ದಾವಣಗೆರೆ
ಜಿಲ್ಲೆಯಲ್ಲಿ ಗುರುತಿಸಿರುವ 25 ಪ್ರವಾಸಿ ತಾಣಗಳಿಗೆ ಅಗತ್ಯವಾಗಿ ಏನೇನು ಬೇಕೆಂಬುದರ ಬಗ್ಗೆ ಸಮೀಕ್ಷೆ ನಡೆಸಬೇಕೆಂದು ಪ್ರವಾಸೋಧ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಹರಿಹರದ ಹರಿಹರೇಶ್ವರ ದೇವಾಲಯ, ಕೊಂಡಜ್ಜಿ ಕೆರೆ ಮತ್ತು ಸ್ಕೌಟ್ ಭವನ, ಚನ್ನಗಿರಯ ಶಾಂತಿಸಾಗರ, ಸಂತೇಬೆನ್ನೂರಿನ ಪುಷ್ಕರಣಿ, ಹೊನ್ನಾಳಿಯ ತೀರ್ಥರಾಮೇಶ್ವರ ರಾಜ್ಯ ಮಟ್ಟದ ಪ್ರವಾಸಿ ತಾಣಗಳೆಂದು ಗುರುತಿಸಲಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಇನ್ನೂ 20 ಪ್ರವಾಸಿ ತಾಣಗಳಿದ್ದು, ಈ ಎಲ್ಲಾ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯ, ಸಂಪರ್ಕ, ಆತಿಥ್ಯ, ಹೋಟೆಲ್, ಸ್ಟಾರ್ ಹೋಟೆಲ್ ಅವಶ್ಯಕತೆ ಸೇರಿದಂತೆ ಏನೇನು ಅಗತ್ಯವಾಗಿ ಬೇಕೆಂಬುದರ ಬಗ್ಗೆ ಸಮೀಕ್ಷೆ ಮಾಡಿದರೆ, ಸಬ್ಸಿಡಿಯಲ್ಲಿ ಸೌಲಭ್ಯ ಪಡೆಯುವ ಫಲಾನುಭವಿಗಳಿಂದ ಅವುಗಳನ್ನು ಪೂರೈಸಲು ಅನುಕೂಲವಾಗಲಿದೆ. ಆದ್ದರಿಂದ ಈ ಬಗ್ಗೆ ಜಿಲ್ಲಾಧಿಕಾರಿಗಳು ಸಮೀಕ್ಷೆ ನಡೆಸಬೇಕೆಂದು ಸೂಚಿಸಿದರು.
ಎಸ್ಸಿ-ಎಸ್ಟಿ ಗ್ರ್ಯಾಂಟ್ ಬಳಸಿದ್ದರೆ ಕ್ರಮ:
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಡಾ.ತಿಪ್ಪೇಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ 2009 ರಿಂದ ಇದುವರೆಗೆ ಪ್ರವಾಸಿ ಟ್ಯಾಕ್ಸಿ ಖರೀದಗೆ 576 ನಿಗದಿತ ಗುರಿಯಲ್ಲಿ 488 ಫಲಾನುಭವಿಗಳಿಗೆ ಸಹಾಯಧನ ಒದಗಿಸಲಾಗಿದೆ ಎನ್ನುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಸಚಿವ ಸಿ.ಟಿ.ರವಿ, 2011-12ನೇ ಸಾಲಿನ ಗುರಿ ಸಾಧಿಸುವುದರಲ್ಲಿಯೇ ಎರಡು ಬಾಕಿ ಇದೆ. ಏಕೆ ಎಂದು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ, ಆಯ್ಕೆಯಾಗಿದ್ದ ಫಲಾನುಭವಿಗಳು ಬೇರೆ, ಬೇರೆ ಬ್ಯಾಂಕ್‍ಗಳಲ್ಲಿ ಸಾಲ ಮಾಡಿದ್ದರಿಂದ ಅವರಿಗೆ ಬ್ಯಾಂಕ್‍ನವರು ಸಾಲ ನೀಡಲು ಮುಂದೆ ಬಂದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸಿ.ಟಿ.ರವಿ, ಆ ಫಲಾನುಭವಿಗಳಿಗೆ ನೀಡಿರುವ ಕಾರ್ಯಾದೇಶವನ್ನು ರದ್ದು ಮಾಡಿ, ಬೇರೆಯ ಅರ್ಹ ಫಲಾನುಭವಿಗಳಿಗೆ ನೀಡಿ, ಎಸ್ಸಿ-ಎಸ್ಟಿ ಗ್ರ್ಯಾಂಟ್ ನಿಲ್ಲಿಸಲು ಬರುವುದೇ ಇಲ್ಲ. ಎಸ್‍ಸಿಪಿ ಮತ್ತು ಟಿಎಸ್‍ಪಿ ವಿಶೇಷ ಘಟಕ ಯೋಜನೆಗಳ ಅಡಿಯಲ್ಲಿ ಬಿಡುಗಡೆ ಆಗಿರುವ ಅನುದಾನವನ್ನು ಆಯಾ ವರ್ಷಗಳಲ್ಲಿಯೇ ಖರ್ಚು ಮಾಡಬೇಕು. ಹೀಗಾಗಿ ಫಲಾನುಭವಿಗಳನ್ನು ಹುಡುಕಿ ಕೊಡಬೇಕು. ಒಂದು ವೇಳೆ ಆ ಗ್ರ್ಯಾಂಟ್ ಖರ್ಚು ಮಾಡದೇ ಇದ್ದರೇ ಈಗ ಇರುವ ನಿಯಮದ ಪ್ರಕಾರ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕ್ರಾಸ್ ವೇರಿಫಿಕೇಷನ್:
ಜಿಲ್ಲೆಗೆ ಇನ್ನೂ ಎಷ್ಟು ಟ್ಯಾಕ್ಸಿಬೇಕು, ಅವುಗಳ ಜೊತೆಗೆ ಕ್ಯಾಂಟೀನ್, ರೆಸ್ಟೋರೆಂಟ್‍ಬೇಕೇ ಎಂಬುದರ ಬಗ್ಗೆ ಸಮೀಕ್ಷೆ ನಡೆಸಿ ಹಾಗೂ ಈ ವರೆಗೂ ಪ್ರವಾಸೋಧ್ಯಮ ಇಲಾಖೆಯಿಂದ ಟ್ಯಾಕ್ಸಿ ಪಡೆದಿರುವ 492 ಫಲಾನುಭವಿಗಳು ಯಾವ ಉದ್ದೇಶಕ್ಕೆ ಟ್ಯಾಕ್ಸಿ ಬಳಿಸುತ್ತಿದ್ದಾರೆ ಮತ್ತು ಎಲ್ಲೋ ಬೋರ್ಡ್ ಅನ್ನು ವೈಟ್ ಬೋರ್ಡ್‍ಗೆ ಪರಿವರ್ತನೆ ಮಾಡಿಕೊಂಡಿದ್ದಾರೆಯೇ ಎಂಬುದರ ಬಗ್ಗೆ ಕ್ರಾಸ್ ವೆರಿಫಿಕೇಷನ್ ಮಾಡಿಸಿ ಎಂದು ಸೂಚನೆ ನೀಡಿದರು.
ಇಲಾಖೆಯ ಸಹಾಯಕ ನಿರ್ದೇಶಕ ಡಾ.ತಿಪ್ಪೇಸ್ವಾಮಿ, ಕರ್ನಾಟಕ ದರ್ಶನ ಯೋಜನೆಯಡಿ 6,143 ವಿದ್ಯಾರ್ಥಿಗಳು ಪ್ರವಾಸ ಕೈಗೊಂಡಿದ್ದಾರೆ. ಜಿಲ್ಲೆಗೆ 41 ಕಾಮಗಾರಿ ಮಂಜೂರಾಗಿತ್ತು. ಈ ಪೈಕಿ 5 ಕಾಮಗಾರಿ ಪೂರ್ಣಗೊಂಡಿದ್ದು, ಐದು ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ. ಇನ್ನೂ 17 ಕಾಮಗಾರಿ ರದ್ದಾಗಿವೆ ಎಂದು ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಸಚಿವ ಸಿ.ಟಿ.ರವಿ, ಜಿಲ್ಲೆಯ ಯಾವ ಪ್ರದೇಶಕ್ಕೆ ಮಹಾತ್ಮ ಗಾಂಧೀಜಿ ಅವರು ಭೇಟಿ ನೀಡಿದ್ದಾರೋ ಆ ಸ್ಥಳಕ್ಕೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಿ ಎಂದು ಸೂಚಿಸಿದಲ್ಲದೇ, ಕಾಮಗಾರಿ ರದ್ದಾಗಿರುವುದು ರಾಜಕೀಯ ದುರುದ್ದೇಶಕ್ಕೊ ಅಥವಾ ನಿವೇಶನ ಸಿಗದಿರುವುದಕ್ಕೋ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಡಾ.ತಿಪ್ಪೇಸ್ವಾಮಿ, ನಿವೇಶನ ಸಿಗದ ಕಾರಣಕ್ಕೆ ಎಂದು ಹೇಳಿ, ಹರಪನಹಳ್ಳಿ ತಾಲೂಕಿನ ಗುಳೇದ ಲಕ್ಕಮ್ಮದೇವಿ ದೇವಸ್ಥಾನದ ಬಳಿ ಯಾತ್ರಿ ನಿವಾಸ ನಿರ್ಮಾಣಕ್ಕೆ ನಿವೇಶನ ಇನ್ನೂ ಸಿಕ್ಕಿಲ್ಲ ಎನ್ನುತ್ತಿದ್ದಂತೆ ಮಧ್ಯಪ್ರವೇಶಿಸಿದ ಸಚಿವ ಸಿ.ಟಿ.ರವಿ, ನಿವೇಶನ ಕೊಡದಿದ್ದರೆ, ರದ್ದು ಪಡಿಸುತ್ತೇವೆ ಎಂದು ಆ ದೇವಸ್ಥಾನ ಸಮಿತಿಯವರಿಗೆ ಹೇಳಿಬಿಡಿ ಎಂದು ಖಡಕ್ ಸೂಚನೆ ನೀಡಿದರು.
ಗ್ರಾಮಗಳ ಮಾಹಿತಿ ಬೆರಳ ತುದಿಯಲ್ಲಿ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ವೇಳೆಯಲ್ಲಿ ಮಾತನಾಡಿದ ಸಚಿವ ಸಿ.ಟಿ.ರವಿ, ಪ್ರತಿ ಗ್ರಾಮದ ಪರಂಪರೆ, ಸಂಸ್ಕೃತಿ, ಸ್ಮಾರಕ ಸೇರಿದಂತೆ ಒಟ್ಟಾರೆ ಇತಿಹಾಸವು ಜನಸಾಮಾನ್ಯರ ಬೆರಳ ತುದಿಯಲ್ಲಿ ಲಭ್ಯವಾಗುವಂತೆ ಮಾಡಲು ಒಂದು ವಿನೂತನ ಯೋಜನೆ ಸಿದ್ದಪಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಪ್ರತಿ ಕಂದಾಯ ಗ್ರಾಮಗಳ ಪರಂಪರೆ, ಆರ್ಥಿಕ ಸ್ಥಿತಿಗತಿ, ಪುರಾತನ ಸ್ಮಾರಕಗಳು, ವೀರಗಲ್ಲು, ಹುತಾತ್ಮ ಸೈನಿಕರು ಸೇರಿದಂತೆ ಒಟ್ಟಾರೆ ಗ್ರಾಮದ ಇತಿಹಾಸವನ್ನು ಕಲೆ ಹಾಕಿ ಅಧಿಕೃತ ವೆಬ್‍ಸೈಟ್‍ಗೆ ಹಾಕುವ ಯೋಜನೆ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿಕ್ಷಣ ಮತ್ತು ಉನ್ನತ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಡೆಸಲಾ ಗುವುದು. ಜಿಲ್ಲೆಯ ಕಲಾ ಪದವಿ ಮತ್ತು ಪಿಯು ವಿದ್ಯಾರ್ಥಿಗಳ ತಂಡ ರಚಿಸಿ, ಈ ತಂಡಗಳಿಗೆ ನಿಗದಿ ಗ್ರಾಮಗಳನ್ನು ನೀಡಿ, ಆ ಗ್ರಾಮದ ಸಮಗ್ರ ಇತಿಹಾಸದ ಮಾಹಿತಿ ಕಲೆ ಹಾಕಲಾಗುವುದು. ಹಾಗೂ ಈ ಕಾರ್ಯ ಸಮನ್ವಯಕ್ಕಾಗಿ ಪ್ರತಿ ಪಂಚಾಯ್ತಿಗೆ ಒಬ್ಬ ತಾಲ್ಲೂಕು ಮಟ್ಟದ ಅಧಿಕಾರಿಗಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗುವುದು. ಈ ಸಾಲಿನ ಡಿಸೆಂಬರ್ ಅಂತ್ಯದೊಳಗೆ ವಿಶ್ವವಿದ್ಯಾನಿಲಯಗಳ, ಕಾಲೇಜುಗಳ ಪ್ರಾಂಶುಪಾಲರ ಸಭೆ ಕರೆದು ಈ ಯೋಜನೆಗೆ ರೂಪುರೇಷ ತಯಾರಿಸಲಾಗುವುದು ಎಂದು ವಿವರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ(ಪ್ರಭಾರ) ನಿಜಲಿಂಗಪ್ಪ ಮಾತನಾಡಿ, ಹರಿಹರ ತಾಲ್ಲೂಕು ಕೊಂಡಜ್ಜಿ ಗ್ರಾಮದಲ್ಲಿ ವೃತ್ತಿ ರಂಗಭೂಮಿ ಶಾಲೆ ಆರಂಭಿಸಲು 16 ಎಕರೆ 29 ಗುಂಟೆ ಸರ್ಕಾರಿ ಜಮೀನನ್ನು ಗುರುತಿಸಲಾಗಿದೆ. ಹಾಗೂ ಇದಕ್ಕೆಂದು ಬಿಡುಗಡೆಯಾದ 1 ಕೋಟಿ ಅನುದಾನವನ್ನು ನಿರ್ಮಿತಿ ಕೇಂದ್ರಕ್ಕೆ ಜಮಾ ಮಾಡಲಾಗಿದೆ ಎಂದರು.
ಕಲಾವಿದ ಹೆಗ್ಗೆರೆ ರಂಗಪ್ಪ ಮಾತನಾಡಿ, ಜಾನಪದ ಕಲಾವಿದರಿಗೆ ಆನ್‍ಲೈನ್ ಜ್ಞಾನ ಕಡಿಮೆ ಇದ್ದು, ಹಾಗಾಗಿ ಆಫ್‍ಲೈನ್ ವ್ಯವಸ್ಥೆ ಮಾಡಿಕೊಡಬೇಕು. ಹಾಗೂ ಬೀದಿನಾಟಕ ಅಕಾಡೆಮಿ ಸ್ಥಾಪಿಸಬೇಕೆಂದು ಮನವಿ ಮಾಡಿದರು. ಕಲಾವಿದ ಐರಣಿ ಚಂದ್ರು ಮಾತನಾಡಿ ಕಲಾವಿದರಿಂದ ಕಾರ್ಯಕ್ರಮ ಪಡೆದುಕೊಂಡು ಒಂದೂವರೆ ವರ್ಷವಾದರೂ ಬಾಕಿ ಪಾವತಿಸಿಲ್ಲವೆಂದರು.
ಸಭೆಯಲ್ಲಿ ಹಾಜರಿದ್ದ ರಂಗಕರ್ಮಿ ಎನ್.ಎಸ್.ರಾಜು ಸಾಮಾನ್ಯ ಪ್ರತಿಭೆಗಳನ್ನು ಗುರುತಿಸುವ ಕೆಲಸ ಆಗದೇ ಕೇವಲ ಶಿಫಾರಸ್ಸಿನ ಮೇಲೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಹೇಳಿದಾಗ ಸಚಿವರು ಪ್ರತಿಕ್ರಿಯಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲಾಗುವ ವಿವಿಧ ಪ್ರಶಸ್ತಿಗಳಿಗೆ ಅರ್ಹರನ್ನು ಆಯ್ಕೆ ಮಾಡಲು ಕೇಂದ್ರ ಸರ್ಕಾರದ ಮಾದರಿಯಲ್ಲಿ ನೀತಿ ರೂಪಿಸಲಾಗುತ್ತಿದೆ. ಸಾಲು ಮರದ ತಿಮ್ಮಕ್ಕ, ಸಕ್ರಿ ಬೊಮ್ಮಗೌಡ, ಸೂಲಗಿತ್ತಿ ನರಸಮ್ಮ ಇವರು ಯಾವುದೇ ರೀತಿ ಪ್ರಶಸ್ತಿಗೆ ಶಿಫಾರಸ್ಸು ಮತ್ತು ಅರ್ಜಿ ನೀಡಿರಲಿಲ್ಲ. ಕೇಂದ್ರ ಸರ್ಕಾರವೇ ಗುರುತಿಸಿ ಪದ್ಮ ಪ್ರಶಸ್ತಿಗಳನ್ನು ನೀಡಿದೆ. ಅದರಂತೆ ಶಿಫಾರಸ್ಸಿನೊಂದಿಗೆ ಅರ್ಹತೆ ಮತ್ತು ಸೇವೆ ಗುರುತಿಸಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಜಾನಕಿ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಉಪವಿಭಾಗಾಧಿಕಾರಿ ಕುಮಾರಸ್ವಾಮಿ, ಕೆಆರ್‍ಐಡಿಎಲ್ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್, ಮಹಾನಗರಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ