ಚಿತ್ರದುರ್ಗ:
ವಿಶ್ವವ್ಯಾಪಾರ ಸಂಘಟನೆಯಲ್ಲಿ ಭಾರತದ ಕಬ್ಬು ಬೆಳೆಗಾರರ ಮೇಲೆ ಬ್ರೆಜಿಲ್ ದಾಳಿ ಮಾಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಶುಕ್ರವಾರ ಜಿಲ್ಲಾಧಿಕಾರಿ ಮೂಲಕ ದೇಶದ ಪ್ರಧಾನಿ ನರೇಂದ್ರಮೋದಿಗೆ ಮನವಿ ಸಲ್ಲಿಸಲಾಯಿತು.
2020 ರ ಗಣರಾಜ್ಯೋತ್ಸವಕ್ಕೆ ಬ್ರೆಜಿಲ್ ಅಧ್ಯಕ್ಷ ಬೋಲ್ಸೋನಾರೋಗೆ ಭಾರತ ನೀಡಿರುವ ಆಹ್ವಾನವನ್ನು ಪ್ರಧಾನಿ ಹಿಂದಕ್ಕೆ ತೆಗೆದುಕೊಳ್ಳಬೇಕು. ಡಬ್ಲ್ಯುಟಿಓ ಅಡಿಯಲ್ಲಿ ವ್ಯಾಪಾರದ ಬಗ್ಗೆ ಗಂಭೀರವಾದ ಮರು ಚಿಂತನೆ ನಡೆಸಿ ಕೃಷಿಯನ್ನು ಡಬ್ಲ್ಯುಟಿಯಿಂದ ಹೊರಗಿಡಬೇಕು. ಭಾರತದ ನೂರಾರು ಕಬ್ಬು ಬೆಳೆಗಾರರ ಜೀವನೋಪಾಯಕ್ಕೆ ಬೋಲ್ಸೊನಾರೋ ನೇತೃತ್ವದ ಬ್ರೆಜಿಲ್ ಸರ್ಕಾರ ನೇರವಾಗಿ ಬೆದರಿಕೆ ಹಾಕುತ್ತಿದೆ.
ಭಾರತವನ್ನು ವಿಶ್ವ ವಾಣಿಜ್ಯ ಸಂಸ್ಥೆಯ ವಿವಾದ ಇತ್ಯರ್ಥ ಸಂಸ್ಥೆಗೆ ಎಳೆದು ತಂದಿದೆ. ಕಬ್ಬು ಬೆಳೆಗಾರರು ಶೋಷಣೆಗೆ ಒಳಗಾಗುವುದನ್ನು ತಡೆಯಲು ಸಹಾಯ ಮಾಡುವ ಎಫ್.ಆರ್.ಸಿ. ಎಂಬ ಭಾರತೀಯ ಸರ್ಕಾರವು ನಿಗಧಿಪಡಿಸಿದ ಕಬ್ಬಿನ ಕನಿಷ್ಟ ಬೆಲೆಯನ್ನು ಪ್ರಶ್ನಿಸಿದೆ. ಇದು ಸಕ್ಕರೆ ಕಾರ್ಖಾನೆಗಳಿಂದ ನ್ಯಾಯೋಚಿತವಾದ ಬೆಲೆ ಪಡೆಯಲು ರೈತರಿಗೆ ಸಹಾಯಕವಾಗಿತ್ತು ಎಂದು ರೈತರು ನೀಡಿರುವ ಮನವಿಯಲ್ಲಿ ತಿಳಿಸಿದ್ದಾರೆ.