ಬಿಜೆಪಿ ಪ್ರಚಾರ ವೈಖರಿ ಬಗ್ಗೆ ಸಿ ಎಂ ಇಬ್ರಾಹಿಂ ವ್ಯಂಗ್ಯ…!!

ಬೆಂಗಳೂರು

     ಲೋಕಸಭಾ ಚುನಾವಣೆಯಲ್ಲಿ ನರೇಂದ್ರಮೋದಿಯನ್ನು ನೋಡಿ ಮತ ಹಾಕಿ ಎಂಬ ಬಿಜೆಪಿ ಧೋರಣೆ ಹೇಗಿದೆ ಎಂದರೆ ಅಪ್ಪನನ್ನ ನೋಡಿ ಮಗನಿಗೆ ಹೆಣ್ಣು ಕೊಡಿ ಎಂದು ಕೇಳಿದಂತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.ಕೆಪಿಸಿಸಿ ಕಛೇರಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಕಳೆದ ಐದು ವರ್ಷಗಳಲ್ಲಿ ಮೋದಿ ಮಾಡಿದ ಸಾಧನೆ ಏನಿಲ್ಲದಿದ್ದರೂ ಮೋದಿಯ ಹೆಸರು ಹೇಳಿಕೊಂಡು ಮತ ಕೇಳುವ ಮಟ್ಟಕ್ಕೆ ಬಿಜೆಪಿ ಕ್ಯಾಂಡಿಡೇಟುಗಳು ಇಳಿದಿದ್ದಾರೆ ಎಂದರೆ ಇದಕ್ಕಿಂತ ಅಪಹಾಸ್ಯದ ಸಂಗತಿ ಮತ್ತೊಂದಿಲ್ಲ ಎಂದರು.

      ನಾವು ಇಂತಹ ಕೆಲಸ ಮಾಡಿದ್ದೇವೆ.ಇಂತಹ ಕೆಲಸ ಮಾಡುತ್ತೇವೆ ಅನ್ನುವ ಆಧಾರದ ಮೇಲೆ ಕ್ಯಾಂಡಿಡೇಟುಗಳು ಮತ ಕೇಳಬೇಕು.ಆದರೆ ಅದನ್ನು ಬಿಟ್ಟು ಮೋದಿಗಾಗಿ ನಮಗೆ ಮತ ಹಾಕಿ ಎನ್ನುತ್ತಿದ್ದಾರೆ.ಇದು ಹೇಗಿದೆ ಎಂದರೆ ಅಪ್ಪನ್ನ ನೋಡಿ ಮಗನಿಗೆ ಹೆಣ್ಣು ಕೊಡಿ ಎಂದಂತಿದೆ ಎಂದು ಹೇಳಿದರು.

       ಮೋದಿ ಅಹಂ ಬ್ರಹ್ಮಾಸ್ಮಿ ಧೋರಣೆಯ ವ್ಯಕ್ತಿ.ಅಡ್ವಾಣಿ,ಮುರುಳಿ ಮನೋಹರ ಜೋಷಿಯವರಂತಹ ನಾಯಕರನ್ನು ಮೂಲೆಗುಂಪು ಮಾಡಿದರು.ಈಗ ಸರ್ವಾಧಿಕಾರಿಯಾಗಿ ಮೆರೆಯಲು ಹೊರಟಿದ್ದಾರೆ ಎಂದು ಟೀಕಿಸಿದರು.

       ನರೇಂದ್ರಮೋದಿಯವರು ಜೆಡಿಎಸ್ ವರಿಷ್ಟ,ಮಾಜಿ ಪ್ರಧಾನಿ ದೇವೇಗೌಡರಿಗೆ ಸಮನಾದ ರಾಜಕಾರಣಿ ಅಲ್ಲ.ಯಾಕೆಂದರೆ ಅವರು ಪ್ರಧಾನಿಯಾಗಿ ಹನ್ನೊಂದು ತಿಂಗಳಲ್ಲಿ ದೇಶವನ್ನು ಪ್ರಗತಿಯತ್ತ ಮುನ್ನಡೆಸಿದರು.ಇವರು ಕಳೆದ ಐದು ವರ್ಷಗಳಲ್ಲಿ ದೇಶವನ್ನು ದುರ್ಗತಿಯತ್ತ ಕರೆದೊಯ್ದರು ಎಂದು ಹೇಳಿದರು.

       ಈ ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು?ರಾಹುಲ್ ಗಾಂಧಿ ಯಾರು?ಅಂತ ನರೇಂದ್ರಮೋದಿ ಕೇಳುತ್ತಾರೆ.ಈ ದೇಶಕ್ಕಾಗಿ ಇಂದಿರಾಗಾಂಧಿ ತಮ್ಮ ಪ್ರಾಣವನ್ನು ಬಲಿಕೊಟ್ಟರು.ಅದನ್ನು ಮೊಮ್ಮಗ ರಾಹುಲ್ಗಾಂಧಿ ಕಣ್ಣಾರೆ ನೋಡಿದರು.ಅದೇ ರೀತಿ ರಾಜೀವ್ ಗಾಂಧಿ ಹತ್ಯೆಗೀಡಾದರು.ಅದನ್ನು ರಾಹುಲ್ ಗಾಂಧಿ ಕಣ್ಣಾರೆ ನೋಡಿದರು.

       ಬಲಿದಾನ-ತ್ಯಾಗದ ಸಂಕೇತವೆಂದರೆ ಇದು.ಈ ಎಲ್ಲ ಅಂಶಗಳು ಗೊತ್ತಿದ್ದೂ ಮೋದಿಯವರು ಮಾಡುತ್ತಿರುವ ಟೀಕೆ ಸರಿಯಲ್ಲ.ಈ ಬಾರಿ ಅವರೇನೇ ಮಾಡಿದರೂ ದೇಶದ ಅಧಿಕಾರ ಸೂತ್ರವನ್ನು ಕಾಂಗ್ರೆಸ್ ಹಿಡಿಯಲಿದೆ ಎಂದರು.

           ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ನಂಬರ್ ಒನ್ ಆಗಿ ಹೊರಹೊಮ್ಮಲಿದೆ.ದೇವೇಗೌಡರೂ ಗೆಲ್ಲಲಿದ್ದಾರೆ.ನಿಖಿಲ್ ಕುಮಾರಸ್ವಾಮಿಯೂ ಗೆಲ್ಲಲಿದ್ದಾರೆ.ಮುನಿಯಪ್ಪ,ಖರ್ಗೆ ಅವರಂತಹ ನಾಯಕರೂ ಗೆಲ್ಲಲಿದ್ದಾರೆ.

          ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಬಗ್ಗೆ ಬಿಜೆಪಿಯವರು ಅದೇನು ಅನುಕಂಪದ ಮಳೆ ಸುರಿಸುತ್ತಿದ್ದಾರೆ.ಯಾಕೆ ಇವರಿಗೆ ಆರು ಸಲ ಸಂಸತ್ಗೆ ಗೆದ್ದು ಹೋಗಿ ರಾಜ್ಯದಲ್ಲಿ ಬಿಜೆಪಿ ಕಟ್ಟಿದ ಅನಂತಕುಮಾರ್ ನೆನಪಾಗಲಿಲ್ಲವೇ?ಅವರ ಪತ್ನಿ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಕಾಣಲಿಲ್ಲವೇ?ಎಂದು ಪ್ರಶ್ನೆ ಮಾಡಿದರು.ಹೀಗೆ ಅನಂತಕುಮಾರ್ ಅವರ ಪತ್ನಿಗೆ ಟಿಕೆಟ್ ಕೊಡದೆ ಮಾಡಿದ ಅವಮಾನದ ಫಲವನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅನುಭವಿಸಲಿದೆ.ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಅವರ ಪರವಾಗಿ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಅವರು ಮಾರ್ಮಿಕವಾಗಿ ನುಡಿದರು.

      ಸುಮಲತಾ ಅವರಿಗೆ ಬಿಜೆಪಿ ಯಾವಾಗ ಬೆಂಬಲ ನೀಡಿತೋ?ಆಗ ಒಂದೂವರೆ ಲಕ್ಷ ವೋಟು ಕೈ ತಪ್ಪಿತು.ಸಧ್ಯದಲ್ಲೇ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಮುಗಿದು ನಿಖಿಲ್ ಕುಮಾರಸ್ವಾಮಿ ಗೆಲ್ಲುವುದನ್ನು ಬಿಜೆಪಿಯವರು ನೋಡಲಿದ್ದಾರೆ.ಇದರಲ್ಲಿ ಯಾವ ಅನುಮಾನವೂ ಬೇಡ ಎಂದು ಹೇಳಿದರು.

      ಸುಮಲತಾ ಪರವಾಗಿ ಫಿಲ್ಮ್ ಸ್ಟಾರ್ಗಳು ಪ್ರಚಾರ ಮಾಡುವುದರಿಂದ ಅವರನ್ನು ನೋಡಲು ಜನ ಬರುತ್ತಿದ್ದಾರೆ.ಮತದಾನದ ದಿನ ಅವು ಮತಗಳಾಗಿ ಪರಿವರ್ತನೆಯಾಗುವುದಿಲ್ಲ.ಸುಮಲತಾ ಅಂಬರೀಷ್ ಅವರ ಬಗೆಗಿನ ಬಿಜೆಪಿ ಅನುಕಂಪ,ತೇಜಸ್ವಿನಿ ಅನಂತಕುಮಾರ್ ಬಗ್ಗೆ ಇದ್ದಿದ್ದರೆ ನಂಬಬಹುದಿತ್ತು ಎಂದರು.ಕೋಲಾರದಲ್ಲಿ ಮುನಿಯಪ್ಪ ಎಂಟನೇ ಬಾರಿ ಗೆದ್ದು ಹೊಸ ದಾಖಲೆ ಬರೆಯಲಿದ್ದಾರೆ.ಅವರು ಸೋಲುತ್ತಾರೆ ಅಂತ ಯಾರೇನೇ ಹೇಳಿದರೂ ಫಲಿತಾಂಶ ಅವರ ಪರವಾಗಿರಲಿದೆ ಎಂದು ಹೇಳಿದರು.

      ಬಿಜೆಪಿಯವರು ಮತ್ತೊಬ್ಬರ ಕೈಲಿರೋ ತಾಳಿ ಕದ್ದುಕೊಂಡು ಹೋಗಿ ಮದುವೆಯಾಗಲು ಯತ್ನಿಸುವವರು.ಗುಲ್ಬರ್ಗದಲ್ಲಿ ಉಮೇಶ್ ಜಾಧವ್ ಅವರನ್ನು ಕರೆದುಕೊಂಡು ಖರ್ಗೆ ಮೇಲೆ ನಿಲ್ಲಿಸಿದ್ದು ಇದಕ್ಕೊಂದು ಉದಾಹರಣೆ.ಇದೇ ರೀತಿ ನಮ್ಮ ಪಕ್ಷದ ಎ.ಮಂಜು ಅವರನ್ನು ಕರೆದುಕೊಂಡು ಹೋಗಿ ಹಾಸನದಲ್ಲಿ ನಿಲ್ಲಿಸಿದ್ದಾರೆ ಎಂದರು.

       ಬಿಜೆಪಿಯವರು ಭಾರತೀಯತೆ ಅನ್ನುವ ಹೆಸರಿನಲ್ಲಿ ಮತ ಯಾಚಿಸುತ್ತಿಲ್ಲ.ಬದಲಿಗೆ ಹಿಂದುತ್ವದ ಹೆಸರಿನಲ್ಲಿ ಮತ ಯಾಚಿಸುತ್ತಿದ್ದಾರೆ.ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ.ವಾಸ್ತವವಾಗಿ ಚುನಾವಣಾ ಆಯೋಗ ಈ ಕುರಿತು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕಿತ್ತು ಎಂದರು.

        ಮೋದಿ ಎಮರ್ಜೆನ್ಸಿ ಇಲ್ಲದೆ ನಿರಂಕುಶಾಧಿಕಾರ ನಡೆಸುತ್ತಿದ್ದಾರೆ ಎಂದು ಟೀಕಿಸಿದ ಅವರು,ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಈ ಬಾರಿ ಒಬ್ಬ ಅಲ್ಪಸಂಖ್ಯಾತರಿಗೆ ಮಾತ್ರ ಟಿಕೆಟ್ ನೀಡಿದೆ ಎಂಬ ಕುರಿತು ಪ್ರತಿಕ್ರಿಯಿಸಿ,ಈ ಬಗ್ಗೆ ಚರ್ಚೆ ನಡೆದಿದೆ.ಮುಂದಿನ ದಿನಗಳಲ್ಲಿ ರಾಜ್ಯಸಭೆ,ವಿಧಾನಪರಿಷತ್ ಚುನಾವಣೆಗಳಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಸ್ಥಾನಮಾನ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಹೇಳಿದರು.

        ಮಡಿವಾಳರನ್ನು ಆಗಸ ಎಂದಿದ್ದಕ್ಕೆ ಕ್ಷಮೆ ಯಾಚಿಸಿದ ಅವರು,ನಾನು ಮಾತನಾಡುವಾಗ ಮಡಿವಾಳರು ಎಂಬ ಪದ ಬಳಸಬೇಕಿತ್ತು.ಹಾಗೆ ಬಳಸದಿರುವುದು ತಪ್ಪು ಎಂದು ಸಮುದಾಯದ ಮುಖಂಡರೊಬ್ಬರು ನನಗೆ ಹೇಳಿದ್ದಾರೆ.ಆದ್ದರಿಂದ ನಾನಾಡಿರುವ ಮಾತಿನ ಕುರಿತು ಕ್ಷಮೆ ಕೋರುತ್ತೇನೆ ಎಂದು ಹೇಳಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap