ಬೆಂಗಳೂರು
ಬಿಜೆಪಿ ನಾಯಕರು ಚುನಾವಣೆ ಗೆಲ್ಲಲ್ಲು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಇಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದರು.ಬೆಂಗಳೂರಿನ ಶೇಷಾದ್ರಿ ರಸ್ತೆಯ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿದ್ದ ವಿಧಾನಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ್ ರಾಥೋಡ್ ನೇತೃತ್ವದ ತಂಡ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಗೆ ದೂರು ಸಲ್ಲಿಸಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಹಿರೆಕೆರೂರು ಜೆಡಿಎಸ್ ಅಭ್ಯರ್ಥಿ ಶಿವಲಿಂಗ ಶಿವಾಚಾರ್ಯ ಶ್ರೀಗಳು,ಗುರಪ್ಪ ದುಶ್ಯಾಳ್ ಅವರಿಗೆ ಆಮಿಷ ಒಡ್ಡಿದ್ದಾರೆ. ಅಲ್ಲದೆ ಅಭಿವೃದ್ದಿ ಕಾರ್ಯಗಳಿಗೆ ಅನುದಾನ ನೀಡುವ ಆಮಿಷ ಒಡ್ಡಿ ಅಧಿಕಾರ ದುರ್ಬಳಕೆ ಮಾಡಿದ್ದಾರೆ.ಇದೇ ರೀತಿ ಹಲವು ಕ್ಷೇತ್ರಗಳಲ್ಲಿ ಹಲವಾರು ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಯುವಂತೆ ಹಾಗೂ ಪಕ್ಷದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಆಮಿಷ ಒಡ್ಡಿ ನಾಮಪತ್ರ ವಾಪಸ್ ಪಡೆಯುವ ಕೆಲಸ ಮಾಡಿದ್ದಾರೆ.ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದೇವೆ ಎಂದರು.
ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು ಇದುವರೆಗೂ ಯಾವುದೇ ದೂರಿಗೂ ಸಮರ್ಪಕವಾಗಿ ಆಯೋಗ ಸ್ಪಂದಿಸಿಲ್ಲ.ಆಮೂಲಕ ಚುನಾವಣಾ ಆಯೋಗ ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದೆ.ಕನಿಷ್ಟ ಉಪ ಚುನಾವಣೆಯಲ್ಲಾದರೂ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡನೆಸಲು ಅವಕಾಶ ನೀಡಬೇಕೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮಂಡ್ಯದ ಕೆ.ಆರ್.ಪೇಟೆಗೆ ಚುನಾವಣಾ ಪ್ರಚಾರಕ್ಕೆ ಗೃಹ ಸಚಿವರು ತೆರಳುವಾಗ ಸಚಿವರ ವಾಹನ ತಪಾಸಣೆ ನಡೆಸಲು ಅವಕಾಶ ನೀಡಿಲ್ಲ. ಬಸವರಾಜ್ ಬೊಮ್ಮಾಯಿ ಕಾರಿನಲ್ಲಿ ಹಣವನ್ನು ಸಾಗಿಸಲಾಗಿದೆ ಎಂಬ ಶಂಕೆ ಇದೆ.ಚುನಾವಣಾ ಅಧಿಕಾರಿಗಳು ಸಹ ಗಡಿ ಪ್ರದೇಶದಲ್ಲಿ ವಾಹನ ತಪಾಸಣೆ ಮಾಡಬೇಕಿತ್ತು.ತಪಾಸಣೆ ನಡೆಸದೆ ವಾಹನವನ್ನು ಬಿಟ್ಟಿದ್ದೇಕೆ ಎಂದು ಎಂದು ಅವರು ಪ್ರಶ್ನಿಸಿದ್ದಾರೆ.ಈ ಪ್ರಕಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಉತ್ತರ ನೀಡಿ ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.ಗೃಹ ಸಚಿವರ ವಾಹನದಲ್ಲಿ ಹಣವನ್ನು ಸಾಗಾಣಿಕೆ ಮಾಡಿ ಹುಣಸೂರು ಮತ್ತು ಕೆ.ಆರ್.ಪೇಟೆಯಲ್ಲಿ ಹಣವನ್ನು ಹಂಚಿಕೆ ಮಾಡಲು ಪ್ರಯತ್ನ ನಡೆಸಿದ್ದಾರೆ ಎಂದು ನೇರವಾಗಿ ಆರೋಪಿಸಿದರು.
ಇವಿಎಂಗಳನ್ನು ದುರುಪಯೋಗ ಮಾಡಿಕೊಂಡಿರುವ ಸಾಧ್ಯತೆ ಇದೆ. ಎಲ್ಲಾ ಕ್ಷೇತ್ರಗಳಲ್ಲಿ ಇವಿಎಂ,ವಿವಿ ಪ್ಯಾಟ್ ಗಳನ್ನು ಪರಿಶೀಲಿಸಲು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹಾಗು ಚುನಾವಣಾ ಏಜೆಂಟರಿಗೆ ಅವಕಾಶ ನೀಡಿಲ್ಲ.ಚುನಾವಣಾಧಿಕಾರಿಗಳು ಬಿಜೆಪಿ ಜೊತೆ ಶಾಮೀಲಾಗುವ ಮೂಲಕ ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ಅವರು ಹೇಳಿದರು. ದೂರು ಸಲ್ಲಿಕೆ ಸಂದರ್ಭ ಮಾಜಿ ಸಚಿವ ಅಪ್ಪಾಜಿ ನಾಡಗೌಡ, ಮಾಜಿ ಮೇಯರ್ ರಾಮಚಂದ್ರಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಫಿವುಲ್ಲಾ, ನಾರಾಯಣಪ್ಪ ಶಾಕಿರ್ ಸನದಿ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ