ವಿಶ್ವಾಸ ಮತ ಗೆಲ್ಲಲ್ಲು ಕೊನೆ ಘಳಿಗೆಯ ಸರ್ಕಸ್ ಮಾಡುತ್ತಿರುವ “ಕೈ-ದಳ”ದ ನಾಯಕರು

ಬೆಂಗಳೂರು

      ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ಉಭಯ ಪಕ್ಷಗಳ ನಾಯಕರು ಕೊನೇ ಘಳಿಗೆಯ ಸರ್ಕಸ್ ಮುಂದುವರೆಸಿದ್ದಾರೆ.

       ವಿಶ್ವಾಸಮತ ಯಾಚನೆ ನಿರ್ಣಯ ಕುರಿತ ನಾಳೆ ವಿಸ್ತೃತ ಚರ್ಚೆ ನಡೆಸಿ, ಮತಕ್ಕೆ ಹಾಕುವ ಪ್ರಕ್ರಿಯೆ ಪೂರ್ಣಗೊಳಿಸಲು ವಿಧಾನಸ ಭಾಧ್ಯಕ್ಷ ಕೆ.ಆರ್ ರಮೇಶ್ ಕುಮಾರ್ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಒಮ್ಮತಾಭಿಪ್ರಾಯಕ್ಕೆ ಬಂದಿದ್ದರೂ ನಾಳೆಯೇ ಈ ಪ್ರಕ್ರಿಯೆ ಮುಗಿಸುವ ಸೂಚನೆಗಳು ಕಂಡು ಬರುತ್ತಿಲ್ಲ. ವ್ಹಿಪ್ ಜಾರಿಗೊಳಿಸುವ ಅಧಿಕಾರ ಆಯಾ ಶಾಸಕಾಂಗ ಪಕ್ಷದ ನಾಯಕರಿಗೆ ಇದ್ದು, ಇತ್ತೀಚಿನ ಸುಪ್ರೀಂಕೋರ್ಟ್ ತೀರ್ಪಿನಿಂದ ಈ ಹಕ್ಕನ್ನು ಮೊಟಕುಗೊಳಿಸಿದಂತಾಗಿದೆ.

     ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಪುನರ್ ಪರಿಶೀಲಿಸಿ, ವ್ಹಿಪ್ ಜಾರಿ ಕುರಿತಂತೆ ಸ್ಪಷ್ಟ ನಿರ್ದೇಶನ ನೀಡಬೇಕೆಂದು ಕೋರಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಮನ್ವಯಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರತ್ಯೇಕವಾಗಿ ಸಲ್ಲಿಸಿರುವ ಮೇಲ್ಮನವಿ ಕುರಿತು ನಾಳೆ ವಿಚಾರಣೆ ನಡೆಯುವ ಸಂಭವವಿದೆ.

      ಈ ವಿಚಾರಣೆಯಿಂದ ಹೊರ ಬರುವ ತೀರ್ಪಿನವರೆಗೂ ಸದನ ಕಲಾಪವನ್ನು ಮುಂದಕ್ಕೆ ಕೊಂಡೊಯ್ಯಲು ದೋಸ್ತಿ ನಾಯಕರು ತೀರ್ಮಾನಿಸಿದಂತಿದ್ದು, ಇದಕ್ಕೆ ಅಂಟಿಕೊಂಡರೆ ವಿಶ್ವಾಸಮತ ಯಾಚನೆ ನಿರ್ಣಯ ಕುರಿತು ನಾಳೆ ಮತಕ್ಕೆ ಹಾಕುವ ಸಾಧ್ಯತೆಗಳು ತೀರಾ ಕಡಿಮೆ. ನಿರ್ಣಯದ ಮೇಲೆ ಸುಮಾರು 20 ಶಾಸಕರು ಮಾತನಾಡಬೇಕಾಗಿದ್ದು, ಹಾಗೊಂದು ವೇಳೆ ನಾಳೆಯೂ ಚರ್ಚೆ ಮುಂದುವರೆದರೆ ಮತಕ್ಕೆ ಹಾಕುವ ಪ್ರಕ್ರಿಯೆ ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ.

      ಮೂಲಗಳ ಪ್ರಕಾರ ಚರ್ಚೆಯನ್ನು ಬುಧವಾರದವರೆಗೂ ಹಿಗ್ಗಿಸಬೇಕು ಎಂಬ ಚಿಂತನೆ ದೋಸ್ತಿ ನಾಯಕರಲ್ಲಿದೆ ಎಂದು ಹೇಳಲಾಗುತ್ತಿದೆ. ಚರ್ಚೆ ಮುಂದುವರೆಯಬೇಕಾದರೆ ಸಭಾಧ್ಯಕ್ಷ ರಮೇಶ್ ಕುಮಾರ್ ಅವರ ಸಹಕಾರ ಅತ್ಯಗತ್ಯ ಅವರ ಮನವೊಲಿಸುವ ನಿಟ್ಟಿನಲ್ಲಿ ದೋಸ್ತಿ ನಾಯಕರು ಈಗಾಗಲೇ ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದಾರೆಂದು ತಿಳಿದು ಬಂದಿದೆ.

       ಆದರೆ, ವಿಶ್ವಾಸಮತ ಯಾಚನೆ ನಿರ್ಣಯ ಕುರಿತ ಚರ್ಚೆಯನ್ನು ನಾಳೆ ಸಂಜೆಯೊಳಗೆ ಪೂರ್ಣಗೊಳಿಸಿ ಮತಕ್ಕೆ ಹಾಕುವ ಪ್ರಕ್ರಿಯೆಯನ್ನು ಕೈಗೊಳ್ಳುವಂತೆ ವಿಧಾನಸಭಾಧ್ಯಕ್ಷರ ಮೇಲೆ ಒತ್ತಡ ಹೇರಲು ಬಿಜೆಪಿ ನಾಯಕರು ಕಾರ್ಯತಂತ್ರ ರೂಪಿಸುವಲ್ಲಿ ಮಗ್ನರಾಗಿದ್ದಾರೆ.

       ಈ ನಡುವೆ ಕುಟುಕು ಜೀವದಿಂದಿರುವ ಸರ್ಕಾರವನ್ನು ಉಳಿಸಿಕೊಳ್ಳಲು ದೋಸ್ತಿ ನಾಯಕರು ನಿನ್ನೆಯಿಡೀ ತಮ್ಮ ಪ್ರಯತ್ನವನ್ನು ಮುಂದುವರೆಸಿ ಇಂದೂ ಸಹ ಅದರ ಮುಂದುವರೆದ ಭಾಗವನ್ನು ಮುನ್ನಡೆಸಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬಣಗಳು ಅತೃಪ್ತ ಶಾಸಕರ ಮನವೊಲಿಸಿ ಬೆಂಗಳೂರಿಗೆ ಕರೆ ತರುವ ನಿಟ್ಟಿನಲ್ಲಿ ತಮ್ಮೆಲ್ಲ ಶಕ್ತಿ-ಸಾಮಥ್ರ್ಯಗಳನ್ನು ಉಪಯೋಗಿಸುತ್ತಿದ್ದಾರೆ.

        ಮುಂಬೈನಲ್ಲಿ ಬೀಡು ಬಿಟ್ಟಿದ್ದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಅತೃಪ್ತ ಶಾಸಕರು 3 ಗುಂಪುಗಳಾಗಿ ಪ್ರತ್ಯೇಕಗೊಂಡು ಅಘ್ನಾತ ಸ್ಥಳಗಳಲ್ಲಿ ವಾಸ್ತವ್ಯ ಹೂಡಿರುವುದರಿಂದ ಅವರನ್ನು ಹೇಗಾದರೂ ಪತ್ತೆ ಮಾಡಿ ಮನವೊಲಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

        ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡರೂ ತಮ್ಮ ನಿವಾಸದಿಂದಲೇ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮುಂದುವರೆಸಿದ್ದಾರೆ. ನಿನ್ನೆ ಕಾಂಗ್ರೆಸ್‍ನ ಹಿರಿಯ ಶಾಸಕ ರಾಮಲಿಂಗಾರೆಡ್ಡಿಯವರನ್ನು ಮನೆಗೆ ಕರೆಸಿಕೊಂಡು ಬೆಂಗಳೂರು ನಗರವನ್ನು ಪ್ರತಿನಿಧಿಸುವ ಅತೃಪ್ತ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿ, ಮನವೊಲಿಸುವ ಯತ್ನ ಮಾಡಿದರಾದರೂ ಯಾವುದೇ ಪ್ರಯೋಜನವಾಗಿಲ್ಲ. ನಾಳೆ ನಡೆಯಲಿರುವ ವಿಶ್ವಾಸಮತ ಯಾಚನೆಯ ಅಂತಿಮ ಘಟ್ಟದ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಬಹುಮತ ಸಿಗದಂತೆ ಮಾಡುವ ಪ್ರಯತ್ನದಲ್ಲಿ ಬಿಜೆಪಿ ನಾಯಕರು ನಿರತರಾಗಿದ್ದಾರೆ.

     ನಾಳೆ ಸದನದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಸಂಜೆ ಬಿಜೆಪಿ ಶಾಸಕರ ಸಭೆ ನಡೆಸಲಿದ್ದಾರೆ. ದೊಡ್ಡಬಳ್ಳಾಪುರ ಸಮೀಪದ ರಮಡ ರೆಸಾರ್ಟ್‍ನಲ್ಲಿ ಬಿಜೆಪಿ ಶಾಸಕರು ತಂಗಿದ್ದು, ಅವರೊಂದಿಗೆ ಯಡಿಯೂರಪ್ಪ ಅವರು ನಿರಂತರ ಸಮಾಲೋಚನೆಯಲ್ಲಿ ತೊಡಗಿದ್ದು, ನಾಳೆ ನಡೆಯಲಿರುವ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಅನುಸರಿಬೇಕಾದ ತಂತ್ರಗಾರಿಕೆ ಕುರಿತು ಸಂಜೆ ಮತ್ತೊಮ್ಮೆ ತಮ್ಮ ಶಾಸಕರಿಗೆ ಯಡಿಯೂರಪ್ಪ ಅವರು ಪುನರ್ ಮನನ ಮಾಡಲಿದ್ದಾರೆ. ಇನ್ನೊಂದೆಡೆ ದೇವನಹಳ್ಳಿ ಸಮೀಪದ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್‍ನಲ್ಲಿ ಜೆಡಿಎಸ್ ಶಾಸಕರು ತಂಗಿದ್ದು, ಅವರನ್ನು ಒಗ್ಗಟ್ಟಿನಿಂದ  ಪಕ್ಷದ ನಾಯಕರು ಕಾರ್ಯೋನ್ಮುಖರಾಗಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link