ಲೋಕಸಭೆ ಚುನಾವಣೆ: ಜಿಲ್ಲಾ ಮಟ್ಟದ ಸಮಾವೇಶ ಮಾಡಲು ಕಾಂಗ್ರೆಸ್ ನಿರ್ಧಾರ..!!

ಬೆಂಗಳೂರು

     ಲೋಕಸಭೆ ಚುನಾವಣೆಗೆ ಸಜ್ಜಾಗಿರುವ ರಾಜ್ಯ ಕಾಂಗ್ರೆಸ್ ನಾಯಕರು ಸರಣಿ ರೂಪದಲ್ಲಿ  ಜಿಲ್ಲಾ ಮಟ್ಟದ ಸಮಾವೇಶ ಹಮ್ಮಿಕೊಂಡಿದ್ದಾರೆ.

     ಮಾರ್ಚ್ ತಿಂಗಳ ಮಧ್ಯಭಾಗದಲ್ಲಿ ರಾಜ್ಯಕ್ಕೆ ಪ್ರಿಯಂಕಾ ಗಾಂಧಿ ಕೂಡ ಆಗಮಿಸಲಿದ್ದಾರೆ. ಕಾಂಗ್ರೆಸ್ ಪಕ್ಷದ ಎರಡು ಹಂತದ ಪ್ರಚಾರದಲ್ಲಿ ಅವರು ಭಾಗವಹಿಸಲಿದ್ದಾರೆ. ತಾರಾ ಪ್ರಚಾರಕಿ ಆಗಿರುವ ಅವರು ಮಾ.15ರ ನಂತರ ಆಗಮಿಸಲಿದ್ದು, ಒಂದು ಸಮಾವೇಶ ಇವರ ನೇತೃತ್ವದಲ್ಲಿ ತುಮಕೂರಿನಲ್ಲಿ ನಡೆಸಲು ಸಿದ್ಧತೆ ಆರಂಭವಾಗಿದೆ. ಇದಲ್ಲದೇ ನಂತರ ಬೆಂಗಳೂರು, ಮೈಸೂರು, ಹುಬ್ಬಳ್ಳಿಯ ಪ್ರಮುಖ ಭಾಗದಲ್ಲಿ ನಡೆಯುವ ಸಮಾವೇಶದಲ್ಲಿ ಇವರು ಪಾಲ್ಗೊಳ್ಳುವ ಸಾಧ್ಯತೆ ಹೆಚ್ಚಿದೆ.

      ಉತ್ತರ ಕರ್ನಾಟಕ, ಕರಾವಳಿ ಭಾಗದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಕೈ ಹಿಡಿದಿಲ್ಲ. ಇದರಿಂದ ಮುಂಬರುವ ಲೋಕಸಭೆ ಚುನಾವಣೆ ವೇಳೆ ಈ ಭಾಗದಲ್ಲಿ ಹೆಚ್ಚು ಗಮನ ಹರಿಸಿರುವ ಕಾಂಗ್ರೆಸ್ ನಾಯಕರು ಹೆಚ್ಚು ಸಭೆ, ಸಮಾವೇಶಗಳ ಮೂಲಕ ಜನರಿಗೆ ಹತ್ತಿರವಾಗುವ ಪ್ರಯತ್ನ ನಡೆಸಿದ್ದಾರೆ.

      ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗವನ್ನು ಕಾಂಗ್ರೆಸ್ ನಿರ್ಲಕ್ಷಿಸಿದೆ ಎಂದು ಆರೋಪಿಸಿ ಅಧಿಕಾರದಲ್ಲಿದ್ದ ಪಕ್ಷಕ್ಕೆ ಎರಡನೇ ಅವಕಾಶ ನೀಡದ ಮತದಾರರು, ಬಿಜೆಪಿಗೆ ಈ ಭಾಗದಲ್ಲಿ ಹೆಚ್ಚು ಸ್ಥಾನ ನೀಡಿದ್ದರು.ಇದಾದ ಬಳಿಕ ಸಚಿವ ಸಂಪುಟದಲ್ಲಿ ಕೂಡ ಉತ್ತರ ಕರ್ನಾಟಕ, ಕರಾವಳಿ ಭಾಗದ ಜನಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಿಲ್ಲ,ಇವರಿಗೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿಬಂದಿತ್ತು.

       ಇದಕ್ಕೆ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯ ಸಂದರ್ಭ ಸಾಕಷ್ಟು ಅವಕಾಶ ಕಲ್ಪಿಸಿದ್ದು, ಕಳೆದ ಆರೇಳು ತಿಂಗಳಲ್ಲಿ ಈ ಭಾಗಕ್ಕೆ ತಾನು ನೀಡಿದ ಕೊಡುಗೆಯನ್ನು ಆಧಾರವಾಗಿಟ್ಟುಕೊಂಡು, ಸಮ್ಮಿಶ್ರ ಸರ್ಕಾರದ ಒಮ್ಮತದ ಅಭ್ಯರ್ಥಿ ಪರ ಮತಯಾಚನೆಗೆ ಇಳಿಯಲು ನಿರ್ಧರಿಸಿದೆ.

      ಸದ್ಯ ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಈ ಭಾಗದಲ್ಲಿ ಸಮಾವೇಶ ಹಮ್ಮಿಕೊಂಡಿದೆ. ಮುಂದಿನ ದಿನಗಳಲ್ಲಿ ಸೀಟು ಹಂಚಿಕೆ ಸಂಬಂಧ ಯಶಸ್ವಿ ಮಾತುಕತೆ ನಡೆದರೆ ಒಮ್ಮತದ ಅಭ್ಯರ್ಥಿ ಪರ ಎರಡೂ ಪಕ್ಷದ ನಾಯಕರು ಒಟ್ಟಾಗಿ ಸಮಾವೇಶ, ಪ್ರಚಾರ ಹಮ್ಮಿಕೊಳ್ಳುವ ನಿರ್ಧರಿಸಿದ್ದಾರೆ. ನಾಳೆ ವಿಜಯಪುರ, ಫೆ.27ರಂದು ಮಂಗಳೂರಿನಲ್ಲಿ ವಿಭಾಗವಾರು ಸಮಾವೇಶದ ಹೆಸರಿನಲ್ಲಿ ಜಿಲ್ಲಾ ಸಮಾವೇಶಗಳು ನಡೆಯಲಿವೆ.

       ಈ ನಿಟ್ಟಿನಲ್ಲಿ ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಭೆ ಕೂಡ ನಡೆಯಿತು. ಮುಂದಿನ ಕಾರ್ಯತಂತ್ರ, ಜಿಲ್ಲಾ ಸಮಾವೇಶ ಯಶಸ್ವಿಗೊಳಿಸುವ ಸಂಬಂಧ ಇಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದೆ.
ಒಟ್ಟಾರೆ ಎಲ್ಲಾ ಕಡೆ ಜನರನ್ನು ಸೇರಿಸಿ ಯಶಸ್ವಿ ಸಮಾವೇಶ ನಡೆಸುವುದು ಕಾಂಗ್ರೆಸ್ ರಾಜ್ಯ ನಾಯಕರ ಉದ್ದೇಶವಾಗಿದೆ

        ಮಾ.9 ರಂದು ಹಾವೇರಿಯಲ್ಲಿ ನಡೆಯುವ ಬೃಹತ್ ಸಮಾವೇಶಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಚಾಲನೆ ನೀಡುವ ಮೂಲಕ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಪ್ರಚಾರದ ರಣಕಹಳೆ ಮೊಳಗಿಸಲಿದ್ದಾರೆ. ಬಿಜೆಪಿ ಪ್ರಭಾವವಿರುವ ಹಾವೇರಿಯಿಂದಲೇ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. ವಿಶೇಷ ಅಂದರೆ ಹಾವೇರಿ ಕರ್ನಾಟಕ ರಾಜ್ಯದ ಮಧ್ಯಭಾಗ ಕೂಡ ಆಗಿದ್ದು, ಇಲ್ಲಿ ಕನಿಷ್ಠ 3 ಲಕ್ಷ ಜನರನ್ನು ಸೇರಿಸಿ ಬೃಹತ್ ಕಾರ್ಯಕ್ರಮ ನಡೆಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.ಜೆಡಿಎಸ್ ಜೊತೆ ಕೈಜೋಡಿಸಿ ರಾಜ್ಯ ಚುನಾವಣೆ ಎದುರಿಸಲು ನಿರ್ಧರಿಸಿರುವ ಕಾಂಗ್ರೆಸ್ ಕನಿಷ್ಠ 25 ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. ಇದಕ್ಕಾಗಿ ರಾಷ್ಟ್ರೀಯ ನಾಯಕರು ಹೆಚ್ಚಾಗಿ ಬಂದು ಸಮಾವೇಶಗಳಲ್ಲಿ ಪಾಲ್ಗೊಳ್ಳಲಿ ಎಂದು ಬಯಸುತ್ತಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap