ತುಮಕೂರು
ತುಮಕೂರು ನಗರದ ಪ್ರತಿಷ್ಠಿತ ವೃತ್ತಗಳಲ್ಲೊಂದಾದ ಶ್ರೀ ಶಿವಕುಮಾರ ಸ್ವಾಮೀಜಿ (ಎಸ್.ಎಸ್.) ವೃತ್ತದಲ್ಲಿರುವ ಖಾಲಿ ಜಾಗದಲ್ಲಿ ಉದ್ಯಾನವನವನ್ನು ಅಭಿವೃದ್ಧಿಪಡಿಸಿ, ಅಲ್ಲಿ ಶ್ರೀಗಳ ಪುತ್ಥಳಿ ನಿರ್ಮಿಸಲು ಈಗಾಗಲೇ ತೀರ್ಮಾನ ಕೈಗೊಂಡಿದ್ದು, ಈ ಸಂಬಂಧ ಸದರಿ ಸ್ಥಳದಲ್ಲಿರುವ ಖಾಸಗಿ ಜಾಗದ ಮಾಲೀಕರ ಜೊತೆ ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಅವರು ಮಂಗಳವಾರ ಸುದೀರ್ಘ ಚರ್ಚೆ ನಡೆಸಿದರು.
ಆಯುಕ್ತರ ಕೊಠಡಿಯಲ್ಲೇ ನಡೆದ ಈ ಪ್ರಾಥಮಿಕ ಹಂತದ ಚರ್ಚೆಯಲ್ಲಿ ಈ ಭಾಗದ ಪಾಲಿಕೆ ಸದಸ್ಯ ಇನಾಯತ್ ಉಲ್ಲಾಖಾನ್ (16ನೇ ವಾರ್ಡ್- ಕೆ.ಆರ್.ಬಡಾವಣೆ-ಕಾಂಗ್ರೆಸ್) ಸಹ ಭಾಗವಹಿಸಿದ್ದರು. ಆಸ್ತಿದಾರರ ಪರವಾಗಿ ಆಗಮಿಸಿದ್ದ ಮದನ್ ಅವರು ತಮ್ಮ ನಿಲುವನ್ನು ಮಂಡಿಸಿದರು.
ಎಸ್.ಎಸ್.ವೃತ್ತದ ನಿಗದಿತ ಖಾಲಿ ಜಾಗದಲ್ಲಿ ಖಾಸಗಿಯವರಿಗೆ ಸೇರಿದ ಜಾಗವೂ ಇದೆ. ಜೊತೆಗೆ ಮಹಾನಗರ ಪಾಲಿಕೆಗೆ ಸೇರಿದ ಜಾಗವೂ ಇದೆ. ವೃತ್ತದ ಕಡೆಗೆ ಮೊದಲ ಭಾಗದಲ್ಲಿ ಖಾಸಗಿ ಜಾಗವೂ, ಕೊನೆಯಲ್ಲಿ ಪಾಲಿಕೆ ಜಾಗವೂ ಇದೆ. ಈ ಜಾಗವನ್ನು ಪರಸ್ಪರ ಅದಲು ಬದಲು ಮಾಡಿಕೊಂಡು ವೃತ್ತಕ್ಕೆ ಹೊಂದಿಕೊಂಡಂತೆ ಇರುವ ಜಾಗದಲ್ಲಿ ಉದ್ಯಾನವನ್ನು ಆಕರ್ಷಕವಾಗಿ ಅಭಿವೃದ್ಧಿಪಡಿಸಿ, ಅಲ್ಲಿ ಶ್ರೀಗಳ ಪುತ್ಥಳಿ ನಿರ್ಮಿಸಬೇಕೆಂಬುದು ಪಾಲಿಕೆಯ ಉದ್ದೇಶವಾಗಿದೆ.
ಈ ವೃತ್ತವು ತುಮಕೂರು ನಗರದ ಪ್ರವೇಶದ್ವಾರದಂತಿರುವ ಕಾರಣ ಈ ವೃತ್ತವನ್ನು ಪುತ್ಥಳಿಯೊಂದಿಗೆ ಅತ್ಯಾಕರ್ಷಗೊಳಿಸ ಬೇಕೆಂಬುದು ಪಾಲಿಕೆ ಸದಸ್ಯ ಇನಾಯತ್ ಉಲ್ಲಾಖಾನ್ ಅವರ ಆಶಯವಾಗಿದೆ.
ಈ ಹಿನ್ನೆಲೆಯಲ್ಲಿ ಆಯುಕ್ತರು ಸದರಿ ಖಾಸಗಿ ಜಾಗದ ಆಸ್ತಿದಾರ ಮದನ್ ಅವರ ಜೊತೆ ಸುಮಾರು 2 ಗಂಟೆಗಳ ಕಾಲ ಚರ್ಚಿಸಿದರು. ಈ ಜಾಗದ ಬಗ್ಗೆ ಇರುವ ನ್ಯಾಯಾಲಯದ ದಾವೆಗಳು, ಹಿಂದಿನ ನಗರ ಸಭೆಯ ಆಯುಕ್ತರು ಆಸ್ತಿದಾರರ ಜೊತೆ ಸಂಧಾನ ಮಾಡಿಕೊಂಡಿದ್ದುದು, 13 ಗುಂಟೆ ಜಾಗವನ್ನು ಖಾಸಗಿ ಆಸ್ತಿದಾರರಿಗೆ ಬದಲಿಯಾಗಿ ನೀಡುವುದು ಇತ್ಯಾದಿ ಹಳೆಯ ವಿಷಯಗಳನ್ನು ಆಸ್ತಿದಾರರು ವಿವರಿಸಿ, ಈ ಹಿಂದಿನ ಸಭಾ ನಿರ್ಣಯದ ಪ್ರಕಾರ ತಮಗೆ 13 ಗುಂಟೆ ಜಾಗವನ್ನು ಕಾನೂನುಬದ್ಧವಾಗಿ ನೀಡಿದರೆ, ವೃತ್ತದ ಮೊದಲ ಭಾಗದ ಜಾಗವನ್ನು ಬಿಟ್ಟುಕೊಡುವುದಾಗಿ ಸ್ಪಷ್ಟಪಡಿಸಿದರು.
ಪಾಲಿಕೆಯ ಕಂದಾಯ ಶಾಖೆಯ ಅಧಿಕಾರಿಗಳು ವಿವಿಧ ದಾಖಲಾತಿಗಳನ್ನು ಮುಂದಿಡುತ್ತ, ಇಲ್ಲಿ 13 ಗುಂಟೆ ಜಾಗ ನೀಡಲು ಸಾಧ್ಯವೇ ಆಗುವುದಿಲ್ಲ ಎಂದು ವಾದಿಸಿದರು. ಪಾಲಿಕೆ ಸದಸ್ಯ ಇನಾಯತ್ ಉಲ್ಲಾಖಾನ್ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಆಸ್ತಿದಾರರು ಈ ವಾದವನ್ನು ತಳ್ಳಿಹಾಕಿದರು. ತಮ್ಮ ಬಳಿಯೂ ಎಲ್ಲ ದಾಖಲೆಗಳೂ ಇದ್ದು, ಎಲ್ಲವನ್ನೂ ಹಾಜರುಪಡಿಸಲು ಸಿದ್ಧರಿದ್ದೇವೆ.
ಆದರೆ ನಾವು ಕೇಳುತ್ತಿರುವುದು ಹಿಂದಿನ ಸಭಾ ನಡವಳಿ ಪ್ರಕಾರ ತೀರ್ಮಾನ ಕೈಗೊಳ್ಳಿ ಎಂದಷ್ಟೇ. ಇಲ್ಲೇ ಇರುವ ಹದ್ದಿನಗಿಡದ ಜಾಗವು ಕಂದಾಯ ಇಲಾಖೆಯ ಸ್ವತ್ತಾಗಿದ್ದು, ಅದು ದುರಸ್ತಿ ಆಗಿ ಪಾಲಿಕೆಯ ಹೆಸರಿಗೆ ವರ್ಗಾವಣೆ ಆದಲ್ಲಿ ಆಗ ಆ ಜಾಗವು ಪಾಲಿಕೆಯ ಮಾಲೀಕತ್ವಕ್ಕೆ ಬರುತ್ತದೆ. ಬಳಿಕ ಪಾಲಿಕೆಯು ಆ ಜಾಗವನ್ನು ತಮ್ಮ ಹೆಸರಿಗೆ ಹಸ್ತಾಂತರಿಸಿ ಕೊಟ್ಟರೆ , ಅದನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಸ್ಪಷ್ಟಶಬ್ದಗಳಲ್ಲಿ ಹೇಳಿದರು. ಜಾಗದ ಬಗೆಗಿನ ಚರ್ಚೆಯ ಸಂದರ್ಭದಲ್ಲಿ ಆಸ್ತಿದಾರರಿಗೂ, ಸದಸ್ಯ ಇನಾಯತ್ ಉಲ್ಲಾಖಾನ್ ಅವರಿಗೂ ಒಂದು ಹಂತದಲ್ಲಿ ವಾದ-ವಿವಾದ ಆಯಿತು. ಎರಡು ಗಂಟೆಗಳ ಸುದೀರ್ಘ ಚರ್ಚೆಯ ಬಳಿಕವೂ ಯಾವೊಂದು ತೀರ್ಮಾನಕ್ಕೆ ಬರಲಾಗದ ಕಾರಣ, ಮತ್ತೊಮ್ಮೆ ಸದರಿ ಜಾಗದ ಆಸ್ತಿದಾರರ ಜೊತೆ ಎಲ್ಲ ದಾಖಲಾತಿಗಳ ಸಹಿತ ಚರ್ಚೆ ನಡೆಸಲು ನಿರ್ಧರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ