ದೇಶಕ್ಕೆ ಮೋದಿ ಮಾಡಿದ ಗಾಯಗಳಿಗೆ ಮದ್ದನ್ನು ಕಾಂಗ್ರೆಸ್ ಹುಡುಕಿದೆ : ದಿನೇಶ್ ಗುಂಡೂರಾವ್

ಬೆಂಗಳೂರು

       ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಭಾರತವನ್ನು ತೀವ್ರವಾಗಿ ಗಾಯಗೊಳಿಸಿದ್ದು ಈ ಗಾಯಗಳಿಂದ ದೇಶವನ್ನು ಬಚಾವಾಗುವ ಮದ್ದನ್ನು ಕಾಂಗ್ರೆಸ್ ಪಕ್ಷ ಹುಡುಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ಹೇಳಿದ್ದಾರೆ.

      ಪಕ್ಷದ ಕಛೇರಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ನೋಟು ಅಮಾನ್ಯೀಕರಣದಂತಹ ಅಮಾನವೀಯ ನಡೆ , ಜಿಎಸ್‍ಟಿ ಯಂತಹ ಕ್ರೂರ ತೆರಿಗೆ ಹೇರುವುದು ಸೇರಿದಂತೆ ಹಲವು ವಿಷಯಗಳಲ್ಲಿ ಮೋದಿ ಸರ್ಕಾರ ಭಾರತವನ್ನು ಗಾಯಗೊಳಿಸಿದೆ ಎಂದರು.

      ಅಧಿಕಾರಕ್ಕೆ ಬರುವ ಮುನ್ನ ತನ್ನ ಪ್ರಣಾಳಿಕೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಏನೇನು ಭರವಸೆ ನೀಡಿತ್ತೋ?ಅದ್ಯಾವುದನ್ನೂ ಈಡೇರಿಸಿಲ್ಲ.ಪರಿಣಾಮವಾಗಿ ಇವತ್ತು ದೇಶ ಆರ್ಥಿಕವಾಗಿ ತಲ್ಲಣಗೊಂಡಿದೆ.ಸಾಮಾಜಿಕವಾಗಿ ತಲ್ಲಣಗೊಂಡಿದೆ.ಅಭದ್ರತೆಯಿಂತ ತಲ್ಲಣಗೊಂಡಿದೆ ಎಂದು ವಿಷಾದಿಸಿದರು.

     ಇಂತಹ ತಲ್ಲಣಗಳ ಮೂಲಕ ಗಂಭೀರವಾಗಿ ಗಾಯಗೊಂಡಿರುವ ಭಾರತಕ್ಕೆ ಮದ್ದು ನೀಡುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ.ಇದಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯೇ ಸಾಕ್ಷಿ ಎಂದರು.

      ಮೋದಿ ಸರ್ಕಾರದ ನೋಟು ಅಮಾನ್ಯೀಕರಣ ಕ್ರಮದಿಂದ ಕಾಳಧನಿಕರು ನಿರ್ಮೂಲವಾಗಿಲ್ಲ.ಬಡವರು ಕಂಗಾಲಾದರು.ಇವರ ಜಿಎಸ್‍ಟಿ ತೆರಿಗೆಯಿಂದ ದೇಶ ನಾಲ್ಕು ಲಕ್ಷ ಕೋಟಿ ರೂಗಳಿಗೂ ಹೆಚ್ಚಿನ ನಷ್ಟ ಅನುಭವಿಸಿತು.

      ಮನಮೋಹನ್‍ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಇದ್ದ ಹತ್ತು ವರ್ಷಗಳ ಅವಧಿಯಲ್ಲಿ ದೇಶ ಆರ್ಥಿಕ ಸುಧಾರಣೆ ಕಂಡಿತ್ತು.ಜಿಡಿಪಿ ಪ್ರಮಾಣ ಹೆಚ್ಚಳವಾಗುತ್ತಾ ಹೋಗಿತ್ತು.ಆದರೆ ಮೋದಿ ಸರ್ಕಾರ ಬಂದ ನಂತರ ದೇಶ ಆರ್ಥಿಕವಾಗಿ ಕುಸಿದು ಹೋಗಿದೆ.

      ಬಿಜೆಪಿಯ ಡಿಎನ್‍ಎ ಪರೀಕ್ಷೆ ಮಾಡಿದರೆ ಅಲ್ಲಿ ಆರೆಸ್ಸೆಸ್ ಕಂಡು ಬರುತ್ತದೆ.ಆರೆಸ್ಸೆಸ್‍ಗೆ ಸುಳ್ಳು ಹೇಳುವುದೇ ಸಿದ್ಧಾಂತ.ಸುಳ್ಳು ಹೇಳುವುದೇ ಮೂಲ ಮಂತ್ರ ಎಂದು ವ್ಯಂಗ್ಯವಾಡಿದ ಅವರು,ಕಳೆದ ಐದು ವರ್ಷಗಳಲ್ಲಿ ಗೋಹತ್ಯೆಯ ಹೆಸರಿನಲ್ಲಿ,ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ,ರಾಮಮಂದಿರದ ಹೆಸರಿನಲ್ಲಿ ಆಟ ಆಡಿದ್ದನ್ನು ಬಿಟ್ಟರೆ ಮೋದಿ ಸರ್ಕಾರ ಏನು ಮಾಡಿತು?ಎಂದು ಪ್ರಶ್ನಿಸಿದರು.

      ಮೋದಿ ಒಬ್ಬ ಅಸಮರ್ಥ ಪ್ರಧಾನಿ,ಅರುಣ್ ಜೇಟ್ಲಿ ಒಬ್ಬ ನಿರುಪಯುಕ್ತ ಹಣಕಾಸು ಸಚಿವ ಎಂದು ವ್ಯಂಗ್ಯವಾಡಿದ ಅವರು,ಬಿಜೆಪಿ ಅಧಿಕಾರಕ್ಕೆ ಬರಲು ಅದಾನಿಯಂತವರು ಐನೂರು ಕೋಟಿ ರೂ ಹಾಕಿದರೆ ನಂತರ ಅದನ್ನು ಬಡ್ಡಿ ಸಹಿತ ವಾಪಸ್ಸು ಪಡೆಯುತ್ತಾರೆ.ಇದು ಭ್ರಷ್ಟಾಚಾರವಲ್ಲದೆ ಮತ್ತೇನು?ಎಂದು ಪ್ರಶ್ನೆ ಮಾಡಿದರು.

      ಐದು ವರ್ಷಗಳ ತಮ್ಮ ಆಡಳಿತಾವಧಿಯಲ್ಲಿ ಮೋದಿ ಸರ್ಕಾರ ಹೇಳಿದ ಸುಳ್ಳುಗಳ ಬಗ್ಗೆ ಜನರಿಗೆ ಸಂಪೂರ್ಣವಾಗಿ ಅರ್ಥವಾಗಿದೆ.ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದರು.

      ಮನಮೋಹನ್‍ಸಿಂಗ್ ಸರ್ಕಾರದ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಾಗಿತ್ತು.ಆದರೆ ಅದರ ಹೊರೆಯನ್ನು ಜನರ ಮೇಲೆ ಹೊರಿಸದೆ ಅವರು ಮುಂದುವರಿದರು.ಆದರೆ ಮೋದಿ ಸರ್ಕಾರದ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿಯಿತು.

      ಆದರೆ ಇದರ ಲಾಭವನ್ನು ಅವರು ಜನಸಾಮಾನ್ಯರಿಗೆ ಸಿಗಲು ಬಿಡಲಿಲ್ಲ.ಪರಿಣಾಮವಾಗಿ ದಿನ ನಿತ್ಯದ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಾ ಹೋಯಿತು.ದೇಶ ಮತ್ತಷ್ಟು ಸುಸ್ತಾಗುವಂತೆ ಮಾಡಿತು ಎಂದು ಅವರು ವಿಷಾದಿಸಿದರು.

      ಇಷ್ಟೆಲ್ಲ ಸುಳ್ಳುಗಳ ಮೂಲಕ,ಜನ ಜೀವನವನ್ನು ತಲ್ಲಣಕ್ಕೆ ದೂಡುವ ಮೂಲಕ ಬಿಜೆಪಿ ತನ್ನ ವಿರೋಧಿಗಳನ್ನು ಟೀಕಿಸುವ ಹಕ್ಕನ್ನೇ ಕಳೆದುಕೊಂಡಿದೆ.ಆದರೆ ಈಡೇರಿಸುವ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಿರುವ ಕಾಂಗ್ರೆಸ್ ಪಕ್ಷವನ್ನು ಜನ ನಂಬಲಿದ್ದಾರೆ ಎಂದರು.

     ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಅತಿ ಹೆಚ್ಚು ಸೀಟುಗಳನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಗೆಲ್ಲಲಿದೆ.ಈ ವಿಷಯದಲ್ಲಿ ಯಾವ ಅನುಮಾನವೂ ಬೇಡ.ಯಾಕೆಂದರೆ ಏನೇ ಆಂತರಿಕ ಬಿಕ್ಕಟ್ಟುಗಳಿದ್ದರೂ ಅದನ್ನೆಲ್ಲ ಪರಿಹರಿಸಿಕೊಳ್ಳಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಮೈಸೂರು,ಮಂಡ್ಯ,ತುಮಕೂರು ಸೇರಿದಂತೆ ಎಲ್ಲೆಡೆ ದೇವೇಗೌಡರು ಹಾಗೂ ಸಿದ್ಧರಾಮಯ್ಯ ಅವರು ಒಗ್ಗೂಡಿ ಪ್ರವಾಸ ಮಾಡಲಿದ್ದಾರೆ.ಅದೇ ರೀತಿ ಯಾರ್ಯಾರ ಬಗ್ಗೆ ಅನುಮಾನದ ಮಾತುಗಳನ್ನಾಡಲಾಗುತ್ತಿದೆಯೋ?ಅವರೆಲ್ಲ ಜತೆಗೂಡಿ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಈಗಾಗಲೇ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.ಜೆಡಿಎಸ್ ಕ್ಯಾಂಡಿಡೇಟ್‍ಗಳ ಗೆಲುವಿಗೆ ಮನ:ಪೂರ್ವಕ ಸಹಕಾರ ನೀಡಬೇಕು ಎಂದು ಹೇಳಿದ್ದಾರೆ ಅಂತ ವಿವರಿಸಿದರು.

   ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಪರವಾಗಿ ಬಿಜೆಪಿ ಬಾವುಟ ಮಾತ್ರವಲ್ಲ,ಕಾಂಗ್ರೆಸ್ ಬಾವುದಟವೂ ಹಾರಾಡುತ್ತಿದೆ ಎಂಬ ಮಾತುಗಳ ಕುರಿತು ಪ್ರತಿಕ್ರಿಯಿಸಿದ ಅವರು,ಇದು ತಪ್ಪು.ಇಂತಹ ಕೆಲಸ ಮಾಡಿದವರು ಪಕ್ಷದಿಂದ ಹೊರಹೋಗುವುದು ಅನಿವಾರ್ಯ ಎಂದರು.ಬಿಜೆಪಿ ನಾಯಕ ಈಶ್ವರಪ್ಪ ಭ್ರಮೆಯಲ್ಲಿದ್ದಾರೆ.ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಇರುತ್ತದೆ.ಆಗ ಯಾರ್ಯಾರು ಎಲ್ಲೆಲ್ಲಿರುತ್ತಾರೆ?ಅನ್ನುವುದನ್ನು ನೋಡೋಣ ಎಂದು ಅವರು ಮಾರ್ಮಿಕವಾಗಿ ನುಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap