ಮಂತ್ರಿಗಿರಿ ಆಯ್ತು ಈಗ ಉಸ್ತುವಾರಿ ತಲೆನೋವು
ಬೆಂಗಳೂರು
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ವಲಸಿಗರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ತಿಂಗಳು ತುಂಬುತ್ತಿದೆ. ಆದರೆ ಈವರೆಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ದೊರೆತಿಲ್ಲ. ಸ್ವಂತ ಜಿಲ್ಲೆಗಳಲ್ಲಿಯೇ ಉಸ್ತುವಾರಿ ಜವಾಬ್ದಾರಿ ಇಲ್ಲದ ಅನಿಶ್ಚಿತತೆಗೆ ಸಿಲುಕಿದ್ದಾರೆ.
ಯಡಿಯೂರಪ್ಪ ಅವರ ಸಂಪುಟ ವಿಸ್ತರಣೆಗೂ ಮುನ್ನ ಸಂಪುಟದಲ್ಲಿದ್ದ 17 ಜನ ಸಚಿವರ ಪೈಕಿ 12 ಜನ ಸಚಿವರಿಗೆ ಎರಡು ಜಿಲ್ಲೆಗಳ ಉಸ್ತವಾರಿ ವಹಿಸಲಾಗಿದೆ. ಎರಡು ಜಿಲ್ಲೆಗಳ ಉಸ್ತುವಾರಿ ವಹಿಸಿಕೊಂಡಿರುವ ಬಹುತೇಕ ಸಚಿವರು ಪ್ರಭಾವಿಗಳಾಗಿದ್ದು, ಅವರಿಂದ ಯಾವ ಜಿಲ್ಲೆಯನ್ನು ವಾಪಸ್ ಪಡೆಯಬೇಕೆಂಬ ಗೊಂದಲ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಮೊದಲಿನಿಂದಲೂ ಸಂಪುಟದಲ್ಲಿರುವ ಸಚಿವರು ತಮಗೆ ಬೇರೆ ಜಿಲ್ಲೆಯ ಉಸ್ತುವಾರಿ ನೀಡುವಂತೆಯೂ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿ ಇದೆ.
ಉಪ ಮುಖ್ಯಮಂತ್ರಿಗಳಾದ ಡಾ. ಅಶ್ವತ್ಥ್ ನಾರಾಯಣ, ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್, ಆರ್. ಅಶೋಕ್, ಕೆ.ಎಸ್.ಈಶ್ವರಪ್ಪ, ಬಸವರಾಜ್ ಬೊಮ್ಮಾಯಿ, ಜೆ.ಸಿ. ಮಾಧುಸ್ವಾಮಿ, ಸಿ.ಸಿ. ಪಾಟೀಲ, ವಿ. ಸೋಮಣ್ಣ, ಬಿ. ಶ್ರೀರಾಮುಲು ಹಾಗೂ ಪ್ರಭು ಚೌಹ್ವಾಣ್ ಅವರಿಗೆ ಎರಡೆರಡು ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದೆ. ಪ್ರಮುಖವಾಗಿ ಕೆಲವು ಸಚಿವರು ತಮ್ಮ ತವರು ಜಿಲ್ಲೆಯೊಂದಿಗೆ ಹೆಚ್ಚುವರಿಯಾಗಿ ಮತ್ತೊಂದು ಜಿಲ್ಲೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಈಗ ಹೊಸದಾಗಿ ಸಂಪುಟ ಸೇರ್ಪಡೆಯಾಗಿರುವ ವಲಸಿಗರಾದ 10 ನೂತನ ಸಚಿವರಲ್ಲಿ ಬಹುತೇಕರು ಹಾಲಿ ಸಚಿವರು ಹೊಂದಿರುವ ಪ್ರಭಾವಿ ಅಥವಾ ತವರು ಜಿಲ್ಲೆಗಳ ಮೇಲೆ ಕಣ್ಣಿಟ್ಟಿದ್ದು, ತಾವು ಪ್ರತಿನಿಧಿಸುವ ತವರು ಜಿಲ್ಲೆಯಲ್ಲಿಯೇ ಉಸ್ತುವಾರಿ ಸಚಿವರಾಗಬೇಕೆಂದು ಬೇಡಿಕೆ ಮುಂದಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಯಾರಿಗೆ ಶುರುವಾಗಿದೆ ಆತಂಕ:
ನೂತನ ಸಚಿವರಾಗಿರುವವರೂ ಸಹ ತಾವು ಪ್ರತಿನಿಧಿಸುವ ಹಾಗೂ ಪ್ರಭಾವಿ ಜಿಲ್ಲೆಗಳಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ರಾಮನಗರ ಹಾಗೂ ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವರಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಗೆ ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಚಿಕ್ಕಬಳ್ಳಾಪುರದವರೇ ಆಗಿರುವ ಡಾ. ಸುಧಾಕರ್ ಬೇಡಿಕೆ ಇಟ್ಟಿದ್ದಾರೆ. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ರಾಮನಗರ ಅಥವಾ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಜಿಲ್ಲೆಗಳ ಉಸ್ತುವಾರಿಯನ್ನು ಕಂದಾಯ ಸಚಿವ ಆರ್. ಅಶೋಕ್ ವಹಿಸಿಕೊಂಡಿದ್ದು, ಮಂಡ್ಯ ಜಿಲ್ಲೆಯ ಮೇಲೆಯ ಮೇಲೆ ತೋಟಗಾರಿಕಾ ಸಚಿವ ನಾರಾಯಣಗೌಡ ಕಣ್ಣಿಟ್ಟಿದ್ದಾರೆ. ಅದು ಅವರ ತವರು ಜಿಲ್ಲೆಯೂ ಆಗಿರುವುದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಲಸಿಗರ ಒತ್ತಡಕ್ಕೆ ಮಣಿದು ಅವರು ಬಯಸಿದ ಜಿಲ್ಲೆಗಳ ಉಸ್ತುವಾರಿ ನೀಡಿದರೆ, ಆರ್. ಅಶೋಕ್ ಮತ್ತು ಡಾ. ಅಶ್ವತ್ಥ ನಾರಾಯಣ ಇಬ್ಬರೂ ಜಿಲ್ಲಾ ಉಸ್ತುವಾರಿ ಕಳೆದುಕೊಳ್ಳುವ ಸಾಧ್ಯತೆ ಇದೆ.
ಬೆಂಗಳೂರಿನವರೇ ಆಗಿರುವ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹಾಗೂ ಆಹಾರ ಮತ್ತು ನಾಗರಿಕ ಸಚಿವ ಕೆ. ಗೋಪಾಲಯ್ಯ ಬೆಂಗಳೂರು ಗ್ರಾಮಾಂತರ ಅಥವಾ ರಾಮನಗರ ಜಿಲ್ಲೆಗಳಿಗೆ ಬೇಡಿಕೆ ಇಟ್ಟಿದ್ದಾರೆ. ಬೆಂಗಳೂರಿನ ಇಬ್ಬರು ಮೂಲ ಬಿಜೆಪಿ ಸಚಿವರಿಗೆ ಉಸ್ತುವಾರಿ ಉಳಿಸಿಕೊಳ್ಳುವುದು ಸವಾಲಾಗಿದೆ.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾವೇರಿ ಹಾಗೂ ಉಡುಪಿ ಜಿಲ್ಲೆಗಳ ಉಸ್ತುವಾರಿ ವಹಿಸಿಕೊಂಡಿದ್ದು, ಈಗ ಕೃಷಿ ಸಚಿವ ಬಿ.ಸಿ. ಪಾಟೀಲ್ ಹಾವೇರಿ ಜಿಲ್ಲೆಯ ಉಸ್ತುವಾರಿಗೆ ಬೇಡಿಕೆ ಇಟ್ಟಿದ್ದಾರೆ. ಬೊಮ್ಮಾಯಿ ತವರು ಜಿಲ್ಲೆಯ ಉಸ್ತುವಾರಿ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾದರೂ ಆಶ್ಚರ್ಯ ಪಡುವ ಹಾಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಬೆಳಗಾವಿ ಜಿಲ್ಲಾ ಉಸ್ತುವಾರಿಗೆ ಬೇಡಿಕೆ ಇಟ್ಟಿರುವುದರಿಂದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೆಚ್ಚುವರಿಯಾಗಿ ವಹಿಸಿಕೊಂಡಿರುವ ಬೆಳಗಾವಿ ಜಿಲ್ಲೆ ಕೈ ತಪ್ಪುವ ಸಾಧ್ಯತೆ ಇದೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಮೇಲೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಆಸಕ್ತರಾಗಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಉಸ್ತುವಾರಿ ಜವಾಬ್ದಾರಿಯನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ.
ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷಣ ಸವದಿ ಅವರು ಎರಡು ಜಿಲ್ಲೆಗಳ ಉಸ್ತುವಾರಿ ವಹಿಸಿಕೊಂಡಿದ್ದು, ಬಳ್ಳಾರಿ ಜಿಲ್ಲಾ ಉಸ್ತುವಾರಿಗೆ ಅರಣ್ಯ ಸಚಿವ ಆನಂದ್ ಸಿಂಗ್ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಲಸಿಗರ ಬೇಡಿಕೆಗೆ ಅಸ್ತು ಎಂದರೆ,ಲಕ್ಷ್ಮಣ ಸವದಿ ಕೊಪ್ಪಳ ಜಿಲ್ಲೆಗೆ ಸೀಮಿತರಾಗಬೇಕಾಗುತ್ತದೆ.
ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಆಪ್ತ ಶ್ರೀಮಂತ ಪಾಟೀಲರಿಗೆ ವಿಜಯಪುರ ಅಥವಾ ಯಾಗದಿರಿ ಜಿಲ್ಲಾ ಉಸ್ತುವಾರಿ ಕೊಡಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನೋರ್ವ ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಕಲಬುಗರಿ ಹಾಗೂ ಬಾಗಲಕೋಟೆ ಉಸ್ತುವಾರಿ ವಹಿಸಿಕೊಂಡಿದ್ದು, ಅವರು ಬಹುತೇಕ ಕಲಬುರಗಿ ಜಿಲ್ಲೆ ಬಿಟ್ಟು ಕೊಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ವಸತಿ ಸಚಿವ ವಿ. ಸೋಮಣ್ಣ ಮೈಸೂರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ವಹಿಸಿದ್ದು ಅವರು ಕೊಡಗು ಜಿಲ್ಲೆ ಬಿಟ್ಟುಕೊಡಲಿದ್ದಾರೆ. ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹಾಸನ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿಯಾಗಿದ್ದು, ಹಾಸನ ಜಿಲ್ಲೆ ಕೈ ತಪ್ಪುವ ಸಾಧ್ಯತೆ ಇದೆ.
ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಬೀದರ್ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ನೀಡಲಾಗಿದ್ದು, ಅವರಿಂದ ಯಾದಗಿರಿ ಜಿಲ್ಲಾ ಉಸ್ತುವಾರಿ ವಾಪಸ್ ಪಡೆಯುವ ಸಾಧ್ಯತೆ ಇದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ಉಳಿಸಿಕೊಂಡು ದಾವಣಗೆರೆ ಜಿಲ್ಲೆ ಬಿಟ್ಟು ಕೊಡುವ ಸಾಧ್ಯತೆ ಇದೆ. ಗಣಿ ಸಚಿವ ಸಿ.ಸಿ. ಪಾಟೀಲ್ ತವರು ಜಿಲ್ಲೆ ಗದಗ್ ಉಳಿಸಿಕೊಂಡು ವಿಜಯಪುರ ಜಿಲ್ಲೆ ತೆರವು ಮಾಡುವ ಉದ್ದೇಶ ಹೊಂದಿದ್ದಾರೆ.
ಮಾರ್ಚ್ 2 ರಿಂದ ಒಂದು ತಿಂಗಳ ಕಾಲ ಬಜೆಟ್ ಅಧಿವೇಶನ ನಡೆಯುವುದರಿಂದ ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವರನ್ನು ಬದಲಾಯಿಸುವ ಪ್ರಯತ್ನಕ್ಕೆ ಕೈ ಹಾಕಿದರೆ, ಕೆಲವು ಸಚಿವರಿಗೆ ಅಸಮಾಧಾನ ಉಂಟಾಗಿ ಗೊಂದಲ ನಿರ್ಮಾಣವಾಗುತ್ತದೆ. ಅಧಿವೇಶನದ ಸಂದರ್ಭದಲ್ಲಿ ಇದೇ ವಿಷಯ ಪ್ರತಿಪಕ್ಷಗಳಿಗೆ ಆಹಾರವಾಗುವ ಸಾಧ್ಯತೆ ಇರುವುದರಿಂದ ಅಧಿವೇಶನ ಮುಗಿಯುವವರೆಗೂ ಉಸ್ತುವಾರಿಗಳ ಬದಲಾವಣೆ ಮಾಡುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








