ಪತ್ರಕರ್ತರ ಕಲ್ಯಾಣ ಕಾರ್ಯಕ್ರಮಗಳಿಗೆ ಸರ್ವ ನೆರವು-ಮುಖ್ಯಮಂತ್ರಿ

ಬೆಂಗಳೂರು

     ಪತ್ರಕರ್ತರ ಕಲ್ಯಾಣಕ್ಕೆ ನೆರವಾಗುವ ಎಲ್ಲಾ ಯೋಜನೆಗಳಿಗೆ ರಾಜ್ಯ ಸರಕಾರ ಸಕಲ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

     ಅವರು ಮಂಗಳೂರಿನಲ್ಲಿ ಇಂದು ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ “ಬ್ರಾಂಡ್ ಮಂಗಳೂರು” ಯೋಜನೆ ಹಾಗೂ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.

       ಪತ್ರಕರ್ತರಿಗೆ ನಿವೇಶನ, ಬಸ್ ಪಾಸ್, ಅಧ್ಯಯನ ಪ್ರವಾಸ, ಕುಟುಂಬ ಪ್ರವಾಸ , ಅರೋಗ್ಯ ವಿಮೆ, ಪಿಂಚಣಿ ಒದಗಿಸುವುದು ಸರಕಾರಕ್ಕೆ ದೊಡ್ಡ ವಿಷಯವಲ್ಲ. ಈ ಬಗ್ಗೆ ಪತ್ರಕರ್ತರ ಸಂಘ ಸಲ್ಲಿಸಿರುವ ಮನವಿ ಪರಿಗಣಿಸಿ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಸಾಲಮನ್ನಾಗೂ ಅಭಿವೃದ್ಧಿಗೂ ಸಂಬಂಧವಿಲ್ಲ:

        ರಾಜ್ಯ ಸರಕಾರ ರೈತರಲ್ಲಿ ನೆಮ್ಮದಿ ತರಲು ಸಾಲಮನ್ನಾ ಯೋಜನೆ ಜಾರಿಗೆ ತಂದಿದ್ದು, ಇದರಿಂದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಯಾವುದೇ ತೊಂದರೆಯಾಗಿಲ್ಲ. ಸರಕಾರದ ಬೊಕ್ಕಸದಲ್ಲಿ ಸಾಕಷ್ಟು ಹಣವಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಸಾಲ ಮನ್ನಾದಿಂದ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಕೊರತೆಯಾಗಿದೆ ಎಂಬುದು ಕೇವಲ ಮಿಥ್ಯ. ರಾಜ್ಯ ಸರಕಾರದ ಚಾಲ್ತಿ ಖಾತೆಯಲ್ಲಿ 10 ಸಾವಿರ ಕೋಟಿ ರೂ.ಗಳಿಗೂ ಮಿಕ್ಕಿ ಮೊತ್ತವಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು. ಬ್ಯಾಂಕ್ ಗಳು ರೈತರ ಸಾಲ ವಸೂಲಾತಿ ನೆಪದಲ್ಲಿ ಅವರಿಗೆ ನೋಟೀಸ್ ಜಾರಿ ಮಾಡಿ ಭಯ ಹುಟ್ಟಿಸಿದರೆ ಸಹಿಸಲಾಗದು ಎಂದು ಅವರು ಹೇಳಿದರು.

        ಮಂಗಳೂರು ಅಭಿವೃದ್ದಿಗೆ ರಾಜ್ಯ ಸರಕಾರ ಎಲ್ಲ ನೆರವು ನೀಡಲಿದೆ. ಆದರೆ, ಕೈಗಾರಿಕೆ ಹೆಸರಿನಲ್ಲಿ ಪ್ರಕೃತಿಯ ಮೇಲೆ ಹಾನಿಯಾಗುವ ಯೋಜನೆ ಜಾರಿಗೆ ತರುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

        ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಶಾಸಕರಾದ ವೇದವ್ಯಾಸ ಕಾಮತ್, ಐವನ್ ಡಿಸೋಜ, ಬಿ.ಎಂ. ಫಾರೂಖ್, ಮಾಜಿ ಸಚಿವ ರಮಾನಾಥ ರೈ, ಮೇಯರ್ ಭಾಸ್ಕರ್, ಮಾಜಿ ಶಾಸಕರಾದ ಮೊಹಿದೀನ್ ಬಾವಾ, ಜೆ.ಆರ್. ಲೋಬೋ, ಶಕುಂತಳಾ ಶೆಟ್ಟಿ, ಯೋಗೀಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap