ದೇವಾಲಯಗಳ ಭ್ರಮೆಯಿಂದ ಹೊರ ಬನ್ನಿ.!

ದಾವಣಗೆರೆ:

    ನಾವು ಹಿರಿಯರಿಗೆ ಎಷ್ಟೇ ಹೇಳಿದರೂ ಬದಲಾಗುವುದಿಲ್ಲ. ಭವಿಷ್ಯತ್ತಿನ ಪ್ರಜೆಗಳಾಗಿರುವ ನೀವಾದರೂ (ಮಕ್ಕಳಾದರೂ) ದೇವಾಲಯದ ಭ್ರಮೆಯಿಂದ ಹೊರ ಬರಬೇಕೆಂದು ಸಾಣೇಹಳ್ಳಿಯ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

    ನಗರದ ಹದಡಿ ರಸ್ತೆಯಲ್ಲಿರುವ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಗುರುವಾರ ರಾಜ್ಯಾದ್ಯಂತ ನಡೆಯುತ್ತಿರುವ ಮತ್ತೆ ಕಲ್ಯಾಣ ಆಂದೋಲನದ ಪ್ರಯುಕ್ತ ಸಹಮತ ವೇದಿಕೆಯಿಂದ ವಿದ್ಯಾರ್ಥಿಗಳೊಂದಿಗೆ ಏರ್ಪಡಿಸಿದ್ದ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯೊಬ್ಬರು ಎತ್ತಿದ್ದ ದೇವರು ವರ, ಶಾಪ ಕೊಡುತ್ತಾನೆಂಬ ನಂಬಿಕೆ ಇದೆ. ಅದು ನಿಜವೇ? ಎಂಬ ಪ್ರಶ್ನೆಗೆ ಸಾಣೇಹಳ್ಳಿ ಶ್ರೀಗಳು ಪ್ರತಿಕ್ರಯಿಸಿ, ಬಸವಣ್ಣನವರು ದೇವರನ್ನು ವಿರೋಧಿಸಲಿಲ್ಲ. ಆದರೆ, ದೇವಾಲಯ ಸಂಸ್ಕøತಿಯನ್ನು ಮಾತ್ರ ವಿರೋಧಿಸಿದ್ದರು ಎಂದು ಸ್ಪಷ್ಟಪಡಿಸಿದರು.

    ದೇವಾಲಯವನ್ನು ಕಟ್ಟಿ ಅದರೊಳಗೆ ದೇವರ ಮೂರ್ತಿ ಸ್ಥಾಪಿಸಿ, ದೇವರು ವರ ಕೊಡುತ್ತಾನೆ, ಶಾಪ ಕೊಡುತ್ತಾನೆಂಬ ನಂಬಿಕೆ ಹುಟ್ಟು ಹಾಕಿ, ಪುರೋಹಿತಶಾಹಿಗಳು ಜನರ ಶೋಷಣೆಗೆ ಮುಂದಾಗಿದ್ದರು. ಹೀಗಾಗಿಯೇ 12ನೇ ಶತಮಾನದಲ್ಲಿ ಬಸವಣ್ಣ ದೇಹವೇ ದೇಗುಲವೆಂದು ಸಾರಿ, ಇಷ್ಟಲಿಂಗ ಪೂಜೆಯನ್ನು ಅಸ್ತಿತ್ವಕ್ಕೆ ತಂದರು. ಆದರೆ, ಬಸವಾನುಯಾಯಿ ಎನ್ನುವವರೇ ಇಂದು ದೇಗುಲ ಕಟ್ಟಿ, ಪೂಜಾರಿ ಇಡುತ್ತಾರೆ. ಆ ಪೂಜಾರಿ ಎಷ್ಟು ದಿನದಲ್ಲಿ ಬದಲಾಗಿ ಏನು ಮಾಡುತ್ತಾನೆಂಬುದು ಎಲ್ಲರಿಗೂ ಗೊತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.

   ನಾವು ಎಷ್ಟೇ ಹೇಳಿದರೂ ಹಿರಿಯರು ಬದಲಾಗುವುದಿಲ್ಲ. ಭವಿಷ್ಯದ ಪ್ರಜೆಗಳಾದ ಮಕ್ಕಳು ದೇವಾಲಯದ ಭ್ರಮೆಯಿಂದ ಹೊರ ಬನ್ನಿ. ನೀವು ಓದದೇ ದೇವರು ಪರೀಕ್ಷೆಯಲ್ಲಿ ಪಾಸ್ ಮಾಡಿಸುವುದಿಲ್ಲ. ಕಷ್ಟಪಟ್ಟು ದುಡಿಯದೇ ಸಂಬಳ, ಸಂಪತ್ತು ಕಾಣುವುದಕ್ಕೂ ಸಾಧ್ಯವಿಲ್ಲ ಎಂದರು.
ಇದಕ್ಕೆ ಸಹಮತ ವ್ಯಕ್ತಪಡಿಸಿದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ದಾದಾಪೀರ್ ನವಿಲೇಹಾಳ್, ಉತ್ತರ ಕರ್ನಾಟಕದಲ್ಲಿ ಪ್ರವಾಹದ ವೇಳೆ ವ್ಯಕ್ತಿಯೊಬ್ಬ ತಾನು ನೀರಲ್ಲಿ ಮುಳುಗಿ, ದೇವರ ಫೋಟೋಗಳನ್ನು ಕೈಯಲ್ಲಿಡಿದು ಹೊರಟಿದ್ದ. ಇಲ್ಲಿ ಯಾರು ಯಾರನ್ನು ಕಾಪಾಡುತ್ತಿದ್ದಾರೆಂಬುದಷ್ಟೇ ಪ್ರಶ್ನೆ ಎಂದರು.

     ಕೋಮು ಗಲಭೆಗಳು ನಡೆಯುತ್ತಲೇ ಇರುತ್ತವೆ. ನಾವು ಸುಮ್ಮನಿದ್ದರೂ ನಮ್ಮವರ ಮೇಲೆಯೇ ದಾಳಿ, ದೌರ್ಜನ್ಯಗಳು ನಡೆಯುತ್ತವೆ. ಮತ್ತೊಂದು ಕೋಮಿನವರು ಒಗ್ಗಟ್ಟಿನಿಂದ ನಮ್ಮವರ ಮೇಲೆ ಹಲ್ಲೆ, ದೌರ್ಜನ್ಯ ಮಾಡುತ್ತಾರೆ. ಈ ಪರಿಸ್ಥಿತಿಯಲ್ಲಿ ನಾವು ಏನು ಮಾಡಬೇಕೆಂಬ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಸ್ವಾಮೀಜಿ, ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರು ಸಮಾನತೆ, ಸಹೋದರತ್ವ, ಜಾತ್ಯತೀತ ಸಮಾಜದ ಸಂದೇಶವನ್ನೇ ಸಾರಿದ್ದಾರೆ. ಸಾಹಿತ್ಯವೂ ಇದನ್ನೇ ಹೇಳಿದ್ದರೆ, ಸಂವಿಧಾನವೂ ಇದೇ ಸಂದೇಶ ನೀಡುತ್ತದೆ. ಕೋಮು ಗಲಭೆಯಲ್ಲಿ ನಾವೂ ಭಾಗಿಯಾಗುವ ಬದಲಿಗೆ, ಅದನ್ನು ತಡೆಯುವ ನಿಟ್ಟಿನಲ್ಲಿ ಪ್ರಯತ್ನಶೀಲರಾಗಬೇಕೆಂದು ಸಲಹೆ ನೀಡಿದರು.

     ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು, ಆದರೆ, ಸಮಾಜದಲ್ಲಿ ಮೇಲುಕೀಳೆಂಬ ತಾರತಮ್ಯ ಏಕೆ? ಎಂಬ ವಿದ್ಯಾರ್ಥಿನಿ ಬಿ.ಶರ್ಮಿಳಾ ಪ್ರಶ್ನೆಗೆ ಉತ್ತರಿಸಿದ ಡಾ.ದಾದಾಪೀರ್ ನವಿಲೇಹಾಳ್, ತರತಮ, ಮೇಲು-ಕೀಳು ಇವ್ಯಾವೂ ಸಹ ದೇವರ ಸೃಷ್ಟಿಯಲ್ಲ. ಮನುಷ್ಯ ಸೃಷ್ಟಿ. ಪ್ರಬಲರು, ಉಳಿದವರನ್ನು ಅಡಿಯಾಳುಗಳನ್ನಾಗಿ ಮಾಡಿಕೊಂಡಿರುವ ಸೃಷ್ಟಿಗಳು ಇವು. ಆದರೆ, ಹೃದಯ ಪರಿವರ್ತನೆಯ ಮೂಲಕ ಈ ಎಲ್ಲರ ತರತಮಗಳನ್ನು ಮೀರಬಹುದಾಗಿದೆ. ಹಾಗೆಯೇ ಎಲ್ಲರೂ ಕಾಯಕವನ್ನು ಮಾಡಿ ಶ್ರೇಷ್ಠತೆಯನ್ನು ಪಡೆಯಬಹುದಾಗಿದೆ ಎಂದರು.

     ವಿದ್ಯಾರ್ಥಿ ಆಶಾ ಎಂಬುವರ ಉದ್ಯೋಗ ಮತ್ತು ಕಾಯಕದ ನಡುವೆ ಇರುವ ವ್ಯತ್ಯಾಸವೇನು? ಪ್ರಶ್ನೆಗೆ ಉತ್ತರಿಸಿದ ಶ್ರೀಪಂಡಿತಾರಾಧ್ಯ ಶ್ರೀಗಳು, ಉದ್ಯೋಗ ಹಾಗೂ ಕಾಯಕ ಎರಡೂ ಜೀವನಕ್ಕೆ ಆಧಾರವಾಗಿರುವುದಾಗಿದೆ. ಆದರೆ, ಉದ್ಯೋಗದಲ್ಲಿ ಮೋಸ, ವಂಚನೆ ಇರಬಹುದು. ಆದರೆ, ಕಾಯಕದಲ್ಲಿ ಇವ್ಯಾವೂ ಇಲ್ಲ. ಹೀಗಾಗಿ ಇವರೆಡರ ಮಧ್ಯೆ ಅಜಗಜಾಂತರ ವ್ಯತ್ಯಾಸವಿದೆ ಎಂದು ನುಡಿದರು.

    ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು ಮಾತನಾಡಿ, ಪ್ರಶ್ನೆಸುವ ಸ್ವಾತಂತ್ರ್ಯ ಹೆಣ್ಣು ಮಕ್ಕಳಿಗೂ ಸಿಕ್ಕಿದೆಯೆಂದರೆ ಅದು ಬದಲಾವಣೆಯ ಮೊದಲ ಹೆಜ್ಜೆ. ಗಂಡು ಮಗ ರಾತ್ರಿ ಎಷ್ಟೇ ಹೊತ್ತಿಗೆ ಮನೆಗೆ ಬಂದರೂ ಕೇಳದ ಹೆತ್ತವರು ಮಗಳು ಸಂಜೆ 6ರ ನಂತರ ತಡವಾಗಿ ಬಂದರೆ ಪ್ರಶ್ನಿಸುತ್ತಾರೆ. ದೈಹಿಕವಾಗಿ ಗಂಡು-ಹೆಣ್ಣೆಂದು ಗುರುತಿಸಬಾರದು. ನಮ್ಮೊಳಗಿನ ಚೇತನಕ್ಕೆ ಗಂಡು-ಹೆಣ್ಣೆಂಬ ಲಿಂಗವೇ ಇಲ್ಲ. ಮೊದಲು ಲಿಂಗ ತಾರತಮ್ಯವನ್ನು ತೊಡೆದು ಹಾಕುವ ಕೆಲಸ ಪ್ರತಿಯೊಂದು ಮನೆ, ಮನಗಳಿಂದಲೂ ಆಗಬೇಕು ಎಂದು ಅವರು ತಿಳಿಸಿದರು.

     ಪ್ರಶಿಕ್ಷಣಾರ್ಥಿ ಪೂರ್ಣಿಮಾ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೋಧಕಿ ಅರುಣಕುಮಾರಿ ಬಿರಾದಾರ್, ಒಲೆ ಬದಲಾದರೂ ಅದರ ಉರಿ ಬದಲಾಗುವುದಿಲ್ಲ. ಇಂದಿಗೂ ಸಮಾಜದಲ್ಲಿ ಬದಲಾವಣೆಗಾಗಿ ಹೋರಾಟ ನಿರಂತರ ನಡೆದುಕೊಂಡೇ ಬರುತ್ತಿದೆ. ಪರ ದೇವಿಯು ಮಹಾದೇವಿ ಆದಾಗ ನಮ್ಮ ಸಮಾಜದಲ್ಲಿ ಸಮಾನತೆ ಮೂಡಲು ಸಾಧ್ಯವಿದೆ. ಪುರುಷರು ತನ್ನ ಸುತ್ತಮುತ್ತಲಿರುವ ಹೆಣ್ಣುಮಕ್ಕಳು ಸಹೋದರಿಯರು ಎಂಬ ಭಾವನೆ ಹೊಂದಿದರೆ ಮಾತ್ರ ಆಧುನಿಕ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಮಹಿಳಾ ದೌರ್ಜನ್ಯ, ಅತ್ಯಾಚಾರ ತಡೆಯಲು ಸಾಧ್ಯ ಎಂದರು.ಮತ್ತೊಬ್ಬ ವಿದ್ಯಾರ್ಥಿ ಜಾತಿ ಆದಾರದಲ್ಲಿ ಶಾಲೆ, ಕಾಲೇಜಿನಲ್ಲಿ ಸೌಲಭ್ಯ ನೀಡುವ ಸರ್ಕಾರದ ಧೋರಣೆ ಪ್ರಶ್ನಿಸಿದಾಗ ಸಾಣೇಹಳ್ಳಿ ಶ್ರೀಗಳು ಮಾತನಾಡಿ, ಒಂದು ಕುಟುಂಬದ ನಾಲ್ವರಲ್ಲಿ ಶಕ್ತಿ ಹೀನನಾದ ಮಗನ ಮೇಲೆ ತಾಯಿ ಅಕ್ಕರೆ ಹೆಚ್ಚು. ಅದೇ ರೀತಿ ಸರ್ಕಾರ ಮಾಡಿದೆಯಷ್ಟೇ ಎಂದರು.

    ರಾಜ್ಯಸಭೆ ಮಾಜಿ ಸದಸ್ಯ ಕೆ.ಆರ್.ಜಯದೇವಪ್ಪ, ಸಹಮತ ವೇದಿಕೆ ಗೌರವಾಧ್ಯಕ್ಷ, ಹಿರಿಯ ಕಾರ್ಮಿಕ ಮುಖಂಡ ಎಚ್.ಕೆ.ರಾಮಚಂದ್ರಪ್ಪ ವೇದಿಕೆಯಲ್ಲಿದ್ದರು.ಸಂವಾದದಲ್ಲಿ ಭಾಗವಹಿಸಿದ್ದ ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿಗಳು, ಬಿಇಡಿ ಕಾಲೇಜು ವಿದ್ಯಾರ್ಥಿಗಳು ಹಲವು ಪ್ರಶ್ನೆಗಳನ್ನು ಕೇಳಿದರು

    ಸಹಮತ ವೇದಿಕೆ ಅಧ್ಯಕ್ಷ ಡಾ.ಎಚ್.ಎಸ್.ಮಂಜುನಾಥ ಕುರ್ಕಿ, ಎ.ಆರ್.ಉಜ್ಜಿನಪ್ಪ, ದೇವರಮನೆ ಶಿವಕುಮಾರ, ಡಿ.ಬಸವರಾಜ, ಎಚ್.ಕೆ.ಬಸವರಾಜ, ಡಿ.ಬಸವರಾಜ, ಕೆ.ಸಿರಾಜ್ ಅಹ್ಮದ್ ಸಂತೇಬೆನ್ನೂರು, ಹನುಮಂತ ನಾಯ್ಕ, ಕೆ.ಎಸ್.ಬಸವಂತಪ್ಪ, ಎಂ.ಶಿವಕುಮಾರ, ನಾಗರಾಜ ಲೋಕಿಕೆರೆ, ಮಹಾಂತೇಶ ಅಂಗಡಿ, ಬಸವರಾಜ ಶಿವಗಂಗಾ, ಶಶಿಧರ ಹೆಮ್ಮನಬೇತೂರು, ಬಿ.ಕೆ.ಪರಶುರಾಮ ಮಾಗಾನಹಳ್ಳಿ, ಜಿಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ ಮಹೇಶ, ಎಚ್.ಸಿ.ಜಯಮ್ಮ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap