ತುಮಕೂರು

ತುಮಕೂರು ನಗರದಲ್ಲಿರುವ ಇಂದಿರಾ ಕ್ಯಾಂಟೀನ್‍ಗಳಲ್ಲಿ ಅಕ್ರಮ- ಅವ್ಯವಹಾರಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ರಚಿತವಾಗಿದ್ದ ತನಿಖಾ ಸಮಿತಿಯು ತನಿಖಾ ವರದಿಯನ್ನು ತುಮಕೂರು ಮಹಾನಗರ ಪಾಲಿಕೆಗೆ ಸಲ್ಲಿಸಿದ್ದು, ಸದರಿ ವರದಿಯಲ್ಲಿ “ಇಂದಿರಾ ಕ್ಯಾಂಟೀನ್ ಮೇಲ್ವಿಚಾರಣೆ ಮಾಡಲು ಅಭಿವೃದ್ಧಿಪಡಿಸಿರುವ ಆನ್‍ಲೈನ್ ತಂತ್ರಾಂಶವನ್ನು ಕಾರ್ಯಗತಗೊಳಿಸಬೇಕು” ಹಾಗೂ “ಟೋಕನ್‍ಗಳ ವಿತರಣೆಯನ್ನು ಬಯೋಮೆಟ್ರಿಕ್ ಅಥವಾ ಇನ್ನಾವುದೇ ವಿಧಾನದಲ್ಲಿ ಮಾಡಬೇಕು” ಎಂಬ ಎರಡು ಗಮನಾರ್ಹ ಶಿಫಾರಸುಗಳನ್ನು ಮಾಡಲಾಗಿದೆ.
ಈ ಮೂಲಕ “ಇಂದಿರಾ ಕ್ಯಾಂಟೀನ್ ವ್ಯವಸ್ಥೆಯಲ್ಲಿ ಎಲ್ಲವೂ ನೆಟ್ಟಗಿಲ್ಲ” ಎಂಬುದನ್ನು ಸಮಿತಿಯ ವರದಿಯು ಪರೋಕ್ಷವಾಗಿ ಹೇಳಿದಂತಿದೆ.
ಇಂದಿರಾ ಕ್ಯಾಂಟೀನ್‍ಗಳಲ್ಲಿ ಅಕ್ರಮಗಳಾಗುತ್ತಿವೆಯೆಂದು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದವು. ಅದಾದ ಬೆನ್ನಲ್ಲೇ ತುಮಕೂರು ಮಹಾನಗರ ಪಾಲಿಕೆಯಲ್ಲಿ ಈ ವಿಷಯ ಪ್ರತಿ ಧ್ವನಿಸಿತು. ಈ ಹಿನ್ನೆಲೆಯಲ್ಲಿ ತುಮಕೂರು ಮಹಾನಗರ ಪಾಲಿಕೆಯ ಹಿಂದಿನ ಆಯುಕ್ತ ಟಿ.ಭೂಬಾಲನ್ ಅವರು ಆರೋಗ್ಯ ಇಲಾಖೆಯ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಿನ್ಸಿಪಾಲ್ ಡಾ. ರಜನಿ ಮತ್ತು ಜಿಲ್ಲಾ ಕಾರ್ಮಿಕ ಅಧಿಕಾರಿ ಸುಭಾಷ್ ಅಲದಕಟ್ಟಿ ಅವರ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿದ್ದರು. ಆ ಸಮಿತಿಯು ವಿಚಾರಣೆ ನಡೆಸಿ, 24 ಪುಟಗಳ ತನಿಖಾ ವರದಿ (ಸಂಖ್ಯೆ:ಜಿ.ಆ.ತ.ಕೇ. (ತು)/45/2019-20, ದಿನಾಂಕ 09-10-2019) ಯನ್ನು ಮಹಾನಗರ ಪಾಲಿಕೆಯ ಆಯುಕ್ತರಿಗೆ ಸಲ್ಲಿಸಿದೆ. ಆ ವರದಿಯಲ್ಲಿ ಇಂತಹ ಒಟ್ಟು ಆರು ಶಿÁರಸುಗಳನ್ನು ಮಾಡಲಾಗಿದೆ.
“ಇಂದಿರಾ ಕ್ಯಾಂಟೀನ್‍ನಲ್ಲಿ ದಿನದ ಮೂರು ಹೊತ್ತಿನಲ್ಲೂ ಟೋಕನ್ ವಿತರಣೆಗೆ ಸಂಬಂಧಿಸಿದಂತೆ ಆಹಾರ ವಿತರಣೆ ಮಾಡುವ ಪೂರ್ಣಾವಧಿಯಲ್ಲಿ ಮೇಲ್ವಿಚಾರಣೆ ಮಾಡುವುದು ಸಿಬ್ಬಂದಿಗೆ ಕಷ್ಟಸಾಧ್ಯವಾಗಿದೆ. ಆದ್ದರಿಂದ ಇತರೆ ವಿಧಾನಗಳನ್ನು ಅಳವಡಿಸಬೇಕಾಗಿದೆ” ಎಂದು ಅಭಿಪ್ರಾಯಪಡಲಾಗಿದೆ.
“ತೂಕದ ಮೇಲ್ವಿಚಾರಣೆಯಿಂದ ಕೂಡಿದ ನಮೂನೆಗಳು ಏಕಾಏಕಿ ಪ್ಲೇಟ್‍ಗಳ ಸಂಖ್ಯೆಗೆ ಬದಲಾಗಿರುತ್ತದೆ. ಆದುದರಿಂದ ಆಹಾರ ತಯಾರಿಕೆಗೂ, ವಿತರಣೆಯಾಗುವ ಟೋಕನ್‍ಗಳಿಗೂ ವ್ಯತ್ಯಾಸವಿರುವ ಸಾಧ್ಯತೆ ಇದೆ. ವಿತರಣೆಯಾಗುವ ಟೋಕನ್‍ಗಳ ಸಂಖ್ಯೆಗೆ ಅನುಗುಣವಾಗಿ ಸರಬರಾಜು ಆದೇಶದಲ್ಲಿ ಬೇಡಿಕೆ ಕಡಿಮೆ ಮಾಡಲು” ಸಹ ಶಿಫಾರಸು ಮಾಡಲಾಗಿದೆ.
“ಸಿ.ಸಿ. ಟಿವಿ ದೃಶ್ಯಾವಳಿಯು ನಂಬಬಹುದಾದ ದಾಖಲೆಯಾಗಿದ್ದು, ಅದರಂತೆ ಸರಬರಾಜು ಆದೇಶದಲ್ಲಿ ಬೇಡಿಕೆಯನ್ನು ಕಡಿಮೆ ಮಾಡಬಹುದಾಗಿದೆ” ಎಂದೂ ತಿಳಿಸಲಾಗಿದೆ.
ವಾರಕ್ಕೊಮ್ಮೆ ವರದಿ ಬೇಕು
“ಮೇಲ್ವಿಚಾರಣೆ ಮಾಡುವ ಇಲಾಖೆಯ ಸಿಬ್ಬಂದಿ ಇನ್ನೂ ಕಟ್ಟುನಿಟ್ಟಿನ ಮೇಲ್ವಿಚಾರಣೆ ಮಾಡಬೇಕು ಹಾಗೂ ದೈನಂದಿನ ಅಥವಾ ವಾರಕ್ಕೊಮ್ಮೆ ಮೇಲ್ವಿಚಾರಣಾ ವರದಿ ಸಲ್ಲಿಸಬೇಕು” ಎಂದು ವರದಿಯಲ್ಲಿ ಗಮನಾರ್ಹ ಶಿÁರಸು ಮಾಡಲಾಗಿದೆ.
ಹೇಳಿಕೆ ದಾಖಲೆ, ಸ್ಥಳ ಪರಿಶೀಲನೆ
ತನಿಖಾ ಸಮಿತಿಯು ದಿನಾಂಕ 30-08-2019 ರಂದು ಪಾಲಿಕೆಯ ಆರೋಗ್ಯ ಶಾಖೆಯ ಕೊಠಡಿಯಲ್ಲಿ ಸ`É ನಡೆಸಿ ಈ ವಿಷಯವಾಗಿ ವಿಸ್ತೃತವಾಗಿ ವಿಚಾರಣೆ ನಡೆಸಿದೆ. ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್, ಪರಿಸರ ಇಂಜಿನಿಯರ್‍ಗಳಾದ ಪಿ.ಕೆ. ಮೋಹನ್ ಕುಮಾರ್, ಕೆ.ಎಸ್.ಮೃತ್ಯುಂಜಯ ಮತ್ತು ಐ.ಬಿ.ನಿಖಿತ, ಆರೋಗ್ಯ ನಿರೀಕ್ಷಕರುಗಳಾದ ಬಿ.ಎಸ್.ಆನಂದಕುಮಾರ್, ಎಚ್.ಎನ್.ಚಿಕ್ಕಸ್ವಾಮಿ, ಎಂ.ವಿ.ಕುರ್ತಿಕ್ ಕುಮಾರ್, ಜಿ.ಎನ್.ಸಚಿನ್, ಎಸ್.ರುದ್ರೇಶ್, ಎಸ್.ನಟೇಶ್ ಅವರುಗಳು ಹಾಜರಿದ್ದರು.
ಇಂದಿರಾ ಕ್ಯಾಂಟೀನ್‍ಗಳಲ್ಲಿ ಊಟದ ಬೇಡಿಕೆ ಕ್ಷೀಣಿಸುತ್ತಿರುವ ಬಗ್ಗೆ ಚರ್ಚಿಸಿದಾಗ ಆರೋಗ್ಯಾಧಿಕಾರಿ, ಎಲ್ಲ ಪರಿಸರ ಇಂಜಿನಿಯರ್‍ಗಳು, ಹೆಲ್ತ್ ಇನ್ಸ್‍ಪೆಕ್ಟರ್‍ಗಳು ಮಾತನಾಡಿ “ಆರ್ಥಿಕ ಹಿನ್ನಡೆ ಆಗಿರುವುದರಿಂದ, ಲೇಬರ್‍ಕ್ಲಾಸ್ ಕಡಿಮೆ ಆಗುತ್ತಿರುವುದು, ವಾರದ ಏಳೂ ದಿನಗಳಲ್ಲಿ ಒಂದೇ ತರಹದ ಆಹಾರ ಪದಾರ್ಥಗಳು ತಯಾರಾಗುತ್ತಿರುವುದರಿಂದ, ರಜಾದಿನಗಳಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಗೈರು ಹಾಜರಿಯಿಂದ ಊಟದ ಬೇಡಿಕೆ ಕ್ಷೀಣಿಸುತ್ತಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದಿನಾಂಕ 30-10-2019 ರಂದು ಸಂಜೆ ತನಿಖಾ ಸಮಿತಿಯ ನಗರದ ಜೆ.ಸಿ.ರಸ್ತೆಯ ಇಂದಿರಾ ಕ್ಯಾಂಟೀನ್‍ಗೆ ಭೇಟಿ ನೀಡಿ ತಪಾಸಣೆ ನಡೆಸಿದೆ. ದಿನಾಂಕ 31-10-2019 ರಂದು ಮಧ್ಯಾಹ್ನ ನಗರದ ಕ್ಯಾತಸಂದ್ರದ ಇಂದಿರಾ ಕ್ಯಾಂಟೀನ್‍ಗೆ ಭೇಟಿ ನೀಡಿ ಪರಿಶೀಲಿಸಿದೆ. ದಿನಾಂಕ 05-09-2019 ರಂದು ಮುಂಜಾನೆ 6-15 ರಲ್ಲಿ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರು ಇಂದಿರಾ ಕ್ಯಾಂಟೀನ್‍ನ ಮಾಸ್ಟರ್ ಕಿಚನ್‍ಗೆ ಭೇಟಿ ನೀಡಿ ತಪಾಸಣೆ ಮಾಡಿದೆ.
ಈ ಮಧ್ಯ ತನಿಖಾ ಸಮಿತಿ ನೀಡಿದ ನೋಟೀಸ್‍ಗೆ ಆರೋಗ್ಯಾಧಿಕಾರಿ ಡಾ.ಟಿ. ನಾಗೇಶ್ ಕುಮಾರ್, ಪರಿಸರ ಇಂಜಿನಿಯರ್‍ಗಳಾದ ಮೃತ್ಯುಂಜಯ, ಕೃಷ್ಣಮೂರ್ತಿ, ಮೋಹನ್‍ಕುಮಾರ್ ಮತ್ತು ಐ.ಬಿ. ನಿಖಿತ, ಕಿರಿಯ ಹೆಲ್ತ್ ಇನ್ಸ್‍ಪೆಕ್ಟರ್ ಆನಂದಕುಮಾರ್, ಹಿರಿಯ ಹೆಲ್ತ್ ಇನ್ಸ್‍ಪೆಕ್ಟರ್ ಚಿಕ್ಕಸ್ವಾಮಿ, ಕಿರಿಯ ಹೆಲ್ತ್‍ಇನ್ಸ್‍ಪೆಕ್ಟರ್ ಎಂ.ಬಿ.ಕುರ್ತಿಕ್ ಕುಮಾರ್, ಕಿರಿಯ ಹೆಲ್ತ್‍ಇನ್ಸ್‍ಪೆಕ್ಟರ್ ಎಸ್.ರುದ್ರೇಶ್ ಅವರು ಲಿಖಿತ ಉತ್ತರ ನೀಡಿದ್ದಾರೆ. ಇಂದಿರಾ ಕ್ಯಾಂಟೀನ್‍ನ ಮ್ಯಾನೇಜರ್ ಹಾಗೂ ಸಿಬ್ಬಂದಿಗಳಿಂದಲೂ ಸಮಿತಿಯು ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿದೆ. ಇವೆಲ್ಲವನ್ನೂ ಪರಿಶೀಲಿಸಿದ ತನಿಖಾ ಸಂಸ್ಥೆಯು ಈ ವಿಷಯವಾಗಿ ತನ್ನ ಅಭಿಪ್ರಾಯಗಳನ್ನು ಪಟ್ಟಿ ಮಾಡಿದೆ.
ಸಮಿತಿ ಅಭಿಪ್ರಾಯ
“ಟೋಕನ್‍ಗಳ ಬೇಡಿಕೆಯಲ್ಲಿ ಕಾಲೇಜು ತೆರೆದಿರುವ ಸಮಯ, ರಜಾ ದಿನಗಳು, ಕಾಮಗಾರಿಗಳು, ಹಬ್ಬ-ಹರಿದಿನಗಳು, ರೈಲು ಬರುವ ಸಮಯ ಇತ್ಯಾದಿಗಳಿಗೆ ಅವಲಂಬಿತವಾಗಿದ್ದು, ಏರಿಳಿತಗಳು ಸರ್ವೆಸಾಮಾನ್ಯವಾಗಿದೆ. ನೈಜ ಟೋಕನ್ ವಿತರಣೆ ಸಂಖ್ಯೆಯನ್ನು ಕಂಡುಹಿಡಿಯಲು ಮಾನದಂಡಗಳು ಇಲ್ಲ. ಕ್ಯಾಂಟೀನ್‍ನಲ್ಲಿ ಬೇಡಿಕೆ ಕಡಿಮೆಯಾಗಿರುವುದನ್ನು ಸರ್ಕಾರ ಗಮನಿಸಿ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟದ ಸಂಖ್ಯೆಯನ್ನು ಇಳಿಮುಖ ಮಾಡಬಹುದು.
ಇಂದಿರಾ ಕ್ಯಾಂಟೀನ್ ಮೇಲ್ವಿಚಾರಣೆಯು ಆನ್‍ಲೈನ್, ರಿಯಲ್ ಟೈಮ್ ಡಾಟಾ ಅವಲಂಬಿತವಗುವಂತೆ ಮಾಡಬೇಕಿದ್ದು, ಈಗಾಗಲೇ ಲಭ್ಯವಿರುವ ತಂತ್ರಾಂಶವನ್ನು ಈ ನಿಟ್ಟಿನಲ್ಲಿ ಸುಧಾರಿಸಬೇಕಿದೆ. ಖಾಸಗಿ ರೆಸ್ಟೋರೆಂಟ್‍ಗಳು ಪಿ.ಓ.ಎಸ್. ಮೆಷಿನ್‍ಗಳನ್ನು ಬಳಸುವಂತೆ ಇಂದಿರಾ ಕ್ಯಾಂಟೀನ್‍ಗಳು ಕೂಡಾ ಕ್ರಮ ವಹಿಸಬೇಕು” ಎಂಬಿತ್ಯಾದಿಯಾಗಿ ತನಿಖಾ ಸಮಿತಿಯು ವರದಿಯಲ್ಲಿ ಅಭಿಪ್ರಾಯಪಟ್ಟಿದೆ.“ಇಂದಿರಾ ಕ್ಯಾಂಟೀನ್‍ನಲ್ಲಿ ಟೋಕನ್‍ಗಳಿಗೆ ಬೇಡಿಕೆ ಕಡಿಮೆಯಾಗಿದ್ದು, ಅದರಂತೆ ಖರೀದಿದಾರರಾದ ಸರ್ಕಾರವೂ ಕ್ರಮ ವಹಿಸಬೇಕಾಗುತ್ತದೆ” ಎಂದು ಸಮಿತಿಯು ಒತ್ತಿ ಹೇಳಿದೆ.
ಅನೇಕರ ಅವಲಂಬನೆ
ಇಷ್ಟಾಗಿಯೂ ತನಿಖಾ ಸಮಿತಿಯು ಮತ್ತೊಂದು ಮಹತ್ವದ ಸಂಗತಿಯತ್ತ ಬೆಳಕು ಚೆಲ್ಲಿದೆ. ಅದೇನೆಂದರೆ “ಸಾರ್ವಜನಿಕ ತನಿಖೆಯಲ್ಲಿ ಅನೇಕ ಸಾರ್ವಜನಿಕರು ಇಂದಿರ ಕ್ಯಾಂಟೀನ್ ಅನ್ನು ನೆಚ್ಚಿಕೊಂಡಿರುವುದು ಕಂಡುಬಂದಿದೆ. ಮೇಲ್ವಿಚಾರಣೆಯನ್ನು ತಪ್ಪು ಮಾಡಲು ಆಸ್ಪದವಿಲ್ಲದಂತೆ ಕ್ರಮವಹಿಸಿ, ಸಾರ್ವಜನಿಕರ ಹಸಿವು ಇಂಗಿಸುವ ಕಾರ್ಯಕ್ರಮವನ್ನು ಅನುಷ್ಠಾನ ಮಾಡಬೇಕಾಗಿದೆ” ಎಂಬುದರತ್ತ ಸಮಿತಿಯು ಅಂತಿಮವಾಗಿ ಗಮನ ಸೆಳೆದಿದೆ.








