ಹರಪನಹಳ್ಳಿ
ತಾಲೂಕಿನ ಕರೇಕಾನಹಳ್ಳಿ ಗ್ರಾಮವಿಡೀ ಕಳೆದ ಒಂದು ವಾರದಿಂದ ಜ್ವರ ಬಾಧೆಯಿಂದ ನಲುಗುತ್ತಿದೆ. ಗ್ರಾಮದಲ್ಲಿ ಮನೆಗೊಬ್ಬಿಬ್ಬರಂತೆ ಜ್ವರದಿಂದ ನರಳುತ್ತಿದ್ದಾರೆ. ಗ್ರಾಮದಲ್ಲಿ ಸ್ವಚ್ಚತೆ ಎಂಬುದು ಮರೀಚಿಕೆಯಾಗಿದೆ, ಎಲ್ಲೆಂದರಲ್ಲಿ ಕಸ, ಕಲುಷಿತ ನೀರು, ತುಂಬಿ ನಾರುತ್ತಿರುವ ಚರಂಡಿಗಳು ಇದರಿಂದ ವಿಪರೀತ ಸೊಳ್ಳೆಗಳು ಹೆಚ್ಚಾಗಿರುವುದರಿಂದ ಜ್ವರ ಕಾಣಿಸಿಕೊಂಡಿದ್ದು. ಚಿಕಿತ್ಸೆಗಾಗಿ ಹರಪನಹಳ್ಳಿ, ದಾವಣಗೆರೆ ಆಸ್ಪತ್ರೆಗಳಿಗೆ ಗ್ರಾಮಸ್ಥರು ದಾಖಲಾಗಿದ್ದಾರೆ.
ಆರೋಗ್ಯ ಇಲಾಖೆಯವರು ಕಳೆದ ಎರಡು ದಿನಗಳಿಂದ ಗ್ರಾಮಕ್ಕೆ ಭೇಟಿ ನೀಡಿ ತಾತ್ಕಾಲಿಕ ಆರೋಗ್ಯ ಶಿಬಿರ ಸ್ಥಾಪಿಸಿ ಜ್ವರ ಪೀಡಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ, ಇವರ ಜೊತೆಗೆ ಮಾಡಲಗೇರಿ ಗ್ರಾಮ ಪಂಚಾಯ್ತಿಯವರು ಚರಂಡಿ ಸೇರಿದಂತೆ ಕಸ ಕಟ್ಟಿ ಸ್ವಚ್ಚಗೊಳಿಸಬೇಕು, ಡಿಡಿಟಿ ಸಿಂಪರಣೆ ಮಾಡಿ ಶುದ್ದ ಕುಡಿಯುವ ನೀರನ್ನು ಒದಗಿಸಬೇಕು, ಸೊಳ್ಳೆಗಳ ನಿರ್ಮೂಲನೆ ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಚಿಕನ್ ಗುನ್ಯಾ ಹಾಗೂ ವೈರಲ್ ಪ್ಯೂವರ್ ಲಕ್ಷಣಗಳು ಕಾಣುತ್ತಿವೆ, ರಕ್ತ ಪರೀಕ್ಷೆ ವರದಿ ಬಂದ ನಂತರ ಯಾವ ಜ್ವರ ಎಂಬ ಬಗ್ಗೆ ಗೊತ್ತಾಗುತ್ತದೆ ಎಂದು ಆರೋಗ್ಯ ಇಲಾಖೆಯವರು ತಿಳಿಸುತ್ತಾರೆ.ಈ ಕುರಿತು ತಾಲೂಕು ಆರೋಗ್ಯಾಧಿಕಾರಿ ಇನಾಯಿತ್ ಉಲ್ಲಾ ಅವರು ಮಾಹಿತಿ ನೀಡಿ ಜ್ವರ ಪೀಡಿತ ಕರೇಕಾನಹಳ್ಳಿ ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಕ್ಯಾಂಪ್ ಸ್ಥಾಪನೆ ಮಾಡಿದ್ದು, ಜನರ ರಕ್ತ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ, ಲಾರ್ವ ನಿರ್ಮೂಲನೆಗೆ ಕ್ರಮ ಕೈಗೊಂಡಿದೆ, ತೊಟ್ಟಿ, ಚರಂಡಿ ಸ್ನಚ್ಚತೆ ಮಾಡಿ, ಡಿಡಿಟಿ ಸಿಂಪಡಿಸಲು ಗ್ರಾ.ಪಂ ಯವರಿಗೆ ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ