ಬೆಂಗಳೂರು
ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಆರಂಭಗೊಂಡ ಇಂದಿರಾ ಕ್ಯಾಂಟೀನ ನಲ್ಲಿ ನಡೆದಿರುವ ಅವ್ಯವಹಾರ ಹಾಗೂ ನಗರೋತ್ಥಾನ ಅನುದಾನದ ಅಡಿಯಲ್ಲಿ ಕೈಗೊಳ್ಳುವ ಕಾಮಗಾರಿಗಳ ಟೆಂಡರ್ ಅನುಮೋದನೆಯ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀರ್ಮಾನಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ವಕ್ತಾರ ಪಿ.ಆರ್.ರಮೇಶ್ ಹೇಳಿದ್ದಾರೆ.
ಈ ಕುರಿತು ಹೇಳಿಕೆಯಲ್ಲಿ ಅವರು, ಬಿಬಿಎಂಪಿ ವ್ಯಾಪ್ತಿಯ 174 ಇಂದಿರಾ ಕ್ಯಾಂಟೀನ್ ಗಳು ಮತ್ತು 15 ಮೊಬೈಲ್ ಕ್ಯಾಂಟೀನ್ ಗಳಲ್ಲಿ ಪ್ರತಿ ತಿಂಗಳು 62.70 ಲಕ್ಷ ಮಂದಿ ತಿಂಡಿ-ಊಟ ಮಾಡುತ್ತಿದ್ದಾರೆ ಎಂಬ ನಕಲಿ ಇನ್ ವಾಯ್ಸ್ ಗಳನ್ನು ಸೃಷ್ಟಿಸಿ, ಚೆಫ್ ಟಾಕ್ ಹಾಗೂ ರಿವಾರ್ಡ್ ಎಂಬ ಸಂಸ್ಥೆಗಳು ಸರ್ಕಾರದಿಂದ ಬರೋಬ್ಬರಿ 6.82 ಕೋಟಿ ರೂ. ಸಬ್ಸಿಡಿ ಪಡೆದು ವಂಚಿಸಿವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಆ ಕುರಿತು ತನಿಖಾ ವರದಿ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ ಎಂದಿದ್ದಾರೆ.
ಮತ್ತೊಂದೆಡೆ, ನಗರೋತ್ಥಾನ ಅನುದಾನದ ಅಡಿಯಲ್ಲಿ ಕೈಗೊಳ್ಳುವ ಕಾಮಗಾರಿಗಳ ಟೆಂಡರ್ ಅನುಮೋದನೆ ನೀಡುವ ಅಧಿಕಾರವನ್ನು ಪಾಲಿಕೆ ಸ್ಥಾಯಿ ಸಮಿತಿಗಳಿಂದ ಹಿಂಪಡೆದು, ಅದಕ್ಕಾಗಿಯೇ ಕೆಲ ಅಧಿಕಾರಿಗಳು ಒಟ್ಟಾಗಿ ಪ್ರತ್ಯೇಕ ‘ಅಧಿಕಾರಯುಕ್ತ ಸಮಿತಿ’ ರಚಿಸಿ, ಗುತ್ತಿಗೆದಾರರು ನಮೂದಿಸಿದ್ದ ಶೇ. 34ರಷ್ಟು ಅಧಿಕ ಮೊತ್ತಕ್ಕೆ ಅನುಮೋದನೆ ನೀಡಿರುವ ಕ್ರಮದ ವಿರುದ್ಧ ಕೂಡ ಹಲವು ದೂರುಗಳು ದಾಖಲಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿಗಳು ಈ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಸೋಮವಾರ ಈ ಎರಡೂ ಪ್ರಕರಣಗಳಲ್ಲಿ ತನಿಖೆ ನಡೆಸುವಂತೆ ಅಧಿಕೃತ ಆದೇಶ ಹೊರಬೀಳಲಿದೆ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
