ಸರ್ಕಾರ ಉಳಿಸಲು ಅಖಾಡಕ್ಕೆ ಧುಮುಕಿದ ಸಿಎಂ

ತುಮಕೂರು

    ಕರ್ನಾಟಕದಲ್ಲಿ ಹೀನಾಯ ಸೋಲು ಕಂಡಿರುವ ದೋಸ್ತಿ ಪಕ್ಷಗಳಿಗೆ ಶಾಕ್ ಕೊಡಲು ಬಿಜೆಪಿ ತನ್ನ ತಂತ್ರಗಾರಿಕೆಯನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ ಸರ್ಕಾರವನ್ನು ಸುಭದ್ರಗೊಳಿಸಲು ಸ್ವತಃ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯೇ ಅಖಾಡಕ್ಕೆ ಇಳಿದಿದ್ದಾರೆ.

      ರಾಜ್ಯದಲ್ಲಿ ಭಾರಿ ಸೋಲು ಕಂಡ ನಂತರ ದೋಸ್ತಿಗಳಲ್ಲಿ ಮಂಕು ಕವಿದ ವಾತಾವರಣ ಉಂಟಾಗಿತ್ತು. ಕೂಡಲೇ ದೋಸ್ತಿಗಳ ಸಭೆ ನಡೆದು ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಿರುವ ಅವಕಾಶಗಳಿಗೆ ದಾರಿ ಮಾಡಿಕೊಡಬಾರದು ಎಂದು ಒಗ್ಗಟ್ಟು ಪ್ರದರ್ಶಿಸಿದರು. ಹೈಕಮಾಂಡ್ ಸಹ ಇದೇ ಗ್ರೀನ್ ಸಿಗ್ನಲ್ ನೀಡಿತ್ತು. ಈ ಹಿನ್ನೆಲೆಯಲ್ಲಿ ದೋಸ್ತಿ ಸರ್ಕಾರ ಸುಭದ್ರ ಎಂದೇ ಮುಖಂಡರುಗಳು ಹೇಳುತ್ತಾ ಬಂದಿದ್ದಾರೆ.

       ಆದರೆ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿ ಮುಂದುವರೆಸಿರುವುದು ಗುಟ್ಟಾಗಿ ಏನೂ ಉಳಿದಿಲ್ಲ. 25 ಸ್ಥಾನಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿರುವ ಬಿಜೆಪಿ ವಲಯದಲ್ಲಿ ರಾಜ್ಯದ ಚುಕ್ಕಾಣಿ ಹಿಡಿಯುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಲು ಮುಂದಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಬಾರಿ ಶತಾಯ ಗತಾಯ ಸಿಎಂ ಆಗಲೇ ಬೇಕು ಎಂಬ ಹಠತೊಟ್ಟಂತೆ ಇನ್ನಿಲ್ಲದ ಸರ್ಕಸ್ ನಡೆಸುತ್ತಿದ್ದಾರೆ. ಈಗಾಗಲೇ ಹಲವು ಬಾರಿ ಆಪರೇಷನ್ ಕಮಲ ಮಾಡಲು ಹೋಗಿ ಕೈಸುಟ್ಟುಕೊಂಡಿರುವ ಬಿ.ಎಸ್.ಯಡಿಯೂರಪ್ಪ ಈ ಬಾರಿ ಬಹಳ ಹುಷಾರಿನ ಹೆಜ್ಜೆ ಇಡುತ್ತಿದ್ದಾರೆ.

      ಇದಕ್ಕೆ ಪೂರಕವಾಗಿ ಒಬ್ಬೊಬ್ಬರಾಗಿ ಅತೃಪ್ತ ಶಾಸಕರನ್ನು ತನ್ನತ್ತ ಸೆಳೆಯುವ ತಂತ್ರಗಾರಿಕೆಯಲ್ಲಿ ಅವರು ಮುಳುಗಿ ಹೋಗಿದ್ದಾರೆ. ಮುಖ್ಯವಾಗಿ ರಮೇಶ್ ಜಾರಕಿಹೊಳಿ ಅವರೆ ಈಗ ಬಿಜೆಪಿ ಪಾಲಿಗೆ ಪ್ರಮುಖ ಸೂತ್ರಧಾರ. ಅವರನ್ನು ಬಳಸಿಕೊಂಡೆ ಆಪರೇಷನ್ ಕಮಲ ಸಕ್ಸಸ್ ಮಾಡಲು ನಾನಾ ರೀತಿಯ ತಂತ್ರಗಾರಿಕೆಗಳು ನಡೆಯುತ್ತಿವೆ. ಬಿಜೆಪಿಯ ಕೆಲವರಲ್ಲಿ ಇದು ಇಷ್ಟವಿಲ್ಲದೆ ಹೋದರೂ ಮಂತ್ರಿಗಿರಿಯ ಆಸೆ ಹಾಗೂ ಸರ್ಕಾರ ನಮ್ಮದೆ ಇರುತ್ತದಲ್ಲ ಎಂಬ ಆಸೆಯಿಂದಾಗಿ ಅಂತಹವರು ಸಹ ಈಗ ಮೌನಕ್ಕೆ ಶರಣಾಗಿದ್ದಾರೆ.

      ಸೋಮವಾರದ ಬೆಳವಣಿಗೆಯಲ್ಲಿ ದೋಸ್ತಿ ಸರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಖಾಡಕ್ಕೆ ಇಳಿದಿದ್ದಾರೆ. ಅತೃಪ್ತ ಶಾಸಕರ ಮನವೊಲಿಕೆಗೆ ಮುಂದಾಗಿದ್ದಾರೆ. ಅತೃಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಜೊತೆ ಈ ಇಬ್ಬರೂ ನಾಯಕರು ಚರ್ಚೆ ನಡೆಸಿರುವುದು ಈಗಾಗಲೇ ಬಹಿರಂಗವಾಗಿದೆ. ಮಹೇಶ್ ಕುಮಟಳ್ಳಿ ಹೆಗಲ ಮೇಲೆ ಕೈಹಾಕಿಕೊಂಡು ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿರುವ ದೃಶ್ಯಗಳು ಈಗ ವೈರಲ್ ಆಗಿವೆ.

      ಸಿ.ಎಂ.ಭೇಟಿ ಬಳಿಕ ಮಾತನಾಡಿರುವ ಶಾಸಕ ಉಮೇಶ್ ಕುಮಟಳ್ಳಿ ಅಥಣಿ ಕ್ಷೇತ್ರದ ಕೃಷ್ಣಾನದಿಯಲ್ಲಿ ನೀರಿಲ್ಲ. ಹೀಗಾಗಿ ನಮ್ಮ ಕ್ಷೇತ್ರದ ಜನರಿಗೆ ಕುಡಿಯುವ ನೀರು ದೊರಕಿಸುವ ಸಲುವಾಗಿ, ಮಹಾರಾಷ್ಟ್ರದಿಂದ ನೀರು ಬಿಡಿಸುವ ವಿಚಾರವಾಗಿ ನಾನು ತಲೆ ಕೆಡಿಸಿಕೊಂಡಿದ್ದೇನೆ. ಇದೇ ವಿಚಾರವನ್ನು ಸಿಎಂ ಬಳಿ ಪ್ರಸ್ತಾಪಿಸಿದ್ದೇನೆ. ಇದಕ್ಕೆ ಬೇರೆ ಯಾವುದೇ ವಿಶೇಷತೆ ಕಲ್ಪಿಸುವ ಅವಶ್ಯಕತೆ ಇಲ್ಲ. ಕೆಲವು ಮಾಧ್ಯಮಗಳು ನಾನು ಗೋವಾಕ್ಕೆ ಹೋಗಿದ್ದೀನಿ ಎಂದೆಲ್ಲಾ ತೋರಿಸಿವೆ. ಆದರೆ ನಾನು ಇಲ್ಲಿಯೇ ಇದ್ದೇನೆ ಎಂದರು.
ಬಾಕ್ಸ್‍ನಲ್ಲಿ ಬರಲಿ

ಯಾರೂ ಕಾಂಗ್ರೆಸ್ ಬಿಟ್ಟು ಹೋಗಲ್ಲ

      ಕೆಲವು ಸಣ್ಣಪುಟ್ಟ ಅಸಮಾಧಾನಗಳು ಇರುವುದು ಸಹಜ. ಆದರೆ ಯಾರೂ ಕಾಂಗ್ರೆಸ್ ಬಿಟ್ಟು ಹೋಗಲ್ಲ. ಭಿನ್ನಾಭಿಪ್ರಾಯಗಳನ್ನು ಕುಳಿತು ಪರಿಹಾರ ಮಾಡಿಕೊಳ್ಳುತ್ತೇವೆ. ರಮೇಶ್ ಜಾರಕಿ ಹೊಳಿ ಕೂಡ ಪಕ್ಷ ಬಿಟ್ಟು ಹೋಗಲ್ಲ. ರಮೇಶ್ ಅವರು ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿರಬಹುದು. ಆದರೆ ಅದು ನನಗೆ ಗೊತ್ತಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿಯೂ ಅಲ್ಲ.
-ಮಹೇಶ್ ಕುಮಟಳ್ಳಿ

ಮತ್ತೊಂದು ಬಾಕ್ಸ್‍ನಲ್ಲಿ ಬರಲಿ

        ಕಾಂಗ್ರೆಸ್‍ನಲ್ಲಿ ಇರುವ ಅತೃಪ್ತ ಶಾಸಕರನ್ನು ಸಮಾಧಾನಪಡಿಸಲು ಈಗ ಪ್ರಯತ್ನಗಳು ಮುಂದುವರೆದಿವೆ. ರಮೇಶ್ ಜಾರಕಿ ಹೊಳಿ ಸೇರಿದಂತೆ ಅನೇಕರಿಗೆ ಸಚಿವ ಸ್ಥಾನ ದೊರಕಿಸಲು ಪ್ರಯತ್ನಗಳು ಸಾಗಿವೆ. ಈ ಹಿನ್ನೆಲೆಯಲ್ಲಿ ಹಾಲಿ ಇರುವ ಸುಮಾರು 5 ರಿಂದ 6 ಸಚಿವರಿಗೆ ಕೊಕ್ ಕೊಡುವ ಸಾಧ್ಯತೆಗಳಿವೆ. ಅವರ ಸ್ಥಾನಕ್ಕೆ ಅತೃಪ್ತರನ್ನು ಕರೆತಂದು ಶೀಘ್ರವೇ ಸಂಪುಟ ವಿಸ್ತರಣೆ ಮಾಡುವ ಪ್ರಯತ್ನಗಳು ನಡೆದಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link