ದಾವಣಗೆರೆ:
ಸಂವಹನ ಕೌಶಲ ವೃದ್ಧಿಸಿಕೊಂಡರೆ, ಉದ್ಯೋಗ ಪಡೆಯಲು ಸಹಕಾರಿಯಾಗಲಿದೆ ಎಂದು ದಾವಣಗೆರೆ ವಿವಿ ಕುಲಪತಿ .ಎಸ್.ವಿ.ಹಲಸೆ ತಿಳಿಸಿದರು.ನಗರದ ಮಾ.ಸ.ಬ. ಕಲಾ ಮತ್ತು ವಾಣಿಜ್ಯ ಕಾಲೇಜಿನ ಇಂಗ್ಲಿಷ್ ವಿಭಾಗದ ವತಿಯಿಂದ ಕಾಲೇಜಿನ ಶ್ರೀಮತಿ ಪಾರ್ವತಮ್ಮ ಸಭಾಂಗಣದಲ್ಲಿ ‘ಸಾಫ್ಟ್ ಮತ್ತು ಕಮ್ಯುನಿಕೇಟಿವ್ ಸ್ಕಿಲ್’ ಕುರಿತು ಏರ್ಪಡಿಸಿದ್ದ ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಮಾತೃಭಾಷೆಯಂತೆಯೇ ಅನ್ಯಭಾಷಾ ಜ್ಞಾನವೂ ಅತ್ಯವಶ್ಯವಾಗಿದೆ. ಹೀಗಾಗಿ ಅವಶ್ಯವಾಗಿರುವ ಭಾಷಾ ಜ್ಞಾನದ ಜೊತೆಗೆ ವಿವಿಧ ಬಗೆಯ ಕೌಶಲಗಳನ್ನು ಮೈಗೂಡಿಸಿಕೊಂಡರೇ, ಅನೇಕ ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ ಎಂದರು.
ವಿದ್ಯಾರ್ಥಿಗಳು ಉತ್ತಮ ನಡುವಳಿಕೆಯ ಜೊತೆಗೆ ಗುರು-ಹಿರಿಯರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ. ಬದಲಿಗೆ ಮೊಬೈಲ್ನಲ್ಲೇ ಕಾಲ ಹರಣ ಮಾಡುತ್ತಿರುತ್ತಾರೆ. ಹೀಗೆ ಅತೀಯಾದ ಮೊಬೈಲ್ ಬಳಕೆಯು ವಿದ್ಯಾರ್ಥಿಗಳ ಅಭ್ಯಾಸದ ಮೇಲೂ ದುಷ್ಪರಿಣಾಮ ಬೀರಲಿದೆ. ಆದ್ದರಿಂದ ಮೊಬೈಲ್ ಬಳಕೆ ಕಡಿಮೆ ಮಾಡಬೇಕೆಂದು ಸಲಹೆ ನೀಡಿದರು
ದಿನದಲ್ಲಿ ಕನಿಷ್ಠ 8 ಗಂಟೆಯಾದರೂ ಓದಿಗೆ ಸಮಯ ಮೀಸಲಿಡಬೇಕು. ಅಭ್ಯಾಸಕ್ಕಾಗಿ ವೇಳಾಪಟ್ಟಿ ಹಾಕಿಕೊಂಡು ಅಧ್ಯಯನ ಮಾಡಿದರೆ, ಗುರಿಮುಟ್ಟಲು ಸಾಧ್ಯವಾಗಲಿದೆ ಎಂದ ಅವರು, ಶಿಕ್ಷಣದ ಗುಣಮಟ್ಟ ವೃದ್ಧಿಗಾಗಿ ಸರಕಾರ ವಿವಿಧ ಯೋಜನೆಗಳನ್ನು ರೂಪಿಸಿದ್ದು, ಇದರ ಸಾಕಾರಕ್ಕೆ ವಿದ್ಯಾರ್ಥಿ-ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಣ ಸಂಸ್ಥೆಗಳು ಪ್ರಾಮಾಣಿಕವಾಗಿ ಸ್ಪಂದಿಸಬೇಕೆಂದು ಕಿವಿಮಾತು ಹೇಳಿದರು.
ರಾಜ್ಯ ವಿಶ್ವವಿದ್ಯಾಲಯ ಮತ್ತು ಕಾಲೇಜು ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷ ಪ್ರೊ.ಸಿ.ಹೆಚ್.ಮುರುಗೇಂದ್ರಪ್ಪ ಮಾತನಾಡಿ, ವಿಜ್ಞಾನ, ಕಲೆ ಸೇರಿ ವಿವಿಧ ವಿಭಾಗಗಳ ಬಹುತೇಕ ವಿದ್ಯಾರ್ಥಿಗಳಲ್ಲಿ ಸಂವಹನ ಕೌಶಲ ಭಾಷಾ ಕೊರತೆ ಎದ್ದು ಕಾಣುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಎಲ್ಲಾ ಕಾಲೇಜುಗಳಲ್ಲಿ ಸಂವಹನ ಭಾಷಾ ವಿಷಯವನ್ನು ಕಡ್ಡಾಯಗೊಳಿಸಬೇಕೆಂದು ಆಗ್ರಹಿಸಿದರು.
ಸಂವಹನ ಬೆಳವಣಿಗೆಗೆ ಇಂಗ್ಲಿಷ್ ಭಾಷೆ ಪ್ರಮುಖವಾಗಿದೆ. ಈ ಹಿನ್ನಲೆಯಲ್ಲಿ ದಾವಣಗೆರೆ ವಿವಿಯಲ್ಲಿ ಕಮ್ಯೂನಿಕೇಷನ್ ಇಂಗ್ಲಿಷ್ ಪ್ರಾರಂಭಿಸುವುದು ಅಗತ್ಯವಾಗಿದೆ. ಯಾವುದೇ ಒಂದು ವಿಷಯ ಕಲಿಕೆಗೆ ಕೀಳರಿಮೆ ಬೇಡ. ನಮ್ಮ ಭಾಷೆಯ ಜೊತೆಗೆ ಬೇರೆ ಭಾಷೆ ಕಲಿಯುವುದರಲ್ಲಿ ತಪ್ಪೆನಿಲ್ಲ. ನಮ್ಮ ಜ್ಞಾನಾಭಿವೃದ್ಧಿಗೆ ಪತ್ರಿಕೆಗಳನ್ನು ಹೆಚ್ಚಾಗಿ ಓದಬೇಕೆಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ.ಜಿ.ತಾರಾರಾಣಿ, ಪ್ರೊ.ನಿಝಾಮುದ್ದಿನ್, ಎವಿಕೆ ಕಾಲೇಜು ಪ್ರಾಂಶುಪಾಲ ಪ್ರೊ.ಶಿವಪ್ರಕಾಶ್ ಪಿ.ಎಸ್, ಪ್ರೊ.ನವೀನ್.ವಿ, ಡಾ.ಸುರೇಂದ್ರನಾಥ್ ನಿಶಾನಿಮಠ್, ವಿಜಯ ಎಂ.ಎಸ್. ಪ್ರೊ.ದೇವರಾಜ್ ಸಿ.ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.