ಹುಳಿಯಾರು
ಹುಳಿಯಾರು ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯರು ಹಾಗೂ ಸಿಓ ಅವರ ನಡುವೆ ನಡುರಸ್ತೆಯಲ್ಲೇ ಏರಿದ ಧ್ವನಿಯಲ್ಲಿ ಜಗಳ, ತಳ್ಳಾಟ, ನೂಕಾಟ ನಡೆದು ಸಾರ್ವಜನಿಕರು ಬಿಟ್ಟಿ ಮನರಂಜನೆ ಪಡೆದ ಘಟನೆ ಹುಳಿಯಾರಿನಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಪಟ್ಟಣದಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ತಮ್ಮ ಸಿಬ್ಬಂದಿ ಜೊತೆ ಪಪಂ ಮುಖ್ಯಾಧಿಕಾರಿ ಮಂಜುನಾಥ್ ಜಾಗೃತಿ ಜಾಥ ಮಾಡುತ್ತ ಸಾಗುವಾಗ ಬಸ್ ನಿಲ್ದಾಣದ ಬಳಿ ಪಪಂ ಮಾಜಿ ಸದಸ್ಯ ಎಚ್.ಆರ್.ವೆಂಕಟೇಶ್ ಹಾಗೂ ಚಂದ್ರಶೇಖರ್ ಅವರಿಬ್ಬರು ತಮ್ಮ ಬ್ಲಾಕ್ ಸಮಸ್ಯೆ ಬಗ್ಗೆ ಧ್ವನಿ ಎತ್ತಿದಾಗ ಈ ಪ್ರಸಂಗ ಜರುಗಿದೆ.
ಎಚ್.ಆರ್.ವೆಂಕಟೇಶ್ ಅವರು ಊರಿನ ರಸ್ತೆಗಳಲ್ಲಿ ಪ್ಲಾಸ್ಟಿಕ್ ಕವರ್, ಲೋಟ ಚೆಲ್ಲಾಡುತ್ತಿದ್ದರೂ ಕ್ಲೀನ್ ಮಾಡಿಲ್ಲ. ಚರಂಡಿಗಳಲ್ಲಿ ಕೊಳಚೆ ತುಂಬಿ ಗಬ್ಬು ನಾರುತ್ತಿದ್ದರೂ ಸ್ವಚ್ಚ ಮಾಡಿಲ್ಲ. ಹಂದಿ-ನಾಯಿ ಹಿಡಿಸಲು ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಕೊಟ್ಟರೂ ಹಿಡಿಸಿಲ್ಲ ಎಂದು ರಸ್ತೆಯಲ್ಲೇ ಏರಿದ ಧ್ವನಿಯಲ್ಲಿ ಪ್ರಶ್ನಸಿದರು.
ಚಂದ್ರಶೇಖರ್ ಸಹ ತಮ್ಮ ಊರಾದ ವಳಗೆರೆಹಳ್ಳಿಯಲ್ಲಿ ನೀರಿನ ಸಮಸ್ಯೆ ತಲೆದೂರಿದ್ದು ಈ ಬಗ್ಗೆ ಕಳೆದ ಆರೇಳು ತಿಂಗಳಿಂದ ತಮ್ಮ ಗಮನಕ್ಕೆ ತಂದಿದ್ದೂ ಸಮಸ್ಯೆ ಬಗೆಹರಿಸಿಲ್ಲ, ಕಂಬಗಳಲ್ಲಿ ಬೀದಿ ದೀಪಗಳಿಲ್ಲದೆ ಕತ್ತಲೆಯಲ್ಲಿ ಜನ ಓಡಾಡುವಂತ್ತಾಗಿದೆ. ಯಾವಾಗ ಸಮಸ್ಯೆ ಪರಿಹರಿಸುತ್ತೀರಿ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಪಂ ಮಂಜುನಾಥ್, ಈಗ ಪ್ಲಾಸ್ಟಿಕ್ ಜನ ಜಾಗೃತಿ ಜಾಥ ನಡೆಸುತ್ತಿದ್ದು ಕಛೇರಿಗೆ ಬನ್ನಿ ಹೇಳ್ತಿನಿ ಎಂದರು. ಇದರಿಂದ ಸಹಜವಾಗಿಯೇ ವಿಚಲಿತರಾದ ಮಾಜಿ ಸದಸ್ಯರು ಕಛೇರಿಗೆ ಬಂದರೆ ಸಿಗೋದಿಲ್ಲ, ಸಿಕ್ಕಾಗ ಹೇಳಿದರೂ ನಿರ್ಲಕ್ಷ್ಯಿಸಿದ್ದೀರಿ. ಜನರಿಂದ ಉಗಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗುತ್ತಿಲ್ಲ, ಸಮಸ್ಯೆ ಯಾವಾಗ ಬಗೆಹರಿಸುತ್ತೀರಿ ಹೇಳಿ ಎಂದು ಮುಖ್ಯಾಧಿಕಾರಿಗಳನ್ನು ಅಡ್ಡಗಟ್ಟಿ ಖಾರವಾದರು.
ಇದರಿಂದ ಏಕಾಏಕಿ ಆಕ್ರೋಶಗೊಂಡ ಮುಖ್ಯಾಧಿಕಾರಿಗಳು ನಿಮ್ಮ ಸದಸ್ಯತ್ವ ಅವಧಿ ಮುಗಿದಿದ್ದು ಊರಿನ ಜನ ಬಂದು ಕೇಳಲಿ ಅವರಿಗೆ ಉತ್ತರ ಕೊಡುತ್ತೇನೆ. ಹೀಗೆ ಬೀದಿಬೀದಿಯಲ್ಲಿ ಒಬ್ಬೊಬ್ಬರಿಗೆ ಉತ್ತರ ಕೊಡೋಕಾಗಲ್ಲ ಹೋಗ್ರಿ ಎಂದಿದ್ದಾರೆ. ಇದರಿಂದ ಕೋಪಗೊಂಡ ಮಾಜಿ ಸದಸ್ಯರುಗಳು ನಾವೂ ಸಾಮಾನ್ಯ ಜನರಾಗೇ ಕೇಳ್ತಿರೋದು ಕುಡಿಯುವ ನೀರು ಕೊಡಿ, ಊರು ಸ್ವಚ್ಚ ಮಾಡಿ ಅಂದ್ರೆ ಕೂಗಾಡ್ತಿದ್ದೀರಲ್ಲ ಎಂದು ತಿರುಗಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರಿಗೂ ನೂಕಾಟ, ತಳ್ಳಾಟ ನಡೆದಿದ್ದು ಕೊನೆಗೆ ಪಪಂ ಸಿಬ್ಬಂದಿ ಇಬ್ಬರನ್ನೂ ಸಮಾಧಾನ ಪಡಿಸಿ ಜಾಥ ಮುಂದು ವರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








