ಬೆಂಗಳೂರು
ಸಚಿವ ಸಂಪುಟ ಪುನಾರಚನೆ, ಖಾತೆಗಳ ಹಂಚಿಕೆ ಗೊಂದಲಗಳ ಬಳಿಕ ಇದೀಗ ಜಿಲ್ಲಾ ಉಸ್ತುವಾರಿಗಾಗಿ ಪೈಪೋಟಿ ಆರಂಭವಾಗಿದೆ.
ಮೈತ್ರಿ ಸರ್ಕಾರದಲ್ಲಿ ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ಜೆಡಿಎಸ್ ನಲ್ಲಿ ಅಷ್ಟೇನು ಪೈಪೋಟಿ ಕಂಡು ಬಂದಿಲ್ಲ. ಆದರೆ ಕಾಂಗ್ರೆಸ್ ಸಚಿವರಲ್ಲಿ ಉಸ್ತುವಾರಿ ಜಿಲ್ಲೆಗಳ ಬದಲಾವಣೆಗಾಗಿ ಸಮಸ್ಯೆ ಎದುರಾಗುವ ನಿರೀಕ್ಷೆಯಿದೆ.
ಎರಡು ಜಿಲ್ಲೆಗಳ ಉಸ್ತುವಾರಿ ಹೊಣೆ ಹೊತ್ತಿರುವ ಹಿರಿಯ ಸಚಿವರು ತಾವು ಹೊಂದಿರುವ ಉಸ್ತುವಾರಿ ಜಿಲ್ಲೆಗಳನ್ನು ಬಿಟ್ಟುಕೊಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಈಗಾಗಲೇ ತಾವು ಹೊಂದಿದ್ದ ಖಾತೆಗಳನ್ನು ನೂತನ ಸಚಿವರುಗಳಿಗೆ ಬಿಟ್ಟುಕೊಟ್ಟ ನಂತರ ಇದೀಗ ತಮ್ಮ ತವರು ಮತ್ತು ಪ್ರಾಬಲ್ಯ ಹೊಂದಿರುವ ಜಿಲ್ಲೆಗಳನ್ನು ಬಿಟ್ಟುಕೊಡಬೇಕಾದ ಸಂಕಟ ಹಿರಿಯ ಸಚಿವರದ್ದಾಗಿದೆ.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬೆಂಗಳೂರು ನಗರದ ಜತೆಗೆ ತಮ್ಮ ತವರು ತುಮಕೂರು ಜಿಲಾ ಉಸ್ತುವಾರಿ ಹೊಣೆ ಹೊತ್ತಿದ್ದಾರೆ. ಈಗ ತುಮಕೂರು ಜಿಲ್ಲೆಯ ಉಸ್ತುವಾರಿ ಇದೀಗ ಯಾರಿಗೆ ಸೇರಲಿದೆ ಎನ್ನುವುದು ಕುತೂಹಲಕ್ಕೆ ಎಡೆ ಮಾಡಿದೆ. ಕಲ್ಪತರ ನಾಡು ತುಮಕೂರಿನವರೇ ಆದ ಗುಬ್ಬಿ ಶ್ರೀನಿವಾಸ್ ಅವರಿಗೆ ದಾವಣಗೆರೆ, ವೆಂಕಟರಮಣಪ್ಪ ಅವರಿಗೆ ಚಿತ್ರದುರ್ಗ ಜಿಲ್ಲೆಯ ಉಸ್ತುವಾರಿ ವಹಿಸಲಾಗಿದೆ. ಈಗ ಪರಮೇಶ್ವರ್ ಎರಡೂ ಜಿಲ್ಲೆಗಳ ಉಸ್ತುವಾರಿಯನ್ನು ತಮ್ಮಲ್ಲೇ ಉಳಿಸಿಕೊಳ್ಳಲಿದ್ದಾರೆಯೇ ಇಲ್ಲವೆ ತುಮಕೂರು ಉಸ್ತುವಾರಿಯನ್ನು ಬಿಟ್ಟುಕೊಡಲಿದ್ದಾರೆಯೇ ಎನ್ನುವ ಚರ್ಚೆ ನಡೆಯುತ್ತಿದೆ.
ಜಲಸಂಪನ್ಮೂಲ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್ ರಾಮನಗರ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಬಹುತೇಕ ತಮ್ಮ ಸ್ವಂತ ರಾಮನಗರದ ಉಸ್ತುವಾರಿ ಉಳಿಸಿಕೊಳ್ಳಲಿದ್ದಾರೆ. ಏಕೆಂದರೆ ಇಲ್ಲಿ ಜೆಡಿಎಸ್ ಸಹ ಪ್ರಬಲ ನೆಲೆ ಹೊಂದಿದ್ದು, ತಮ್ಮ ಭದ್ರಕೋಟೆಯನ್ನು ಜೆಡಿಎಸ್ ಗೆ ಬಿಟ್ಟುಕೊಡುವ ಸಾಧ್ಯತೆಗಳಿಲ್ಲ ಎನ್ನಲಾಗಿದೆ. ಡಿ.ಕೆ. ಶಿವಕುಮಾರ್ ವೈದ್ಯಕೀಯ ಇಲಾಖೆಯನ್ನು ಬಳ್ಳಾರಿಯ ಇ. ತುಕಾರಾಂ ಅವರಿಗೆ ಬಿಟ್ಟುಕೊಟ್ಟಿದ್ದು, ತಾವು ಹೊಂದಿದ್ದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹುದ್ದೆ ಈಗಾಗಲೇ ಮಾಜಿ ಸಚಿವ ಎಚ್.ಕೆ. ಪಾಟೀಲ್ ಅವರ ಪಾಲಾಗಿದೆ. ಹೀಗಾಗಿ ಬಳ್ಳಾರಿ ಉಸ್ತುವಾರಿ ಯಾರ ಹೆಗಲಿಗೆ ಎನ್ನುವ ಚರ್ಚೆ ನಡೆಯುತ್ತಿದೆ.
ಬಳ್ಳಾರಿ ಜಿಲ್ಲೆಯಿಂದ ಇ.ತುಕಾರಾಂ ಹಾಗು ಪಿ.ಟಿ.ಪರಮೇಶ್ವರ್ ನಾಯಕ್ ನೂತನ ಸಚಿವರಾಗಿರುವ ಹಿನ್ನಲೆಯಲ್ಲಿ ಈ ಇಬ್ಬರ ನಡುವೆ ಬಳ್ಳಾರಿ ಉಸ್ತುವಾರಿಗಾಗಿ ಪೈಪೆÇೀಟಿ ಆರಂಭವಾಗಿದೆ. ಪಿ.ಟಿ. ಪರಮೇಶ್ವರ್ ನಾಯಕ್ ಕಳೆದ ಸರ್ಕಾರದ ಅವಧಿಯಲ್ಲಿ ಬಳ್ಳಾರಿ ಉಸ್ತುವಾರಿ ಜವಾಬ್ದಾರಿ ನಿಭಾಯಿಸಿದ್ದರು.
ಗೃಹ ಸಚಿವರಾಗಿರುವ ಎಂ.ಬಿ.ಪಾಟೀಲ್ ವಿಜಯಪುರ ಜಿಲ್ಲಾ ಉಸ್ತುವಾರಿಗೆ ಪಟ್ಟು ಹಿಡಿದಿದ್ದಾರೆ. ಆದರೆ ವಿಜಯಪುರ ಉಸ್ತುವಾರಿಯನ್ನು ಜೆಡಿಎಸ್ ನ ಎಂ.ಸಿ.ಮನಗೂಳಿ ಅವರಿಗೆ ನೀಡಿದ್ದು ಎಂ.ಬಿ.ಪಾಟೀಲ್ ಬಿಗಿಪಟ್ಟು ಮೈತ್ರಿ ನಾಯಕರಲ್ಲಿ ಗೊಂದಲ ಮೂಡಿಸಿದೆ. ಉತ್ತರ ಕನ್ನಡ ಜಿಲ್ಲೆ ಜೊತೆಗೆ ಧಾರವಾಡ ಜಿಲ್ಲೆಯ ಉಸ್ತುವಾರಿ ಹೊತ್ತಿರುವ ಆರ್.ವಿ.ದೇಶಪಾಂಡೆ ಧಾರವಾಡ ಜಿಲ್ಲೆಯನ್ನು ಬಿಟ್ಟುಕೊಡಬಹುದು.ಸಿ.ಎಸ್.ಶಿವಳ್ಳಿ ಅವರು ಧಾರವಾಡ ಉಸ್ತುವಾರಿ ನೀಡುವಂತೆ ಈಗಾಗಲೇ ಕೋರಿದ್ದಾರೆ.
ಕೃಷ್ಣ ಬೈರೇಗೌಡರು ಬೆಂಗಳೂರು ಗ್ರಾಮಾಂತರ, ಜೊತೆಗೆ ಕೋಲಾರ ಉಸ್ತುವಾರಿಯಾಗಿದ್ದು ಎಂ.ಟಿ.ಬಿ.ನಾಗರಾಜ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿಗೆ ಪಟ್ಟು ಹಿಡಿದಿದ್ದಾರೆ. ಬಾಗಲಕೋಟೆ ಉಸ್ತುವಾರಿ ಸಚಿವರಾಗಿರುವ ಶಿವಾನಂದ ಪಾಟೀಲ್ ಅವರು ಹೊಂದಿರುವ ಜವಾಬ್ದಾರಿ ತಮಗೆ ಬೇಕೆಂದು ನೂತನ ಸಚಿವ ಆರ್.ಬಿ.ತಿಮ್ಮಾಪುರ್ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ಶಿವಾನಂದ ಪಾಟೀಲ್ ಗೆ ಕೊಪ್ಪಳ ಅಥವಾ ಗದಗ ಜಿಲ್ಲೆಗೆ ಉಸ್ತುವಾರಿ ಸಚಿವರಾಗಬೇಕಾಗಬಹುದು. ಬೆಳಗಾವಿ ಜಿಲ್ಲೆ ಉಸ್ತುವಾರಿ ಸತೀಶ್ ಜಾರಕಿಹೊಳಿ ಅವರಿಗೆ ದೊರೆಯುವುದು ಬಹುತೇಖ ಖಚಿತವಾಗಿದೆ. . ಇಂದು ಸಂಜೆ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಗಳೂರಿಗೆ ವಾಪಸ್ಸಾಗಲಿದ್ದು ಒಂದೆರೆಡು ದಿನಗಳಲ್ಲಿ ಉಸ್ತುವಾರಿ ಸಚಿವರ ಜಿಲ್ಲೆಗಳ ಹಂಚಿಕೆ ಮಾಡಬಹುದು ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ