ಕಂಟಕದಿಂದ ಮುಕ್ತವಾಗಲು ದೇವರ ಮೊರೆ ಹೋದ ಸಿಎಂ

ಬೆಂಗಳೂರು

      ಗ್ರಹಣ ಕಂಟಕದಿಂದ ಮುಕ್ತರಾಗಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೇವರ ಮೊರೆ ಹೋಗಿದ್ದು, ಕೇರಳದಲ್ಲಿಂದು ಹೋಮ-ಹವನ ನಡೆಸಿದರು.

      ನಾಡಿದ್ದು ಸೂರ್ಯಗ್ರಹಣದಿಂದ ವೃಶ್ಚಿಕ ರಾಶಿಯವರಿಗೆ ಕಂಟಕವಿದೆ ಎಂಬ ಜ್ಯೋತಿಷ್ಯಿಗಳ ಸಲಹೆಯಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಇಂದು ಕೇರಳದ ಕಣ್ಣೂರು ಜಿಲ್ಲೆಯಲ್ಲಿರುವ ತಳಿಪರಂಭದ ರಾಜ ರಾಜೇಶ್ವರ ದೇವಾಲಯದಲ್ಲಿ ಹೋಮ-ಹವನ ನಡೆಸಿದ್ದಾರೆ.

      ಕೇರಳದ ಅರ್ಚಕರು ಈ ಹೋಮ-ಹವನ ನಡೆಸಿದ್ದು, ಇಡೀ ದಿನ ಮುಖ್ಯಮಂತ್ರಿ ಯಡಿಯೂರಪ್ಪ ಹೋಮ-ಹವನದಲ್ಲಿ ಪಾಲ್ಗೊಂಡು ಕಂಟಕ ಮುಕ್ತಿ ಹಾಗೂ ಶತ್ರು ನಾಶದ ಪೂಜೆಯಲ್ಲಿ ಪಾಲ್ಗೊಂಡಿದ್ದರು.ಮುಖ್ಯಮಂತ್ರಿ ಯಡಿಯೂರಪ್ಪನವರು ಮೊದಲಿನಿಂದಲೂ ಕೇರಳದ ಕಣ್ಣೂರಿನ ಈ ರಾಜರಾಜೇಶ್ವರ ದೇವಾಲಯದಲ್ಲಿ ಹೋಮ-ಹವನಗಳನ್ನು ನಡೆಸಿಕೊಂಡು ಬಂದಿದ್ದು, ಆಗಾಗ್ಗೆ ಅವರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈಗ ಗ್ರಹಣಕ್ಕೂ ಮುನ್ನವೇ ಕಂಟಕ ನಿವಾರಣೆಗೆ ಸಕಲ ಕಂಟಕ ನಿವಾರಕ ಪರಶಿವನ ದೇವಾಲಯಕ್ಕೆ ಭೇಟಿ ನೀಡಿ ಪೂಜೆ-ಹೋಮಗಳನ್ನು ನಡೆಸಿದ್ದಾರೆ.

      ಈ ಪೂಜೆ-ಹೋಮ-ಹವನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆಪ್ತ ಕುಟುಂಬಸ್ಥರು, ಆಪ್ತ ಬಂಧು-ಬಳಗದವರು ಪಾಲ್ಗೊಂಡಿದ್ದಾರೆ. ಸಂಸದೆ ಶೋಭಾಕರಂದ್ಲಾಜೆ ಸಹ ಮುಖ್ಯಮಂತ್ರಿ ಜತೆ ಈ ಪೂಜೆಗಳಲ್ಲಿ ಪಾಲ್ಗೊಂಡಿದ್ದಾರೆ.

ಕಳೆದವಾರ ಹೋಮ-ಹವನ

      ವಾರದ ಹಿಂದಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ. ವಿಜಯೇಂದ್ರ ಜತೆಗೆ ಡಾಲರ್ಸ್ ಕಾಲನಿಯ ನಿವಾಸದಲ್ಲಿ ಸುದರ್ಶನ ನರಸಿಂಹಯಾಗ ಮಾಡಿಸಿದ್ದರು.ಸುದರ್ಶನ ನರಸಿಂಹ ಹೋಮವನ್ನು ಶತ್ರು ನಿಗ್ರಹಕ್ಕಾಗಿ ಮಾಡಿಸುತ್ತಾರೆ ಎಂದು ಜ್ಯೋತಿಷಿ ಶಂಕರ್ ಭಟ್ ತಿಳಿಸಿದರು. ಹೋಮದ ನಂತರ ನಿನ್ನೆ ಮಧ್ಯಾಹ್ನವೇ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ಟೀ ನರಸೀಪುರದ ಗುಂಜ ನರಸಿಂಹ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಕೇರಳದಲ್ಲಿ ಬಿಎಸ್‍ವೈಗೆ ತಟ್ಟಿದ ಪ್ರತಿಭಟನೆಯ ಬಿಸಿ

      ಕೇರಳದ ತಿರುವನಂತಪುರಂ ಹಾಗೂ ಕಣ್ಣೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಕೇರಳ ಸ್ಟೂಡೆಂಟ್ಸ್ ಯೂನಿಯನ್ (ಕೆಎಸ್ಯು) ಕಾರ್ಯಕರ್ತರು ಪ್ರತಿಭಟಿಸಿದ ಪರಿಣಾಮ ತಮ್ಮ ಪ್ರವಾಸವನ್ನು ಅರ್ಧಕ್ಕೆ ಮೊಟಕು ಗೊಳಿಸಿ ರಾಜ್ಯಕ್ಕೆ ಇಂದೇ ವಾಪಸ್ಸು ಬರುತ್ತಿದ್ದಾರೆ ಎನ್ನಲಾಗಿದೆ.

     ಸಿಎಂ ಪ್ರಯಾಣ ಬೆಳೆಸುತ್ತಿದ್ದ ಕಾರಿನ ದಾರಿಯಲ್ಲಿ ಅವರ ಭದ್ರತೆಗೆ ನಿಯೋಜನೆಗೊಂಡಿದ್ದ ಕಾರಿನ ಮೇಲೆ ಪ್ರತಿಭಟನ ಕಾರರು ಮುತ್ತಿಗೆ ಹಾಕಿದ್ದರು, ಕೂಡಲೇ ಸಿಎಂ ಪ್ರಯಾಣ ಮಾಡುತ್ತಿದ್ದ ಕಾರು ರಸ್ತೆಯಲ್ಲೇ ಕ್ಷಣ ಕಾಲ ನಿಂತುಕೊಂಡ ಘಟನೆ ನಡೆಯಿತು. ಇದೇ ವೇಳೆ ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಪ್ರತಿಭಟನೆಕಾರರನ್ನು ತಮ್ಮ ವಶಕ್ಕೆ ತೆಗೆದುಕೊಂಡು ಸಿಎಂ ಪ್ರಯಾಣಕ್ಕೆ ಅನುವು ಮಾಡಿಕೊಟ್ಟರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap