ದಾವಣಗೆರೆ:
ಟಿಕೆಟ್ ಬಗ್ಗೆ ಇನ್ನೂ ಚರ್ಚೆಯಷ್ಟೇ ನಡೆದಿದ್ದು, ಏ.1ರಂದು ಅಭ್ಯರ್ಥಿ ವಿಚಾರ ಅಂತಿಮಗೊಳ್ಳಲಿದೆ ಎಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸ್ಪಷ್ಟಪಡಿಸಿದ್ದಾರೆ. ಶನಿವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾ.31ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದು, ನನ್ನ ನಿರ್ಧಾರವನ್ನೂ ಕೆಪಿಸಿಸಿ ನಾಯಕರಿಗೆ ತಿಳಿಸಿದ್ದೇನೆ. ಯಾವುದಕ್ಕೂ ಸೋಮವಾರ ಸ್ಪಷ್ಟವಾದ ಚಿತ್ರಣ ಹೊರ ಬೀಳಲಿದೆ ಎಂದರು.
ಬೆಂಗಳೂರಿಗೆ ನಿನ್ನೆ ತಾವು ಹೋದಾಗ ರಾಜ್ಯ ಉಸ್ತುವಾರಿ ವೇಣುಗೋಪಾಲ ಸೇರಿದಂತೆ ರಾಜ್ಯ ನಾಯಕರೊಂದಿಗೆ ಚರ್ಚಿಸಿದ್ದೇನೆ. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಚರ್ಚೆ ನಡೆಸಲು ಸಾಧ್ಯವಾಗಲಿಲ್ಲ ಎಂದರು.ರಾಹುಲ್ ಗಾಂಧಿಯವರು ಬೆಂಗಳೂರಿಗೆ ಬಂದು ಹೋದ ನಂತರ ಅಭ್ಯರ್ಥಿ ಆಯ್ಕೆ ವಿಚಾರಕ್ಕೂ ಸ್ಪಷ್ಟತೆ ಸಿಗಲಿದೆ. ಪಕ್ಷದ ನಾಯಕರೊಂದಿಗೆ ಮತ್ತೊಮ್ಮೆ ಮಾತುಕತೆ ನಡೆಸಿ, ಅಂತಿಮ ನಿರ್ಧಾರಕ್ಕೆ ಬರಲಿದ್ದು, ಸೋಮವಾರದವರೆಗೂ ಕಾದು ನೋಡಿ. ನನ್ನ ಸ್ಪರ್ಧೆ ಬಗ್ಗೆ ಹೈಕಮಾಂಡ್ ಹಾಗೂ ರಾಜ್ಯ ಮುಖಂಡರ ಜೊತೆಗೆ ಚರ್ಚಿಸಬೇಕಿದೆ. ದಾವಣಗೆರೆ ಬಗ್ಗೆ ಮತ್ತೊಮ್ಮೆ ರಾಜ್ಯ ನಾಯಕರು ಮತ್ತೊಂದು ಸುತ್ತಿನ ಚರ್ಚೆ ನಡೆಸಲಿದ್ದು, ನಿನ್ನೆ ಸಭೆಯಲ್ಲಿ ಯಾವುದೇ ತೀರ್ಮಾನವಾಗಿಲ್ಲ ಎಂದು ಹೇಳಿದರು.
ಇನ್ನೂ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ದಾವಣಗೆರೆ ಕ್ಷೇತ್ರದ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಆಗಲಿ, ಕೆಪಿಸಿಸಿ ನಾಯಕರಾಗಲೀ ತಮ್ಮನ್ನು ಮಾತನಾಡಿಸಿಲ್ಲ. ಟಿಕೆಟ್ ವಿಚಾರದ ಬಗ್ಗೆ ನನಗೇನೂ ಗೊತ್ತಿಲ್ಲ. ಎಸ್.ಎಸ್.ಮಲ್ಲಿಕಾರ್ಜುನ್‍ಗೆ ಟಿಕೆಟ್ ನೀಡುವ ಬಗ್ಗೆಯೂ ತಮಗೆ ಮಾಹಿತಿ ಇಲ್ಲ. ನೋಡೋಣ ನಾಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡಲಿದ್ದು, ಟಿಕೆಟ್ ವಿಚಾರವೂ ಸ್ಪಷ್ಟವಾಗಲಿದೆ ಎಂದು ಹೇಳಿದರು.