ಸಹಕಾರ ಸಂಘಗಳ ಪ್ರತಿನಿಧಿಗಳ ಪ್ರತಿಭಟನೆ..!

ತುಮಕೂರು

    ಸಹಕಾರ ಸಂಘಗಳ ಮೇಲೆ ಆದಾಯ ತೆರಿಗೆ, ಟಿಡಿಎಸ್ ಹಾಗೂ ಜಿಎಸ್‍ಟಿ ವಿಧಿಸಿರುವುದನ್ನು ರದ್ದು ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ವಿವಿಧ ಸಹಕಾರ ಸಂಸ್ಥೆಗಳ ಪದಾಧಿಕಾರಿಗಳು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ಹಾಗೂ ಕೇಂದ್ರ ಹಣಕಾಸು ಸಚಿವರಿಗೆ ಮನವಿ ಪತ್ರ ಸಲ್ಲಿಸಿ, ಸಹಕಾರ ಸಂಸ್ಥೆಗಳಿಗೆ ಮಾರಕವಾಗಿರುವ ತೆರಿಗೆ ಹೊರೆ ರದ್ದು ಮಾಡಬೇಕು ಎಂದು ಒತ್ತಾಯ ಮಾಡಿದರು.

     ಕರ್ನಾಟಕ ಸ್ಟೇಟ್ ಕೋ-ಆಪರೇಟೀವ್ ಸೊಸೈಟೀಸ್ ಅಸೋಸಿಯೇಷನ್ ನೇತೃತ್ವದಲ್ಲಿ ಸಹಕಾರ ಸಂಸ್ಥೆಗಳ ಪ್ರತಿನಿಧಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

     ಅಸೋಸಿಯೇಷನ್‍ನ ನಿರ್ದೇಶಕ ಮಂಜುನಾಥಗೌಡ ಮಾತನಾಡಿ, ಇತ್ತೀಚೆಗೆ ಕೇಂದ್ರ ಸರ್ಕಾರವು ಸಹಕಾರ ಸಂಸ್ಥೆಗಳ ಮೇಲೆ ಆದಾಯ ತೆರಿಗೆ, ಟಿಡಿಎಸ್ ಹಾಗೂ ಜಿಎಸ್‍ಟಿ ವಿಧಿಸಿರುವುದು ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ತೊಡಕನ್ನು ಉಂಟು ಮಾಡಿದೆ. ಸಹಕಾರ ಸಂಸ್ಥೆಗಳ ಮೇಲೆ ಟಿಡಿಎಸ್ ವಿಧಿಸಿರುವುದರಿಂದ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 52 ಸಾವಿರಕ್ಕೂ ಹೆಚ್ಚು ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಹಿನ್ನಡೆಯಾಗಿದೆ.

    ಸಹಕಾರ ಕ್ಷೇತ್ರದಲ್ಲಿ ಕೋಟ್ಯಾಂತರ ಜನರಿದ್ದು, ಲಕ್ಷಾಂತರ ಉದ್ಯೋಗಾವಕಾಶವನ್ನು ಈ ಕ್ಷೇತ್ರ ನೀಡಿದೆ. ಸರ್ಕಾರದ ತೆರಿಗೆ ಹೊರೆ ನೀತಿಯಿಂದ ಸಹಕಾರ ಸಂಸ್ಥೆಗಳು ವ್ಯವಹಾರ ಸ್ಥಗಿತಗೊಳಿಸುವ ಆತಂಕ ಸ್ಥಿತಿ ನಿರ್ಮಾಣವಾಗುತ್ತದೆ, ಅಷ್ಟು ಉದ್ಯೋಗಿಗಳ ಬದುಕು ಬೀದಿ ಪಾಲಾಗುತ್ತದೆ ಎಂದು ಹೇಳಿದರು.

     ಈ ದೇಶಕ್ಕೆ ಅತ್ಯಮೂಲ್ಯವಾಗಿ ಬೇಕಾಗಿರುವ ಸಹಕಾರ ಕ್ಷೇತ್ರದ ಮೇಲೆ ಸರ್ಕಾರ ಹಲವು ರೀತಿಯ ನಿಯಂತ್ರಣ ಕ್ರಮಗಳನ್ನು ಹೇರುವುದರ ಮೂಲಕ ಸಹಕಾರ ಕ್ಷೇತ್ರದ ಬೆಳವಣಿಗೆ ಕುಂಠಿತವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಒಂದರ ಮೇಲೆ ಒಂದರಂತೆ ಪ್ರಹಾರಗಳು ನಡೆಯುತ್ತಿವೆ. ಸಹಕಾರ ಸಂಸ್ಥೆಗಳ ಮೇಲೆ ಆದಾಯ ತೆರಿಗೆ, ಟಿಡಿಎಸ್, ಜಿಎಸ್‍ಟಿ ವಿಧಿಸಿರುವುದನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಮಂಜುನಾಥಗೌಡ ಸರ್ಕಾರವನ್ನು ಒತ್ತಾಯಿಸಿದರು.

      ಈ ಹಿನ್ನೆಲೆಯಲ್ಲಿ ಸ್ಟೇಟ್ ಕೋ-ಆಪರೇಟೀವ್ ಸೊಸೈಟೀಸ್ ಅಸೋಸಿಯೇಷನ್ ರಾಜ್ಯದ ಹಾಗೂ ದೇಶದ ಸಹಕಾರ ಕ್ಷೇತ್ರವನ್ನು ಉಳಿಸುವ, ಬೆಳೆಸುವ ನಿಟ್ಟಿನಲ್ಲಿ ಈ ದಿನ ಹೋರಾಟ ಹಮ್ಮಿಕೊಂಡು, ತಾಲ್ಲೂಕು ವ್ಯಾಪ್ತಿಯಲ್ಲಿ ಸಹಕಾರ ಸಂಸ್ಥೆಗಳ ಪ್ರತಿನಿಧಿಗಳು ತಹಶೀಲ್ದಾರರ ಮೂಲಕ ಪ್ರಧಾನಿ ಹಾಗೂ ಹಣಕಾಸು ಸಚಿವರಿಗೆ ಮನವಿ ಪತ್ರ ನೀಡುತ್ತಿರುವುದಾಗಿ ಹೇಳಿದರು.
ನಗರದ ಅಗ್ನಿ ಬನ್ನಿರಾಯಸ್ವಾಮಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಪ್ರೆಸ್ ರಾಜಣ್ಣ ಮಾತನಾಡಿ, ಸಹಕಾರ ಕ್ಷೇತ್ರ ದೇಶದ ಕೃಷಿಕರ, ಮಧ್ಯಮ ವರ್ಗದವರ ಹಾಗೂ ಕಡುಬಡವರ ಆರ್ಥಿಕ ಚಟುವಟಿಕೆಯ ಕ್ಷೇತ್ರವಾಗಿದೆ.

     110 ವರ್ಷಗಳ ಕಾಲದಿಂದ ಸಹಕಾರ ಸಂಸ್ಥೆಗಳು ಈ ದೇಶದ ಆರ್ಥಿಕ ವ್ಯವಸ್ಥೆಗೆ ಅತ್ಯಮೂಲ್ಯವಾದ ಕೊಡುಗೆ ನೀಡುತ್ತಾ ಬಂದಿವೆ ಎಂದರು.ಕೇಂದ್ರ ಸರ್ಕಾರ ಇತ್ತೀಚೆಗೆ ಸಹಕಾರ ಸಂಸ್ಥೆಗಳ ಮೇಲೆ ಆದಾಯ ತೆರಿಗೆ, ಟಿಡಿಎಸ್ ಹಾಗೂ ಜಿಎಸ್‍ಟಿ ವಿಧಿಸಿರುವುದು ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ಅಡ್ಡಿ ಉಂಟು ಮಾಡದೆ. ಸಹಕಾರ ಸಂಸ್ಥೆಗಳನ್ನು ಬೆಳೆಸುವ ದೃಷ್ಟಿಯಿಂದ ವಿಧಿಸಿರುವ ಆದಾಯ ತೆರಿಗೆ, ಟಿಡಿಎಸ್, ಜಿಎಸ್‍ಟಿಗಳನ್ನು ಕೂಡಲೆ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

     ತಾವು ಉಪಾಧ್ಯಕ್ಷರಾಗಿರುವ ಅಗ್ನಿ ಬನ್ನಿರಾಯಸ್ವಾಮಿ ಪತ್ತಿನ ಸಹಕಾರ ಸಂಘದ ಸುಮಾರು 60 ಲಕ್ಷ ರೂ. ಲಾಭದ ಮೇಲೆ 17,81,723 ರೂ. ಆದಾಯ ತೆರಿಗೆ, ಇದನ್ನು ಪಾವತಿಸಲು ವಿಳಂಬ ಮಾಡಿದಕ್ಕೆ 5,70,112 ರೂ. ದಂಡ ವಿಧಿಸಲಾಗಿದೆ. ಹೀಗಾದರೆ ಸಹಕಾರ ಸಂಸ್ಥೆಗಳು ಉಳಿಯುವುದು ಹೇಗೆ ಎಂದು ಪ್ರೆಸ್ ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದರು.

      ಅಸೋಸಿಯೇಷನ್ ನಿರ್ದೇಶಕಿ ಶ್ರೀದೇವಿ ಮಂಜುನಾಥ್, ವಿಭಾಗೀಯ ಅಧಿಕಾರಿ ಬಿ.ಆರ್. ಮಂಜುನಾಥ್, ವಕ್ಕಲಿಗರ ಸೌಹಾರ್ದ ಪತ್ತಿನ ಸಹಕಾರಿಯ ಅಧ್ಯಕ್ಷ ಡಾ. ಮುದ್ದುಕೃಷ್ಣ, ವಿವಿಧ ಸಹಕಾರ ಸಂಸ್ಥೆಗಳ ಪದಾಧಿಕಾರಿಗಳಾದ ಅರುಣ್‍ಕುಮಾರ್, ಎನ್. ರಾಮಕೃಷ್ಣ, ರವಿಕುಮಾರ್, ರುದ್ರೇಶ್ ಮೊದಲಾದವರು ಪ್ರತಿಭಟನೆ ನೇತೃತ್ವವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link