ಉಪ ಚುನಾವಣಾ ಫಲಿತಾಂಶದ ಮೇಲೆ ನಿಂತ ಮೈತ್ರಿ ಸರ್ಕಾರದ ಭವಿಷ್ಯ..!!

ಬೆಂಗಳೂರು

    ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ವರ್ಷ ಪೂರೈಸುತ್ತಿರುವ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಅಳಿವು- ಉಳಿವು ಇದೇ 19ರಂದು ಮತದಾನ ನಡೆಯಲಿರುವ ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭಾ ಉಪ ಚುನಾವಣಾ ಫಲಿತಾಂಶ ನಿರ್ಣಾಯಕವಾಗಲಿದೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಎರಡೂ ಕ್ಷೇತ್ರಗಳ ಉಪ ಚುನಾವಣೆ ಪ್ರಚಾರದಿಂದ ದೂರ ಉಳಿದಿರುವುದು ಕಾಂಗ್ರೆಸ್ ನಾಯಕರ ತಳಮಳಕ್ಕೆ ಕಾರಣವಾಗಿದೆ.

      ಚಿಂಚೋಳಿ ಹಾಗೂ ಕುಂದಗೋಳ ಕ್ಷೇತ್ರಗಳಲ್ಲಿ ಬೇಸಿಗೆಯ ಬಿರು ಬಿಸಲಿನ ಝಳದಂತೆ, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಇನ್ನಿಲ್ಲದ ತಂತ್ರ- ಪ್ರತಿತಂತ್ರ ರೂಪಿಸಿ ಬೆವರು ಹರಿಸುತ್ತಿದ್ದಾರೆ. ಆದರೆ, ಮೈತ್ರಿಕೂಟ ಸರ್ಕಾರದ ಮುಖ್ಯಮಂತ್ರಿಯಾಗಿರುವ ಹೆಚ್.ಡಿ. ಕುಮಾರಸ್ವಾಮಿ ಪ್ರಚಾರದಲ್ಲಿ ಪಾಲ್ಗೊಂಡು ಮಿತ್ರ ಪಕ್ಷ ಕಾಂಗ್ರೆಸ್ ಗೆ ಸಾಥ್ ನೀಡದೆ ದೂರ ಸರಿದಿರುವುದು ಕಾಂಗ್ರೆಸ್ ನಾಯಕನ್ನು ಆತಂಕಕ್ಕೆ ತಳ್ಳಿದಂತೆ ಕಾಣುತ್ತಿದೆ.

        ಈ ಹಿಂದೆ ಕಾಂಗ್ರೆಸ್ ಗೆಲುವು ಸಾಧಿಸಿ ಉಳಿಸಿಕೊಂಡಿದ್ದ ಈ ಎರಡೂ ಕ್ಷೇತ್ರಗಳನ್ನು ತನ್ನಲೇ ಉಳಿಸಿಕೊಳ್ಳಬೇಕೆಂಬ ಒತ್ತಡದಲ್ಲಿ ಕಾಂಗ್ರೆಸ್ ನಾಯಕರು ಸಿಲುಕಿದ್ದಾರೆ. ಚಿಂಚೋಳಿಯಲ್ಲಿ, ಉಮೇಶ್ ಯಾದವ್ ಕಾಂಗ್ರೆಸ್ ತೊರೆದು ಮಲ್ಲಿಕಾರ್ಜುನ ಖರ್ಗೆ ಅವರ ಎದುರು ಬಿಜೆಪಿ ಅಭ್ಯರ್ಥಿಯಾಗಿದ್ದರಿಂದ ಇಲ್ಲಿ ಉಪ ಚುನಾವಣೆ ನಡೆಯುತ್ತಿದೆ.ಕುಂದಗೋಳದಲ್ಲಿ ಶಾಸಕರಾಗಿದ್ದ ಸಿಎಸ್ ಶಿವಳ್ಳಿ ಹಠಾತ್ ನಿಧನದಿಂದ ಉಪ ಚುನಾವಣೆ ಎದುರಾಗಿದೆ.

       ಇತ್ತೀಚಿಗೆ ಕೊನೆಗೊಂಡ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸೂತ್ರದಂತೆ ಜೆಡಿಎಸ್ ಗೆ ಹಂಚಿಕೆ ಮಾಡಿದ್ದ ಲೋಕಸಭಾ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳ ಪರ ನಿರಂತರ ಪ್ರಚಾರ ನಡೆಸಿದ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ರಾಂತಿ ಪಡೆಯಲು ಉಡುಪಿ ಸಮೀಪ ನೈಸರ್ಗಿಕ ಕೇಂದ್ರ ಸೇರಿದ್ದರು.

        ಮಿತ್ರ ಪಕ್ಷದ ನಾಯಕರು ಯುದ್ದೋಪಾದಿಯಲ್ಲಿ ಉಪ ಚುನಾವಣೆಯಲ್ಲಿ ಬೆವರು ಹರಿಸುತ್ತಿದ್ದರೂ, ಅತ್ತ ಸುಳಿಯದೆ, ಕೊಡಗು ಜಿಲ್ಲೆಯ ಖಾಸಗಿ ರೆಸಾರ್ಟ್ ಗೆ ವಿಶ್ರಾಂತಿಗೆ ಅವರು ಮರಳಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

        224 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಮೈತ್ರಿ ಸರ್ಕಾರ ತೆಳು ಬಹುಮತದಿಂದ ಉಳಿದುಕೊಂಡಿದೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಏನಾದರೂ ಹಿನ್ನಡೆ ಉಂಟಾದರೆ, ರಾಜ್ಯ ಮೈತ್ರಿ ಸರ್ಕಾರದ ಸ್ಥಿರತೆ ಗಂಡಾಂತರಕ್ಕೆ ಸಿಲುಕುವ ಸಾಧ್ಯತೆಯಿದೆ.

       ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಬಲಿಷ್ಠ ನಾಯಕ ಬಿಎಸ್ ಯಡಿಯೂರಪ್ಪ, ಕುಂದಗೋಳ ಉಪ ಚುನಾವಣಾ ಪ್ರಚಾರದ ವೇಳೆ, ಮೈತ್ರಿ ಸರ್ಕಾರ ಕೊನೆಯ ದಿನಗಳನ್ನು ಎಣಿಸುತ್ತಿದೆ. ಲೋಕಸಭಾ ಚುನಾವಣೆಯ ಮತಗಳ ಎಣಿಕೆ ಮುಗಿದ ಕೂಡಲೇ ಸರ್ಕಾರ ಪತನಗೊಳ್ಳಲಿದೆ ಎಂದು ಹೇಳಿದ್ದಾರೆ.

       ಬಿಜೆಪಿ ಉಪ ಚುನಾವಣೆ ನಡೆಯುತ್ತಿರುವ ಎರಡೂ ಕ್ಷೇತ್ರಗಳಲ್ಲಿ ಜಯಗಳಿಸಿ, ತನ್ನ ಬಲವನ್ನು ಈಗಿನ 104ರಿಂದ 106ಕ್ಕೆ ಹೆಚ್ಚಿಸಿಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಸಮ್ಮಿಶ್ರ ಸರ್ಕಾರ ತನ್ನಂತಾನೇ ಪತನಗೊಳ್ಳಲಿದೆ ಎಂದು ಭಯ ಹುಟ್ಟಿಸಿದ್ದಾರೆ .ಉಪ ಚುನಾವಣೆ ಫಲಿತಾಂಶದ ಪರಿಣಾಮಗಳನ್ನು ಚೆನ್ನಾಗಿ ಅರಿತಿರುವ ಕಾಂಗ್ರೆಸ್ ನಾಯಕರು, ಎರಡೂ ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ಪಾಲ್ಗೊಂಡು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿ, ಗೆಲುವಿಗೆ ನೆರವಾಗಬೇಕು ಎಂದು ಮುಖ್ಯಮಂತ್ರಿಯನ್ನು ಮನವೊಲಿಸುವ ಎಲ್ಲ ಪ್ರಯತ್ನ ನಡೆಸಿದ್ದಾರೆ.

         ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿದ್ದ ತಮ್ಮ ಪುತ್ರ ನಿಖಿಲ್ ಕುಮಾರ ಸ್ವಾಮಿ ಅವರ ಪರ ಪ್ರಚಾರ ನಡೆಸಲು ಅಸಹಕಾರ ನೀಡಿದ ಕಾಂಗ್ರೆಸ್ ನಾಯಕರ ಬಗ್ಗೆ ಮುಖ್ಯಮಂತ್ರಿ ಅಸಮಧಾನ ಹೊಂದಿದ್ದು, ಇದರಿಂದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರದಿಂದ ದೂರ ಉಳಿದಿದ್ದಾರೆ ಎಂದು ಜೆಡಿಎಸ್ ಮೂಲಗಳು ಹೇಳಿವೆ

          ಯುಎನ್ಐ ನೊಂದಿಗೆ ಮಾತನಾಡಿರುವ ಜೆಡಿಎಸ್ ವಕ್ತಾರ, ಮಾಜಿ ಮೇಲ್ಮನೆ ಸದಸ್ಯ ರಮೇಶ್ ಬಾಬು, ಲೋಕಸಭಾ ಚುನಾವಣೆಯಲ್ಲಿ ವ್ಯಾಪಕ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಮುಖ್ಯಮಂತ್ರಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಕೆಲ ಉದಾಹರಣೆಗಳನ್ನು ಹೊರತುಪಡಿಸಿದರೆ, ಉಪ ಚುನಾವಣೆಯಲ್ಲಿ ಯಾವುದೇ ಮುಖ್ಯಮಂತ್ರಿ ಪ್ರಚಾರ ನಡೆಸಬಾರದೆಂಬ ಸಂಪ್ರದಾಯವಿದೆ.

          ಉಪ ಚುನಾವಣೆ ನಡೆಯುತ್ತಿರುವ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಹೊಂದಿತ್ತು, ಅವುಗಳನ್ನು ಉಳಿಸಿಕೊಳ್ಳುವುದು ಮೈತ್ರಿ ಪಕ್ಷ ಕಾಂಗ್ರೆಸ್ ನಾಯಕರಿಗೆ ಕಷ್ಟವೇನು ಅಲ್ಲ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಚಾರದಲ್ಲಿ ಪಾಲ್ಗೊಳ್ಳುವುದನ್ನು ತಳ್ಳಿಹಾಕಲಾಗದು ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap