ಶಿರಾ
ಶಿರಾ ತಾಲ್ಲೂಕು ಅತ್ಯಂತ ಬರಪೀಡಿತವಾಗಿದ್ದು ಹಿಂಗಾರು ಹಾಗೂ ಮುಂಗಾರು ಮಳೆಯ ವೈಫಲ್ಯಗಳಿಂದ ರೈತಾಪಿ ವರ್ಗ ಬಸವಳಿದಿದೆ. ಈ ಭಾಗಕ್ಕೆ ಶಾಶ್ವತ ನೀರಾವರಿಗಾಗಿ ಸಂಘಟನಾತ್ಮಕ ಹೋರಾಟ ಅನಿವಾರ್ಯವಾಗಿದೆ ಎಂದು ಸಮಾಜ ಸೇವಕ ಡಾ.ಸಿ.ಎಂ.ರಾಜೇಶ್‍ಗೌಡ ತಿಳಿಸಿದರು.
ನಗರದ ತಹಸೀಲ್ದಾರ್ ಕಚೇರಿಯ ಮುಂದೆ ಕಳೆದ 7 ದಿನಗಳಿಂದಲೂ ಮದಲೂರು ಕೆರೆ ಹಾಗೂ ಇನ್ನಿತರ ಕೆರೆಗಳಿಗೆ ಹೇಮಾವತಿಯ ನೀರನ್ನು ಹರಿಸುವಂತೆ ಒತ್ತಾಯಿಸಿ ಹೇಮಾವತಿ ಹೋರಾಟ ಸಮಿತಿ ಮತ್ತು ಇತರ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕುರಿ ಸಾಕಾಣಿಕೆಯಲ್ಲಿ ಉತ್ತಮ ಆರ್ಥಿಕ ಸದೃಢತೆಯನ್ನು ಕಂಡಿದ್ದ ಶಿರಾ ಭಾಗದ ಕುರಿಗಾಹಿಗಳು ಮಳೆ-ಬೆಳೆ ಇಲ್ಲದೆ ಕುರಿಗಳನ್ನು ವಲಸೆಗೆ ಕರೆದೊಯ್ಯುವಂತಹ ಸ್ಥಿತಿ ನಿರ್ಮಾಣಗೊಂಡಿದೆ. 1200 ಅಡಿವರೆಗೆ ಭೂಮಿ ಕೊರೆದರೂ ನೀರು ಲಭ್ಯವಾಗದೆ ಅಂತರ್ಜಲ ಕುಸಿದಿದೆ. ಕೃಷಿ ಚಟುವಟಿಕೆ ನೆಲಕಚ್ಚಿದ್ದು, ನಿರುದ್ಯೋಗಿ ಯುವಕರು ಕೂಲಿಗಾಗಿ ಪಟ್ಟಣ ಸೇರುವಂತಾಗಿದೆ. ಸರ್ಕಾರ ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲೆ ಬೇಕು ಎಂದರು.
ಶಿರಾ ಭಾಗದ ಕೆರೆಗಳಿಗೆ ಹೇಮಾವತಿಯ ನೀರನ್ನು ಹರಿಸುವಂತೆ ಒತ್ತಾಯಿಸಿ ಕಳೆದ 7 ದಿನಗಳಿಂದಲೂ ಪ್ರತಿಭಟನೆ ನಡೆಯುತ್ತಿದೆ. ಇಂತಹ ಶಾಶ್ವತ ನೀರಾವರಿ ಹೋರಾಟಕ್ಕಾಗಿ ನಂಜಾವ ಧೂತಶ್ರೀಗಳು ತಮ್ಮ ಹುಟ್ಟು ಹಬ್ಬವನ್ನು ಕಳೆದ 20 ವರ್ಷಗಳಿಂದಲೂ ಆಚರಿಸದೆ ಈ ಹುಟ್ಟು ಹಬ್ಬವನ್ನು ನೀರಾವರಿ ಹಕ್ಕೊತ್ತಾಯ ಸಮಾವೇಶವನ್ನಾಗಿ ಆಚರಿಸಿಕೊಂಡು ಬಂದಿದ್ದಾರೆ ಎಂದ ಅವರು, ಡಿ.4 ರಂದು ಶಿರಾದಲ್ಲಿ ನಡೆಯುವ ಪ್ರತಿಭಟನೆಯ ಕಾಲ್ನಡಿಗೆ ಜಾಥಾದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಹೇಮಾವತಿ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ಬಿ.ರಮೇಶ್, ಜಯರಾಮಯ್ಯ, ಆರ್.ವಿ.ಪುಟ್ಟಕಾಮಣ್ಣ, ರೈತ ಸಂಘದ ಪರಮಶಿವಯ್ಯ, ನಾದೂರು ಕೆಂಚಪ್ಪ, ಲಕ್ಷ್ಮಣಗೌಡ, ರೇಣುಕಮ್ಮ, ಪ್ರಕಾಶ್‍ಗೌಡ, ಸತೀಶ್, ಲಿಂಗಣ್ಣ, ಕರವೇ ಸಂಘಟನೆಯ ದಾದು ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ