ಕಲಬುರಗಿ
ಚಿಂಚೋಳಿ ಉಪಸಮರ ಕದನ ದಿನದಿನಕ್ಕೂ ಕಾವೇರುತ್ತಿದೆ. ಚಿಂಚೋಳಿ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕರು, ಕ್ಷೇತ್ರದ ವಿವಿಧ ಭಾಗಗಳಲ್ಲಿಂದು ಭಾರೀ ಪ್ರಚಾರ ನಡೆಸಿದರು.
ಇಂದಿನಿಂದ ಮೂರು ದಿನಗಳ ಕಾಲ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ್ ಪರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತಯಾಚಿಸಲಿದ್ದು, ಶುಕ್ರವಾರ ಕುಂಚಾವರಗ್ರಾಮ್ ತಾಂಡಾದಲ್ಲಿ ಉಮೇಶ್ ಜಾಧವ್ ವಿರುದ್ಧ ಕಾಂಗ್ರೆಸ್ ನಾಯಕರು ಸಾಮೂಹಿಕ ವಾಕ್ ಪ್ರಹಾರ ನಡೆಸಿದರು.
ಸಿದ್ದರಾಮಯ್ಯ ಮಾತನಾಡಿ, ಕ್ಷೇತ್ರದ ಜನತೆಗೆ ದ್ರೋಹ ಮಾಡಿರುವ ಉಮೇಶ್ ಜಾಧವ್ ಉಪಚುನಾವಣೆಯಲ್ಲಿ ಮಗನ ಪರ ಮತ ಕೇಳುವುದಕ್ಕೆ ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ. ಉಪಕಾರ ಮಾಡಿದವರನ್ನು ಸ್ಮರಿಸುವುದು ಮನುಷ್ಯತ್ವ. ಆದರೆ ಜಾಧವ್ ಕೃತಘ್ನ. ಮನುಷ್ಯತ್ವವಿಲ್ಲದ ರಾಜಕಾರಣಿ. ಜಾಧವ್ ಒಬ್ಬ ಘೋಮುಖವ್ಯಾಘ್ರ ಎಂದು ಸಿದ್ದರಾಮಯ್ಯ ಟೀಕಾ ಪ್ರವಾಹವನ್ನೇ ಹರಿಸಿದರು.
ಚಿಂಚೋಳಿ ಕ್ಷೇತ್ರಕ್ಕೆ ಅನಗತ್ಯವಾಗಿ ಉಪಚುನಾವಣೆ ನಡೆಯುತ್ತಿದೆ. ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ಏಕೆ ರಾಜೀನಾಮೆ ಕೊಟ್ಟಿದ್ದಾರೆ ಎನ್ನುವುದು ಇಂದಿಗೂ ನನಗೆ ತಿಳಿದಿಲ್ಲ. ಕ್ಷೇತ್ರದ ಜನರಿಗಾದರೂ ರಾಜೀನಾಮೆ ಕೊಟ್ಟಿದ್ದು ಏಕೆ ಎಂದು ಸತ್ಯ ಹೇಳಬಹುದಿತ್ತು. ಕಾರಣವಿಲ್ಲದೆಯೇ ಜಾಧವ್ ಕಾಂಗ್ರೆಸ್ ಪಕ್ಷ ಬಿಟ್ಟುಹೋಗಿದ್ದಾನೆ. ಪಕ್ಷಕ್ಕೆ ಬೇಕಾದರೆ ದ್ರೋಹ ಮಾಡಲೀ ಆದರೆ ಚಿಂಚೋಳಿ ಕ್ಷೇತ್ರದ ಮತದಾರರಿಗೆ ದ್ರೋಹವೆಸಗಿರುವುದು ಅಕ್ಷಮ್ಯ ಅಪರಾಧ ಎಂದರು.
ಹೆತ್ತ ತಾಯಿಗೆ ಅನ್ಯಾಯ ಮಾಡುವ ರೀತಿಯಲ್ಲಿ ಜಾಧವ್ ಕಾಂಗ್ರೆಸ್ ಬಿಟ್ಟು ಮತ್ತೊಂದು ಪಕ್ಷ ಸೇರಿದ್ದಾನೆ. ಪರಿಶಿಷ್ಟ ಸಮುದಾಯಕ್ಕೆ ಸೇರಿರುವ ಜಾಧವ್, ಸಂವಿಧಾನ ವಿರೋಧಿ, ಸಾಮಾಜಿಕ ನ್ಯಾಯದ ವಿರೋಧಿಗಳ ಪಕ್ಷ ಸೇರಿದ್ದಾನೆ. ಬಿಜೆಪಿಗೆ ಪರಿಶಿಷ್ಟರು ಮತ ಹಾಕಬಾರದು ಎಂದು ಅವರು ಕರೆ ನೀಡಿದರು.
ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ತಾಂಡಾ ಅಭಿವೃದ್ದಿ ನಿಗಮ, ಬಂಜಾರ ಅಭಿವೃದ್ದಿ ನಿಗಮಗಳನ್ನು ಸ್ಥಾಪಿಸಿ ಕೋಲಿಸಮಾಜದ ಅಭಿವೃದ್ಧಿಗೆ ಶ್ರಮಿಸಲಾಗಿದೆ. ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲಾಗಿದೆ. ಆದರೀಗ ಚುನಾವಣೆಗಾಗಿ ಕೋಲಿ ಸಮಾಜವನ್ನು ಎಸ್ ಟಿ ಗೆ ಸೇರಿಸುತ್ತೇನೆ ಎಂದು ಬಾಬುರಾವ್ ಚಿಂಚನಸೂರ ಹೇಳುತ್ತಿದ್ದಾನೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಏಕೆ ಕೋಲಿ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲಿಲ್ಲ. ಈ ಬಗ್ಗೆ ಯಡಿಯೂರಪ್ಪ ಬಹಿರಂಗ ಚರ್ಚೆಗೆ ಬರಲಿ ಎಂದು ಸಿದ್ದರಾಮಯ್ಯ ಪಂಥಾಹ್ವಾನ ನೀಡಿದರು.
ಹೈಕ ಭಾಗದ ಅಭಿವೃದ್ಧಿಗಾಗಿ ವಾರ್ಷಿಕ 1500 ಕೋಟಿ ರೂ.ನ್ನು ಬಿಡುಗಡೆ ಮಾಡುತ್ತಿದೆ. ಈ ಭಾಗದ ಅಭಿವೃದ್ದಿಗಾಗಿ ಖರ್ಗೆ ಹಾಗೂ ಧರಂಸಿಂಗ್ ಸೇರಿದಂತೆ ಈ ಭಾಗದ ನಾಯಕರ ಪರಿಶ್ರಮದ ಫಲವಾಗಿ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ. ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ಬಿಜೆಪಿಯ ಕೊಡುಗೆ ಶೂನ್ಯ. 2018 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದಂತೆ ಈ ಬಾರಿ ಉಪಚುನಾವಣೆಯಲ್ಲಿ ಸುಭಾಷ್ ರಾಠೋಡ್ ಅವರನ್ನು ಗೆಲ್ಲಿಸುವ ಮೂಲಕ ಉಮೇಶ್ ಜಾಧವ್ ಅವರನ್ನು ಮನೆಗೆ ಕಳುಹಿಸಬೇಕು ಎಂದು ಕರೆ ನೀಡಿದರು.
ಸಂಸದ ಮಲ್ಲಿಕಾರ್ಜುನ್ ಖರ್ಗೆ ಮಾತನಾಡಿ, ಉಮೇಶ್ ಜಾಧವ್‍ನನ್ನುರಾಜಕೀಯಕ್ಕೆ ಕರೆತಂದಿದ್ದು ಧರಂಸಿಂಗ್. ಉಪಕಾರ ಸ್ಮರಣೆ ಮಾಡುವ ಮಾನವೀಯತೆಯಿಲ್ಲದ ದ್ರೋಹಿ ಜಾಧವ್. ಕ್ಷೇತ್ರದ ಜನತೆ ಘೋಮುಖ ವ್ಯಾಘ್ರನನ್ನು ಹಾಗೂ ಅವನ ಪುತ್ರ ಅವಿನಾಶ್ ಜಾಧವ್ ಇಬ್ಬರನ್ನೂ ಸೋಲಿಸಲಿದ್ದಾರೆ. ಲೋಕಸಭೆ, ವಿಧಾನಸಭೆ ಎರಡರಲ್ಲಿಯೂ ಸೋಲುವ ಮೂಲಕ ಉಮೇಶ್ ಜಾಧವ್ ಬೀದಿಪಾಲಾಗುವುದು ಖಚಿತ ಎಂದು ಭವಿಷ್ಯ ನುಡಿದರು.
ಕೇವಲ ಹನ್ನೊಂದು ತಿಂಗಳ ಹಿಂದಷ್ಟೆ ಶಾಸಕನಾಗಿ ಆಯ್ಕೆಯಾಗಿದ್ದ ಜಾಧವ್ ಯಾವುದೇ ಸಕಾರಣವಿಲ್ಲದೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಮತ್ತೊಂದು ಚುನಾವಣೆಯನ್ನು ಜನರ ಮೇಲೆ ಹೇರಿದ್ದಾರೆ.ಸರ್ಕಾರಿ ನೌಕರನಾಗಿದ್ದ ಜಾಧವ್ ನನ್ನು ಧರಂಸಿಂಗ್ ಒತ್ತಾಸೆಯಂತೆ ಟಿಕೇಟ್ ನೀಡಿ ಪ್ರಚಾರ ಮಾಡಿ ಗೆಲ್ಲಿಸಿ ಮುಖ್ಯಮಂತ್ರಿಯವರ ಕಾರ್ಯದರ್ಶಿಯನ್ನಾಗಿ ಮಾಡಲಾಗಿತ್ತು. ಸಹೋದರ ನರಸಿಂಗ್ ಜಾಧವ್ ಗೆ ಎರಡು ಸಲ ಟಿಕೇಟ್ ನೀಡಲಾಗಿತ್ತು. ಆ ನಂತರ ಕೆ.ಟಿ. ರಾಠೋಡ್ ಅವರಿಗೆ ಬಿಜಾಪುರದಿಂದ ಟಿಕೇಟ್ ನೀಡಲಾಗಿತ್ತು. ಆದಾದ ಮೇಲೂ ಅವರ ಮಗನಿಗೆ ನಾಲ್ಕು ಸಲ ಟಿಕೇಟ್ ನೀಡಲಾಗಿತ್ತು. ಜಾಧವ್ ಕುಟುಂಬದವರಿಗೆ ಹತ್ತು ಸಲ ಟಿಕೇಟ್ ನೀಡಿದರೂ ಕಾಂಗ್ರೆಸ್ ಅನ್ಯಾಯ ಮಾಡಿದೆ ಎನ್ನುವ ಉಮೇಶ್ ಜಾಧವ್ ಉಪಕಾರಹೀನ ಗುಣವನ್ನು ಸಹಿಸಲಾಗದು ಎಂದು ಖರ್ಗೆ ಕಿಡಿಕಾರಿದರು.
ದೇವರಾಜ್ ಅರಸು ಮುಖ್ಯಮಂತ್ರಿಯಾಗಿದ್ದಂತಹ ಸಂದರ್ಭದಲ್ಲಿ ಬಂಜಾರ ಸಮುದಾಯವನ್ನು ಎಸ್ ಸಿ ಪಟ್ಟಿಯಲ್ಲಿ ಸೇರಿಸಲಾಗಿತ್ತು.ತಾವು ರೈಲ್ವೆ ಸಚಿವನಾಗಿದ್ದಾಗ ರಾಮ್ ರಾಮ್ ಮಹಾರಾಜ್ ಅವರ ಕೋರಿಕೆಯಂತೆ ಪೌರೋದೇವಿಗೆ ರೈಲು ಓಡಿಸಲು ಕ್ರಮ ಕೈಗೊಳ್ಳಲಾಗಯಿತು. ಅಲ್ಲಿನ ರೈಲು ನಿಲ್ದಾಣದಲ್ಲಿ ಇಳಿದಾಗ ನನ್ನ ನೆನಪಾಗುವುದಿಲ್ಲವೇ? ಎಂದು ಉಮೇಶ್ ಜಾಧವ್ ಅವರನ್ನು ಖರ್ಗೆ ಪ್ರಶ್ನಿಸಿದರು.
ಮೇ 24 ರಂದು ಮೋದಿ ಆಟ ನಿಲ್ಲಲಿದೆ ಎಂದು ಕುಟುಕಿದ ಖರ್ಗೆ, ಈ ಐದು ವರ್ಷದಲ್ಲಿ ರೈತರಿಗಾಗಿ, ಬಡವರಿಗಾಗಿ ಮೋದಿ ಏನು ಮಾಡಿದ್ದಾರೆ ಎನ್ನುವುದನ್ನು ಬಿಜೆಪಿಯವರು ಮೊದಲು ಹೇಳಬೇಕು. ದೇಶಭಕ್ತಿ ಹೆಸರಲ್ಲಿ ಮತ ಕೇಳುತ್ತಿರುವ ಬಿಜೆಪಿಯವರ ಆಟ ನಡೆಯದು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಟ ಮಾಡಿದ್ದು ಕಾಂಗ್ರೆಸ್. ದೇಶಕ್ಕಾಗಿ ರಕ್ತ ಹರಿಸಿದ್ದು ಕಾಂಗ್ರೆಸ್. ದೇಶಕ್ಕಾಗಿ ಸೇವೆ ಸಲ್ಲಿಸಿದ ಬಿಜೆಪಿಯವರದ್ದು ನಕಲಿ ದೇಶಭಕ್ತಿ. ” ಮೆಹನತ್ ಕರೇ ಮುರ್ಗೀಸಾಬ್, ಅಂಡಾ ಖಾಯಾ ಫಕೀರ್ ಸಾಬ್ ” (ಶ್ರಮ ಯಾರದ್ದೋ, ಪ್ರತಿಫಲ ಇನ್ಯಾರದ್ದೋ ) ಎಂಬ ಗಾದೆ ಮಾತನ್ನು ಉಲ್ಲೇಖಿಸುವ ಮೂಲಕ ಬಿಜೆಪಿ ನಾಯಕರನ್ನು ಖರ್ಗೆ ತುಸು ಖಾರವಾಗಿಯೇ ಟೀಕಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಉಮೇಶ್ ಜಾಧವ್ ಒಬ್ಬ ವಿಶ್ವಾಸಘಾತುಕ. ಇಂತಹ ವಿಶ್ವಾಸದ್ರೋಹಿಯನ್ನು ಸೋಲಿಸಲೇಬೇಕು. ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಪರವಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾಮಾಡಿದ್ದಾರೆ. ಆದರೆ ಮೋದಿ ಏನು ಮಾಡಿದ್ದಾರೆ? ಎಂದು ಪ್ರಶ್ನಿಸಿದರು.
ಗೃಹ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಚಿಂಚೋಳಿಯಲ್ಲಿ ಉಪಚುನಾವಣೆಯ ಅವಶ್ಯಕತೆ ಇರಲಿಲ್ಲ. ನಮಗೆ ದ್ರೋಹ ಮಾಡಿದ ಜಾಧವ್ ಪಕ್ಷ ತೊರೆದಿದ್ದರಿಂದ ಈಗ ಚುನಾವಣೆ ಎದುರಿಸುವಂತಾಗಿದೆ .ಪ್ರಿಯಾಂಕ್ ಖರ್ಗೆ ಅವರನ್ನು ಪಕ್ಷದ ವತಿಯಿಂದ ತುಂಬಾ ಒತ್ತಾಯ ಮಾಡಿ ಚಿತ್ತಾಪುರದಲ್ಲಿ ನಿಲ್ಲಿಸಿದ್ದೆವು ಎಂದು ಹೇಳುವ ಮೂಲಕ ಜಾಧವ್ ಅವರ ‘ಪುತ್ರವ್ಯಾಮೋಹ’ ಹೇಳಿಕೆಗೆ ಟಾಂಗ್ ನೀಡಿದರು.
ರಾಜ್ಯಸಭಾ ಮಾಜಿ ಸದಸ್ಯ ಕೆ.ಬಿ.ಶಾಣಪ್ಪ ಮಾತನಾಡಿ, ಬಿಜೆಪಿಯಲ್ಲಿ ಉಸಿರುಗಟ್ಟಿದ ವಾತವಾರಣವಿದೆ ಎಂದು ಜಾಧವ್ ನನ್ನೊಂದಿಗೆ ಹೇಳಿದ್ದರು. 16 ವರ್ಷದಿಂದ ಅಲ್ಲಿ ಇದ್ದು ಸಂಕಟ ಅನುಭವಿಸಿದ್ದೇನೆ ನೀನ್ಯಾಕೆ ಅಲ್ಲಿಗೆ ಹೋದೆ ಎಂದು ಪ್ರಶ್ನಿಸಿದ್ದೆ. ಅವರು ಬಿಜೆಪಿಗೆ ಹೋಗಬಾರದಿತ್ತು, , ಬಿಜೆಪಿಗೆ ಹೋದ ಚಿಂಚನಸೂರು ಹಾಗೂ ಮಾಲಕರೆಡ್ಡಿಗೆ ತಪ್ಪಿನ ಅರಿವಾಗಲಿದೆ ಹಾಗೆಯೇ ಜಾಧವ್ ಗೆ ಇನ್ನೂ ಹೆಚ್ಚಿನ ಸಂಕಟವಾಗಲಿದೆ ಎಂದರು.
ಶಾಸಕ ನಾರಾಯಣರಾವ್ ಮಾತನಾಡಿ, ಬಾಬುರಾವ್ ಚಿಂಚನಸೂರನ ದುಖಾನ್ ಬಂದ್ ಆಗಿದ್ದು, ಲೋಕಸಭಾ ಚುನಾವಣೆಯಲ್ಲಿ ಖರ್ಗೆ ಸಾಹೇಬರು ಒಂದು ಲಕ್ಷ ಮತಗಳಿಂದ ಗೆಲ್ಲಲಿದ್ದಾರೆ. ಸೋಲಿನ ಭೀತಿಯಲ್ಲಿಯೇ ಉಮೇಶ್ ಜಾಧವ್ ಮತ್ತೆ ಚಿಂಚೋಳಿಗೆ ಬಂದಿದ್ದು, ಇಲ್ಲಿ ಬಿಜೆಪಿಯ ಆಟ ನಡೆಯುವುದಿಲ್ಲ ಎಂದರು.