ಚನ್ನಪಟ್ಟಣ
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರದು ಬಡವರ ಮಕ್ಕಳನ್ನು ಬಾವಿಗೆ ತಳ್ಳಿ, ಆಳ ನೋಡುವ ಜಾಯಮಾನ. ಅಂಥ ನಾಯಕನನ್ನು ನಂಬಿ, ಬದುಕು ಮತ್ತು ಭವಿಷ್ಯ ಹಾಳು ಮಾಡಿಕೊಳ್ಳುವ ಬದಲು ಜೆಡಿಎಸ್ ಇಲ್ಲವೇ ಕಾಂಗ್ರೆಸ್ ಸೇರ್ಪಡೆಗೊಳ್ಳುವಂತೆ ಚನ್ನಪಟ್ಟಣದ ಬಿಜೆಪಿ ಕಾರ್ಯಕರ್ತರಿಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆಹ್ವಾನ ನೀಡಿದರು.
ಚನ್ನಪಟ್ಟಣದಲ್ಲಿ ಶನಿವಾರ ನಡೆದ 745 ಕೋಟಿ ರು. ವೆಚ್ಚದ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಬಿಜೆಪಿಗೆ ಹೋಗಿ ಅನೇಕರು ಮೋಸ ಹೋಗಿದ್ದಾರೆ. ಯಾರನ್ನೋ ಬದುಕಿಸಲು ಶ್ರಮಪಡುವ ಬದಲು ನಿಮ್ಮ ಬದುಕು, ಭವಿಷ್ಯವನ್ನು ರೂಪಿಸಿಕೊಳ್ಳಲು ಪಕ್ಷಾಂತರ ಮಾಡಬೇಕು ಎಂದರು.
ಬಿಜೆಪಿಗೆ ಹೋಗಿದ್ದವರಿಗೆ ತಮ್ಮ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮನೆ ಬಾಗಿಲು ಸದಾ ತೆರೆದಿರುತ್ತದೆ. ಬಿಜೆಪಿ ತೊರೆದು, ಜೆಡಿಎಸ್ ಅಥವಾ ಕಾಂಗ್ರೆಸ್ ಪೈಕಿ ಯಾವುದಾದರೂ ಪಕ್ಷ ಸೇರ್ಪಡೆಗೊಳ್ಳಬೇಕು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಂಸದ ಡಿ.ಕೆ.ಸುರೇಶ್ ಪರ ಕೆಲಸ ಮಾಡಬೇಕು ಎಂದು ಶಿವಕುಮಾರ್ ಕರೆ ನೀಡಿದರು.
ರಾಜ್ಯದಲ್ಲಿರುವ ಸಮ್ಮಿಶ್ರ ಸರಕಾರವನ್ನು ಕೆಡವಿ, ನಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಮಾಜಿ ಸಚಿವ ಯೋಗೇಶ್ವರ್ ನಡೆಸಿದ ಸಂಚು ಫಲಿಸಲಿಲ್ಲ. ರಾಮನಗರ ಉಪ ಚುನಾವಣೆಯಲ್ಲಿ ಒಬ್ಬ ಗಂಡನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬಂದು, ಅರ್ಜಿ ಹಾಕಿಸಿದರು. ಆದರೆ, ಆ ಗಂಡು ತಾನು ಮೋಸ ಹೋಗಿದ್ದನ್ನು ಮನಗಂಡು ನಮ್ಮ ಬಳಿ ವಾಪಸ್ಸಾದ ಎಂದು ಅವರು ವ್ಯಂಗ್ಯವಾಡಿದರು.
ನಾವು ರೆಡಿಮೇಡ್ ಗಂಡುಗಳು:
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ನಾನು, ನನ್ನ ತಮ್ಮ ಡಿ.ಕೆ.ಸುರೇಶ್ ರೆಡಿಮೇಡ್ ಗಂಡುಗಳು. ನಮ್ಮನ್ನು ಸೋಲಿಸಲು ಆಗದು. ಹಾಲು ಕುಡಿದ ಮಕ್ಕಳೇ ಬದುಕೋದಿಲ್ಲ. ಇನ್ನು, ವಿಷ ಕುಡಿದ ಮಕ್ಕಳು ಬದುಕುತ್ತಾವಾ ಎನ್ನುವ ನಾಣ್ಣುಡಿಯೊಂದಿಗೆ ಶಿವಕುಮಾರ್ ಅವರು ತಮ್ಮ ರಾಜಕೀಯ ಕಡುವೈರಿ ಯೋಗೇಶ್ವರ್ ಅವರನ್ನು ತಮ್ಮ ಭಾಷಣದುದ್ದಕ್ಕೂ ಕುಟುಕಿದರು.
ರಾಜ್ಯದಲ್ಲಿ ಜಾತ್ಯತೀತ ತತ್ವ, ಸಿದ್ಧಾಂತರದ ಮೇಲೆ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರಕಾರಕ್ಕೆ ಕೆಲಸ ಮಾಡಲು ಕನಿಷ್ಠ 1 ವರ್ಷದ ಅವಕಾಶವ ನೀಡುವಷ್ಟೂ ತಾಳ್ಮೆ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಇಲ್ಲ. ಸರಕಾರ ಕೆಡವಲು ಯಡಿಯೂರಪ್ಪ ಜತೆ ಯೋಗೇಶ್ವರ್ ಇನ್ನಿಲ್ಲದ ಕಸರತ್ತು, ಮಸಲತ್ತು ನಡೆಸಿದರು. ಅದ್ಯಾವುದೂ ಕೈಗೂಡಲಿಲ್ಲ. ಮುಂದೆಯೂ ಕೈಗೂಡುವುದಿಲ್ಲ ಎಂದು ಶಿವಕುಮಾರ್ ಗೇಲಿ ಮಾಡಿದರು.
ಮನೆ ಬಾಗಿಲಿಗೆ ಭಾಗ್ಯಲಕ್ಷ್ಮಿ:
ಭಾಗ್ಯಲಕ್ಷ್ಮಿ ಮನೆ ಬಾಗಿಲಿಗೆ ಬಂದಿದ್ದಾಳೆ. ಕುಮಾರಸ್ವಾಮಿ ಅವರು ತಮ್ಮನ್ನು ಗೆಲ್ಲಿಸಿದ ಜನತೆಯ ಋಣ ತೀರಿಸಲು ಚನ್ನಪಟ್ಟಣವನ್ನು ಅಭಿವೃದ್ಧಿಯ ನಾಗಾಲೋಟದಲ್ಲಿ ಕೊಂಡೊಯ್ಯುತ್ತಿದ್ದಾರೆ. ಮತದಾರರ ನಿರೀಕ್ಷೆಗೂ ಮೀರಿ ಕೆಲಸ ಮಾಡಿರುವ ಸಂಸದ ಡಿ.ಕೆ.ಸುರೇಶ್ ಮತ್ತೊಮ್ಮೆ ಚುನಾವಣೆಗೆ ನಿಮ್ಮ ಮನೆ ಬಾಗಿಲಿಗೆ ಬರಲಿದ್ದು, ಅವರನ್ನು ಬಹುದೊಡ್ಡ ಅಂತರದಿಂದ ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರೈತರಿಗಾಗಿ ರೂಪಿಸುತ್ತಿರುವ ಕಾರ್ಯಕ್ರಮವನ್ನು ಇಡೀ ರಾಷ್ಟ್ರ ನೋಡುತ್ತಿದೆ. ಕೊಟ್ಟ ಮಾತಿನಂತೆ ಕುಮಾರಸ್ವಾಮಿ ಅವರು 45 ಸಾವಿರ ಕೋಟಿ ರು. ಬೆಳೆ ಸಾಲ ಮನ್ನಾ ಮಾಡಿದ್ದಾರೆ. ಬಿಜೆಪಿ ನಾಯಕರು ಕ್ಷುಲ್ಲಕ ರಾಜಕಾರಣ ಬಿಟ್ಟು, ಕೇಂದ್ರ ಸರಕಾರದಿಂದಲೂ ರೈತರ ಸಾಲ ಮನ್ನಾ ಮಾಡಿಸಲು ಪ್ರಯತ್ನಿಸಲಿ ಎಂದು ಅವರು ಸವಾಲ್ ಹಾಕಿದರು.
ಐತಿಹಾಸಿಕ ಕಾರ್ಯಕ್ರಮ:
ರಾಮನಗರ-ಚನ್ನಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸುವ ಸಂಬಂಧ 15 ವರ್ಷದಿಂದ ಪ್ರಯತ್ನ ನಡೆದಿತ್ತು. ಅದೃಷ್ಟಕ್ಕೆ ಕುಮಾರಸ್ವಾಮಿ ಅವರು ಚನ್ನಪಟ್ಟಣದಿಂದ ಗೆದ್ದು, ಮುಖ್ಯಮಂತ್ರಿ ಆಗಿದ್ದಾರೆ. ಇದೀಗ ಇಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಐತಿಹಾಸಿಕವಾಗಿದ್ದು, ಇಡೀ ಜಿಲ್ಲೆಯ ಕುಡಿಯುವ ನೀರಿನ ಬವಣೆ ನೀಗುವ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ ಎಂದು ಶಿವಕುಮಾರ್ ಪ್ರಶಂಸಿಸಿದರು.
ಅಧಿಕಾರದಲ್ಲಿ ಎಷ್ಟು ದಿನ ಇರುತ್ತೇವೆ ಎನ್ನುವುದು ಮುಖ್ಯವಲ್ಲ. ಸಿಕ್ಕ ಅವಧಿಯಲ್ಲಿ ಏನೇನು ಕೆಲಸ ಮಾಡಿದ್ದೇವೆ ಎನ್ನುವುದು ಮುಖ್ಯ. ಕುಮಾರಸ್ವಾಮಿ ಅವರು ಹಿಂದೆ 20 ತಿಂಗಳು ಸಿಎಂ ಆಗಿದ್ದಾಗ ರಾಮನಗರ ಜಿಲ್ಲೆ ರಚನೆ ಮಾಡಿದರು. ಇದೀಗ ಸ್ವಕ್ಷೇತ್ರ ಚನ್ನಪಟ್ಟಣದ ಜತೆಗೆ ಕರ್ಮಭೂಮಿ ರಾಮನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ. ಅವರೊಟ್ಟಿಗೆ ನಾನೂ ಕೈ ಜೋಡಿಸಿರುವೆ ಎಂದು ಅವರು ತಿಳಿಸಿದರು.
‘ಸೌಟು ನಮ್ಮ ಕೈಯಲ್ಲಿದೆ’
ಸೌಟು ಬಡಿಸೋನ ಕೈಯಲ್ಲಿದ್ದರೆ, ಯಾವ ಮೂಲೆಯಲ್ಲಿ ಕುಳಿತರೇನು ಎನ್ನುವ ನಾಣ್ಣುಡಿಯಿದೆ. ಅಂತೆಯೇ ಈಗ ರಾಜ್ಯದಲ್ಲಿ ಬಡಿಸುವ ಸೌಟು ಕುಮಾರಸ್ವಾಮಿ ಅವರ ಕೈಯಲ್ಲಿದೆ. ಈ ಜಿಲ್ಲೆಗೆ ಎಷ್ಟು ಬೇಕೋ ಅಷ್ಟು ಬಡಿಸಲು ಅವರು ಸಿದ್ಧರಿದ್ದಾರೆ. ಬಜೆಟ್‍ನಲ್ಲಿ ರಾಮನಗರ ಜಿಲ್ಲೆಗೆ ಯೋಜನೆ ಘೋಷಿಸಿ, ಅನುದಾನ ಮೀಸಲಿಡುವ ಮೂಲಕ ಡಂಗೂರ ಹೊಡೆಯಬೇಕಿಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಬಜೆಟ್‍ನಲ್ಲಿ ಯೋಜನೆ ಘೋಷಿಸಿದರೆ ರಾಮನಗರ ಜಿಲ್ಲೆಗೆ ಸಿಂಹಪಾಲು ಕೊಟ್ಟರೆಂದು ಪ್ರತಿಪಕ್ಷದವರು ಮತ್ತು ಮಾಧ್ಯಮದವರು ಬೊಬ್ಬೆ ಹೊಡೆಯುತ್ತಿದ್ದರು. ಅದರ ಬದಲು ಆಯಾ ಕಾಲಕ್ಕೆ ಅಗತ್ಯವಾದ ಯೋಜನೆ ಮತ್ತು ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿ, ಅನುಷ್ಠಾನಗೊಳಿಸುವುದು ನಮ್ಮ ಮುಖ್ಯಮಂತ್ರಿ ಅವರ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
‘ನಮ್ಮತ್ರನೂ ಸಾಕಷ್ಟು ವಿದ್ಯೆಯಿದೆ’
ಬಿಜೆಪಿಯವರು ಆಪರೇಷನ್ ಕಮಲ ಕಾರ್ಯಾಚರಣೆ ಮೂಲಕ ಸರಕಾರವನ್ನು ಅಸ್ಥಿರಗೊಳಿಸಲು ಷಡ್ಯಂತ್ರ ರೂಪಿಸುತ್ತಲೇ ಇದ್ದಾರೆ. ನಮ್ಮ ಬಳಿ ಅವರಿಗಿಂತಲೂ ಜಾಸ್ತಿ ವಿದ್ಯೆಯಿದೆ. ಆದರೆ, ಅವರಂತೆ ನಾವು ಬಳಸುವುದಕ್ಕೆ ಹೋಗುವವರಲ್ಲ. ಅಧಿಕಾರದಲ್ಲಿ ಇರುವವರಿಗೆ ಸಾಕಷ್ಟು ಶಕ್ತಿಯೂ ಇರುತ್ತದೆ. ಅಗತ್ಯ ಬಿದ್ದರೆ ಬಳಸುವುದಕ್ಕೂ ಗೊತ್ತಿದೆ ಎನ್ನುವುದನ್ನು ಬಿಜೆಪಿ ನಾಯಕರು ಮನಗಾಣಬೇಕು ಎಂದು ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.