ತುರುವೇಕೆರೆ
ಮಾಜಿ ಶಾಸಕರು ತನ್ನ 15 ವರ್ಷದ ಆಡಳಿತ ಅವಧಿಯಲ್ಲಿ ಸಿ.ಎಸ್.ಪುರ ಹೋಬಳಿಯ ಕೆರೆಗಳಿಗೇಕೆ ಹೇಮಾವತಿ ನೀರನ್ನು ಹರಿಸಿರಲಿಲ್ಲ ಎಂದು ಶಾಸಕ ಮಸಾಲ ಜಯರಾಮ್ ಮಾಜಿ ಶಾಸಕರಿಗೆ ತಿರುಗೇಟು ನೀಡಿದ್ದಾರೆ.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲ್ಲೂಕಿನ ರೈತರ ಸ್ಥಿತಿ ಕಂಡು ನೀರಿಗಾಗಿ ಉಪವಾಸ ಮಾಡಿದ್ದನ್ನು ಅಸ್ತ್ರವಾಗಿಟ್ಟುಕೊಂಡು ಶಾಸಕರು ಕಣ್ಣೀರು ಹಾಕಿ ನಾಟಕವಾಡಿದ್ದಾರೆ ಎಂದು ಮಾಜಿ ಶಾಸಕರು ಪತ್ರಿಕಾ ಹೇಳಿಕೆ ನೀಡಿ ವಂಗ್ಯ ಮಾಡಿದ್ದಾರೆ.
ತಾಲ್ಲೂಕಿಗೆ ಹೇಮಾವತಿ ನೀರು ಹರಿಸಲು ಈಗಾಗಲೇ ಜಿಲ್ಲಾಡಳಿತ ವೇಳಾಪಟ್ಟಿಯನ್ನು ನೀಡಿದೆ. ಅದರ ನಕಲು ಇಟ್ಟುಕೊಂಡು ಮುಂದಿನ 15 ದಿನದಿಂದ ನೀರು ಹರಿಸಲು ಹೋರಾಟ ಮಾಡುತ್ತೇನೆ ಎಂದು ಸುಳ್ಳು ಅಪಪ್ರಚಾರ ಮಾಡುವ ಮಾಜಿ ಶಾಸಕರೆ ನಿಮ್ಮದೆ ಸರ್ಕಾರ ಇದೆ, ನಿಮ್ಮ ಪಕ್ಷದವರೇ ಮುಖ್ಯಮಂತ್ರಿಗಳಾಗಿದ್ದಾರೆ.
ನಿಮಗೆ ರೈತರ ಪರ ಕಾಳಜಿ ಇದ್ದರೆ ಇಂದಿನಿಂದಲೇ ನಿಮ್ಮ ಶಕ್ತಿ ಪ್ರದರ್ಶಿಸಿ ತಾಲ್ಲೂಕಿಗೆ ನೀರು ಹರಿಸಿ ನೋಡೋಣ ಎಂದು ನೇರ ಸವಾಲು ಹಾಕಿದರು.
ಇಂದು ಮಳೆ ಇಲ್ಲದೆ ಬೋರ್‍ವೆಲ್‍ಗಳಲ್ಲಿ ನೀರಿಲ್ಲದೆ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ನಾನು ರೈತರ ಮಗನಾಗಿ ತಾಲ್ಲೂಕಿನ ಶಾಸಕನಾಗಿ ರೈತರ ಕಷ್ಟವನ್ನು ನೋಡಲಾಗದೆ ಕಣ್ಣೀರು ಹಾಕಬೇಕಿದೆ. ರಾಜ್ಯ ಸರ್ಕಾರ ನನ್ನ ಕ್ಷೇತ್ರವನ್ನು ಮಲತಾಯಿ ಧೋರಣೆಯಲ್ಲಿ ನೋಡುತ್ತಿದೆ.
ಬರಗಾಲ ಪಟ್ಟಿಯಿಂದಲೂ ನಮ್ಮ ತಾಲ್ಲೂಕನ್ನು ಕೈಬಿಟ್ಟಿದ್ದು, ಹೇಮಾವತಿ ನೀರನ್ನು ಸಹ ತಾಲ್ಲೂಕಿಗೆ ಹರಿಸದೆ ಸರ್ಕಾರ ಆಡಳಿತ ದುರುಪಯೋಗ ಮಾಡಿಕೊಂಡು ಅಧಿಕಾರಿಗಳನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡು ಬೇರೆ ಕಡೆಗೆ ತೆಗೆದುಕೊಂಡು ಹೋಗುತ್ತಿದ್ದು ತಾಲ್ಲೂಕಿನ ರೈತರಿಗೆ ಅನ್ಯಾಯ ಮಾಡುತ್ತಿದೆ. ಇದರಿಂದ ಬೇಸತ್ತು ರೈತರ ಹಿತ ದೃಷ್ಟಿಯಿಂದ ಉಪವಾಸ ಕೈಗೊಳ್ಳಲಾಯಿತೇ ವಿನಃ ನಾಟಕವಲ್ಲ ಎಂದು ಛೇಡಿಸಿದರು.
ಮಂಗಳವಾರ ತಾಲ್ಲೂಕು ಸಂಪೂರ್ಣ ಬಂದ್‍ಗೆ ಕರೆ : ಸರ್ಕಾರ ಜಿಲ್ಲೆಯ 9 ತಾಲ್ಲೂಕುಗಳನ್ನು ಬರಗಾಲ ಎಂದು ಘೋಷಿಸಿ ಬರಗಾಲ ಪಟ್ಟಿಯಲ್ಲಿ ತುರುವೇಕೆರೆ ತಾಲ್ಲೂಕನ್ನು ಕೈಬಿಟ್ಟಿದ್ದು ಕೂಡಲೇ ತಾಲ್ಲೂಕನ್ನು ಬರಗಾಲ ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿ ತಾಲ್ಲೂಕು ಬಿಜೆಪಿ, ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ರೈತ, ಕನ್ನಡ ಪರ ಸಂಘಟನೆಗಳ ವತಿಯಿಂದ ಮಂಗಳವಾರ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ತಾಲ್ಲೂಕು ಸಂಪೂರ್ಣ ಬಂದ್‍ಗೆ ಕರೆ ನೀಡಲಾಗಿದೆ.
ಆದ್ದರಿಂದ ತಾಲ್ಲೂಕಿನ ಎಲ್ಲಾ ರೈತರು, ವಿದ್ಯಾರ್ಥಿಗಳು, ವ್ಯಾಪಾರಿಗಳು, ವಾಹನ ಮಾಲೀಕರು ಹಾಗು ಕಾರ್ಯಕರ್ತರು ಬಂದ್‍ನಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದರು.ಗೋಷ್ಠಿಯಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಲಚ್ಚಿಬಾಬು, ತಾಲ್ಲೂಕು ಬಿಜೆಪಿ ಅಧ್ಯಕ್ಷ ದುಂಡರೇಣುಕಪ್ಪ, ತಾ.ಪಂ. ಮಾಜಿ ಸದಸ್ಯ ಮಾಚೇನಹಳ್ಳಿ ವಿಶ್ವಣ್ಣ, ಮುಖಂಡರಾದ ಕಡೇಹಳ್ಳಿಸಿದ್ದೇಗೌಡ, ಹೇಮಚಂದ್ರು, ಸೋಮಣ್ಣ, ಮುತ್ತಣ್ಣ, ಯೋಗಾನಂದ್, ಪ್ರಕಾಶ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ.








