ಪಾಲಿಕೆ ವಿವಿಧ ಶಾಖೆಗಳಿಗೆ ಆಯುಕ್ತರ ದಿಢೀರ್ ಭೇಟಿ

ತುಮಕೂರು
    ತುಮಕೂರು ಮಹಾನಗರ ಪಾಲಿಕೆಯ ವಿವಿಧ ಶಾಖೆಗಳಿಗೆ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಮಂಗಳವಾರ ಬೆಳಗ್ಗೆ ದಿಢೀರನೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಕಂದಾಯ ಶಾಖೆಯಲ್ಲಿ ಬ್ರೋಕರ್‍ಗಳ ಹಾವಳಿ ಇದೆಯೆಂಬ ವಿಷಯದಲ್ಲಿ ಗರಂ ಆದ ಹಾಗೂ ವಿವಿಧ ಶಾಖೆಗಳ ಆವರಣದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ಕೊಟ್ಟ ಅಪರೂಪದ ಪ್ರಸಂಗ ಜರುಗಿತು.
    ಪಾಲಿಕೆಯ ಕಂದಾಯ ಶಾಖೆಗೆÉ ಆಯುಕ್ತ ಭೂಬಾಲನ್ ಇದ್ದಕ್ಕಿದ್ದಂತೆ ಆಗಮಿಸುತ್ತಿದ್ದಂತೆಯೆ ಕಂದಾಯ ಶಾಖೆಯಲ್ಲಿ ಸಂಚಲನ ಉಂಟಾಯಿತು. ತಮ್ಮ ಕೊಠಡಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದ ಉಪ ಆಯುಕ್ತ (ಕಂದಾಯ) ಯೋಗಾನಂದ್ ತಕ್ಷಣವೇ ಆಯುಕ್ತರನ್ನು ಸ್ವಾಗತಿಸಿದರು. ಇತರೆ ಅಧಿಕಾರಿಗಳೂ ಜೊತೆಗೂಡಿದರು. ಕಂದಾಯ ಶಾಖೆಯಲ್ಲಿ ಬ್ರೋಕರ್‍ಗಳ ಹಾವಳಿ ಇದೆಯೆಂಬ ವಿಷಯ ಕೇಳಿ ಗರಂ ಆಗಿದ್ದ ಆಯುಕ್ತರು ಬಾಗಿಲ ಬಳಿಯೇ ನಿಂತುಕೊಂಡು ಕಂದಾಯ ಶಾಖೆಯೊಳಗಿದ್ದ ಸಾರ್ವಜನಿಕರನ್ನು ಖುದ್ದಾಗಿ ವಿಚಾರಿಸಿದರು.
    ಇಲ್ಲಿರುವವರು ಸಾರ್ವಜನಿಕರೋ ಅಥವಾ ಬ್ರೋಕರ್‍ಗಳೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಏಕೆ ಬಂದಿದ್ದೀರಿ? ಏನು ಕೆಲಸ ಆಗಬೇಕು? ಎಷ್ಟು ದಿನಗಳಿಂದ ಬರುತ್ತಿದ್ದೀರಿ? ಯಾವ ಅಧಿಕಾರಿಯ ಹತ್ತಿರ ಬಂದಿದ್ದೀರಿ? ಎಂಬಿತ್ಯಾದಿಯಾಗಿ ಪ್ರಶ್ನಿಸುತ್ತ, ಸಾರ್ವಜನಿಕರ ಬಳಿ ಇದ್ದ ದಾಖಲಾತಿಗಳನ್ನ ಸ್ವತಃ ಪರಿಶೀಲಿಸಿದರು.ಆದರೆ ಬ್ರೋಕರ್‍ಗಳು ಆ ಹೊತ್ತಿಗೆ ಅಲ್ಲಿ ಯಾರೂ ಸಿಗಲಿಲ್ಲ. ಇದ್ದವರೆಲ್ಲ ಸಾರ್ವಜನಿಕರೇ ಆಗಿದ್ದರು. 
     ಅಲ್ಲಿದ್ದ ನಿವೃತ್ತ ಕಾಲೇಜು ಉಪನ್ಯಾಸಕರೊಬ್ಬರು ಆಯುಕ್ತರನ್ನು ನೋಡಿ ಖುಷಿಯಿಂದ  ಅಭಿನಂದಿಸಿದರಲ್ಲದೆ, ಕಂದಾಯ ಶಾಖೆಯಲ್ಲಿ ತಮ್ಮನ್ನು ಅಲೆದಾಡಿಸಲಾಗುತ್ತಿದೆಯೆಂದು ಅಲವತ್ತುಕೊಂಡರು. ತಕ್ಷಣವೇ ಇವರ ಅಹವಾಲನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಕಂದಾಯ ಶಾಖೆಯ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು. 
ಅನೈರ್ಮಲ್ಯಕ್ಕೆ ಆಕ್ರೋಶ
     ಬಳಿಕ ಕಂದಾಯ ಶಾಖೆಯ ಹೊರ ಆವರಣದಲ್ಲಿ (ಹಳೆಯ ಸರ್ವೋದಯ ಕಾಲೇಜು ಕಟ್ಟಡ) ನಿರುಪಯುಕ್ತ ವಸ್ತುಗಳನ್ನು ರಾಶಿ ಹಾಕಿರುವುದನ್ನು ಗಮನಿಸಿದ ಆಯುಕ್ತರು, ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲೇ ಸ್ಮಾರ್ಟ್ ಸಿಟಿ ಕಂಪನಿ ವತಿಯಿಂದ ಅಳವಡಿಸಿರುವ ಡಸ್ಟ್ ಬಿನ್ ತುಂಬಿ ತುಳುಕಿದ್ದುದನ್ನು ನೋಡಿ, ಬೇಸರ ವ್ಯಕ್ತಪಡಿಸಿದರು. ಎಲ್ಲೆಂದರಲ್ಲಿ ಗಿಡದ ಎಲೆಗಳ ರಾಶಿ ಹಾಕಿರುವುದಕ್ಕೂ ಆಕ್ಷೇಪಿಸಿದರು. ನಾಳೆ ಬೆಳಗ್ಗೆ ತಾವು ಮತ್ತೆ ಇಲ್ಲಿಗೆ ಭೇಟಿ ನೀಡಲಿದ್ದು, ಅಷ್ಟರೊಳಗೆ ಇಲ್ಲಿ ಸ್ವಚ್ಛತೆ ಇರಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟರು. 
 
    ಕಂದಾಯ ಶಾಖೆಯ ಮೇಲ್ಭಾಗವಿರುವ ಚುನಾವಣಾ ಶಾಖೆ ಹಾಗೂ ಇತರೆ ಶಾಖೆಗಳು ಮತ್ತು ರೆಕಾರ್ಡ್ ರೂಂಗೂ ಆಯುಕ್ತರು ಭೇಟಿ ನೀಡಿ ಪರಿಶೀಲಿಸಿದರು. ಇಲ್ಲೂ ಸಹ ಸ್ವಚ್ಛತೆ ಕಾಯ್ದಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಅಲ್ಲೇ ಹಿಂಬದಿ ಇರುವ ನಲ್ಮ್ ಕಚೇರಿಗೆ ಭೇಟಿ ಕೊಟ್ಟರು. ಬಳಿಕ ಅಲ್ಲೇ ಪಕ್ಕದ ನಿರಾಶ್ರಿತರ ಕೇಂದ್ರವನ್ನೂ ಪರಿಶೀಲಿಸಿ, ಅಲ್ಲಿದ್ದ ಬಾಗಿಲನ್ನು ರಾತ್ರಿ ವೇಳೆ ಮಾತ್ರ ತೆರೆಯುವಂತೆ ಸೂಚಿಸಿದರು. ನಂತರ ಪಕ್ಕದಲ್ಲಿರುವ ಎ.ಡಿ.ಬಿ. ಕಟ್ಟಡದ ಆವರಣದಲ್ಲಿನ ಅವ್ಯವಸ್ಥೆಗೆ ಅತೃಪ್ತಿ ವ್ಯಕ್ತಪಡಿಸಿದರು. ನಿರುಪಯುಕ್ತ ಟ್ಯೂಬ್‍ಲೈಟ್ ರಾಶಿ ಬಿದ್ದಿರುವುದನ್ನು ಇನ್ನೂ ಸಹ ಏಕೆ ವಿಲೇವಾರಿ ಮಾಡಿಲ್ಲವೆಂದು ಪ್ರಶ್ನಿಸಿದರು. 
ಸಮಾಧಿ ಮಾಡಿಬಿಟ್ಟಿದ್ದೀರಾ?
    ಎ.ಡಿ.ಬಿ. ಕಟ್ಟಡದ ಮುಂಭಾಗ ಹಿಂದಿನ ನಗರಸಭಾಧ್ಯಕ್ಷರು ಹಾಗೂ ಮೇಯರ್ ಉಪಯೋಗಿಸುತ್ತಿದ್ದ,  ಈಗ ನಿರುಪಯುಕ್ತವಾಗಿರುವ ಹಳೆಯ ಅಂಬಾಸಿಡರ್ ಕಾರನ್ನು ನೋಡಿದ ಆಯುಕ್ತರು, ಇದನ್ನೇಕೆ ಇನ್ನೂ ಹಾಗೆಯೇ ಉಳಿಸಿಕೊಳ್ಳಲಾಗಿದೆಯೆಂದು ಜೊತೆಯಲ್ಲಿದ್ದ ಅಧಿಕಾರಿಗಳನ್ನು ಪ್ರಶ್ನಿಸಿದರು. ಸದರಿ ಕಾರಿನ ಮುಂದಿನ ಕಂಬಕ್ಕೆ ನಿರುಪಯುಕ್ತ ಹಾರಗಳ ರಾಶಿ ಹಾಕಿರುವುದನ್ನು ಗಮನಿಸಿದ ಭೂಬಾಲನ್, ಏನ್ರಿ ಇದು? ಈ ಕಾರಿಗೆ ಸಮಾಧಿ ಮಾಡಿಬಿಟ್ಟಿದ್ದೀರಲ್ಲ ಎಂದು ಉದ್ಗರಿಸಿದರು.
    ಬಳಿಕ ಆಯುಕ್ತರು ಎ.ಡಿ.ಬಿ. ಕಟ್ಟಡದಲ್ಲಿರುವ ಇಂಜಿನಿಯರಿಂಗ್ ಶಾಖೆಗೂ ಭೇಟಿ ಕೊಟ್ಟು ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಡಿ-ದರ್ಜೆ ನೌಕರರು ಎಷ್ಟಿದ್ದಾರೆ? ಯಾವ ಯಾವ ಶಾಖೆಯಲ್ಲಿ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ? ಎಂಬುದನ್ನು ಪ್ರಶ್ನಿಸಿದ ಅವರು, ಪಟ್ಟಿ ತರಿಸಿ ಗಮನಿಸಿದರು. 
    ಆಯುಕ್ತ ಭೂಬಾಲನ್ ಅವರೊಡನೆ ಉಪ ಆಯುಕ್ತ (ಕಂದಾಯ) ಯೋಗಾನಂದ್, ಎಕ್ಸಿಕ್ಯುಟೀವ್ ಇಂಜಿನಿಯರ್‍ಗಳಾದ ತಿಪ್ಪೇರುದ್ರಪ್ಪ, ಆಶಾ, ರಾಯ್ಕರ್, ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್, ಕಂದಾಯ ಶಾಖೆಯ ಅಧಿಕಾರಿಗಳಾದ ಮಹೇಶ್, ನೀಲಲೋಚನಪ್ರಭು ಮೊದಲಾದವರು ಇದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap