ಗುಬ್ಬಿ
ಡ್ರಗ್ಸ್ ಮಾಫಿಯಾ ಪಿಡುಗು ಹೋಗಲಾಡಿಸಲು ಮಾದಕ ಸೇವನೆ ಮಾಡಿದ ನಟಿಯರನ್ನು ತನಿಖೆ ಮಾಡುವ ಮೊದಲು ಇದರ ಮೂಲಬೇರು ದಂಧೆ ಮಾಡುವ ಮಾರಾಟದ ಜಾಲವನ್ನು ಭೇದಿಸುವ ಕಾರ್ಯ ಸರ್ಕಾರ ಮಾಡಬೇಕು ಎಂದು ಕೆಪಿಸಿಸಿ ರಾಜ್ಯ ವಕ್ತಾರ ಮುರುಳೀಧರ ಹಾಲಪ್ಪ ಆಗ್ರಹಿಸಿದರು.
ಪಟ್ಟಣದ ಹಂದಿ ಜೋಗರ ಕಾಲೋನಿಗೆ ಭೇಟಿ ನೀಡಿದ ಕಾಂಗ್ರೆಸ್ ನಿಯೋಗ ರಾತ್ರಿ ಸುರಿದ ಮಳೆಗೆ ಮುಳುಗಡೆ ಆಗಿದ್ದ ಹಂದಿ ಜೋಗರ ಕಾಲೋನಿ ವೀಕ್ಷಿಸಿ ಅಲ್ಲಿನ ಅವ್ಯವಸ್ಥೆ ಆಲಿಸಿ ಅಧಿಕಾರಿಗಳಿಗೆ ಮೂಲ ವ್ಯವಸ್ಥೆ ಮಾಡಲು ತಿಳಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಹು ವರ್ಷಗಳ ಇತಿಹಾಸದ ಮಾದಕ ವಸ್ತುಗಳ ಮಾರಾಟ ದಂಧೆ ಸೆಲಬ್ರಿಟಿಗಳಿಗೆ ನಂಟಿರುವ ನಟಿಯರಿಬ್ಬರನ್ನು ತನಿಖೆ ಮಾಡುವ ಮೂಲಕ ಇಡೀ ಮಾಫಿಯಾ ಅಳಿಸಲಾಗದು. ನಟಿಯರು ಪೆಟ್ಲರ್ಸ್‍ಗಳಲ್ಲ. ಕೇವಲ ಸೇವನೆ ಮಾಡಿದವರನ್ನು ಬಿಟ್ಟು ಮೂಲ ಮಾರಾಟ ದಂಧೆ ನಿಲ್ಲಿಸುವ ಕೆಲಸ ಮಾಡಬೇಕಿದೆ ಎಂದರು.
ಮಾದಕ ಜಾಲವನ್ನು ಮುಂದಿಟ್ಟು ಕೋವಿಡ್ ಅವ್ಯವಹಾರವನ್ನು ಮರೆ ಮಾಡುವ ಕೆಲಸ ಮಾಡುತ್ತಿರುವ ಸರ್ಕಾರ ಸಾರ್ವಜನಿಕರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ. ಕೊರೋನಾ ಹೆಸರಿನಲ್ಲಿ ಆಗಿರುವ ಭ್ರಷ್ಟಾಚಾರವನ್ನು ಮುಚ್ಚಿಡಲು ಈ ಡ್ರಗ್ಸ್ ದಂಧೆ ನೆಪ ಮಾಡುತ್ತಿದ್ದಾರೆ ಎಂದು ದೂರಿದ ಅವರು ಆಕ್ಸಿಜನ್ ಸಿಲೆಂಡರ್‍ಗಳ ಕೊರತೆ ಆಸ್ಪತ್ರೆಯಲ್ಲಿ ಕಾಣುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ 1200 ಸಿಲಿಂಡೆರ್ ಅವಶ್ಯವಿದೆ. ಆದರೆ ಕೇವಲ 300 ಸಿಲೆಂಡರ್ ಮಾತ್ರ ಪೊರೈಕೆ ಆಗುತ್ತಿದೆ. ಹೀಗೆ ಆಗಿರುವ ಕಾರಣ ರಾಜ್ಯದಲ್ಲಿ ಕೋವಿಡ್ ಸಾವಿನ ಸಂಖ್ಯೆ 7 ಸಾವಿರ ಸಂಖ್ಯೆಗೆ ತಲುಪಿದೆ ಎಂದು ಕಿಡಿಕಾರಿದರು.
ಶಿರಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಸಭೆಗಳನ್ನು ವರಿಷ್ಠರು ನಡೆಸಿದ್ದಾರೆ. ಈ ಬಾರಿ ಕಾಂಗ್ರೆಸ್ ಗೆಲುವು ಖಚಿತ ಎನ್ನುವ ಅಂಶವನ್ನು ಕಾರ್ಯಕರ್ತರೊಂದಿಗೆ ತಿಳಿಯಲು ಸಭೆ ನಡೆಸಿ ಸ್ಥಳೀಯ ಮುಖಂಡರ ಆಭಿಪ್ರಾಯವನ್ನು ಹೈಕಮಾಂಡ್ ಪಡೆದುಕೊಳ್ಳುತ್ತಿದೆ ಎಂದ ಅವರು ಅಲೆಮಾರಿ ಜನಾಂಗಕ್ಕೆ ಚೇಳೂರು ಸಮೀಪದ ಸಾತೇನಹಳ್ಳಿ ಗ್ರಾಮದ ಬಳಿ ಜಮೀನು ನೀಡಿ ವಿಂಗಡಿಸಿ ನಿವೇಶನ ಸಿದ್ದ ಮಾಡಲಾತ್ತಿದೆ. ಹಂದಿ ಜೋಗ ಸಮುದಾಯಕ್ಕೆ 44 ನಿವೇಶನ ಹಾಗೂ ಬುಡುಗ ಜನಾಂಗಕ್ಕೆ 33 ನಿವೇಶನ ಇಲ್ಲಿ ಸಿದ್ದವಾಗಿದೆ. ಶೀಘ್ರದಲ್ಲಿ ಹಕ್ಕುಪತ್ರ ವಿತರಿಸಿ ಮನೆಗಳ ನಿರ್ಮಾಣ ಕೆಲಸ ಆರಂಭವಾಗಲಿದೆ ಎಂದ ಅವರು ನೀರು ನುಗ್ಗಿ ಅವ್ಯವಸ್ಥೆ ಆನುಭವಿಸಿರುವ ಕುಟುಂಬಗಳಿಗೆ ಮೂಲ ಸವಲತ್ತು ಒದಗಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣಯ್ಯ, ಮಾಜಿ ಶಾಸಕ ಆರ್.ನಾರಾಯಣ್, ಗುಬ್ಬಿ ಬ್ಲಾಕ್ ಅಧ್ಯಕ್ಷ ಎಸ್.ಎಲ್.ನರಸಿಂಹಯ್ಯ, ಜಿಲ್ಲಾ ಕಾರ್ಯದರ್ಶಿ ಬಿ.ಆರ್.ಭರತ್‍ಗೌಡ, ಮುಖಂಡರಾದ ಜಿ.ಎಸ್.ಮಂಜುನಾಥ್, ಮಾರಯ್ಯ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ