ ಮಹಾನ್ ವ್ಯಕ್ತಿ ಎಂದು ಸ್ಮರಿಸುತ್ತಾ, ನಾವು ಭಾರತೀಯರು ಖಾಸಗಿಯಾಗಿ ಶುದ್ಧವಾಗಿರುತ್ತೇವೆ ಆದರೆ ಸಾರ್ವಜನಿಕವಾಗಿ ಅಶುದ್ಧವಾಗಿರುತ್ತೇವೆ. ಆದ್ದರಿಂದ ಮನೆಯ ಹಂತದಲ್ಲಿ ತಮ್ಮ ಸ್ವಂತ ಕೆಲಸವಾಗಿ ಕಸವನ್ನು ಒಣ ಹಾಗೂ ಹಸಿ ಕಸವಾಗಿ ವಿಂಗಡಿಸಿ ಸೂಕ್ತ ನಿರ್ವಹಣೆ ಮಾಡುವುದು ದೈನಂದಿನ ಪ್ರಕ್ರಿಯೆಯಾಗಬೇಕು.

    ಪುಡಿ ಕಸದ ಮೌಲ್ಯವರ್ಧನೆ ಮಾಡಿ ಈಗಾಗಲೇ ಕಲ್ಲಿದ್ದಲು ತಯಾರಿಸಬಹುದಾದ ತಂತ್ರಜ್ಞಾನವಿದೆ ಅದೇ ರೀತಿ ತೆಂಗಿನ ಕಾಯಿಯಿಂದ ಬರುವ ತ್ಯಾಜ್ಯದಿಂದ ಮೌಲ್ಯವರ್ಧನೆ ಮಾಡಿದಲ್ಲಿ ಕಸವನ್ನು ರಸವನ್ನಾಗಿ ಮಾಡಿಕೊಂಡು ಆದಾಯ ಗಳಿಸಬಹುದಾಗಿದೆ ಎಂದರು. ಈಗಾಗಲೇ ಜಿಲ್ಲೆಯಲ್ಲಿ ಯೋಜನೆಗೆ ಆಯ್ಕೆಯಾಗಿರುವ 50 ಗ್ರಾಮ ಪಂಚಾಯಿತಿಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಘನತ್ಯಾಜ್ಯ ವಿಲೇವಾರಿ ಕುರಿತು ಸಾರ್ವಜನಿಕರಿಗೆ ಮಾಹಿತಿ, ಶಿಕ್ಷಣ ಹಾಗೂ ಮನ ಪರಿವರ್ತನೆಯನ್ನು ಮಾಡುವಂತಹ ಜವಾಬ್ದಾರಿಯ ಕೆಲಸ ಮಾಡಿದಾಗ ಈ ಕಾರ್ಯಕ್ರಮದ ಯಶಸ್ಸು ಸಾಧ್ಯ ಎಂದರು. ಇದೇ ಸಂದರ್ಭದಲ್ಲಿ ಅಬ್ದುಲ್ ನಜೀಜ್ ಅವರ ಕೊಳವೆಬಾವಿ ಪರಿಕಲ್ಪನೆಯನ್ನು ಸ್ಮರಿಸುತ್ತಾ ಅಂತರ್ಜಲ ಬಳಸಿ ಶುದ್ದ ಕುಡಿಯುವ ನೀರು ಸಿಗುವಂತಹ ವ್ಯವಸ್ಥೆಯಾಯಿತು ಎಂದರು.

       ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ಕಸ ವಿಲೇವಾರಿಯನ್ನು ಸರಿಯಾಗಿ ನಿರ್ವಹಣೆ ಮಾಡದೇ ಇದ್ದಲ್ಲಿ ಅದು ಗಂಡಾಂತರವಾದ ಸಮಸ್ಯೆಯಾಗಲಿದೆ ಆದ್ದರಿಂದ ವೈಜ್ಞಾನಿಕ ಹಾಗೂ ಸುಸ್ಥಿರವಾಗಿ ತ್ಯಾಜ್ಯ ನಿರ್ವಹಣೆ ಮಾಡಬೇಕು. ಈ ಕೆಲಸ ಮನೆಯ ಮಟ್ಟದಲ್ಲಿ ಆಗಬೇಕು ಪ್ರಾರಂಭದಲ್ಲಿಯೇ ಒಣ ಮತ್ತು ಹಸಿ ಕಸವಾಗಿ ವಿಂಗಡಣೆ ಆಗಬೇಕು ಎಂದು ಅವರು ತಿಳಿಸಿದರು.

     ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಮಾತನಾಡಿ, ಗಾಂಧೀಜಿಯವರ ಕನಸಾಗಿದ್ದ ಸ್ವಚ್ಛ ಭಾರತದ ಆಶಯಗಳನ್ನು ಕಳೆದ 5 ವರ್ಷಗಳಿಂದ ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದಡಿ ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ.

      ಈಗಾಗಲೇ ಬಯಲು ಬಹಿರ್ದೇಸೆ ಮುಕ್ತ ಜಿಲ್ಲೆಯಾಗಿ ತುಮಕೂರು ಕಳೆದ ವರ್ಷ ಘೋಷಣೆಯಾಗಿದೆ. ಅದರಂತೆ ಘನ ತ್ಯಾಜ್ಯ ವಿಲೇವಾರಿಯನ್ನು ಅನುಷ್ಠಾನಗೊಳಿಸುವ ಹಂತಕ್ಕೆ ಬಂದಿದ್ದೇವೆ ಆದ್ದರಿಂದ ನಗರ ಸ್ಥಳೀಯ ಸಂಸ್ಥೆಗಳೆ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿಯೂ ಕೂಡ ಒಣ ಮತ್ತು ಹಸಿ ಕಸವನ್ನು ವಿಂಗಡಣೆ ಮಾಡಿದರೆ ಸುತ್ತಮುತ್ತಲ ವಾತಾವರಣ ಸ್ವಚ್ಚವಾಗಿಟ್ಟುಕೊಳ್ಳಬಹುದು. ಗ್ರಾಮ ಪಂಚಾಯತಿಗಳ ತ್ಯಾಜ್ಯ ಸಂಗ್ರಹಣಾ ವಾಹನಗಳನ್ನು ಸೂಕ್ತ ರೀತಿಯಲ್ಲಿ ಸದುಪಯೋಗಪಡಿಸಿಕೊಂಡಾಗ ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬಹುದಾಗಿದೆ ಎಂದರು.

       ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಘನತ್ಯಾಜ್ಯ ವಿಲೇವಾರಿ ಆಯ್ಕೆಯಾದ 20 ಗ್ರಾಮ ಪಂಚಾಯತಿಗಳ ತ್ಯಾಜ್ಯ ಸಂಗ್ರಹಣಾ ವಾಹನಗಳಿಗೆ ಚಾಲನೆ ಹಾಗೂ ಘನತ್ಯಾಜ್ಯ ವಿಲೇವಾರಿ ಕುರಿತು ಪ್ರಾತ್ಯಕ್ಷಿಕೆ ಹಾಗೂ ವಸ್ತು ಪ್ರದರ್ಶನದ ಸ್ಟಾಲ್‍ಗೆ ಚಾಲನೆ ನೀಡಿದರು.

       ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭ ಕಲ್ಯಾಣ್, ಪೊಲೀಸ್ ವರಿಷ್ಟಾಧಿಕಾರಿ ಡಾ. ಕೋನ ವಂಶೀಕೃಷ್ಣ, ಜಿ.ಪಂ ಅಧ್ಯಕ್ಷೆ ಎಂ. ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ಎನ್. ನರಸಿಂಹಮೂರ್ತಿ, ಜಿ.ಪಂ ಸದಸ್ಯ ಹುಚ್ಚಯ್ಯ ಮತ್ತು ಲಕ್ಷ್ಮೀ ನರಸಯ್ಯ, ಪರಿಸರತಜ್ಞ ಕೆ. ಗುರುದೇವ, ಸೇರಿದಂತೆ ಜಿಲ್ಲಾ ಪಂಚಾಯತ್, ಜಿಲ್ಲೆಯ ಎಲ್ಲಾ ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap