ನೇತ್ರಾವತಿಯಲ್ಲಿ ಕಮರಿದ ಕಾಫಿ ನಾಡಿನ ಕನಸು..!!

ಉದ್ಯಮ ವಲಯದಲ್ಲಿ ತಲ್ಲಣ ಮೂಡಿಸಿದ ಕಾಫೀ ಡೇ ದೊರೆಯ ನಡೆ

ತುಮಕೂರು

      ಕಾಫೀ ಡೇ ಕಿಂಗ್, ಬಹುಕೋಟಿ ಉದ್ಯಮಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ದಾರ್ಥ್ ಸಾವು ಉದ್ಯಮ ವಲಯವನ್ನು ಬೆಚ್ಚಿ ಬೀಳಿಸಿದೆ. ಕರ್ನಾಟಕ ಮಾತ್ರವಲ್ಲ ಇಡೀ ದೇಶವೇ ಈ ಪ್ರಕರಣವನ್ನು ಬೆಕ್ಕಸ ಬೆರಗಾಗಿ ನೋಡುತ್ತಿದೆ. ಬಹು ದೊಡ್ಡ ಸಾಮ್ರಾಟನ ಬದುಕು ಈ ರೀತಿ ಅಂತ್ಯ ಕಂಡಿರುವುದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ. ಇದು ನಿಜವೆ ಎನ್ನುವಂತಹ ಪ್ರಶ್ನೆಗಳು ಎದುರಾಗುತ್ತಲೇ ಇವೆ.

      ಸಿದ್ದಾರ್ಥ್ ಯಾವುದೋ ಒಂದು ಉದ್ಯಮಕ್ಕೆ ಸೀಮಿತವಾದವರಲ್ಲ. ಕಾಫೀಡೇ ಇಡೀ ಭಾರತದಲ್ಲಿ ಹೆಸರು ಪಡೆದಿದೆ. ಇದಲ್ಲದೆ ಇನ್ನೂ ಹಲವಾರು ಉದ್ಯಮಗಳನ್ನು ಅವರು ನಡೆಸುತ್ತಾ ಬಂದಿದ್ದಾರೆ. ನೂರಲ್ಲಾ, ಸಾವಿರಾರು ಕೋಟಿ ರೂ.ಗಳ ವಹಿವಾಟು ನಡೆಸುವ ಒಬ್ಬ ಉದ್ಯಮಿ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಎನ್ನುವ ಪ್ರಶ್ನೆಗಳು ಉದ್ಯಮ ವಲಯದಿಂದಲೇ ಕೇಳಿ ಬಂದಿವೆ. ಇವರ ಸಾವನ್ನು ಬಹಳಷ್ಟು ಜನ ನಿರೀಕ್ಷಿಸಿರಲಿಲ್ಲ.

      ಉದ್ಯಮದಲ್ಲಿನ ಏರುಪೇರುಗಳು ಅಥವಾ ಮತ್ಯಾವುದೋ ಕಾರಣದಿಂದಾಗಿ ಒಂದೆರಡು ದಿನ ನಾಪತ್ತೆಯಾಗಿರಬಹುದು ಅಥವಾ ಯಾರಾದರೂ ಅಪಹರಿಸಿರಬಹುದು ಎಂದೆಲ್ಲಾ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಬುಧವಾರ ಬೆಳಗ್ಗೆ 6-30ರ ಸಮಯಕ್ಕೆ ನೇತ್ರಾವತಿ ನದಿಯ ಸೇತುವೆಯ ಬಳಿ ಮೃತದೇಹ ಪತ್ತೆಯಾದಾಗ ಎಲ್ಲಾ ವದಂತಿಗಳಿಗೆ ತೆರೆ ಬಿದ್ದಿತು.

      ಸಿದ್ದಾರ್ಥ್ ವಿವಿಧ ಕ್ಷೇತ್ರಗಳಲ್ಲಿ ಬೆಳೆದು ಬಂದವರು. ಸಣ್ಣ ಮೊತ್ತದ ಹಣ ಹೂಡಿಕೆಯಿಂದ ಬಹು ಕೋಟಿ ಬಂಡವಾಳವನ್ನು ತೊಡಗಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟವರು. ರಾಜಕೀಯ ಕ್ಷೇತ್ರದಲ್ಲೂ ಒಂದಷ್ಟು ಪರಿಚಯ ಹೊಂದಿದವರು. ಎಸ್.ಎಂ.ಕೃಷ್ಣ ಅವರ ಅಳಿಯನಾದರೂ ರಾಜಕೀಯದ ಕಡೆ ಹೆಚ್ಚು ಆಸಕ್ತಿ ವಹಿಸದೆ ತನ್ನ ಉದ್ಯಮವನ್ನು ಉತ್ತುಂಗ ಶಿಖರಕ್ಕೆ ಕೊಂಡೊಯ್ಯಲು ಕನಸು ಕಟ್ಟಿ ಕೊಂಡವರು.

      ಈ ಕನಸಿನ ಬದುಕಿನಲ್ಲಿಯೇ ಸಾಧನೆ ಮಾಡಿದವರು. ಈ ಸಾಧನೆ ಅಂತಿಂತಹುದ್ದಲ್ಲ. 50 ಸಾವಿರ ಮಂದಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದಾರೆ ಎಂಬುದು ಸಾಮಾನ್ಯವಾದ ಮಾತಲ್ಲ. ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿರುವ ಇಂದಿನ ದಿನಗಳಲ್ಲಿ ಬಹಳಷ್ಟು ಜನರಿಗೆ ಉದ್ಯೋಗ ನೀಡಿ ಯುವಕರ ಬದುಕಿಗೆ ಆಶಾಕಿರಣವಾಗಿ ಕಂಡು ಬಂದ ಧೀಮಂತ ಉದ್ಯಮಿ. ಇವರ ಪರಿಚಯಸ್ಥರು ಅಥವಾ ಯಾರೇ ಆಗಲಿ ಹುಡುಕಿಕೊಂಡು ಹೋಗಿ ಉದ್ಯೋಗಾವಕಾಶಗಳ ಬಗ್ಗೆ ಮನವಿ ಮಾಡಿಕೊಂಡರೆ ಅಂತಹವರಿಗೆಲ್ಲಾ ಸಹಾಯಹಸ್ತ ನೀಡುತ್ತ್ತಾ ಬಂದಿದ್ದರು.

        ಕಳೆದ 2 ದಿನಗಳಿಂದ ಕಾಫೀ ಡೇ ನೌಕರರು ಅಕ್ಷರಶಃ ಕಣ್ಣೀರಿನಲ್ಲಿ ಮುಳುಗಿ ಹೋಗಿದ್ದಾರೆ. ಇವರೆಲ್ಲಾ ಕೇವಲ ಉದ್ಯೋಗಿಗಳಾಗಿರಲಿಲ್ಲ. ಸಿದ್ದಾರ್ಥ್ ಅವರೊಂದಿಗೆ ಒಂದು ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ನೌಕರ ವರ್ಗವನ್ನು ಅಷ್ಟೇ ಚೆನ್ನಾಗಿ ನೋಡಿಕೊಂಡಿದ್ದರು. ಇವರಲ್ಲಿ ಕೆಲಸ ಮಾಡುತ್ತಿದ್ದ ಬಹುಪಾಲು ನೌಕರ ವರ್ಗ ಆದಾಯ ತೆರಿಗೆ ಪಾವತಿಸುತ್ತಾ ಬಂದಿದ್ದರೆನ್ನಲಾಗಿದೆ. ಕುಟುಂಬದೊಂದಿಗೂ ಅಷ್ಟೇ ಆತ್ಮೀಯತೆ. ಯಾರಿಗೂ ಕೇಡು ಮಾಡಿದವರಲ್ಲ. ಶಾಲೆಯ ದಿನಗಳಲ್ಲಿ ರಷ್ಯಾದ ಕಮ್ಯುನಿಸ್ಟ್ ಸಿದ್ದಾಂತಗಳ ಕುರಿತಾಗಿ ಓದುತ್ತಾ ದುಡಿಯಬೇಕು, ದುಡಿದು ತಿನ್ನಬೇಕು, ಇತರರಿಗೂ ದುಡಿಯುವ ಅವಕಾಶ ಕಲ್ಪಿಸಬೇಕು ಎನ್ನುವ ಅಂಶಗಳು ಅವರ ಮನಸ್ಸಿನಲ್ಲಿ ಹೊಕ್ಕು ಅದೇ ದಾರಿಯಲ್ಲಿ ಬದುಕು ಕಂಡುಕೊಂಡವರು.

        ಈ ಕಾರಣಕ್ಕಾಗಿಯೇ ನೌಕರ ವರ್ಗ ಮಮ್ಮಲ ಮರುಗುತ್ತಿದೆ. ತನ್ನ ಉದ್ಯೋಗದಾತ ಅಸುನೀಗಿದ ಸುದ್ದಿ ಕೇಳಿ ಕಣ್ಣೀರು ಸುರಿಸುತ್ತಿದ್ದಾರೆ. ಅವರ ಅಂತ್ಯಕ್ರಿಯೆ ಸಂದರ್ಭ ಮತ್ತು ಮೃತದೇಹವನ್ನು ಕೊಂಡೊಯ್ಯುವ ಸ್ಥಳದಲ್ಲಿ ಕಂಡುಬಂದ ಅವರ ನೌಕರ ವರ್ಗದ ಕಣ್ಣಾಲಿಗಳನ್ನು ಗಮನಿಸಿದರೆ ಅವರ ಮೇಲಿನ ಪ್ರೀತಿ ಎಷ್ಟಿತ್ತು ಎಂಬುದು ಅರ್ಥವಾಗುತ್ತದೆ.

       ರಾಜ್ಯದ ಉದ್ಯಮ ವಲಯವಂತೂ ಚಿಂತಾಕ್ರಾಂತವಾಗಿದೆ. ಉದ್ಯಮಿಗಳಿಗೆ ಸಂಕಟ ಬರುವುದಿಲ್ಲ ಎಂದಲ್ಲ. ನೂರಾರು ಸಮಸ್ಯೆಗಳೊಂದಿಗೆ ಅವರು ಬದುಕುತ್ತಿರುತ್ತಾರೆ. ಸಮಸ್ಯೆಗಳನ್ನು ನಿವಾರಿಸಿಕೊಂಡೆ ತಮ್ಮ ಉದ್ಯಮವನ್ನು ಬೆಳೆಸಿಕೊಂಡು ಹೋಗುತ್ತಾರೆ. ಈವರೆಗಿನ ವಿದ್ಯಮಾನಗಳನ್ನು ಗಮನಿಸಿದರೆ ಇತಿಹಾಸದಲ್ಲಿ ಇಂತಹ ಹಲವು ನಿದರ್ಶನಗಳನ್ನು ಕಾಣಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಉದ್ಯಮಿಗಳು ಹಿಂದಿನಂತೆ ಆರಾಮವಾಗಿ ಜೀವನ ಸಾಗಿಸುವುದು ಸಾಧ್ಯವಿಲ್ಲ ಎಂಬ ಮಾತುಗಳು ಉದ್ಯಮ ವಲಯದಿಂದಲೇ ಕೇಳಿ ಬರುತ್ತಿವೆ.

       ತಾವು ಸಂಪಾದಿಸಿ ದುಡಿದ ಬಹುಪಾಲು ಸರ್ಕಾರದ ವಿವಿಧ ತೆರಿಗೆಗಳಿಗೆ ಹೋಗುತ್ತದೆ. ನಂಬಿದ ಉದ್ಯೋಗಿಗಳಿಗೆ ಸಂಬಳಕ್ಕಿಂತ ಹೆಚ್ಚಾಗಿ ಸರ್ಕಾರದ ಕಾನೂನು ಕಟ್ಟಳೆಗಳು ಉದ್ಯಮಿಗಳ ಕೈಕಟ್ಟಿ ಹಾಕುತ್ತಿವೆ. ಆದಾಯ ತೆರಿಗೆ ಇಲಾಖೆಯಿಂದ ಹಿಡಿದು ವಿವಿಧ ಕಾನೂನುಗಳ ಕಠಿಣ ನಿಯಮಗಳು ಉದ್ಯಮ ವಲಯದವರನ್ನು ಕಂಗಾಲು ಮಾಡುತ್ತವೆ. ಕಳೆದ 2 ದಿನಗಳಿಂದ ಬಹಳಷ್ಟು ಮುಖಂಡರು ಇದೇ ವಿಷಯವನ್ನು ಪ್ರಸ್ತಾಪಿಸುತ್ತಾ ಬಂದಿದ್ದಾರೆ. ಉದ್ಯಮಿಗಳು ಬಹುಕೋಟಿ ರೂ.ಗಳ ಒಡೆಯರಾಗಿರುತ್ತಾರೆ. ಎಲ್ಲವನ್ನೂ ಕಾನೂನುಬದ್ದವಾಗಿಯೇ ನಿರ್ವಹಿಸಲು ಕೆಲವೊಮ್ಮೆ ಸಾಧ್ಯವಾಗದು. ಆದರೆ ಸಂದರ್ಭ ಬಂದಾಗ ಕಾನೂನು ಈ ಸಬೂಬುಗಳನ್ನು ಒಪ್ಪಿಕೊಳ್ಳುವುದಿಲ್ಲ. ಇಂತಹ ಸಂದರ್ಭದಲ್ಲಿ ಮಾನಸಿಕವಾಗಿ ಕುಗ್ಗಿ ಹೋಗುವವರೆ ಹೆಚ್ಚು.

       ಸಿದ್ದಾರ್ಥ್ ವಿಷಯದಲ್ಲಿ ಬಹುಪಾಲು ಜನರು ಹೇಳುವ ಪ್ರಕಾರ ಅವರು ಉದ್ಯಮದಲ್ಲೇನೂ ನಷ್ಟ ಹೊಂದಿರಲಿಕ್ಕಿಲ್ಲ. ಸಾಲ ಹೊಂದುವುದು ಉದ್ಯಮಿಗಳಿಗೆ ಸಾಮಾನ್ಯ. ಅದನ್ನು ತೀರಿಸುವ ಶಕ್ತಿ ಸಾಮಥ್ರ್ಯ ಅವರಲ್ಲಿ ಇದ್ದೇ ಇರುತ್ತದೆ. ಒಂದು ವೇಳೆ ಎಲ್ಲಾ ಶಕ್ತಿ ಮುಗಿದು ಹೋದ ನಂತರ ಏನು ಮಾಡಬೇಕು ಎಂಬುದು ಗೊತ್ತಿರುತ್ತದೆ. ಆದರೆ ಸಿದ್ದಾರ್ಥ್ ಅವರು ಯಾವ ಕಾರಣಕ್ಕೆ ಸಾವಿನ ಮೊರೆ ಹೋದರು ಎಂಬುದರ ಬಗ್ಗೆ ಈಗ ಚರ್ಚೆಗಳು ಆರಂಭವಾಗಿವೆ. ಈ ಸಾವನ್ನು ಯಾರೂ ನಿರೀಕ್ಷಿಸಿರಲಿಲ್ಲ.

     1985ರಲ್ಲಿ ಓದು ಮುಗಿಸಿದ ಸಿದ್ದಾರ್ಥ್‍ನಿಗೆ ಅಪ್ಪ ಏಳೂವರೆ ಲಕ್ಷ ರೂಪಾಯಿಗಳನ್ನು ಕೈಗಿಟ್ಟು ಉದ್ಯಮ ಮಾಡು, ಒಂದು ವೇಳೆ ಸೋತರೆ ಮನೆಗೆ ವಾಪಾಸ್ಸು ಬಾ ಎನ್ನುತ್ತಾರೆ. 5 ಲಕ್ಷದಲ್ಲಿ ಒಂದು ನಿವೇಶನ ಖರೀದಿಸಿ, ಉಳಿದ 2 ಲಕ್ಷ ಬ್ಯಾಂಕಿನಲ್ಲಿ ಠೇವಣಿ ಇರಿಸಿ, ಮುಂಬೈ ಸೇರುತ್ತಾರೆ. ಅಲ್ಲಿ 120 ರೂ. ಬಾಡಿಗೆ ಕೋಣೆ ಪಡೆದು ಮಹೇಂದ್ರ ಕಂಪಾನಿ ಎಂಬುವರ ಸಂಸ್ಥೆಗೆ ಕೆಲಸಕ್ಕೆ ಸೇರುತ್ತಾರೆ. ಆದರೆ ಅಲ್ಲಿ ಉಳಿಯದೆ ಊರಿಗೆ ವಾಪಸ್ಸಾಗುತ್ತಾರೆ. 1993ರಲ್ಲಿ ಅಮಾಲ್ಗಮೇಟೆಡ್ ಬೀನ್ ಕಾಫೀ ಹೆಸರಿನ ಕಾಫೀ ಕ್ಯೂರಿಂಗ್ ಕಂಪನಿ ಆರಂಭಿಸಿ ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ಶಾಖೆ ತೆರೆಯುತ್ತಾರೆ.

      ತರುವಾಯು ಕಾಫೀಡೇ ಗ್ಲೋಬಲ್ ಲಿಮಿಟೆಡ್ ಹೆಸರಿನಲ್ಲಿ ಮರು ನಾಮಕರಣ ಮಾಡುತ್ತಾರೆ. ಎಸ್.ಎಂ.ಕೃಷ್ಣ ಅವರ ಮಗಳು ಮಾಳವಿಕಾರನ್ನು ವಿವಾಹವಾದ ನಂತರ ಇವರ ಉದ್ಯಮದ ಹಾದಿಗಳು ಮತ್ತಷ್ಟು ತೆರೆದುಕೊಳ್ಳುತ್ತಾ ಹೋಗುತ್ತವೆ. ಸಿದ್ದಾರ್ಥ್ ಅವರ ಉದ್ಯಮ ಸಾಮ್ರಾಜ್ಯಕ್ಕೆ ಐಟಿ ದಾಳಿ ನಡೆದ ನಂತರ ಸಮಾಜವಾದಿಯಾಗಿದ್ದ ಎಸ್.ಎಂ.ಕೃಷ್ಣ ಬಿಜೆಪಿ ಸೇರಿದ್ದು, ಈಗ ಇತಿಹಾಸ.
ಸಿದ್ದಾರ್ಥ್ ಸ್ಥಾಪಿಸಿದ ಕಾಫೀ ತೋಟ, ಕ್ಯೂರಿಂಗ್ ಸೆಂಟರ್, ಕೆಫೆ ಕಾಫೀಡೇ, ರಫ್ತು ಉದ್ಯಮ, ಗ್ಲೋಬಲ್ ವಿಲೇಜ್, ಮೈಂಡ್ ಟ್ರೀ, ವೆಲ್ತ್ ಶೇರ್ ಮಾರುಕಟ್ಟೆ ಹೀಗೆ ಒಟ್ಟು 50 ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗಿಗಳು ಇವರ ಕೈ ಕೆಳಗೆ ದುಡಿಯುತ್ತಾರೆಂದರೆ ಒಂದು ಸರ್ಕಾರ ಮಾಡದ ಕೆಲಸವನ್ನು ಇವರು ಮಾಡಿದ್ದಾರೆ. ಇವರು ಅಭ್ಯರ್ಥಿಯ ಪದವಿಗಳನ್ನು ಪರಿಗಣಿಸದೇ ಅನುಭವಕ್ಕೆ ಆದ್ಯತೆ ನೀಡಿರುವ ಮಾನವೀಯ ನೆಲೆಗಟ್ಟಿನ ಅಪರೂಪದ ಉದ್ಯಮಿ.

       ಉದ್ಯಮಿಗಳು ನಿವೃತ್ತರಾಗುವುದಿಲ್ಲ, ಅವರು ಸಾಯುತ್ತಾರೆ ಎಂದು ಸಿದ್ದಾರ್ಥ್ ಅವರು ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅವರು ಹೇಳಿದ ಸಂದರ್ಭ ಹೇಗಿತ್ತೋ ಗೊತ್ತಿಲ್ಲ. ಆದರೆ ಅವರ ಹೇಳಿಕೆ ಈಗ ಅಕ್ಷರಶಹ ನಿಜ ಎನ್ನುವಷ್ಟರ ಮಟ್ಟಿಗೆ ಬಂದು ನಿಂತಿದೆ.
ಕನಸನ್ನು ಇಟ್ಟುಕೊಂಡು ಸಾಧನೆ ಮಾಡ ಹೊರಟ ಒಬ್ಬ ಉತ್ಸಾಹಿ ಉದ್ಯಮಿ ಹೀಗೆ ಮಾಡಿಕೊಳ್ಳಲು ಸಾಧ್ಯವೇ ಎಂದು ಉದ್ಯಮ ವಲಯ ಅಚ್ಚರಿ ಪಡುತ್ತಿದೆ. ಆತಂಕವೂ ಉಂಟಾಗಿದೆ.

      ನಮಗೆಲ್ಲಾ ಆಶ್ರಯ ಕೊಟ್ಟ ಉದ್ಯೋಗದಾತ ಇಲ್ಲವಲ್ಲ ಎಂದು ನೌಕರ ವರ್ಗ ಕಣ್ಣೀರಿಡುತ್ತಿದೆ. ಎಲ್ಲರೂ ಹೇಳುವುದು ಒಂದೇ ಮಾತು ಇವರು ಸಾವಿಗೆ ಶರಣಾಗ ಬಾರದಿತ್ತು ಎಂದು. ಈ ಸಾವಿಗೆ ಹಿನ್ನೆಲೆಯಾದರೂ ಏನು? ಆತ್ಮಹತ್ಯೆಗೆ ಒಳಗಾಗುವಂತಹ ಪರಿಸ್ಥಿತಿ ನಿರ್ಮಾಣವಾದದ್ದಾದರೂ ಏಕೆ? ಇದು ನಿಜವಾಗಿಯೂ ಆತ್ಮಹತ್ಯೆಯೇ ಎಂಬ ಇತ್ಯಾದಿ ಅನುಮಾನಾಸ್ಪದ ಪ್ರಶ್ನೆಗಳಿಗೆ ತನಿಖೆಯಿಂದಲೇ ಉತ್ತರ ಸಿಗಬೇಕು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap