ಕಾಂಗ್ರೆಸ್ ತಾಪಂ ಸದಸ್ಯೆ ಬಿಜೆಪಿ ತೆಕ್ಕೆಗೆ

ಹುಳಿಯಾರು

       ಹುಳಿಯಾರು ಹೋಬಳಿಯ ಗಾಣದಾಳು ಕ್ಷೇತ್ರದ ಕಾಂಗ್ರೆಸ್ ತಾಪಂ ಸದಸ್ಯೆ ಕಲಾವತಿ ಅವರು ಶಾಸಕ ಜೆ.ಸಿ.ಮಾಧುಸ್ವಾಮಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡರು.

        ಈ ಸಂದರ್ಭದಲ್ಲಿ ಅವರು ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಿದ್ದು ತಾಲೂಕಿನಲ್ಲಿ ಪಕ್ಷಕ್ಕಿರುವ ಏಕೈಕ ತಾಪಂ ಸದಸ್ಯೆ ಎನ್ನುವ ಅಭಿಮಾನಕ್ಕಾದರೂ ಸಭೆ, ಸಮಾರಂಭಗಳಿಗೆ ತಮ್ಮನ್ನು ಆಹ್ವಾನಿಸದೆ ಕಡೆಗಣಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ 2 ಗುಂಪುಗಳಿದ್ದು ಸದ್ಯದ ಪರಿಸ್ಥಿತಿಯಲ್ಲಿ ಈ ಗುಂಪುಗಳು ಒಂದಾಗುವ ಲಕ್ಷಣಗಳಿಲ್ಲ. ಈ ಗುಂಪುಗಳು ಒಂದಾಗದ ವಿನಹ ಪಕ್ಷಕ್ಕೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಭವಿಷ್ಯವಿಲ್ಲ ಎಂದರು.

       ಮುದ್ದಹನುಮೇಗೌಡರು ನಿಷ್ಠಾವಂತ ಮತ್ತು ಪ್ರಾಮಾಣಿಕ ರಾಜಕಾರಣಿ. ಅವರಿಗೆ ಈ ಬಾರಿ ಟಿಕೇಟ್ ನೀಡಿದ್ದರೆ ಖಂಡಿತ ನಾವು ಪಕ್ಷ ಬಿಟ್ಟು ಹೋಗುತ್ತಿರಲಿಲ್ಲ. ಅವರ ಗೆಲುವಿಗೆ ಹಗಲಿರುಳೆನ್ನದೆ ದುಡಿಯುತ್ತಿದ್ದೆವು. ಆದರೆ ಅವರಿಗೆ ಮೋಸ ಮಾಡಿ ಜೆಡಿಎಸ್ ಅಭ್ಯರ್ಥಿ ನಿಲ್ಲಿಸಿದ್ದಾರೆ. ಇನ್ನು ಜೆಡಿಎಸ್‍ನವರು ಸ್ವತಹ ನನಗೆ ಮೋಸ ಮಾಡಿದ್ದಾರೆ. ಎರಡನೇ ಅವಧಿಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸ್ಥಾನ ಕೊಡುವುದಾಗಿ ಹೇಳಿ ಕೊಟ್ಟಿಲ್ಲ. ಹಾಗಾಗಿ ಆ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಲು ಮನಸ್ಸು ಒಪ್ಪಲಿಲ್ಲ.

      ಇನ್ನು ಶಾಸಕ ಜೆ.ಸಿ.ಮಾಧುಸ್ವಾಮಿ ಅವರು ಬಿಜೆಪಿಯಿಂದ ಗೆದ್ದವರಾಗಿದ್ದರೂ ಕ್ಷೇತ್ರದ ಅಭಿವೃದ್ಧಿ ದೃಷ್ಠಿಯಿಂದ ಪಕ್ಷ, ಜಾತಿ ಮಾಡದೆ ಕೆಲಸ ಮಾಡುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲೂ ಸಹ ನಾವು ಕೇಳದಿದ್ದರೂ ಅವರೇ ಕೇಳಿ ರಸ್ತೆ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಇಂತಹವರ ಜೊತೆ ಇದ್ದರೆ ಮತ್ತೊಷ್ಟು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದೆಂದು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿರುವುದಾಗಿ ಅವರು ತಿಳಿಸಿದರು.

      ಬಿಜೆಪಿ ತಾಲೂಕು ಅಧ್ಯಕ್ಷ ಶಶಿಧರ್, ತಾಪಂ ಸದಸ್ಯ ಕೇಶವಮೂರ್ತಿ, ಹಾಲು ಒಕ್ಕೂಟದ ನಿರ್ದೇಶಕ ಹಳೆಮನೆ ಶಿವನಂಜಪ್ಪ, ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್, ಮಾಜಿ ಸದಸ್ಯ ವಸಂತಕುಮಾರ್, ಮುಖಂಡರಾದ ಬರಕನಹಾಲ್ ವಿಶ್ವನಾತ್ ಮತ್ತಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap