ತುಮಕೂರು
ತುಮಕೂರು ತಾಲ್ಲೂಕು ಹೆಬ್ಬೂರು ಗ್ರಾಮದ ಸಾರ್ವಜನಿಕ ಕೆರೆ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದು, ಒತ್ತುವರಿ ತೆರವುಗೊಳಿಸಿ ಕೆರೆ ಜಾಗ ಉಳಿಸಬೇಕೆಂದು ಕೋರಿ ಬೆಳಗುಂಬ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಬಿ.ಎಸ್.ವೆಂಕಟೇಶ್ ಸಲ್ಲಿಸಿದ್ದ ದೂರುಅರ್ಜಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಚೇರಿಯು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿರುವ ವಿಶೇಷ ಪ್ರಕ್ರಿಯೆ ನಡೆದಿದೆ.
ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿ (ಆಡಳಿತ) ಜಿ.ಎಲ್.ಗಣೇಶ್ ಕುಮಾರ್ ಅವರು ವೆಂಕಟೇಶ್ ಅವರ ದೂರು ಅರ್ಜಿಯನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ರವಾನಿಸುತ್ತ ಈ ರೀತಿ ಕೋರಿದ್ದಾರೆ. ಈ ಕೆರೆಯಂಗಳದ ಜಾಗದ ಮೇಲೆ ಖಾಸಗಿ ಭೂಮಾಫಿಯಾ ಕಣ್ಣು ಹಾಕಿದೆ. ಕೆರೆ ಜಾಗವನ್ನು ಕಬಳಿಸುತ್ತಿದೆ. ಖಾಸಗಿ ವ್ಯಕ್ತಿಗಳು ಕೆರೆಯ ಪಕ್ಕ ಲೇಔಟ್ ಮಾಡುತ್ತ ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಕೆರೆ ಜಾಗವನ್ನು ಕಬಳಿಸಿ ಲೇಔಟ್‍ಗಳಿಗೆ ರಸ್ತೆಯನ್ನು ನಿರ್ಮಿಸಿಕೊಂಡಿದ್ದಾರೆ.
ಇಂತಹ ಲೇಔಟ್‍ಗೆ ಮಂಜೂರಾತಿ ಪಡೆಯುವಲ್ಲೂ ಭ್ರಷ್ಟಾಚಾರ ನಡೆದಿದೆ. ಆದ್ದರಿಂದ ಕೆರೆ ಜಾಗದಲ್ಲಿ ಆಗಿರುವ ಒತ್ತುವರಿಯನ್ನು ತೆರವುಗೊಳಿಸಿ, ಕೆರೆ ಜಾಗವನ್ನು ಸಂರಕ್ಷಿಸಬೇಕು ಹಾಗೂ ಇದಕ್ಕೆ ಕಾರಣರಾಗಿರುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ದಿನಾಂಕ 09-12-2019 ರಂದು ದೂರು ಅರ್ಜಿಯನ್ನು ವೆಂಕಟೇಶ್ ಸಲ್ಲಿಸಿದ್ದರು.
ಈ ದೂರು ಅರ್ಜಿಯು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಕಚೇರಿಯಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿ, ತುಮಕೂರು ತಾಲ್ಲೂಕು ಕಚೇರಿ ಮೂಲಕ ಹೆಬ್ಬೂರಿನ ನಾಡ ಕಚೇರಿಗೂ ತಲುಪಿದ್ದು, ಜಿಲ್ಲೆಯ ಅಧಿಕಾರಿ ವಲಯದಲ್ಲಿ ಸಂಚಲನ ಉಂಟುಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ