ಸಮ್ಮಿಶ್ರ ಸರ್ಕಾರ ಡಬಲ್ ಡಿಜಿಟ್‍ಗೆ ತಲುಪಲಿದೆ : ಭಿನ್ನರ ವಿಶ್ವಾಸ

ಬೆಂಗಳೂರು

     ಶಾಸಕರ ರಾಜೀನಾಮೆಯನ್ನು ಅಂಗೀಕರಿಸುವಂತೆ ಸುಪ್ರೀಂಕೋರ್ಟ್ ರಾಜ್ಯ ವಿಧಾನಸಭೆಯ ಸ್ಪೀಕರ್ ಅವರಿಗೆ ಸೂಚಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಭಿನ್ನಮತೀಯ ಶಾಸಕರು, ವಿಶ್ವಾಸ ಮತ ಯಾಚನೆಯ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರದ ಬಲ 99 ಕ್ಕಿಳಿಯಲಿದೆ ಎಂದಿದ್ದಾರೆ.

     ಶಾಸಕರು ನೀಡಿದ ರಾಜೀನಾಮೆಯನ್ನು ಅಂಗೀಕರಿಸುವಂತೆ ಸುಪ್ರೀಂಕೋರ್ಟ್ ಹೇಳುವುದು ನಿಜ. ಯಾಕೆಂದರೆ ಶಾಸಕರು ನೀಡಿದ ರಾಜೀನಾಮೆಯನ್ನು ಕಾನೂನು ಬದ್ಧವಾಗಿ ಅಂಗೀಕರಿಸದೆ ಸ್ಪೀಕರ್ ಅವರಿಗೆ ಬೇರೆ ಮಾರ್ಗವೂ ಇಲ್ಲ ಎಂದು ಅತೃಪ್ತ ಶಾಸಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂಬಯಿಯಲ್ಲಿ ಮಾತ್ರವಲ್ಲ, ರೋಷನ್ ಬೇಗ್ ಸೇರಿದಂತೆ ಒಟ್ಟು ಹದಿನೆಂಟು ಮಂದಿ ಸರ್ಕಾರದ ವಿರುದ್ಧ ಮತ ಚಲಾಯಿಸಲಿದ್ದಾರೆ. ಆ ಮೂಲಕ ಸರ್ಕಾರದ ಬಲ 99ಕ್ಕೆ ಇಳಿದು ಅದು ಕುಸಿದು ಬೀಳುವುದು ಶತ:ಸಿದ್ಧ ಎಂದು ಈ ನಾಯಕರು ತಿಳಿಸಿದ್ದಾರೆ.

     ಮಾಜಿ ಸಿಎಂ ಸಿದ್ಧರಾಮಯ್ಯ ಕರೆದರೆ ವಾಪಸ್ ಬರುವ ಶಾಸಕರಿದ್ದಾರೆ ಎಂಬುದೆಲ್ಲ ಸುಳ್ಳು. ಎಲ್ಲ ಶಾಸಕರು ಅವರವರ ಕ್ಷೇತ್ರದ ಜನರ ಹಿತ ಕಾಪಾಡುವ ದೃಷ್ಟಿಯಿಂದ ಈ ಹೆಜ್ಜೆ ಇಟ್ಟಿದ್ದಾರೆ. ಇದಕ್ಕೆ ಸಮಯ ಸಾಧಕ ರಾಜಕಾರಣ ಎಂದು ಹೇಳುವುದರಲ್ಲಿ ಅರ್ಥವೇ ಇಲ್ಲ ಎಂದಿದ್ದಾರೆ. ಕಾಂಗ್ರೆಸ್‍ನಿಂದ ಬಂದಿರುವ ಶಾಸಕರಿಗೆ ಸಿದ್ಧರಾಮಯ್ಯ ಅವರ ಮೇಲೆ ವಿಶ್ವಾಸ ಹೋಗಿದೆ. ಸರ್ಕಾರದಲ್ಲಿ ಡಜನ್ ಗಟ್ಟಲೆ ಖಾತೆಗಳನ್ನು ಒಬ್ಬೇ ಒಬ್ಬ ಪ್ರಭಾವಿ ಮಂತ್ರಿ ನೋಡಿಕೊಂಡರೆ ಮಂತ್ರಿಗಳಾಗಿರುವವರು ಕೆಲಸ ಮಾಡುವುದು ಹೇಗೆ? ಶಾಸಕರಾದವರು ತಮ್ಮ ಕ್ಷೇತ್ರದ ಕೆಲಸ ಮಾಡಿಕೊಳ್ಳುವುದು ಹೇಗೆ ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ.

     ಈ ಪ್ರಭಾವಿ ಮಂತ್ರಿ ಕೆಎಂಎಫ್‍ನ ತಳ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿಯ ಜೊತೆ ಕೈ ಜೋಡಿಸಿದ್ದರು. ಆಡಳಿತಾರೂಢ ಪಕ್ಷದ ಪ್ರಮುಖರಾಗಿದ್ದು ಅವರು ಮಾಡಿದ ಈ ಕೆಲಸದ ವಿರುದ್ಧ ಸಿಎಂ ಕುಮಾರಸ್ವಾಮಿ ಅವರು ಚಕಾರ ಎತ್ತಲಿಲ್ಲ. ಆಗಲೇ ಈ ಸರ್ಕಾರ ಬಿದ್ದರೆ ಅದಕ್ಕೆ ಈ ಸೂಪರ್ ಸಿಎಂ ಮುಖ್ಯ ಕಾರಣ ಎಂಬ ಸಂದೇಶ ಮುಖ್ಯಮಂತ್ರಿಗಳಿಗೆ ರವಾನೆಯಾಗುವಂತೆ ನೋಡಿಕೊಂಡೆವು. ಆದರೆ ಕುಮಾರಸ್ವಾಮಿ ಅವರು, ಇದರಲ್ಲಿ ನನ್ನದೇನಿಲ್ಲ ಬ್ರದರ್, ನಾನು ಮಧ್ಯೆಪ್ರವೇಶಿಸುವುದಿಲ್ಲ. ನೀವೇ ನೋಡಿಕೊಳ್ಳಿ ಎಂದು ಹೇಳಿ ಮೌನಕ್ಕೆ ಶರಣಾದರು.

     ಹೀಗೆ ಸಿಎಂ ಕುಮಾರಸ್ವಾಮಿ ಅವರ ನಿಯಂತ್ರಣದಲ್ಲಿಲ್ಲದ ಸೂಪರ್ ಸಿಎಂಗಾಗಿ ಮತ್ತು ಮೂರ್ನಾಲ್ಕು ಮಂದಿಗಾಗಿ ಈ ಸರ್ಕಾರ ನಡೆಯುವುದಾದರೆ ಏನರ್ಥ ಎಂಬ ಕಾರಣದಿಂದ ಪರ್ಯಾಯ ಮಾರ್ಗ ಹಿಡಿಯುವುದು ಉಭಯ ಪಕ್ಷಗಳ ಶಾಸಕರಿಗೆ ಅನಿವಾರ್ಯವಾಗಿದೆ ಎಂದು ಈ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

      ಸಿಎಂ ಕುಮಾರಸ್ವಾಮಿ ಅವರ ಬಗ್ಗೆ ನಮಗೆ ಗೌರವವಿದೆ. ಸಿದ್ದರಾಮಯ್ಯ ಅವರ ಬಗ್ಗೆಯೂ ಗೌರವವಿದೆ. ಆದರೆ ಸರ್ಕಾರದಲ್ಲಿ ನಡೆಯುತ್ತಿರುವ ಹಸ್ತಕ್ಷೇಪವನ್ನು ತಡೆಯಲು ಕುಮಾರಸ್ವಾಮಿ ಅವರಿಗೆ ಆಗುತ್ತಿಲ್ಲ. ತಮ್ಮ ಪಕ್ಷದ ಶಾಸಕರ ಹಿತ ಕಾಪಾಡಲು ಸಿದ್ದರಾಮಯ್ಯ ಅವರಿಗೆ ಆಗುತ್ತಿಲ್ಲ. ಹೀಗಾಗಿ ಶಾಸಕರ ನಿರ್ಧಾರ ಅಚಲ. ಒಂದು ವೇಳೆ ಉದ್ದೇಶಪೂರ್ವಕವಾಗಿ ಈ ಸರ್ಕಾರ ಉಳಿಯಬೇಕು ಎಂದೇನಾದರೂ ವಿಳಂಬ ಧೋರಣೆ ಅನುಸರಿಸಿದರೆ ಸದ್ಯ 99 ಕ್ಕೆ ಇಳಿಯಲಿರುವ ಶಾಸಕರ ಸಂಖ್ಯೆ ಕ್ರಮೇಣ ಇನ್ನಷ್ಟು ಕಡಿಮೆಯಾಗುತ್ತಾ ಹೋಗಲಿದೆ ಎಂದು ಈ ಶಾಸಕರು ಎಚ್ಚರಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link