ಕಾಮಗಾರಿಗಳನ್ನು ಕಾಲಮಿತಿಯೊಳಗೆ  ಪೂರ್ಣಗೊಳಿಸಲು ನಾವು ಬದ್ಧ : ಅಜಯ್ ವಿ

ತುಮಕೂರು
 
   ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಅಗತ್ಯ ಸುರಕ್ಷತಾ ಕ್ರಮದಡಿ ನಿಗಧಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸ್ಮಾರ್ಟ್ ಸಿಟಿ ಲಿಮಿಟೆಡ್ ಬದ್ಧವಾಗಿದೆ ಎಂದು ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಅಜಯ್ ವಿ. ತಿಳಿಸಿದ್ದಾರೆ. 
    ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಯಡಿ ಬೆಂಗಳೂರಿನ ಭವಿಷ್ಯದ ಉಪನಗರಿ ಎಂದೇ ಕರೆಯಲ್ಪಡುವ ತುಮಕೂರು ನಗರವನ್ನು ಎಲ್ಲ ರೀತಿಯಲ್ಲೂ `ಸ್ಮಾರ್ಟ್ ಸಿಟಿ’ಯನ್ನಾಗಿಸಲು ಸ್ಮಾರ್ಟ್ ಸಿಟಿ ಲಿಮಿಟೆಡ್ ಕಟಿಬದ್ಧವಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಪ್ರಕ್ರಿಯೆಯು 2016 ರಿಂದ ಚಾಲನೆಗೊಂಡಿದ್ದು, 5 ವರ್ಷಗಳ ಕಾಲಾವಧಿಯದ್ದಾಗಿದೆ. ತುಮಕೂರು ನಗರವನ್ನು 2021ನೇ ಸಾಲಿನೊಳಗೆ ಸಂಪೂರ್ಣ ನವೀಕೃತವಾಗಿ ಅಭಿವೃದ್ಧಿಗೊಳಿಸಬೇಕೆಂಬ ಗುರಿಯನ್ನು ಹೊಂದಲಾಗಿದೆ.
     ಯೋಜನೆಯನ್ನು ಶೀಘ್ರಗತಿಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯನ್ನು ಡಿಸೆಂಬರ್ 2019ರೊಳಗೆ ಪೂರ್ಣಗೊಳಿಸಿ ಕಾಮಗಾರಿಗಳಿಗೆ ಚಾಲನೆ ನೀಡಲು ಕೇಂದ್ರ ಸರಕಾರ ಸೂಚನೆ ನೀಡಿರುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಎಲ್ಲಾ ಕಾಮಗಾರಿಗಳನ್ನು ಒಟ್ಟಿಗೆ ಪ್ರಾರಂಭಿಸಲಾಗಿದೆ. ಈ ಕಾರ್ಯ ಯೋಜನೆಯಿಂದ ಕೇಂದ್ರ ಸರಕಾರವು ಪ್ರತಿ ವಾರ ನೀಡುವ ಸ್ಮಾರ್ಟ್ ಸಿಟಿಗಳ ಶ್ರೇಯಾಂಕ(Ranking) ಪಟ್ಟಿಯಲ್ಲಿ ನೂರು ಸ್ಮಾರ್ಟ್ ಸಿಟಿ ನಗರಗಳ ಪೈಕಿ 21ನೇ ಸ್ಥಾನದಲ್ಲಿದ್ದ ತುಮಕೂರು ಸ್ಮಾರ್ಟ್ ಸಿಟಿಯು 20ನೇ ಸ್ಥಾನ ಪಡೆದುಕೊಂಡಿದ್ದು, ಕರ್ನಾಟಕದ ಏಳು ಸ್ಮಾರ್ಟ್ ಸಿಟಿ ನಗರಗಳ ಪೈಕಿ 2ನೇ ಸ್ಥಾನದಲ್ಲಿ ಇದೆ.
       ಯೋಜನಾಬದ್ಧವಾದ ನಗರೀಕರಣ ಪ್ರಕ್ರಿಯೆಗೆ ಚಾಲನೆ ನೀಡುವ ‘ಸ್ಮಾರ್ಟ್ ಸಿಟಿ’ಯು ಕೇಂದ್ರ ಹಾಗೂ ರಾಜ್ಯ ಸರಕಾರ ಜಂಟಿ ಯೋಜನೆಯಾಗಿದೆ. ಕೇಂದ್ರದ ಶೇ.50 ಹಾಗೂ ರಾಜ್ಯ ಸರ್ಕಾರದ ಶೇ.50ರಷ್ಟು ಸೇರಿದಂತೆ ಒಟ್ಟು 1000 ಕೋಟಿ ರೂ.ಗಳ ಅನುದಾನ  ವಿನಿಯೋಗಿಸಿಕೊಂಡು ಹಾಗೂ ಉಳಿದ 344 ಕೋಟಿ ರೂಪಾಯಿಗಳು ಪಿಪಿಪಿ(Public  Private Patrnership) ಮೂಲಕ ತುಮಕೂರು ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿಸಲು ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಆಧುನಿಕ ತಂತ್ರಜ್ಞಾನದ ಸ್ಪರ್ಶಕ್ಕೆ ಆದ್ಯತೆ :-
    ಹಳೆಯ ನಗರೀಕರಣದ ಪರಿಕಲ್ಪನೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡುವುದೇ `ಸ್ಮಾಟ್ ಸಿಟಿ’ ಎಂದು ಸರಳವಾಗಿ ಹೇಳಬಹುದು. ಇಲ್ಲಿ ಪ್ರಮುಖವಾಗಿ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿರುವಂತಹ ಮೂಲಸೌಕರ್ಯಗಳ ಜೊತೆಗೆ ಮಾಹಿತಿ, ಸಂವಹನ ಹಾಗೂ ತಂತ್ರಜ್ಞಾನಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಡಿಜಿಟಲ್ ಮತ್ತು ಮಾಹಿತಿ ತಂತ್ರಜ್ಞಾನ(ಐಸಿಟಿ)ವನ್ನು ಬಳಸಿಕೊಂಡು ನಗರದ ಮೂಲ ಸೌಕರ್ಯಗಳಾದ ರಸ್ತೆ ಅಭಿವೃದ್ಧಿ, ನೀರು, ವಿದ್ಯುತ್ ಪೂರೈಕೆ, ಒಳಚರಂಡಿ ವ್ಯವಸ್ಥೆ, ಘನ ತ್ಯಾಜ್ಯ ನಿರ್ವಹಣೆ, ಸಾರಿಗೆ ಸಂಪರ್ಕ, ಮಾಹಿತಿ ಮತ್ತು ತಂತ್ರಜ್ಞಾನ ಸಂಪರ್ಕ, ಇ-ಆಡಳಿತ, ನಾಗರಿಕರ ಪಾಲ್ಗೊಳ್ಳುವಿಕೆ, ಸುರಕ್ಷತೆ ಹಾಗೂ ಭದ್ರತೆ ಸೇರಿದಂತೆ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದೇ ಇದರ ಉದ್ದೇಶವಾಗಿದೆ.
950 ಎಕರೆ ಪ್ರದೇಶದಲ್ಲಿ ಕಾಮಗಾರಿ ಪ್ರಗತಿ :-
    ಸ್ಮಾರ್ಟ್ ಸಿಟಿ ಯೋಜನೆಯಡಿ ಆರಂಭಿಕವಾಗಿ ತುಮಕೂರು ನಗರದ 4, 5, 8, 10, 14, 15, 16 ಹಾಗೂ 19 ವಾರ್ಡ್‍ಗಳ ವ್ಯಾಪ್ತಿಗೆ ಬರುವ 950 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದೆ.
     ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್(tscl)ನ ಅಧ್ಯಕ್ಷೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್ ಅವರ ಸಲಹೆ-ಸೂಚನೆ ಹಾಗೂ ಮಾರ್ಗದರ್ಶನದಲ್ಲಿ ಯೋಜನಾ ನಿರ್ವಹಣ ಸಲಹೆದಾರ ಸಂಸ್ಧೆಯಾದ ಐಪಿಇ ಗ್ಲೋಬಲ್  ಲಿಮಿಟೆಡ್ ಹಾಗೂ ಸಹಭಾಗಿತ್ವ ಸಂಸ್ಥೆಗಳಾದ ಗ್ರಾಂಟ್ ಥಾನ್ರ್ಟನ್ ಎಲ್‍ಎಲ್‍ಪಿ, ಮತ್ತು ಆರ್ಯವರ್ತ ಡಿಸೈನ್ ಕನ್ಸಲ್ಟೆಂಟ್ಸ್ ಎಲ್‍ಎಲ್‍ಪಿ ತಜ್ಞರ ತಂಡದಿಂದ  ಎಸ್.ಸಿ.ಪಿಯ  ಕಾರ್ಯ ನಿರ್ದೇಶನ ಸೂಚಿಯಂತೆ ವಿಸ್ತøತ ಯೋಜನಾ ವರದಿ ಮತ್ತು ಇತರ ವರದಿಗಳನ್ನು ಸಿದ್ಧಪಡಿಸಿ ಕಾರ್ಯರೂಪಕ್ಕೆ ತರುವುದರೊಂದಿಗೆ ಮೇಲ್ಚಿಚಾರಣೆಯನ್ನು ಸಹ ಮಾಡಲಾಗುತ್ತಿದೆ.
 
     ತುಮಕೂರು ನಗರದ ಪ್ರದೇಶಾಧಾರಿತ ಅಭಿವೃದ್ಧಿ ವ್ಯಾಪ್ತಿಯಲ್ಲಿ ಬರುವ ಪ್ರಮುಖ ರಸ್ತೆಗಳನ್ನು ಸ್ಮಾರ್ಟ್ ರಸ್ತೆಗಳನ್ನಾಗಿ ಪರಿವರ್ತಿಸಲು 245.42ಕೋಟಿ ರೂ.ಗಳ ಯೋಜನೆಯನ್ನು ರೂಪಿಸಲಾಗಿದ್ದು, ಅನುಷ್ಟಾನದ ಹಂತದಲ್ಲಿದೆ. ಸ್ಮಾರ್ಟ್ ರಸ್ತೆಯಲ್ಲಿ ಉತ್ತಮ ಪಾದಚಾರಿ ಮಾರ್ಗ, ಪ್ರತ್ಯೇಕ ಬೈಸಿಕಲ್ ಟ್ರ್ಯಾಕ್, ಅಂಡರ್ ಗ್ರೌಂಡ್ ಡಕ್ಟಿಂಗ್, ಬಹು ಕ್ರಿಯಾತ್ಮಕ ವಲಯ , ಹಸಿರು ವಲಯ ಮುಂತಾದ ಅನುಕೂಲಗಳನ್ನು ಅಳವಡಿಸಲು ಯೋಜಿಸಲಾಗಿದ್ದು, ನಾಗರಿಕರಿಗೆ ಉತ್ತಮ ಸೌಲಭ್ಯವನ್ನು ನೀಡಲು ಉತ್ತಮ ಹೆಜ್ಜೆ ಇಟ್ಟಿದೆ.
     ಅಲ್ಲದೆ ಎಲ್ಲ ಸೇವೆಗಳನ್ನು ಒದಗಿಸುವ ಏಕಗವಾಕ್ಷಿ ವ್ಯವಸ್ಥೆಯಡಿ ನಾಗರಿಕ ಸೌಲಭ್ಯ ಒದಗಿಸಲು ಕುಡಿಯುವ ನೀರಿನ ಕೊಳವೆ, ಒಳಚರಂಡಿ ಮಾರ್ಗ, ಬೆಸ್ಕಾಂ ಸಂಪರ್ಕ ಜಾಲ, ಆಪ್ಟಿಕಲ್ ಫೈಬರ್ ಕೇಬಲ್, ಸಿಸಿ ಟಿ.ವಿ. ಕೇಬಲ್, ಗ್ಯಾಸ್ ಸಂಪರ್ಕ ಜಾಲ ಸೌಲಭ್ಯಗಳಿಗೂ ರಸ್ತೆ ಬದಿಯಲ್ಲಿ ಯುಟಿಲಿಟಿ ಡಕ್ಟ್(ಸೇವಾ ಸಂಪರ್ಕ ಜಾಲದ ನೆಲದಡಿ ಮಾರ್ಗ)ವ್ಯವಸ್ಥೆ ಕಲ್ಪಿಸುವ ಮಹತ್ವದ ಯೋಜನೆಯನ್ನು ರೂಪಿಸಿದ್ದು, ಕಾಮಗಾರಿ ಭರದಿಂದ ಸಾಗಿದೆ.  ನಾಗರಿಕ ಸೌಲಭ್ಯಗಳ ಸಮಸ್ಯೆ ಉಂಟಾದಲ್ಲಿ ಯುಟಿಲಿಟಿ ಡಕ್ಟ್ ತೆರೆದು ದುರಸ್ತಿ ಕೈಗೊಳ್ಳಲು ಈ ಡಕ್ಟ್ ಪದ್ಧತಿ ಅನುಕೂಲಕರವಾಗಲಿದೆ. 
      ಈಗಾಗಲೇ ಫೀಲ್ಡ್ ಮಾರ್ಷಲ್ ಕಾರಿಯಪ್ಪ ರಸ್ತೆ, ಜೆ.ಸಿ.ರಸ್ತೆ, ಎಂ.ಜಿ.ರಸ್ತೆ, ವಿವೇಕಾನಂದ ರಸ್ತೆ, ಹೊರಪೇಟೆ ರಸ್ತೆ, ಮಂಡಿಪೇಟೆ ಮೊದಲನೇ ಮತ್ತು ಎರಡನೇ ಮುಖ್ಯರಸ್ತೆ, ಖಾಸಗಿ  ಬಸ್ ನಿಲ್ದಾಣದ ಉತ್ತರ ರಸ್ತೆ,  ಭಗವಾನ್ ಮಹಾವೀರ್ ಜೈನ್ ರಸ್ತೆ, ಅಶೋಕ ರಸ್ತೆ, ಬೆಳಗುಂಬ ರಸ್ತೆ, ರಾಧಕೃಷ್ಣ ರಸ್ತೆ, ಬಿ.ಹೆಚ್.ರಸ್ತೆಯಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿದೆ.  ಇದರ ಜೊತೆಗೆ ಎಬಿಡಿ ವ್ಯಾಪ್ತಿಗೆ ಬರುವ 9 ರಿಂದ  12 ಮೀಟರ್ ಹೊಂದಿರುವ ರಸ್ತೆಗಳನ್ನು ಸಹ ಸ್ಮಾರ್ಟ್ ರಸ್ತೆಗಳನ್ನಾಗಿ ಪರಿವರ್ತಿಸಲು ಸ್ಮಾರ್ಟ್ ಸಿಟಿ ಲಿಮಿಟೆಡ್ ಮುಂದಾಗಿದ್ದು, ಈ ಯೋಜನೆಯಲ್ಲಿ ಸುಮಾರು 83 ಸಣ್ಣ ರಸ್ತೆಗಳನ್ನು ಗುರುತಿಸಿ ಕೆಲವು ರಸ್ತೆಗಳಲ್ಲಿ ಕಾಮಗಾರಿ ಕೈಗೊಂಡು ಪ್ರಗತಿಯಲ್ಲಿವೆ.  
      ಸ್ಮಾರ್ಟ್ ಸಿಟಿ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಮಹಾನಗರ ಪಾಲಿಕೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬಿಎಸ್‍ಎನ್‍ಎಲ್, ಮತ್ತಿತರ ಇಲಾಖೆಗಳ ಸಮನ್ವಯತೆಯಿಂದ ಕೈಗೊಂಡಿದ್ದು, ತ್ವರಿತಗತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.
 
      ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಸಮನ್ವಯ ಸಮತಿ ರಚಿಸಿ ಪ್ರತಿ ತಿಂಗಳು ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಿರ್ವಹಿಸಲು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲು ಸಂಬಂಧ ಪಟ್ಟ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.  
 
      ಯೋಜನೆಗಳ ಅನುಷ್ಠಾನವನ್ನು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಅಧ್ಯಕ್ಷೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸಹ ಆಗಾಗ್ಗೆ ಪರಿವೀಕ್ಷಣೆ ಮಾಡುತ್ತಿದ್ದು, ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಶೀಘ್ರಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚನೆ ನೀಡಿದ್ದಾರೆ.   
      ಅಡುಗೆ ಅನಿಲ ಪೈಪ್ ಲೈನ್(ಗ್ಯಾಸ್ ಪೈಪ್ ಲೈನ್), ವಿದ್ಯುತ್ ಲೈನ್, ದೂರಸಂಪರ್ಕ ಲೈನ್, 24ಘಿ7 ಕುಡಿಯುವ ನೀರಿನ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸಂಬಂಧಪಟ್ಟ ಇಲಾಖೆಗಳು ಸಹ ಸಮಾನಾಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಜಗತ್ತಿನ ಬಹುತೇಕ ಪ್ರಮುಖ ನಗರಗಳ ರಸ್ತೆಗಳು ಅಳವಡಿಸಿಕೊಂಡಿರುವ ಮಾದರಿಯಲ್ಲಿ ರಸ್ತೆಯನ್ನು ಪದೇ ಪದೇ ಅಗೆಯಲು ಅವಕಾಶ ಇಲ್ಲದಂತೆ ಅಂತರಾಷ್ಟ್ರೀಯ ಗುಣ ಮಟ್ಟದಲ್ಲಿ ವಿನ್ಯಾಸಗೊಳಿಸುವ ಯೋಜನೆಯನ್ನು ಸಿದ್ಧಪಡಿಸಿ ಕಾರ್ಯಗತಗೊಳಿಸಲಾಗುತ್ತಿದೆ.
      ಇತ್ತೀಚಿಗೆ ಸತತ ಮಳೆಯಿಂದಾಗಿ ನಗರದಲ್ಲಿ ಕಾಮಗಾರಿ ಪ್ರಗತಿಯಲ್ಲಿರುವ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿದೆ. ಕಾಮಗಾರಿಯಿಂದ ಸಾರ್ವಜನಿಕರಿಗೆ ತಾತ್ಕಾಲಿಕ ತೊಂದರೆ ಆಗಬಹುದು. ಸ್ಮಾರ್ಟ್ ರಸ್ತೆಗಳ ಯಶಸ್ವಿ ಅನುಷ್ಠಾನದ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ದೊರೆಯುವ ಸೌಲಭ್ಯಗಳನ್ನು ಅರಿತು ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
        ಸ್ಮಾರ್ಟ್ ರಸ್ತೆಗಳ ಯಶಸ್ವಿ ಅನುಷ್ಠಾನ ಕೈಗೊಳ್ಳುವಾಗ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಸಂಬಂಧಪಟ್ಟ ಗುತ್ತಿಗೆದಾರರಿಗೆ  ಸೂಚಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳುವ ಎಲ್ಲ ಕಾಮಗಾರಿಗಳು ಶಾಶ್ವತ ಕಾಮಗಾರಿಯಾಗಿದ್ದು, ಸ್ಮಾರ್ಟ್ ರಸ್ತೆ ಪೂರ್ಣಗೊಂಡ ಬಳಿಕ ಯಾವುದೇ ಕಾರಣಕ್ಕೂ  ಪುನಃ ರಸ್ತೆಗಳನ್ನು ಅಗೆಯಲು ಅವಕಾಶ ನೀಡುವುದಿಲ್ಲ. ಕೈಗೊಂಡ ಕಾಮಗಾರಿಗಳನ್ನೇ ಮತ್ತೆ ಮತ್ತೆ ಅನಗತ್ಯವಾಗಿ ಕೈಗೊಳ್ಳುವುದರಿಂದ ಸಾರ್ವಜನಿಕ ಹಣವನ್ನು ಫೋಲು ಮಾಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ಮಾರ್ಟ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದ್ದು, ಪುನಃ ರಸ್ತೆಗಳನ್ನು ಅಗೆದು ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೂಡಲೇ ಕುಡಿಯುವ ನೀರು ಮತ್ತು ಗ್ಯಾಸ್ ಲೈನ್ ಸಂಪರ್ಕ ಪಡೆಯಬೇಕೆಂದು ಅವರು ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳ ಸೂಚನೆ:-
        ನಗರದಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಬೀಳುತ್ತಿರುವ ಮಳೆಯಿಂದ ಕಾಮಗಾರಿ ಅನುಷ್ಠಾನದಲ್ಲಿ ವಿಳಂಬವಾಗಿದ್ದು, ಕೂಡಲೇ ಅಗತ್ಯ ಕ್ರಮಕೈಗೊಂಡು ತ್ವರಿತಗತಿಯಲ್ಲಿ  2-3 ತಿಂಗಳೊಳಗೆ ಪೂರ್ಣಗೊಳಿಸಲು ಹಾಗೂ ಎಲ್ಲಾ ಕಾಮಗಾರಿಗಳ ಗುಣಮಟ್ಟ ಮತ್ತು ಪಾರದರ್ಶಕತೆ ಕಾಪಾಡಲು ಕಾಮಗಾರಿಗಳನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ಜಿಲ್ಲಾಧಿಕಾರಿಗಳಿಂದ  ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link