ಸಿಎಂ ಗ್ರಾಮವಾಸ್ತವ್ಯ ಅತ್ಯುತ್ತಮ ಕಾರ್ಯಕ್ರಮ : ಹೆಚ್ ವಿಶ್ವನಾಥ್

ಬೆಂಗಳೂರು

   ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್,ಇದೇ ಕಾಲಕ್ಕೆ ಇದು ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆಯನ್ನು ಜಂಗಮಗೊಳಿಸುವ ಕ್ರಿಯೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

     ವಿಧಾನಸೌಧದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು,ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯ ಒಂದು ಅತ್ಯುತ್ತಮವಾದ ಕಾರ್ಯಕ್ರಮ.ಜನರ ಕಷ್ಟವನ್ನು ಆಲಿಸಲು ಮುಖ್ಯಮಂತ್ರಿಗಳೇ ಹೋಗುವುದು ಒಳ್ಳೆಯ ಕೆಲಸ ಎಂದರು.

     ಸಮಸ್ಯೆಗಳಿಗೆ ಸಾವಿಲ್ಲ.ಅದು ಸದಾ ಕಾಲ ಇರುವಂತದ್ದು.ಜನ ಹೆಚ್ಚಾಗಿದ್ದಾರೆ.ಸಮಸ್ಯೆಯೂ ಹೆಚ್ಚಾಗಿದೆ.ಹೀಗಾಗಿ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯ ಎಂಬುದು ಜಿಲ್ಲಾಡಳಿತದ ವೈಫಲ್ಯ ಎಂದು ಸಾರಾಸಗಟಾಗಿ ಹೇಳಲಾಗದಿದ್ದರೂ,ಜಡಗಟ್ಟಿದ ಆಡಳಿತ ವ್ಯವಸ್ಥೆಗೆ,ಸೋಮಾರಿ ಅಧಿಕಾರಿಗಳಿಗೆ ಎಚ್ಚರಿಕೆಯ ಸಂಕೇತವೂ ಹೌದು ಎಂದರು.

     ಮುಖ್ಯಮಂತ್ರಿಗಳು ಸ್ಥಳದಲ್ಲೇ ವಾಸ್ತವ್ಯ ಹೂಡಿ ಅಧಿಕಾರಿಗಳೊಂದಿಗೆ ಸೇರಿ ಅಲ್ಲಿನ ಸಮಸ್ಯೆಯನ್ನು ಬಗೆಹರಿಸುವುದು ಸರಿ.ಹಿಂದೆ ಜಿಲ್ಲಾಧಿಕಾರಿಗಳು ಕೂಡಾ ಗ್ರಾಮ ವಾಸ್ತವ್ಯ ಮಾಡುತ್ತಿದ್ದರು.ಆದರೆ ಇತ್ತೀಚಿನ ದಿನಗಳಲ್ಲಿ ಈ ಪರಿಪಾಠ ಮಾಯವಾಗಿದೆ ಎಂದು ವಿಷಾದಿಸಿದ ಅವರು,ಇಂತಹ ಪರಿಸ್ಥಿತಿಯಲ್ಲಿ ಸಿಎಂ ಅವರ ಗ್ರಾಮ ವಾಸ್ತವ್ಯ ಗುಡ್ ಕಾನ್ಸೆಪ್ಟ್.ಅವರು ಏನೋ ಒಂದು ಪ್ರಯತ್ನ ಮಾಡುತ್ತಿದ್ದಾರೆ.
ಸಮಸ್ಯೆಗಳು ಪ್ರತಿಘಳಿಗೆಗೂ ಹುಟ್ಟುತ್ತಲೇ ಇರುತ್ತವೆ.

     ಅದೇ ರೀತಿ ಹಳ್ಳಿಗಳಲ್ಲಿ ರಾತ್ರಿ ಹೊತ್ತೇ ಜನ ಸಿಗುವುದು ಎಂದ ಅವರು,ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೂಡಾ ಗ್ರಾಮವಾಸ್ತವ್ಯ ಮಾಡಿ ಜನರ ಸಮಸ್ಯೆ ಆಲಿಸುವ ಕೆಲಸ ಮಾಡಬೇಕು ಎಂದರು.ಹಿಂದೆ ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದಾಗ ಬೋವಿ ಸಮಾಜದ ಒಬ್ಬ ವ್ಯಕ್ತಿ ತನ್ನ ನಾಲ್ಕು ಎಕರೆ ಭೂಮಿಗೆ ಸಂಬಂಧಿಸಿದಂತೆ ಸೃಷ್ಟಿಯಾಗಿದ್ದ ಒಂದು ಸಮಸ್ಯೆಯ ಕುರಿತು ಮನವಿ ಹಿಡಿದುಕೊಂಡು ಬಂದಿದ್ದ.
ಆಗ ಅವನ ಮನವಿಯನ್ನು ಸ್ವೀಕರಿಸಿದ ದೇವರಾಜ ಅರಸರು ಸಭೆಗೆ ಬಂದು ಸಂಬಂಧ ಪಟ್ಟ ಜಿಲ್ಲಾಧಿಕಾರಿಯ ಬಳಿ,ಒಬ್ಬ ವ್ಯಕ್ತಿ ನಿಮ್ಮ ಜಿಲ್ಲೆಯಿಂದ ಬಂದು ನನ್ನನ್ನು ಭೇಟಿ ಮಾಡಿ ಸಮಸ್ಯೆಯ ಬಗ್ಗೆ ಹೇಳುತ್ತಾನೆ ಎಂದರೆ ಅದು ನಿಮ್ಮ ಆಡಳಿತದ ವೈಫಲ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

        ಅದೇ ರೀತಿ ಆ ಜಿಲ್ಲಾಧಿಕಾರಿ ತಮಗೆ ಆಪ್ತರಾಗಿದ್ದರೂ ಮುಲಾಜಿಲ್ಲದೆ ಎತ್ತಂಗಡಿ ಮಾಡಿದ್ದರು ಎಂಬುದನ್ನು ಸ್ಮರಿಸಿಕೊಂಡ ಅವರು,ಈಗ ಮುಖ್ಯಮಂತ್ರಿಗಳು ಗ್ರಾಮವಾಸ್ತವ್ಯ ಮಾಡುತ್ತಿರುವುದನ್ನು ಅಧಿಕಾರಿಗಳು ಎಚ್ಚರದಿಂದ ಗಮನಿಸಬೇಕು ಎಂದರು.
ಮುಖ್ಯಮಂತ್ರಿಗಳು ಗ್ರಾಮವಾಸ್ತವ್ಯ ಮಾಡಲಿ,ಹಾಗೆಯೇ ಇದನ್ನು ನೋಡಿ ಅಧಿಕಾರಿಗಳು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲಿ.ಇದೇ ಕೆಲಸವನ್ನು ಮಂತ್ರಿಗಳಾಗಿ ನಾವೂ ಮಾಡಿದ್ದೇವೆ.ಮಾಡಬೇಕು ಎಂದು ವಿಶ್ವನಾಥ್ ಹೇಳಿದರು.

      ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯದ ಬಗ್ಗೆ ಬಿಜೆಪಿ ವಿನಾಕಾರಣ ಟೀಕೆ ಮಾಡುತ್ತಿದೆ.ಈ ಹಿಂದೆ ಜೆಡಿಎಸ್-ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗಲೇ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮ ಆರಂಭವಾಗಿತ್ತು.ಆಗ ಬಿಜೆಪಿಯವರೇ ಉಪಮುಖ್ಯಮಂತ್ರಿಯಾಗಿದ್ದರು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap