ಪಾಲಿಕೆ ಆಯುಕ್ತರಿಂದ ಮತ್ತೆ ಕಠಿಣ ಕ್ರಮ : 8 ಜನರ ವಜಾ, ಓರ್ವ ಸಸ್ಪೆಂಡ್, 9 ಜನರಿಗೆ ನೋಟೀಸ್

ತುಮಕೂರು

    ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನೀರು ಸರಬರಾಜು ವ್ಯವಸ್ಥೆಯಲ್ಲಿನ ಅಕ್ರಮಗಳ ವಿರುದ್ಧ ಸೆಟೆದು ನಿಂತಿರುವ ಪಾಲಿಕೆಯ ಆಯುಕ್ತ ಟಿ.ಭೂಪಾಲನ್ ಅವರು, ಸೋಮವಾರ ಮತ್ತೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಹೊರಗುತ್ತಿಗೆ ಮೂಲದ ಎಂಟು ಜನ ವಾಲ್ವ್‍ಮನ್‍ಗಳನ್ನು `ಸೇವೆಯಿಂದ ವಜಾ’ಗೊಳಿಸಿದ್ದಾರೆ. ಕರ್ತವ್ಯಲೋಪ ಎಸಗಿರುವ ಓರ್ವ ವಾಲ್ವ್‍ಮನ್ ಅನ್ನು `ಸೇವೆಯಿಂದ ಅಮಾನತು’ ಮಾಡಿದ್ದಾರೆ. ಒಂಬತ್ತು ಜನ ವಾಲ್ವ್‍ಮನ್‍ಗಳಿಗೆ “ಶೋಕಾಸ್ ನೋಟೀಸ್” ಜಾರಿಗೊಳಿಸಿದ್ದಾರೆ. ಇವೆಲ್ಲವೂ ತಕ್ಷಣದಿಂದಲೇ ಜಾರಿಗೆ ಬಂದಿವೆ.

     ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಸೋಮವಾರ ಬೆಳಗಿನಿಂದ ಮ ಹ್ನದವರೆಗೂ ಆಯುಕ್ತ ಟಿ.ಭೂಪಾಲನ್ ಅವರು ನೀರುಪೂರೈಕೆ ವಿಭಾಗದ ವಾಲ್ವ್‍ಮನ್‍ಗಳ ಜೊತೆ ಸುದೀರ್ಘ ಸಭೆ ನಡೆಸಿ ಚರ್ಚಿಸಿದರು. “ನಗರಾದ್ಯಂತ ನೀರು ಸರಬರಾಜು ವ್ಯವಸ್ಥೆಯಲ್ಲಿ ಆಗುತ್ತಿರುವ ಅಕ್ರಮಗಳು, ಸಮಸ್ಯೆಗಳು, ಲೋಪದೋಷಗಳು, ಕರ್ತವ್ಯಲೋಪ, ಅದಕ್ಷತೆ, ಪಕ್ಷಪಾತ ಧೋರಣೆ, ಪಾಲಿಕೆಯ ಕೊಳವೆ ಬಾವಿಗಳ ಸಮೀಪವೇ ಖಾಸಗಿಯವರು ಕೊಳವೆಬಾವಿ ಕೊರೆಸಲು ಸಹಕರಿಸುವುದು, ಕೊಳವೆಬಾವಿ ನೀರು ಪೂರೈಕೆ ಯಾಗುತ್ತಿದ್ದರೂ ಹೇಮಾವತಿ ನೀರಿಗೆ ಬೇಡಿಕೆಯಿಡುವುದು, ತಮ್ಮ ವಿಭಾಗದ ನೀರು ಪೂರೈಕೆ ಬಗ್ಗೆ ಸೂಕ್ತವಾಗಿ ರಿಜಿಸ್ಟರ್‍ಗಳನ್ನು ನಿರ್ವಹಿಸದಿರುವುದು, ಮೇಲಧಿಕಾರಿಗಳ ಫೋನ್ ಕರೆ ಸ್ವೀಕರಿಸದಿರುವುದು, ಅನಧಿಕೃತ ನಲ್ಲಿ ಬಗ್ಗೆ ನಿರ್ಲಕ್ಷಿಸುವುದು ಇತ್ಯಾದಿಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಬಳಿಕ ಅಂತಿಮವಾಗಿ ಕಠಿಣ ನಿರ್ಧಾರಗಳನ್ನು ಕೈಗೊಂಡರು” ಎಂದು ಮೂಲಗಳು ತಿಳಿಸಿವೆ.

8 ಜನರ ವಜಾ

      ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ 8 ಜನ ಹೊರಗುತ್ತಿಗೆ (ಔಟ್‍ಸೋರ್ಸ್) ಮೂಲದ ವಾಲ್ವ್‍ಮನ್‍ಗಳನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ. ಆನಂದ್ (1ನೇ ವಾರ್ಡ್), ಎಚ್.ದೇವರಾಜ್ (10 ನೇ ವಾರ್ಡ್), ನಾಗಹನುಮಯ್ಯ (21 ನೇ ವಾರ್ಡ್), ಬಿ.ಮಂಜುನಾಥ್ (5 ನೇ ವಾರ್ಡ್), ರಮೇಶ್ (30 ನೇ ವಾರ್ಡ್), ಎ.ಶ್ರೀನಿವಾಸ ಮೂರ್ತಿ (32 ನೇ ವಾರ್ಡ್), ಸಿದ್ದಪ್ಪ (25 ನೇ ವಾರ್ಡ್), ಆನಂದ್ (11 ನೇ ವಾರ್ಡ್) ಇವರುಗಳು ಸೇವೆಯಿಂದ ವಜಾ ಆಗಿದ್ದಾರೆ.

ಓರ್ವನ ಅಮಾನತು

       ನಗರದ 28 ನೇ ವಾರ್ಡ್‍ನಲ್ಲಿ ವಾಲ್ವ್‍ಮನ್ ಆಗಿದ್ದ (ಖಾಯಂ ನೌಕರ) ಲತೀಫ್ ಎಂಬುವವರನ್ನು ಕರ್ತವ್ಯಲೋಪ ಆರೋಪದ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ಸೇವೆಯಿಂದ ಅಮಾನತುಗೊಳಿಸಲಾಗಿದೆ.

9 ಜನರಿಗೆ ನೋಟೀಸ್

        ಇದೇ ಸಂದರ್ಭದಲ್ಲಿ ಕರ್ತವ್ಯಲೋಪದ ಕಾರಣಕ್ಕಾಗಿ ವಾಲ್ವ್‍ಮನ್‍ಗಳಾದ (ಖಾಯಂ ನೌಕರರು) ಗಂಗನರಸಯ್ಯ (10 ನೇ ವಾರ್ಡ್), ರಾಮಯ್ಯ (18 ನೇ ವಾರ್ಡ್), ಗಂಗಣ್ಣ (18 ನೇ ವಾರ್ಡ್), ಚಿಕ್ಕಬಿದರಯ್ಯ (1 ನೇ ವಾರ್ಡ್), ಸಿ.ಮಂಜುನಾಥ್ (2 ನೇ ವಾರ್ಡ್), ಗೋವಿಂದಪ್ಪ (25 ನೇ ವಾರ್ಡ್), ಕೆ.ಸಿ.ಗಂಗರಾಜು (34 ನೇ ವಾರ್ಡ್), ಚಿಕ್ಕಣ್ಣ (20 ನೇ ವಾರ್ಡ್) ಮತ್ತು ಸ್ವಾಮಿ (ಕುಣಿಗಲ್ ಗೇಟ್ ಪಂಪ್‍ಹೌಸ್) ಎಂಬುವವರಿಗೆ ಆಯುಕ್ತರು “ಶೋಕಾಸ್ ನೋಟೀಸ್” ಜಾರಿಗೊಳಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಈ ಸಭೆಯಲ್ಲಿ ಪಾಲಿಕೆಯ ನೀರು ಪೂರೈಕೆ ವಿಭಾಗದ ಎಲ್ಲ ಅಧಿಕಾರಿಗಳೂ, ಆಪರೇಟರ್‍ಗಳೂ ಹಾಜರಿದ್ದು, ಆಯುಕ್ತರು ಕೇಳಿದ ಮಾಹಿತಿಗಳನ್ನು ಒದಗಿಸಿದರು. ನಗರದ 35 ವಾರ್ಡ್‍ಗಳ 216 ಜನ ವಾಲ್ವ್‍ಮನ್‍ಗಳು ಈ ಸಬೆಯಲ್ಲಿ ಭಾಗವಹಿಸಿದ್ದರು. ಇದಕ್ಕೂ ಮೊದಲು ವಿವಿಧ ಪಂಪ್‍ಹೌಸ್‍ಗಳಲ್ಲಿ ಕಾರ್ಯನಿರ್ವಹಿಸುವ 30 ಜನ ಸಿಬ್ಬಂದಿಯ ಪ್ರತ್ಯೇಕ ಸಭೆಯನ್ನೂ ಆಯುಕ್ತರು ನಡೆಸಿ, ಚರ್ಚಿಸಿದರು ಎಂದು ಮೂಲಗಳು ಹೇಳಿವೆ.

       ಪಾಲಿಕೆ ಆಯುಕ್ತರು ಕೈಗೊಂಡ ಈ ಕ್ರಮದೊಂದಿಗೆ “ಸೇವೆಯಿಂದ ವಜಾ” ಆದ ಹೊರಗುತ್ತಿಗೆ ವಾಲ್ವ್‍ಮನ್‍ಗಳ ಸಂಖ್ಯೆ 11 ಕ್ಕೆ ಏರಿದಂತಾಗಿದೆ.

ಕಳೆದ ವಾರ ಓರ್ವನಿಗೆ ಹಿಂಬಡ್ತಿ, ಮೂವರ ವಜಾ

      ನೀರು ಪೂರೈಕೆ ವಿಷಯದಲ್ಲಿ ಅಕ್ರಮಗಳಾಗಿವೆಯೆಂಬ ಆರೋಪದ ಹಿನ್ನೆಲೆಯಲ್ಲಿ ಆಯುಕ್ತ ಭೂಪಾಲನ್ ಅವರು ಕಳೆದ ವಾರ ಅಂದರೆ ಏಪ್ರಿಲ್ 22 ರಂದು ಕಠಿಣ ನಿರ್ಧಾರ ಕೈಗೊಂಡಿದ್ದರು. ತುಮಕೂರು ನಗರದ 11 ನೇ ವಾರ್ಡ್(ಮೆಳೆಕೋಟೆ) ನಲ್ಲಿ ಆಪರೇಟರ್ ಆಗಿದ್ದ ಸಿದ್ದರಾಜು (ಖಾಯಂ ನೌಕರ) ಎಂಬುವವರಿಗೆ ವಾಲ್ವ್‍ಮನ್ ಆಗಿ “ಹಿಂಬಡ್ತಿ” ನೀಡಿ ನಗರದ 19 ಮತ್ತು 20 ನೇ ವಾರ್ಡ್‍ಗೆ ವರ್ಗಾಯಿಸಿದ್ದರು. ಜೊತೆಗೆ ನಗರದ 17 ನೇ ವಾರ್ಡ್ (ಬನಶಂಕರಿ, ಸರಸ್ವತಿಪುರಂ) ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ವಾಲ್ವ್‍ಮನ್‍ ಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಸುರೇಶ್, ಆಂಜನಪ್ಪ ಮತ್ತು ಮಂಜುನಾಥ್ ಎಂಬುವವರನ್ನು ಕರ್ತವ್ಯಲೋಪ ಆರೋಪದ ಮೇಲೆ ಕೆಲಸದಿಂದ ವಜಾ ಮಾಡಿದ್ದರೆಂಬುದನ್ನು (ಏಪ್ರಿಲ್ 24 ರ `ಪ್ರಜಾಪ್ರಗತಿ’ ನೋಡಿ) ಇಲ್ಲಿ ನೆನಪಿಸಿಕೊಳ್ಳಬಹುದು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap