ದಾವಣಗೆರೆ
ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಶೋಷಣೆ ತಡೆಯಲು ಹಾಗೂ ಕಾರ್ಪೋರೇಟ್‍ಶಾಹಿ ಸರ್ಕಾರವನ್ನು ಕಟ್ಟಿ ಹಾಕಲು, ಕಮ್ಯುನಿಷ್ಟ್ ಪಕ್ಷಗಳು ವಿಲೀನ ಆಗಬೇಕೆಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ.ಲೋಕೇಶ್ ಆಶಯ ವ್ಯಕ್ತಪಡಿಸಿದರು.
ನಗರದ ಅಶೋಕ ರಸ್ತೆಯಲ್ಲಿರುವ ಕಾಮ್ರೇಡ್ ಪಂಪಾಪತಿ ಭವನದಲ್ಲಿ ಬುಧವಾರ ನಡೆದ ಭಾರತ ಕಮ್ಯನಿಷ್ಟ್ ಪಕ್ಷದ 93ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೈದ್ಧಾಂತಿಕ ಕಾರಣಗಳಿಂದಾಗಿ ಭಾರತ ಕಮ್ಯುನಿಷ್ಟ್ ಪಕ್ಷ ಸಿಪಿಐ(ಎಂ) ಸೇರಿದಂತೆ ವಿವಿಧ ಪಕ್ಷಗಳಾಗಿ ಒಡೆದು ಹೋದ ಕಾರಣ, ದೇಶದಲ್ಲಿ ದೀರ್ಘ ಕಾಲ ಬಲಪಂಥೀಯ ಸರ್ಕಾರಗಳು ಅಧಿಕಾರ ನಡೆಸಿವೆ. ಆದ್ದರಿಂದ ಕಮ್ಯುನಿಷ್ಟ್ ಪಕ್ಷಗಳು ಐಕ್ಯ ಚಳವಳಿ ರೂಪಿಸುವುದರ ಜೊತೆಗೆ ವಿಲೀನಗೊಳ್ಳುವ ಮೂಲಕ ಕಾರ್ಪೋರೇಟ್ ಶಾಹಿಯ ಪರವಾಗಿ ನೀತಿ ರೂಪಿಸಿ, ದೇಶದ ಜನರನ್ನು ಶೋಷಿಸುತ್ತಿರುವ ಬಲ ಪಂಥೀಯ ಸರ್ಕಾರಗಳನ್ನು ಕಟ್ಟಿಹಾಕಬೇಕಾದ ಅವಶ್ಯಕತೆ ಇದೆ ಎಂದರು.
ಮೊನ್ನೆ ಹೊರ ಬಿದ್ದ ಪಂಚರಾಜ್ಯಗಳ ಫಲಿತಾಂಶವು ಬಿಜೆಪಿಗೆ ಸೋಲು ಅಲ್ಲ, ಕಾಂಗ್ರೆಸ್‍ನ ಗೆಲುವು ಅಲ್ಲ. ಅದು ಜನರ ಒಗ್ಗಟ್ಟಿನ ಗೆಲುವಾಗಿದೆ. ಬಿಜೆಪಿಯನ್ನು ಅಧಿಕಾರದಿಂದ ಹೊರಗಿಟ್ಟರೆ ಸಾಲದು, ಆ ಪಕ್ಷ ಹಾಗೂ ಬಲ ಪಂಥೀಯ ಸಂಘಟನೆಗಳು ಹಸಿ ಸುಳ್ಳು ಬಿತ್ತುವ ಮೂಲಕ, ಬಿಜೆಪಿ ಅಧಿಕಾರಕ್ಕೆ ಬಂದರೆ, ಚಿನ್ನದ ಮಳೆಯೇ ಸುರಿಯಲಿದೆ ಎಂಬುದಾಗಿ ಜನರಲ್ಲಿ ಹುಟ್ಟು ಹಾಕಿರುವ ಭ್ರಮೆಯನ್ನು ನಿವಾರಿಸುವ ಕೆಲಸವನ್ನು ಎಡ ಪಕ್ಷಗಳ ಕಾರ್ಯಕರ್ತರು ಮಾಡಬೇಕೆಂದು ಸಲಹೆ ನೀಡಿದರು.
ಪ್ರಸ್ತುತ ದೇಶದಲ್ಲಿ ಕೋಮುವಾದ-ಜಾತ್ಯಾತೀತವಾದ ಹಾಗೂ ಕಾರ್ಪೋರೇಟ್‍ಶಾಹಿ-ಶ್ರೀಸಾಮಾನ್ಯರ ಆರ್ಥಿಕ ನೀತಿಗಳ ಮೇಲೆ ಹೋರಾಟದ ಚರ್ಚೆಗಳು ನಡೆಯುತ್ತಿದ್ದು, ಬಲ ಪಂಥೀಯರ ಗುಂಪು ಶ್ರೀಮಂತರ ಪರವಾಗಿ ಆರ್ಥಿಕ ನೀತಿ ರೂಪಿಸಿ, ಈ ಸಮಾಜ ಸುಧಾರಣೆಯೇ ಆಗಬಾರದು ಯಥಾಸ್ಥಿತಿಯಲ್ಲಿಯೇ ಮುಂದುವರೆಯಬೇಕೆಂಬುದನ್ನು ಪ್ರತಿಪಾದಿಸುತಿದ್ದು, ನಾವು ಇದಕ್ಕೆ ವಿರುದ್ಧವಾಗಿ ನಿಲ್ಲಬೇಕು ಎಂದರು.
ಮೇಲ್ವರ್ಗದ ಜನರಷ್ಟೇ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಈ ದೇಶದ ರೈತರು, ಕಾರ್ಮಿಕರು ಹೋರಾಟಕ್ಕೆ ಧುಮಿಕಿದರೆ ಮಾತ್ರ ಸ್ವಾತಂತ್ರ್ಯ ಸಿಗಲು ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟು ದುಡಿಯುವ ವರ್ಗದ ಜನರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೆರೇಪಿಸಿದ ಕೀರ್ತಿ ಭಾರತೀಯ ಕಮ್ಯುನಿಷ್ಟ್ ಪಕ್ಷಕ್ಕೆ ಸಲ್ಲಲಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಹೆಚ್.ಕೆ.ರಾಮಚಂದ್ರಪ್ಪ, 1925ರ ಡಿಸೆಂಬರ್ 26ರಂದು ಜನ್ಮ ತಳೇದ ಭಾರತೀಯ ಕಮ್ಯುನಿಷ್ಟ್ ಪಕ್ಷವು ಇಂದು 93ನೇ ಸಂಸ್ಥಾಪನಾ ದಿನ ಆಚರಿಸಿಕೊಂಡಿದೆ. ನಿರಂತರ ಚಳವಳಿಯ ಮೂಲಕ ಸಮಾಜವಾದಿ ಸಮಾಜ ಸ್ಥಾಪಿಸುವ ಗುರಿಯೊಂದಿಗೆ ಜನಪರ ಹೋರಾಟ ಮಾಡಿದ್ದರ ಪರಿಣಾಮವಾಗಿ ಇಂದು ಹಲವು ಕಾಯ್ದೆ-ಕಾನೂನುಗಳು ಜಾರಿಗೆ ಬಂದಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿಪಿಐ ಜಿಲ್ಲಾ ಖಜಾಂಚಿ ಆನಂದರಾಜ್, ಪಾಲಿಕೆ ಸದಸ್ಯ ಹೆಚ್.ಜಿ.ಉಮೇಶ್, ಪಕ್ಷದ ಮುಖಂಡರಾದ ಹರಿಹರ ಪರಮೇಶ್ವರಪ್ಪ, ಆವರಗೆರೆ ವಾಸು, ಮುಹಮ್ಮದ್ ಭಾಷಾ ಜಗಳೂರು, ಸರೋಜಾ, ಗೌಸ್‍ಪೀರ್ ಉಪಸ್ಥಿತರಿದ್ದರು. ಆವರೆಗೆರೆ ಚಂದ್ರು ಸ್ವಾಗತಿಸಿದರು. ಇಪ್ಟಾ ಕಲಾವಿದರಾದ ಐರಣಿ ಚಂದ್ರು, ಲೋಕಿಕರೆ ಅಂಜಿನಪ್ಪ, ದ್ವಾರಕೀಶ್ ಕ್ರಾಂತಿಗೀತೆ ಹಾಡಿದರು. ಪಿ.ಷಣ್ಮುಖಸ್ವಾಮಿ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








