ಕಂದಾಚಾರ, ಮೌಢ್ಯತೆಯ ನಿರ್ಮೂಲನೆಗೆ ಹರಿಹರದಲ್ಲಿ ಸೌಹಾರ್ದ ಸಮಾವೇಶ ಡಾ:ಹೆಚ್.ವಿಶ್ವನಾಥ್

ಹರಿಹರ :

          ಡಾ.ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳ ತಳಹದಿಯಲ್ಲಿ ಕಂದಾಚಾರ, ಮೌಢ್ಯತೆಯ ನಿರ್ಮೂಲನೆಗಾಗಿ ಭಾನುವಾರದಂದು ಹರಿಹರದಲ್ಲಿ ಸೌಹಾರ್ದ ಸಮಾವೇಶ ನಡೆಸಲಿದ್ದೇವೆ ಎಂದು ಡಾಕ್ಟರ್ ವಿಶ್ವನಾಥ್ ಹೇಳಿದರು.

           ನಗರದ ರಚನಾ ಕ್ರೀಡಾ ಟ್ರಸ್ಟ್ ನಲ್ಲಿ ಜನಜಾಗೃತಿ ವೇದಿಕೆಯ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಇದೇ ಡಿಸೆಂಬರ್ 23 ರ ಭಾನುವಾರದಂದು ಸಂಜೆ 4.00 ಗಂಟೆಯಿಂದ ಗಾಂಧಿ ಮೈದಾನದಲ್ಲಿ ಮಾನವ ಭಂಧುತ್ವ ಸಹಯೋಗದೊಂದಿಗೆ ಜಾತಿ ಧರ್ಮಗಳನ್ನು ಮೀರಿದ ಸಹಬಾಳ್ವೆ ಹಾಗೂ ಸ್ವಾಭಿಮಾನದ ಬದುಕಿಗಾಗಿ 2 ನೆಯ ವರ್ಷದ ಸೌಹಾರ್ದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

             ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್ ಅವರ ತತ್ವ, ಆದರ್ಶಗಳ ಸಿದ್ಧಾಂತಗಳ ತಳಹದಿಯಲ್ಲಿ ಜನರಲ್ಲಿರುವ ಕಂದಾಚಾರ ಮೌಢ್ಯಗಳನ್ನು ನಿರ್ಮೂಲನೆ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಸಮಾವೇಶ ನಡೆಸಲಾಗುತ್ತಿದೆ ಎಂದರು.

               ಸಮಾವೇಶದಲ್ಲಿ ನಡೆಸಲಾಗುವ ಚಿಂತನ ಗೋಷ್ಠಿಯ ದಿವ್ಯ ಸಾನ್ನಿಧ್ಯವನ್ನು ಬೈಲಹೊಂಗಲ ತಾಲ್ಲೂಕು ಬೈಲೂರು ಚನ್ನಬಸವೇಶ್ವರ ಮಠದ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು,ಮೈಸೂರಿನ ಉರಿಲಿಂಗ ಪೆದ್ದಿ ಮಠ ಮಹಾಸಂಸ್ಥಾನದ ಶ್ರೀ ಜ್ಞಾನಪ್ರಕಾಶ ಮಹಾಸ್ವಾಮಿಗಳು, ಹರಿಹರ ಮೌಲಾನಾ ಖಾಜಿ-ಇ- ಶೆಹರ್ ಖಾಜಿ ಸೈಯದ್ ಶಂಶುದ್ದೀನ್ ಮತ್ತು ಆರೋಗ್ಯ ಮಾತೆ ಚರ್ಚ್‍ನ ಆರ್ ವಿ ಇ -ಎಫ್ ಆರ್, ಡಾ.ಆಂಟೋನಿ ಪೀಟರ್ ಅವರು ವಹಿಸುವರು.

            ಉದ್ಘಾಟನೆಯನ್ನು ಶಾಸಕ ಹಾಗೂ ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ್ ಜಾರಕಿಹೊಳಿ ನೆರವೇರಿಸಲಿದ್ದಾರೆ, ಅಧ್ಯಕ್ಷತೆಯನ್ನು ನಗರಸಭೆ ಸದಸ್ಯ ಹಾಗೂ ಜನಜಾಗೃತಿ ವೇದಿಕೆ ಅಧ್ಯಕ್ಷ ಸೈಯದ್ ಏಜಾಜ್ ಅವರು ವಹಿಸುತ್ತಾರೆ ,ಮುಖ್ಯ ಅತಿಥಿಗಳಾಗಿ ಶಾಸಕ ಎಸ್. ರಾಮಪ್ಪ,ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಬಿ.ಎಂ.ಪುಟ್ಟಯ್ಯ, ಪ್ರಗತಿಪರ ಚಿಂತಕರು ಹಾಗೂ ಪ್ರಾಧ್ಯಾಪಕ ಡಾ.ಎ.ಬಿ.ರಾಮಚಂದ್ರಪ್ಪ,ಬೆಂಗಳೂರಿನ ಸಾಮಾಜಿಕ ಚಿಂತಕ ಮಹೇಂದ್ರ ಕುಮಾರ್ ಹಾಗೂ ದಾವಣಗೆರೆಯ ಪ್ರಗತಿಪರ ಚಿಂತಕ ಡಾ.ಎಚ್ .ವಿಶ್ವನಾಥ್ ಆಗಮಿಸಿ ಗೋಷ್ಠಿಯಲ್ಲಿ ತಮ್ಮ ಚಿಂತನೆಗಳನ್ನು ಮಂಡಿಸಲಿದ್ದಾರೆ ಎಂದು ಹೇಳಿದರು.

              ಈ ವೇಳೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಡಾ ವಿಶ್ವನಾಥ್ ಅವರು ಮಾರ್ಚ್ ತಿಂಗಳಿನಲ್ಲಿ ನಗರದಲ್ಲಿ ನಡೆಯುವ ಗ್ರಾಮ ದೇವತೆ ಊರಮ್ಮ ಜಾತ್ರೆಯ ಸಂದರ್ಭದಲ್ಲಿ ನಡೆಸಲಾಗುವ ಮೌಢ್ಯತೆಯ ಆಚರಣೆಗಳಿಗೆ ತಡೆ ನೀಡುವಂತೆ ಸರ್ಕಾರದ ಗಮನಕ್ಕೆ ತಂದು, ಮನವಿಯನ್ನು ಅರ್ಪಿಸಲಾಗುವುದು ಮತ್ತು ಜಾತ್ರೆಯ ಉದ್ದಗಲಕ್ಕೂ ಬ್ಯಾನರ್ಗಳನ್ನು ಅಳವಡಿಸಿ ಹಾಗೂ ಭಿತ್ತಿ ಪತ್ರಗಳನ್ನು ಹಂಚುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗುವುದು ಎಂದು ಉತ್ತರಿಸಿದರು.

               ಗೋಷ್ಠಿಯಲ್ಲಿದ್ದ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸೈಯದ್ ಏಜಾಜ್ ಅಹಮದ್ ಮಾತನಾಡಿ ಮಧ್ಯ ಕರ್ನಾಟಕದ ಹರಿಹರದಲ್ಲಿ ಎಲ್ಲ ಧರ್ಮೀಯರು ಸಹಬಾಳ್ವೆಯಿಂದ ಇರುವ ಈ ಪುಣ್ಯ ನೆಲದಲ್ಲಿ ಕೆಲವು ವಿಚಾರವಂತರನ್ನು ಬರಮಾಡಿಕೊಂಡು ಒಳ್ಳೆಯ ಆಲೋಚನೆಯಿಂದ ಈ ಚಿಂತನಗೋಷ್ಠಿಯನ್ನು ಯಾವುದೇ ಜಾತಿ ಮತ ಕುಲ ಎಂಬ ಭೇದ ಭಾವವಿಲ್ಲದೆ ಸ್ವಾಭಿಮಾನ ಹಾಗೂ ಸಹಬಾಳ್ವೆಯ ಅಡಿಯಲ್ಲಿ ಆಯೋಜನೆ ಗೊಳಿಸಲಾಗಿದೆ,ಈ ವಿಚಾರಗೋಷ್ಠಿಗೆ ರಾಜ್ಯದ ವಿವಿಧ ಪ್ರದೇಶಗಳಿಂದ ಸುಮಾರು 2000 ದಿಂದ 3000 ಜನ ಸೇರುವ ನಿರೀಕ್ಷೆಯಿದೆ ಎಂದು ಹೇಳಿದರು.

             ವೇದಿಕೆಯ ಉಪಾಧ್ಯಕ್ಷ ರಾಘು ದೊಡ್ಡಮನಿ ಮಾತನಾಡಿ ವರ್ಷಕ್ಕೊಂದು ಕಾರ್ಯಕ್ರಮಗಳನ್ನು ಪ್ರಗತಿಪರ ವಿಚಾರದಲ್ಲಿ ಬೆಳಗಾಂ, ದಾವಣಗೆರೆ ಹಾಗೂ ಪ್ರತಿ ಜಿಲ್ಲೆಗಳಲ್ಲಿ ವಿವಿಧ ವಿಚಾರವಾಗಿ ಆಂದೋಲನಗಳನ್ನು ಆಚರಿಸಲಾಗುತ್ತಿದೆ ಅದರಂತೆ ಹರಿಹರದಲ್ಲಿ ಸಹ ಕಳೆದ ವರ್ಷದಿಂದ ಸೌಹಾರ್ದ ಸಮಾವೇಶ ಆಯೋಜಿಸಲಾಗುತ್ತಿದೆ.

             ನಮ್ಮ ವೇದಿಕೆಯಿಂದ ಆಂತರಿಕವಾಗಿ ವರ್ಷದುದ್ದಕ್ಕೂ ಪ್ರತಿ ಜಿಲ್ಲೆಯಲ್ಲಿಯೂ ಅನೇಕ ಕಾರ್ಯಕ್ರಮಗಳನ್ನು ಆಚರಿಸುತ್ತಿದ್ದು ನಾವುಗಳು ಹೆಚ್ಚಿನ ಪ್ರಚಾರಕ್ಕೆ ಬಯಸದೆ ಕೇವಲ ನಮ್ಮ ಗುರಿಯ ಬಗ್ಗೆ ಚಿಂತಿಸುತ್ತೇವೆ ಎಂದು ಹೇಳಿದರು.

            ಈವೇಳೆ ಹೆಗ್ಗೆರೆ ರಂಗಪ್ಪ, ಎಚ್ ಕೆ ಕೊಟ್ರಪ್ಪ, ವೇದಿಕೆಯ ರೂಪು ರೇಷೆಗಳ ಬಗ್ಗೆ ತಮ್ಮಅನಿಸಿಕೆಗಳನ್ನು ಹಂಚಿಕೊಂಡರು .ಸಂತೋಷ ನೋಟದವರ, ಸಾಹಿತಿ ಕಲೀಂ ಬಾಷಾ, ಬಿ.ಕೆ.ಸಿದ್ದನಗೌಡ, ಜಿಗಳಿ ಪ್ರಕಾಶ್,ಕುಂಬಳೂರು ವಾಸು, ಎಸ್.ಎನ್.ದಿಲೀಪ್ ಕುಮಾರ್, ಮುಂತಾದವರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap