ಸಂಪುಟ ವಿಸ್ತರಣೆ: ಬಿಎಸ್‍ವೈ-ಸಂತೋಷ್ ನಡುವೆ ಸಂಘರ್ಷ

ಬೆಂಗಳೂರು

     ರಾಜ್ಯ ಸಚಿವ ಸಂಪುಟ ವಿಸ್ತರಣೆ ಇದೀಗ ಸಿಎಂ ಯಡಿಯೂರಪ್ಪ ವರ್ಸಸ್ ಸಂತೋಷ್ ನಡುವೆ ಭಾರೀ ಸಂಘರ್ಷಕ್ಕೆ ಕಾರಣವಾಗಿದೆ.
ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಸಿದ್ಧಪಡಿಸಿದ್ದ ಪಟ್ಟಿಯೇ ಬೇರೆ. ಆದರೆ ಪಟ್ಟಿಯಲ್ಲಿದ್ದ ಹಲವರು ನಾಪತ್ತೆಯಾಗಿ ಬೇರೆಯವರು ಸೇರ್ಪಡೆಯಾಗಿದ್ದಕ್ಕೆ ಸಂತೋಷ್ ಕಾರಣ ಎಂದು ಯಡಿಯೂರಪ್ಪ ಗ್ಯಾಂಗು ಹುಯಿಲೆಬ್ಬಿಸಿದೆ.

   ಪರಿಣಾಮವಾಗಿ ಸಂಪುಟ ವಿಸ್ತರಣೆಯಾದ ಮೂರೇ ದಿನಗಳಲ್ಲಿ ರಾಜ್ಯ ಬಿಜೆಪಿಯಲ್ಲಿ ಗ್ಯಾಂಗ್ ವಾರ್ ಶುರುವಾಗಿದ್ದು ಇದರ ನಡುವೆ ಸರ್ಕಾರ ಉಳಿದರೂ ಬಿಜೆಪಿಗೆ ನಿಶ್ಯಕ್ತಿ ಆವರಿಸುವುದು ನಿಶ್ಚಿತ ಎಂಬ ಮಾತು ಕೇಳಿ ಬರುತ್ತಿದೆ.ಅಂದ ಹಾಗೆ ಸೋಮವಾರ ಮಧ್ಯರಾತ್ರಿಯವರೆಗೂ ಸಚಿವರಾಗುವವರ ಪಟ್ಟಿಯಲ್ಲಿ ಹಿರಿಯ ನಾಯಕರಾದ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಮುರುಗೇಶ್ ನಿರಾಣಿ, ದತ್ತಾತ್ರೇಯ ಪಾಟೀಲ್ ರೇವೂ ಹಾಗೂ ಅಂಗಾರ ಅವರ ಹೆಸರುಗಳಿದ್ದವು.

   ಅದರೆ ಮರುದಿನ ಬೆಳಿಗ್ಗೆ ನೋಡುವಷ್ಟರಲ್ಲಿ ಬಸವರಾಜ ಬೊಮ್ಮಾಯಿ, ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ ಸೇರಿದಂತೆ ಬೇರೆಯವರ ಹೆಸರುಗಳು ಪಟ್ಟಿಗೆ ಸೇರ್ಪಡೆಯಾಗಿದ್ದವು.ಮೂಲಗಳ ಪ್ರಕಾರ, ತಮಗೆ ಆಪ್ತರಾಗಿದ್ದರೂ ಬಸವರಾಜ ಬೊಮ್ಮಾಯಿ ಅವರಿಗೆ ಸೂಚನೆ ನೀಡಿದ್ದ ಯಡಿಯೂರಪ್ಪ ಕೆಲ ದಿನಗಳ ಕಾಲ ಸಂಪುಟಕ್ಕೆ ಬರುವ ಕನಸು ಬೇಡ ಎಂದು ಹೇಳಿದ್ದರು. ಮತ್ತು ಅದನ್ನು ಬಸವರಾಜ ಬೊಮ್ಮಾಯಿ ಅವರೂ ಒಪ್ಪಿಕೊಂಡಿದ್ದರು.

    ಇದೇ ಕಾರಣಕ್ಕಾಗಿ ಸೋಮವಾರ ಡಾಲರ್ ಕಾಲೋನಿಯಲ್ಲಿರುವ ಯಡಿಯೂರಪ್ಪ ಅವರ ನಿವಾಸಕ್ಕೆ ಬಂದಾಗ ಟೀಶರ್ಟ್ ಹಾಕಿಕೊಂಡು ಬಂದಿದ್ದ ಬಸವರಾಜ ಬೊಮ್ಮಾಯಿ ತಮ್ಮ ಬಳಿ ಮಾತನಾಡಿದ ಮಾಧ್ಯಮದ ಕೆಲವರ ಬಳಿ ಈ ಬಾರಿ ನಾನು ಯಾವ ಕಾರಣಕ್ಕೂ ಮಂತ್ರಿಯಾಗುವುದಿಲ್ಲ ಎಂದು ಹೇಳಿದ್ದರು.

   ನಾನು ಮಂತ್ರಿಯಾಗುವುದಿಲ್ಲ ಎಂಬುದು ನಿಕ್ಕಿಯಾಗಿದೆ. ಇದು ನನಗೆ ನಿಕ್ಕಿಯಾಗದೆ ಹೋಗಿದ್ದರೆ ಹೀಗೆ ಬಿಂದಾಸ್ ಆಗಿ ಟೀಶರ್ಟ್ ಹಾಕಿಕೊಂಡು ಬರುತ್ತಿದ್ದೆನೇ? ಎಂದು ಅವರು ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದರು.ಆದರೆ ಇದ್ದಕ್ಕಿದ್ದಂತೆ ಮಧ್ಯೆ ಪ್ರವೇಶಿಸಿದ ಸಂತೋಷ್ ಅವರು, ಯಡಿಯೂರಪ್ಪ ಅವರು ಸಿಎಂ ಆಗುವಾಗ ನಿನಗೆ ಮಂತ್ರಿಗಿರಿ ಕೊಡುವುದಿಲ್ಲ ಎಂದರೇನು? ನಮ್ಮ ಪಟ್ಟಿಯಲ್ಲಿ ನೀವಿದ್ದೀರಿ ಎಂದು ಹೇಳಿದ್ದರೆನ್ನಲಾಗಿದೆ.

   ಹೀಗೆಯೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ ಕೂಡಾ ಇದೇ ಮಾದರಿಯಲ್ಲಿ ಸಚಿವ ಸಂಪುಟದ ಪಟ್ಟಿಗೆ ಸೇರ್ಪಡೆಯಾದರು ಎಂಬುದು ಉನ್ನತ ಮೂಲಗಳ ಹೇಳಿಕೆ.

    ಈ ಎಲ್ಲ ಅಂಶಗಳು ಯಡಿಯೂರಪ್ಪ ಗ್ಯಾಂಗಿನ ಆಕ್ರೋಶಕ್ಕೆ ಕಾರಣವಾಗಿದ್ದು, ನನ್ನ ಜಿಲ್ಲೆಯಲ್ಲಿ ಎಂಟು ಬಾರಿ ಗೆದ್ದು ಬಂದಿರುವ ನನ್ನ ಮುಂದೆ ಲಕ್ಷ್ಮಣ ಸವದಿ ಹಾಗೂ ಶಶಿಕಲಾ ಜೊಲ್ಲೆ ಅವರು ಸರ್ಕಾರಿ ಕಾರಿನಲ್ಲಿ ಬಂದಿಳಿದರೆ ನಾನು ಅವರ ಮುಂದೆ ಸಲಾಮು ಹೊಡೆದುಕೊಂಡಿರಬೇಕೇ? ಎಂಬುದು ಉಮೇಶ್ ಕತ್ತಿಯವರ ಸಿಟ್ಟಿನ ಮಾತು ಎಂದು ಅವರ ಆಪ್ತ ಮೂಲಗಳು ಹೇಳಿವೆ.

   ಇದೇ ರೀತಿ ಬಾಲಚಂದ್ರ ಜಾರಕಿಹೊಳಿ ಕೂಡಾ ಆಕ್ರೋಶಗೊಂಡಿದ್ದು ಮುರುಗೇಶ್ ನಿರಾಣಿ, ದತ್ತಾತ್ರೇಯ ಪಾಟೀಲ್ ರೇವೂರ್, ಅಂಗಾರ, ರಾಜುಗೌಡ, ಎಂ.ಪಿ.ರೇಣುಕಾಚಾರ್ಯ, ಜಿ.ಹೆಚ್.ತಿಪ್ಪಾರೆಡ್ಡಿ, ಅಪ್ಪಚ್ಚು ರಂಜನ್, ಮಾಡಾಳ್ ವಿರೂಪಾಕ್ಷಪ್ಪ, ಪೂರ್ಣಿಮಾ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಸುಮಾರು ಎರಡು ಡಜನ್‍ನಷ್ಟು ಮಂದಿ ಕೊತ ಕೊತ ಕುದಿಯುತ್ತಿದ್ದಾರೆ.

   ಮೂಲಗಳ ಪ್ರಕಾರ, ಇವರ ಪೈಕಿ ಬಹುತೇಕರನ್ನು ಸಮಾಧಾನಪಡಿಸಿ ಸಧ್ಯದ ಮಟ್ಟಿಗೆ ಸರ್ಕಾರ ಉಳಿಸಿಕೊಳ್ಳಬಹುದು. ಆದರೆ ಮುಂದಿನ ದಿನಗಳಲ್ಲಿ ಇದು ಪಕ್ಷವನ್ನು ಯಾವ ದು:ಸ್ಥಿತಿಗೆ ಕೊಂಡೊಯ್ಯುತ್ತದೆ ಎಂದು ಹೇಳುವುದು ಕಷ್ಟ.ಯಾಕೆಂದರೆ ಮಂತ್ರಿ ಪದವಿಗೆ ಬರುವ ನಿರೀಕ್ಷೆ ಇರಿಸಿಕೊಂಡು ಅದು ಸಿಗದೆ ನಿರಾಶರಾಗಿರುವವರ ಪೈಕಿ ಯಡಿಯೂರಪ್ಪ ಗ್ಯಾಂಗಿನವರು ಮಾತ್ರವಲ್ಲದೆ ಸಂಘಪರಿವಾರದ ಆಪ್ತ ಶಾಸಕರೂ ಇದ್ದಾರೆ.

    ಕಳೆದ ಬಾರಿ ಯಡಿಯೂರಪ್ಪ ಅವರನ್ನು ಆಕ್ರಮ ಗಣಿ ಪ್ರಕರಣಕ್ಕೆ ಸಂಬಂಧಿಸಿದ ವರದಿಯ ನೆಪದಲ್ಲಿ ಕೆಳಗಿಳಿಸಿದವರು ಈಗ ಮತ್ತೆ ಸಕ್ರಿಯರಾಗಿದ್ದು ಇದರ ಪರಿಣಾಮವಾಗಿ ಯಡಿಯೂರಪ್ಪ ಅವರು ಒಳ್ಳೆಯ ಸರ್ಕಾರ ಕೊಡುವುದು ಕಷ್ಟ.ಅದರ ಬದಲು ಸಂಘಪರಿವಾರದಿಂದ ಪ್ರೇರೇಪಿತರಾದ ಬಿಜೆಪಿ ವರಿಷ್ಟರು ರಾಜ್ಯ ಸರ್ಕಾರವನ್ನು ನಿಯಂತ್ರಿಸುತ್ತಾ ಹೋದರೆ ಜನರಿಗೆ ಬೇಕಾದ ಸರ್ಕಾರವನ್ನು ಕೊಡುವುದು ಯಡಿಯೂರಪ್ಪ ಅವರಿಗೆ ಕಷ್ಟವಾಗುತ್ತದೆ. ಹೀಗಾಗಿ ಮುಂದೇನು ಮಾಡಬೇಕು ಎಂಬ ಸಂಬಂಧ ಸಧ್ಯದಲ್ಲೇ ಸುದೀರ್ಘ ಚರ್ಚೆ ನಡೆಸುತ್ತೇವೆ. ಮುಂದಿನ ಹೆಜ್ಜೆ ಯಾವ ಕಡೆ ಎಂಬುದನ್ನು ನಿರ್ಧರಿಸುತ್ತೇವೆ ಎಂದು ಅತೃಪ್ತ ಶಾಸಕರೊಬ್ಬರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap