ನೆರೆ ಹಾನಿ ವೀಕ್ಷಣೆಗೆ ಸಿಎಂ ಎರಡನೆ ಹಂತದ ಪ್ರವಾಸ

ಮೈಸೂರು

     ರಾಜ್ಯದ ನಾನಾ ಕಡೆ ಭೀಕರ ಮಳೆಯಿಂದ ಉಂಟಾಗಿರುವ ನೆರೆ ಹಾನಿಯನ್ನು ವೀಕ್ಷಣೆ ಮಾಡಿ ಸಂತ್ರಸ್ತರಿಗೆ ಧೈರ್ಯ ತುಂಬಲು ಎರಡನೆ ಹಂತದ ಪ್ರವಾಸವನ್ನು ಶೀಘ್ರದಲ್ಲೇ ಆರಂಭಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು.

    ಚಾಮುಂಡಿ ಬೆಟ್ಟದಲ್ಲಿ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ನೆರೆ ಪೀಡಿತ ಎಲ್ಲ ಪ್ರದೇಶಗಳಲ್ಲೂ ಸಾಧ್ಯವಾದ ಕಡೆ ಭೇಟಿ ಕೊಟ್ಟಿದ್ದೇನೆ. ಮೂರ್ನಾಲ್ಕು ದಿನಗಳಲ್ಲಿ ಎರಡನೆ ಹಂತದ ಪ್ರವಾಸ ಪ್ರಾರಂಭಿಸುತ್ತೇನೆ. ಮನೆ-ಮಠ ಕಳೆದುಕೊಂಡ ಸಂತ್ರಸ್ತರಿಗೆ ಧೈರ್ಯ ತುಂಬುವುದೇ ಇದರ ಉದ್ದೇಶ ಎಂದು ಸ್ಪಷ್ಟಪಡಿಸಿದರು.

    ನಾಡದೇವಿ ಚಾಮುಂಡಿ ಆಶೀರ್ವಾದದಿಂದ ಈ ಬಾರಿ ರಾಜ್ಯದಲ್ಲಿ ಬರಗಾಲ ಹೋಗಿ ಎಲ್ಲೆಡೆ ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು, ಹಳ್ಳ-ಕೊಳ್ಳಗಳು, ನದಿಗಳು, ಅಣೆಕಟ್ಟೆಗಳು ತುಂಬಿವೆ. ಪರಿಣಾಮ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿಲ್ಲ. ರಾಜ್ಯದ ಜನತೆ ಎಷ್ಟು ಉದಾರಿಗಳೆಂದರೆ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು ಖುದ್ದು ನಾನೇ ಮನವಿ ಮಾಡಿಕೊಂಡೆ. ಇದಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳು, ದಾನಿಗಳು, ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಸೇರಿದಂತೆ ಮತ್ತಿತರರು 300 ಕೋಟಿ ಪರಿಹಾರ ನೀಡಿದ್ದಾರೆ. ಇದಕ್ಕಾಗಿ ನಾನು ಆಭಾರಿ ಎಂದರು.

    ಕನ್ನಡಿಗರು ಉದಾರಿಗಳು. ಎಲ್ಲೇ ಇದ್ದರೂ ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಮಾನವೀಯತೆಯನ್ನು ಇಟ್ಟುಕೊಂಡಿದ್ದಾರೆ. ಎಲ್ಲರೂ ಸ್ವಯಂಪ್ರೇರಿತರಾಗಿ ನೆರೆ ಹಾವಳಿ ಉಂಟಾದಾಗ ಸಂತ್ರಸ್ತರಿಗೆ ಆಹಾರ ಸಾಮಗ್ರಿ ಸೇರಿದಂತೆ ಎಲ್ಲವನ್ನೂ ನೀಡಿ ನಿಮ್ಮ ಸಂಕಷ್ಟದಲ್ಲಿ ನಾವು ಕೂಡ ಇದ್ದೇವೆ ಎಂಬ ಉದಾರತೆ ತೋರಿದ್ದಾರೆ. ಇದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

    ಮೈಸೂರು ದಸರಾ ಎಂದರೆ ಅದಕ್ಕೊಂದು ಇತಿಹಾಸ, ಪರಂಪರೆ ಇದೆ. ಕೆಟ್ಟದ್ದನ್ನು ಅಳಸಿ ಒಳ್ಳೆಯದನ್ನು ಮಾಡುವುದೇ ನಾಡಹಬ್ಬದ ಉದ್ದೇಶವಾಗಿದೆ. ಸುಮಾರು ನಾಲ್ಕು ಶತಮಾನಗಳ ಇತಿಹಾಸವಿರುವ ಇಂತಹ ಹಬ್ಬವನ್ನು ಹೆಸರಾಂತ ಸಾಹಿತಿ ಎಸ್.ಎಲ್.ಭೈರಪ್ಪ ಉದ್ಘಾಟಿಸಿದರು. ಅವರು ಜ್ಞಾನಪೀಠ ಪ್ರಶಸ್ತಿಗೆ ಅರ್ಹರು ಎಂದು ಹೇಳಿದರು.

    ಹಿಂದೆ ಮೈಸೂರು ದಸರಾವನ್ನು ರಾಜ-ಮಹಾರಾಜರು ಆಚರಿಸಿಕೊಂಡು ಬರುತ್ತಿದ್ದರು. ನಂತರ ಈ ಹಬ್ಬವನ್ನು ಸರ್ಕಾರವೇ ಆಚರಣೆ ಮಾಡುತ್ತದೆ. ನಾನು ಮುಖ್ಯಮಂತ್ರಿಯಾಗಿ ಇಂತಹ ಹಬ್ಬದಲ್ಲಿ ಪಾಲ್ಗೊಂಡಿದ್ದು ನನ್ನ ಪೂರ್ವಜನ್ಮದ ಪುಣ್ಯ. ಇಲ್ಲಿನ ಹಬ್ಬವನ್ನು ಅಚ್ಚುಕಟ್ಟಾಗಿ ಪ್ರತಿಯೊಬ್ಬರೂ ನಿರ್ವಹಿಸಿದ್ದಾರೆಂದು ಸಚಿವರು, ಶಾಸಕರು ಸೇರಿದಂತೆ ಎಲ್ಲರಿಗೂ ಮೆಚ್ಚುಗೆ ಸೂಚಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap