ಬೆಂಗಳೂರು
ಕಾರ್ಮಿಕ ದಿನವಾದ ಇಂದು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿವಿಧ ಕಾರ್ಮಿಕ ಸಂಘಟನೆಗಳು ತಮ್ಮ ಹಕ್ಕೋತ್ತಾಯಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ, ಸಭೆ-ಸಮಾರಂಭಗಳ ಮೂಲಕ ಕೇಂದ್ರ ಮತ್ತು ರಾಜ್ಯಸರ್ಕಾರಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ.
ಕಾರ್ಮಿಕ ದಿನಾಚರಣೆಯನ್ನು ಆಚರಿಸುವಲ್ಲಿ ರಾಜಕೀಯ ಪಕ್ಷಗಳು ಹಿಂದೆ ಬಿದ್ದಿಲ್ಲ. ವಿವಿಧ ರಾಜಕೀಯ ಪಕ್ಷಗಳ ಕಾರ್ಮಿಕ ಘಟಕಗಳ ವತಿಯಿಂದ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು. ಜೆಡಿಎಸ್ ಕೇಂದ್ರ ಕಚೇರಿಯಲ್ಲಿಂದು ಕಾರ್ಮಿಕ ದಿನಾಚರಣೆಯನ್ನು ಆಯೋಜಿಸಲಾಗಿತ್ತು.
ಕಾಂಗ್ರೆಸ್ ಕಚೇರಿಯಲ್ಲೂ ಕಾರ್ಮಿಕ ವಿಭಾಗದಿಂದ ಏರ್ಪಡಿಸಿದ್ದ ಕಾರ್ಮಿಕ ದಿನಾಚರಣೆಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಕೆ ಪಾಟೀಲ್, ಕಾರ್ಮಿಕ ಮುಖಂಡರಾದ ಎಸ್.ಎಸ್. ಪ್ರಕಾಶಂ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಎಂ.ಬಿ. ಲಕ್ಷ್ಮಿನಾರಾಯಣ ಮತ್ತಿತರರು ಉಪಸ್ಥಿತರಿದ್ದರು.
ಎಐಟಿಯುಸಿ, ಎಐಯುಟಿಯುಸಿ, ಎಐಸಿಸಿಟಿಯು, ಕರ್ನಾಟಕ ಕಾರ್ಮಿಕರ ಪಕ್ಷ, ಟ್ರೇಡ್ ಯೂನಿಯನ್ ಕ್ರೋಡಿನೇಷನ್ ಸೆಂಟರ್, ಕರ್ನಾಟಕ ಕನ್ನಡಿಗರ ವಿಜಯಪಡೆ ಸೇರಿದಂತೆ ವಿವಿಧ ಸಂಘಟನೆಗಳು ನಗರದ ಟೌನ್‍ಹಾಲ್, ಮೈಸೂರು ಬ್ಯಾಂಕ್ ಸರ್ಕಲ್, ಆನಂದರಾವ್ ಸರ್ಕಲ್ ಸಮೀಪದ ಗಾಂಧಿ ಪ್ರತಿಮೆ ಬಳಿ, ಬನಪ್ಪ ಪಾರ್ಕ್, ರೈಲ್ವೆ ನಿಲ್ದಾಣ ಮುಂತಾದ ಕಡೆಗಳಲ್ಲಿ ಪ್ರತಿಭಟನೆ, ಧರಣಿ ಮೂಲಕ ತಮ್ಮ ಹಕ್ಕೋತ್ತಾಯಗಳ ಬಗ್ಗೆ ಸರ್ಕಾರಗಳ ಗಮನ ಸೆಳೆದರು.
ಕಾರ್ಮಿಕರ ಪ್ರತಿಭಟನೆಗಳಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಪೊಲೀಸರು ಹರಸಾಹಸ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








